ADVERTISEMENT

ಬೆರಗಿನ ಬೆಳಕು | ದೂರದೃಷ್ಟಿಯಿಲ್ಲದ ನಾಯಕತ್ವ

ಡಾ. ಗುರುರಾಜ ಕರಜಗಿ
Published 12 ಮಾರ್ಚ್ 2020, 19:40 IST
Last Updated 12 ಮಾರ್ಚ್ 2020, 19:40 IST
   

ಹಿಂದೆ ಕುರುರಾಷ್ಟ್ರದಲ್ಲಿ ಯುಧಿಷ್ಠಿರ ಗೋತ್ರದಲ್ಲಿ ಧನಂಜಯನೆಂಬ ರಾಜನಿದ್ದ. ಬೋಧಿಸತ್ವ ಅವನ ಪುರೋಹಿತನ ಮಗನಾಗಿ ಹುಟ್ಟಿದ್ದ. ಬೆಳೆದಂತೆ ತಕ್ಷಶಿಲೆಗೆ ಹೋಗಿ ಸಕಲವಿದ್ಯಾಪಾರಂಗತನಾಗಿ ಮರಳಿ ಬಂದು ರಾಜನಿಗೆ ಪುರೋಹಿತನಾದ. ಆತ ಸದಾಕಾಲ ರಾಜನಿಗೆ ಸರಿಯಾದ ಮಾರ್ಗವನ್ನೇ ಬೋಧಿಸುತ್ತಿದ್ದ. ಆದರೂ ರಾಜ ತನ್ನ ರಾಜಸ ಸ್ವಭಾವದಂತೆ ಕೆಲವೊಮ್ಮೆ ಪುರೋಹಿತನನ್ನು ಕೇಳದೆ ಮಹತ್ವದ ಕೆಲಸಗಳನ್ನು ಮಾಡಿಬಿಡುತ್ತಿದ್ದ.

ಒಂದು ಬಾರಿ ಕೆಲವು ಸಲಹೆಗಾರರು ರಾಜನಿಗೆ ಹೇಳಿದರು, ‘ರಾಜಾ, ನಿನ್ನ ಸೈನ್ಯದಲ್ಲಿ ತುಂಬ ಹಳೆಯ ಮತ್ತು ಹಿರಿಯ ಯೋಧರಿದ್ದಾರೆ. ಅವರಿಂದ ಹೊಸಬಗೆಯ ಯುದ್ಧಗಳನ್ನು ಮಾಡುವುದು ಸಾಧ್ಯವಿಲ್ಲ. ಈಗ ಹೊಸತಾಗಿ ಬಂದು ಸೇರಿದ ಯೋಧರು ತರುಣರು, ಬಲಶಾಲಿಗಳು ಮತ್ತು ಹೊಸರೀತಿಯ ಯುದ್ಧದಲ್ಲಿ ನಿಪುಣರು. ನೀನು ಅವರಿಗೆ ಹೆಚ್ಚಿನ ಮರ್ಯಾದೆ ಮತ್ತು ಸ್ಥಾನಗಳನ್ನು ಕೊಡಬೇಕು’. ರಾಜನಿಗೆ ಈ ಮಾತು ಸರಿ ಎನ್ನಿಸಿತು. ಪ್ರತಿವರ್ಷ ರಾಜ್ಯೋದಯದ ದಿನ ರಾಜ ಹಿರಿಯ ಯೋಧರಿಗೆ ಗೌರವ ಸಲ್ಲಿಸುವುದು ವಾಡಿಕೆಯಾಗಿತ್ತು. ಆದರೆ ಈ ವರ್ಷ, ತನ್ನೊಡನೆ ಬಹುವರ್ಷಗಳಿಂದ ಇದ್ದ, ತನ್ನನ್ನೇ ನಂಬಿಕೊಂಡಿದ್ದ ಯೋಧರನ್ನು ದೂರವಿಟ್ಟು, ಹೊಸದಾಗಿ ಸೇರಿದ ಯೋಧರಿಗೆ ಗೌರವ ನೀಡಿ ಬಹುಮಾನಗಳನ್ನು ಕೊಟ್ಟ. ಹೊಸಬರು ಸಂಭ್ರಮದ ಆಗಸಕ್ಕೇರಿದರು, ಉನ್ಮತ್ತರಾದರು. ಹಳೆಯ, ನಂಬಿಕಸ್ಥ ಯೋಧರು ನಿರಾಸೆಯಿಂದ ಒಳಗೊಳಗೆ ಸಂಕಟಪಟ್ಟರು.

ಕೆಲದಿನಗಳ ನಂತರ ರಾಷ್ಟ್ರದ ಅಂಚಿನ ನಗರ ಪ್ರದೇಶಗಳಲ್ಲಿ ದಂಗೆ ಎದ್ದಿತು. ರಾಜ ಸೈನ್ಯಕ್ಕೆ ಕರೆಕೊಟ್ಟ. ಹೇಗಿದ್ದರೂ ರಾಜ ನಂಬುವುದು ಹೊಸಬರನ್ನೇ, ಅವರೇ ಯುದ್ಧ ಮಾಡಲಿ ಎಂದು ಹಳಬರು ಸುಮ್ಮನಿದ್ದುಬಿಟ್ಟರು. ಹೊಸಬರಿಗೆ ಉತ್ಸಾಹವೇನೋ ಇದೆ. ಆದರೆ ರಾಜ್ಯದ ಭೌಗೋಳಿಕ ಪರಿಚಯ ಸರಿಯಾಗಿಲ್ಲ. ದಂಗೆಗೆ ಏನು ಕಾರಣ, ಯಾರು ಕಾರಣ ಎಂದು ತಿಳಿಯಲು ಇತಿಹಾಸವೂ ಗೊತ್ತಿಲ್ಲ. ಅವರು ಗಲಿಬಿಲಿಗೊಂಡರು. ದಂಗೆಕೋರರು ಹೊಸ ಸೈನಿಕರನ್ನು ಹೊಡೆದು ಸೋಲಿಸಿಬಿಟ್ಟರು.

ADVERTISEMENT

ರಾಜ ಹೀಗೇಕಾಯಿತು ಎಂದು ಚಿಂತಿಸಿದ. ಪುರೋಹಿತನನ್ನು ಕರೆದು ಕೇಳಿದ, ‘ಯಾಕೆ ಹೀಗಾಯಿತು? ನನ್ನ ಸೋಲಿಗೆ ಕಾರಣರಾರು?’. ಪುರೋಹಿತ ಹೇಳಿದ, ‘ಮಹಾರಾಜಾ, ನಿನಗೊಂದು ಪುಟ್ಟ ಕಥೆ ಹೇಳಬೇಕು. ಧೂಮಕಾರಿ ಎಂಬ ಒಬ್ಬ ಬ್ರಾಹ್ಮಣ ಕುರಿ-ಮೇಕೆಗಳನ್ನು ಹೊಡೆದುಕೊಂಡು ಕಾಡಿನ ಒಂದು ಸ್ಥಳದಲ್ಲಿ ಬೀಡುಬಿಟ್ಟ. ಅವುಗಳನ್ನು ಪಾಲಿಸುತ್ತ ಸುಖವಾಗಿದ್ದ. ಅಲ್ಲಿಗೆ ಬಂಗಾರ ಬಣ್ಣದ ಕೆಲವು ಜಿಂಕೆಗಳು ಬಂದವು. ಅವುಗಳ ಆಕರ್ಷಣೆಗೆ ಒಳಗಾದ ಬ್ರಾಹ್ಮಣ ತನ್ನನ್ನೇ ನಂಬಿದ್ದ, ತನ್ನ ಸುಖಕ್ಕೆ ಕಾರಣವಾಗಿದ್ದ ಕುರಿ-ಮೇಕೆಗಳನ್ನು ತಿರಸ್ಕರಿಸಿ ಜಿಂಕೆಗಳ ಆದರಣೆ ಮಾಡತೊಡಗಿದ. ಚಳಿಗಾಲ ಬಂದೊಡನೆ ಜಿಂಕೆಗಳೆಲ್ಲ ಓಡಿಹೋದವು, ನಿರ್ಲಕ್ಷ್ಯಕ್ಕೊಳಗಾಗಿದ್ದ ಕುರಿ-ಮೇಕೆಗಳೂ ಸತ್ತು ಹೋಗಿದ್ದವು. ನಂತರ ಆತ ರೋಗಿಯಾಗಿ ಸತ್ತು ಹೋದ. ಅವನ ಈ ಸ್ಥಿತಿಗೆ ಅವನೇ ಕಾರಣನಲ್ಲವೆ? ನಿನ್ನ ಸ್ಥಿತಿಯೂ ಬೇರಲ್ಲ. ನಿನ್ನನ್ನೇ ನಂಬಿದ, ರಕ್ಷಿಸಿದ ಹಿರಿಯ ಯೋಧರನ್ನು ಅವಮಾನಿಸಿದ್ದು ತಪ್ಪು. ಹೊರಗಿನ ಕೆಲವರನ್ನು ಮೆಚ್ಚಿಸಲು ತನ್ನವರನ್ನು ಮರೆತವರಿಗೆ ಇದೇ ಗತಿಯಾಗುತ್ತದೆ’ ರಾಜನ ಕಣ್ಣು ತೆರೆದವು.

ಯಾವುದೋ ಲಾಭಕ್ಕೆ, ಅನುಕೂಲಕ್ಕೆ ಹೊರಗಿನವರನ್ನು ಪುರಸ್ಕರಿಸಿ, ತನ್ನನ್ನು ನಂಬಿದವರನ್ನು ಕೈ ಬಿಡುವುದು ದೂರದೃಷ್ಟಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.