ADVERTISEMENT

ದುರಾಸೆಯ ಫಲ

ಡಾ. ಗುರುರಾಜ ಕರಜಗಿ
Published 4 ಜನವರಿ 2019, 20:15 IST
Last Updated 4 ಜನವರಿ 2019, 20:15 IST

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರಮಾಡುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ಅವನು ದೊಡ್ಡವನಾದ ಮೇಲೆ ದೊಡ್ಡ ಮನೆಯ ಹೆಣ್ಣನ್ನು ತಂದು ಮದುವೆ ಮಾಡಿದರು. ಅವನಿಗೆ ಅವಳಲ್ಲಿ ಮೂರು ಜನ ಹೆಣ್ಣುಮಕ್ಕಳು ಜನಿಸಿದರು. ಅವರ ಹೆಸರುಗಳು-ನಂದಾ, ನಂದವತಿ ಹಾಗೂ ನಂದಸುಂದರಿ ಎಂದಿದ್ದವು. ಅವರು ಬೆಳೆದು ಪ್ರಾಪ್ತವಯಸ್ಕರಾಗುವ ಮೊದಲೇ ಬೋಧಿಸತ್ವ ಮರಣ ಹೊಂದಿದ.

ಅವನು ಮರುಜನ್ಮದಲ್ಲಿ ಅತ್ಯಂತ ಸುಂದರವಾದ ಹಂಸವಾಗಿ ಹುಟ್ಟಿದ. ಅವನ ರೆಕ್ಕೆಗಳೆಲ್ಲ ಬಂಗಾರದವಾಗಿದ್ದವು. ಆತ ಹಂಸನಾದ ಮೇಲೆ ಯೋಚಿಸಿದ, ನಾನು ಹಿಂದೆ ಏನಾಗಿದ್ದೆ, ಯಾವ ಪ್ರಪಂಚದಲ್ಲಿದ್ದೆ? ಅವನಿಗೆ ಹಿಂದಿನ ಜನ್ಮದ ಸ್ಮರಣೆ ಸಂಪೂರ್ಣವಾಗಿ ಬಂತು. ತಕ್ಷಣ ಅವನಿಗೆ ತನ್ನ ಹೆಂಡತಿ ಹಾಗೂ ಮಕ್ಕಳು ಹೇಗೆ ಬದುಕಿದ್ದಾರೆ ಎಂದು ತಿಳಿಯುವ ಆಸೆಯಾಯಿತು. ಅವನಿಗೆ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಡೆಸಲಾಗದೆ ಪರಿವಾರವನ್ನು ಕಷ್ಟದಲ್ಲಿ ಬಿಟ್ಟುಬಂದಿದ್ದರ ಅರಿವು ಇತ್ತು. ನಂತರ ಹಿಂದಿನ ಜನ್ಮದ ಹೆಂಡತಿ ಮಕ್ಕಳು ಬದುಕಿರುವ ಸ್ಥಳಕ್ಕೆ ಹೋದ. ಬಡತನದಲ್ಲಿ ಬೇಯುತ್ತಿದ್ದ ಅವರು ಅವರಿವರ ಮನೆಗಳಲ್ಲಿ ಸೇವೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಅವರ ಬಗ್ಗೆ ಕರುಣೆ ಬಂದು ಆತ ಹೀಗೆ ಯೋಚಿಸಿದ. ಹ್ಯಾಗಿದ್ದರೂ ತನಗೆ ಬಂಗಾರದ ರೆಕ್ಕೆಗಳಿವೆ. ಆಗಾಗ ಹೋಗಿ ಒಂದೊಂದು ರೆಕ್ಕೆ ಕೊಟ್ಟು ಬಂದರೆ ಅವರು ಸುಖವಾಗಿರುತ್ತಾರೆ. ಹೀಗೆ ನಿರ್ಧಾರ ಮಾಡಿ ಅವರ ಮನೆಗೆ ಬಂದು ಅಂಗಳದಲ್ಲಿ ಇಳಿದ. ಹೆಂಡತಿ ಮಕ್ಕಳು ಆಶ್ಚರ್ಯದಿಂದ ಹತ್ತಿರ ಬಂದಾಗ ಹೇಳಿದ, “ನೋಡಿ ಮಕ್ಕಳೇ, ನಾನು ನಿಮ್ಮ ತಂದೆ, ಸತ್ತು ಹಂಸವಾಗಿದ್ದೇನೆ. ನೀವು ಬೇರೆಯವರ ಮನೆಯಲ್ಲಿ ಕೆಲಸಮಾಡಿ ಬದುಕುವುದು ಬೇಡ. ನಾನು ಆಗಾಗ ಬಂದು ಒಂದು ಬಂಗಾರದ ರೆಕ್ಕೆಯನ್ನು ಕೊಟ್ಟು ಹೋಗುತ್ತೇನೆ. ಅದನ್ನು ಮಾರಿ ಸುಖವಾಗಿರಿ”, ಒಂದು ರೆಕ್ಕೆ ಬೀಳಿಸಿ ಹಾರಿ ಹೋದ. ಮೇಲಿಂದ ಮೇಲೆ ಹೀಗೆ ರೆಕ್ಕೆ ಕೊಟ್ಟಾಗ ಅವರು ಅದನ್ನು ಮಾರಿ ಶ್ರೀಮಂತರೂ, ಸಂತೋಷಿಗಳೂ ಆದರು.

ಒಂದು ದಿನ ತಾಯಿ ಮಕ್ಕಳಿಗೆ ಹೇಳಿದರು, “ಎಷ್ಟು ದಿನ ಹೀಗೆ ನಡೆಯುತ್ತೋ ತಿಳಿಯದು. ಆದ್ದರಿಂದ ಮುಂದಿನ ಬಾರಿ ನಿಮ್ಮ ತಂದೆ ಬಂದಾಗ ಎಲ್ಲ ರೆಕ್ಕೆಗಳನ್ನು ಒಮ್ಮೆಲೇ ಕಿತ್ತುಕೊಂಡು ಬಿಡೋಣ”. ಮಕ್ಕಳು ಒಪ್ಪಲಿಲ್ಲ. ಹೀಗೆ ರೆಕ್ಕೆ ಕಿತ್ತರೆ ತಮಗೆ ಸಹಾಯಮಾಡುತ್ತಿರುವ ತಂದೆಗೆ ನೋವಾಗಬಹುದು, ದುರಾಸೆ ಬೇಡ ಎಂದರು. ಆದರೆ ತಾಯಿಗೆ ತುಂಬ ದುರಾಸೆ. ಮರುದಿನ ಸ್ವರ್ಣರೆಕ್ಕೆಯ ಹಂಸ ಬಂದಾಗ ಆಕೆ ಅದನ್ನು ಗಬಕ್ಕನೇ ಹಿಡಿದುಕೊಂಡು ಎಲ್ಲ ರೆಕ್ಕೆಗಳನ್ನು ಕಿತ್ತುಕೊಂಡು ಬಿಟ್ಟಳು. ಆಕೆ ಬಲಾತ್ಕಾರವಾಗಿ ಹಂಸದ ಇಚ್ಛೆಗೆ ವಿರುದ್ಧವಾಗಿ ಕಿತ್ತಿದ್ದರಿಂದ ರೆಕ್ಕೆಗಳು ಬಂಗಾರದ್ದಾಗಿರದೆ ಸಾಮಾನ್ಯವಾದ ಬಿಳಿ ರೆಕ್ಕೆಗಳಾದವು. ಅದಲ್ಲದೆ ಎಲ್ಲ ರೆಕ್ಕೆಗಳು ಕಳಚಿಹೋದದ್ದರಿಂದ ಅದು ಹಾರಾಡದಂತಾಯಿತು. ಅದನ್ನು ಮಕ್ಕಳು ಜತನವಾಗಿ ಕಾಪಾಡಿದರು. ಹೊಸದಾಗಿ ಹುಟ್ಟಿದ ರೆಕ್ಕೆಗಳೂ ಸಾಮಾನ್ಯ ಶ್ವೇತವರ್ಣದವೇ ಆದವು. ಒಂದು ಸಲ ಸಾಕಷ್ಟು ರೆಕ್ಕೆಗಳು ಬಂದ ಮೇಲೆ ಹಂಸ ಹಾರಿಹೋಯಿತು. ಮತ್ತೆಂದೂ ಮರಳಿ ಇವರ ಮನೆಗೆ ಬರಲಿಲ್ಲ.

ADVERTISEMENT

ಬದುಕಿನಲ್ಲಿ ಆಸೆ ಬೇಕು, ಆದರೆ ನ್ಯಾಯಯುತವಾದ, ನಮ್ಮ ಪ್ರಯತ್ನಕ್ಕೆ ಅನುಗುಣವಾದ ಫಲಕ್ಕೆ ಆಸೆ ಇರಬೇಕು. ದೊರೆತದ್ದರಲ್ಲಿ ಸಂತೋಷಪಡಬೇಕು. ದುರಾಸೆ ಎಂದಿಗೂ ನಮ್ಮನ್ನು ಪ್ರಪಾತಕ್ಕೆ ದೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.