ADVERTISEMENT

ಹೊಟ್ಟೆಪಾಡಿನ ಕಥೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 19:31 IST
Last Updated 5 ನವೆಂಬರ್ 2020, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ |
ಇಷ್ಟೆ ನಮ್ಮೆಲ್ಲಕಥೆ- ಮಂಕುತಿಮ್ಮ || 352 ||

ಪದ-ಅರ್ಥ: ಹೊಟ್ಟೆರಾಯನ=ಹೊಟ್ಟೆಯೆಂಬ ಯಜಮಾನನ, ನಿತ್ಯದಟ್ಟಹಾಸ=ನಿತ್ಯದ=ಅಟ್ಟಹಾಸ(ಅಬ್ಬರ), ಧ್ರಷ್ಟ=ಕ್ರೂರ, ಧಣಿಯೂಳಿಗ=ಧಣಿಯ(ಯಜಮಾನನ)+ಊಳಿಗ(ಸೇವೆ), ಹಿಟ್ಟಿಗಗಲಿದ=ಹಿಟ್ಟಿಗೆ+ಅಗಲಿದ, ಬಟ್ಟೆಗೊಡ್ಡಿದ=ಬಟ್ಟೆಗೆ+ಒಡ್ಡ್ಡಿದ.
ವಾಚ್ಯಾರ್ಥ: ಹೊಟ್ಟೆ ಎಂಬ ಯಜಮಾನನ ದಿನನಿತ್ಯದ ಅಟ್ಟಹಾಸ ನಮ್ಮ ಬದುಕಾಗಿದೆ. ಕ್ರೂರಿಯಾದ ಯಜಮಾನನ ಸೇವೆಗೆ ಮೈಬಾಗಿಸಿ ನಿಲ್ಲುವ ದೈನ್ಯತೆ. ತುತ್ತು ಊಟಕ್ಕಾಗಿ ತೆರೆದು ನಿಂತ ಬಾಯಿ, ಮಾನ ಮುಚ್ಚುವುದಕ್ಕೆ ಬಟ್ಟೆಗೆ ಚಾಚಿ ನಿಂತ ಕೈ. ನಮ್ಮೆಲ್ಲರ ಬದುಕೆಂಬುದು ಇಷ್ಟೆ.

ವಿವರಣೆ: ಕನಕದಾಸರು ಅಂದೇ ಹಾಡಿದರು, “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಈ ಎರಡಕ್ಕಾಗಿ ಮನುಷ್ಯ ಏನೆಲ್ಲವನ್ನು ಮಾಡುತ್ತಾನೆಂದು ಆಶ್ಚರ್ಯಪಟ್ಟಿದ್ದಾರೆ. ಶರಣ ಹಡಪದ ಅಪ್ಪಣ್ಣ, “ಅಯ್ಯಾ ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು ಜಗವೆಲ್ಲ” ಎಂದು ಬೆರಗುಪಟ್ಟಿದ್ದಾನೆ.

ADVERTISEMENT

ಹೊಟ್ಟೆಯ ಬೇಡಿಕೆ ಮನುಷ್ಯನಿಂದ ಏನೇನು ಕೆಲಸಗಳನ್ನು ಮಾಡಿಸುತ್ತದೆ! ಅಪ್ಪಣ್ಣ ಹೇಳಿದಂತೆ ಹೊಟ್ಟೆ ಹಸಿಯುವುದು ಮಾತ್ರವಲ್ಲ, ಹೊಟ್ಟೆಗಾಗಿ ಜನ ಕುದಿಯುತ್ತಾರೆ. ಮತ್ತೊಬ್ಬರಿಗೆ ದೊರೆತದ್ದು ತಮಗೆ ದೊರೆಯದಾದಾಗ ಕುದಿಯುತ್ತಾರೆ. ತಮಗೆ ದೊರೆಯದಿದ್ದರೂ ಮತ್ತೊಬ್ಬರಿಗೆ ದೊರೆತಾಗ ಕುದಿಯುತ್ತಾರೆ. ಹೊಟ್ಟೆಗಾಗಿ ಯಾರು ಯಾರದೋ ಕಾಲು ಹಿಡಿಯುತ್ತಾರೆ. ಕ್ರೂರಿಗಳಾದ ಯಜಮಾನರ ಎಲ್ಲ ಸೇವೆಯನ್ನು ಮಾಡುತ್ತಾರೆ. ಆತ್ಮಗೌರವವನ್ನು ಕಳೆದುಕೊಂಡು ದೇಹವನ್ನು ಮುಷ್ಠಿಯಲ್ಲಡಗಿಸಿ, ಕುಗ್ಗಿ ದೀನರಾಗಿ ನಿಲ್ಲುತ್ತಾರೆ. ಇದೆಲ್ಲ ಯಾತಕ್ಕಾಗಿ? ಕಗ್ಗ ಹೇಳುವಂತೆ, ಅದು ಒಂದು ತುತ್ತು ಅನ್ನಕ್ಕಾಗಿ ತೆರೆದು ನಿಂತ ಬಾಯಿಗೆ, ಮಾನಮುಚ್ಚಿಕೊಳ್ಳಲು ಅವಶ್ಯವಾದ ಒಂದಿಷ್ಟು ಬಟ್ಟೆಗಾಗಿ. ಈ ಹೊಟ್ಟೆಯನ್ನು ತುಂಬಿಕೊಳ್ಳುವ ಹೋರಾಟದಲ್ಲಿ ತಾವು ಬಂದ ಬಟ್ಟೆಯನ್ನೇ ಅರಿಯದೆ ಕೆಟ್ಟಿದ್ದಾರೆ. ಬಟ್ಟೆ ಎಂದರೆ ಬದುಕು. ಬದುಕಿನ ಉದ್ದೇಶವೇ ಮರೆತು ಹೋಗಿದೆ, ಕಳೆದು ಹೋಗಿದೆ.

ನಮಗೆ ಎರಡು ಹೊಟ್ಟೆಗಳಿವೆ. ಒಂದು ಅನ್ನದ ಚೀಲ. ಅದು ಕಣ್ಣಿಗೆ ಕಾಣುತ್ತದೆ. ಸ್ವಲ್ಪ ಹಾಕಿದರೆ ತುಂಬುತ್ತದೆ ಮುಂದೆ ನಾಲ್ಕಾರು ತಾಸು ಅದರ ತೊಂದರೆ ಇಲ್ಲ. ಇನ್ನೊಂದು, ಕಣ್ಣಿಗೆ ಕಾಣದಿರುವ ಹೊಟ್ಟೆ. ಎಂದೆಂದಿಗೂ ತುಂಬದಿರುವುದು ಮತ್ತು ಎಂದಿಗೂ ತೃಪ್ತಿಯಾಗದಿರುವುದು. ಎರಡು ಬಿಟ್ಟು ಮೂರು ರೊಟ್ಟಿ ತಿಂದರೆ ತುಂಬುವ, ಕಾಣುವ ಹೊಟ್ಟೆ ಅಷ್ಟು ಕಾಡುವುದಿಲ್ಲ. ಆದರೆ ಹಣವನ್ನು ಬೇಡುವ, ಅಧಿಕಾರವನ್ನು ಬೇಡುವ ಹೊಟ್ಟೆ ಸದಾ ಖಾಲಿ. ಅದಕ್ಕೆ ಸಾರ್ವಕಾಲಿಕ ಹಸಿವು. ಎರಡು ರೊಟ್ಟಿ ಬೇಡುವ ಹೊಟ್ಟೆಗೆ ಮನುಷ್ಯ ಯಾವ ನೀಚ ಕೆಲಸವನ್ನೂ ಮಾಡಿಯಾನು. ನೂರು ಕೋಟಿ ರೂಪಾಯಿಯ ಹಸಿವುಳ್ಳ ಹೊಟ್ಟೆಯ ವ್ಯಕ್ತಿ ಜನರಿಗೆ, ದೇಶಕ್ಕೆ, ಕೊನೆಗೆ ತನಗೂ ಮೋಸ ಮಾಡುವ ಪರಮ ನೀಚ ಕೆಲಸ ಮಾಡಿಯಾನು.ಹೊಟ್ಟೆಪಾಡಿನಕಥೆಇಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.