ADVERTISEMENT

ದಾಕ್ಷಿಣ್ಯದ ಬದುಕು

ಡಾ. ಗುರುರಾಜ ಕರಜಗಿ
Published 7 ಜನವರಿ 2019, 20:20 IST
Last Updated 7 ಜನವರಿ 2019, 20:20 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಬ್ಬ ಕಲ್ಲುಕುಟಿಗನಾಗಿ ಹುಟ್ಟಿದ್ದ. ತನ್ನ ವಿದ್ಯೆಯಲ್ಲಿ ಪಾರಂಗತನಾಗಿದ್ದ.

ಕಾಶಿಯ ಪಕ್ಕದ ಒಂದು ಹಳ್ಳಿಯಲ್ಲಿ ಒಬ್ಬ ಶ್ರೀಮಂತ ಶ್ರೇಷ್ಠಿ ಮರಣಹೊಂದಿದ. ಅವನು ನೆಲದಲ್ಲಿ ಹೂತಿಟ್ಟಿದ್ದ ಆಸ್ತಿಯೇ ನಲವತ್ತು ಕೋಟಿಯಷ್ಟಿತ್ತು. ಅವನ ಹೆಂಡತಿ ಸತ್ತ ಮೇಲೆ ಹಣದಾಸೆಯಿಂದ ಇಲಿಯಾಗಿ ಹಣವನ್ನು ಕಾಯುತ್ತಿದ್ದಳು. ಆಗ ಬೋಧಿಸತ್ವ ಆ ಹಳ್ಳಿಯ ಕಲ್ಲುಗಳನ್ನು ಅಗೆದು ತೆಗೆದು ಶಿಲ್ಪಗಳನ್ನು ಮಾಡುತ್ತಿದ್ದ. ಇಲಿಗೆ ಹೊರಗೆ ಹೋಗಿ ಆಹಾರ ತರುವುದಕ್ಕೆ ಭಯ. ಅದಕ್ಕೆ ಅದು ಬೋಧಿಸತ್ವನೊಡನೆ ಸ್ನೇಹ ಬೆಳೆಸಿತು. ಎರಡು ಕಹಾಪಣಗಳನ್ನು ತೆಗೆದುಕೊಂಡು ಬೋಧಿಸತ್ವನೆಡೆಗೆ ಬಂದು, “ನನಗೆ ನೀನು ಆಹಾರ ತಂದುಕೊಟ್ಟರೆ ನಿನಗೆ ನಾನು ಎರಡು ಕಹಾಪಣ ಹಣ ಕೊಡುತ್ತೇನೆ. ನನಗೆ ಸಹಾಯ ಮಾಡು” ಎಂದು ಬೇಡಿಕೊಂಡಿತು. ಬೋಧಿಸತ್ವ ಅದಕ್ಕೆ ದಿನವೂ ಆಹಾರ ತಂದುಕೊಟ್ಟು ಎರಡು ಕಹಾಪಣ ಹಣ ಪಡೆದ.

ಒಂದು ದಿನ ಇಲಿಯನ್ನು ಒಂದು ಬೆಕ್ಕು ಹಿಡಿದುಬಿಟ್ಟಿತು. ಆಗ ಇಲಿ ಗಾಬರಿಯಿಂದ, “ಅಯ್ಯಾ, ನನ್ನನ್ನು ಕೊಲ್ಲಬೇಡ. ನಾನು ನಿನಗೆ ನನಗೆ ನಿತ್ಯ ದೊರೆಯುವ ಆಹಾರದಲ್ಲಿ ಅರ್ಧವನ್ನು ಕೊಡುತ್ತೇನೆ” ಎಂದಿತು. ಬೆಕ್ಕು ಅದನ್ನು ಬಿಟ್ಟಿತು. ಮಾತಿನಂತೆ ದಿನವೂ ದೊರೆತ ಆಹಾರದಲ್ಲಿ ಅರ್ಧವನ್ನು ಬೆಕ್ಕಿಗೆ ಕೊಡುತ್ತಿತ್ತು. ಈ ವಿಷಯ ಮತ್ತೊಂದು ಬೆಕ್ಕಿಗೆ ತಿಳಿದು ಅದು ಇಲಿಯನ್ನು ಹಿಡಿದುಕೊಂಡಿತು. ಅದಕ್ಕೂ ಇಲಿ ಮಾತುಕೊಟ್ಟಿತು. ಅದರಂತೆ ದೊರೆತ ಆಹಾರದಲ್ಲಿ ಮೂರು ಭಾಗ ಮಾಡಿ ಎರಡು ಭಾಗಗಳನ್ನು ಬೆಕ್ಕುಗಳಿಗೆ ಕೊಟ್ಟು ಒಂದು ಭಾಗವನ್ನು ತಾನು ತಿನ್ನುತ್ತಿತ್ತು. ಕೆಲದಿನಗಳ ನಂತರ ಮತ್ತೊಂದು ಬೆಕ್ಕು ಹಿಡಿಯಿತು. ಮತ್ತೆ ಮೂರು ದಿನಗಳ ನಂತರ ಇನ್ನೊಂದು ಬೆಕ್ಕು ಹಿಡಿಯಿತು. ಅವುಗಳಿಗೂ ಇಲಿ ಮಾತು ಕೊಟ್ಟಿತು. ಈಗ ಅದರ ಪರಿಸ್ಥಿತಿ ಕಷ್ಟವಾಯಿತು. ಬಂದ ಆಹಾರದಲ್ಲಿ ಐದು ಭಾಗ ಮಾಡಿ ಒಂದನ್ನು ಮಾತ್ರ ತಿನ್ನುತ್ತಿತ್ತು. ಬೆಕ್ಕುಗಳು ಬೇರೆ ಆಹಾರ ಹುಡುಕುತ್ತಿದ್ದವು. ಆದರೆ ಪಾಪ! ಇಲಿ ಮಾತ್ರ ಅಷ್ಟೇ ಆಹಾರ ತಿಂದು ಜೀವ ಹಿಡಿದುಕೊಂಡಿತ್ತು. ಅದು ಸೊರಗಿ ಸಾಯುವಂತಾಯಿತು.

ADVERTISEMENT

ಬೋಧಿಸತ್ವ, ‘ಯಾಕಮ್ಮಾ, ಹೀಗೆ ಸೊರಗಿದ್ದೀಯಾ?’ ಎಂದು ಕೇಳಿದಾಗ ತನ್ನ ಕಥೆ ಹೇಳಿಕೊಂಡು ಅತ್ತಿತು. ಆಗ ಬೋಧಿಸತ್ವ ಹೇಳಿದ, ‘ಅಮ್ಮಾ, ನನಗೆ ಮೊದಲೇ ಏಕೆ ಹೇಳಲಿಲ್ಲ? ನಾನು ಒಂದು ಸ್ಫಟಿಕದ ಗೂಡು ಮಾಡುತ್ತೇನೆ. ನೀನು ಅದರೊಳಗೆ ಕುಳಿತುಕೊ, ಬೆಕ್ಕು ಬಂದರೆ ಜರ್ಬಾಗಿ ಹೆದರಿಸು. ಭಯಪಡಬೇಡ’. ಅಂತೆಯೆ ಅತ್ಯಂತ ಪಾರದರ್ಶಕವಾದ ಸ್ಫಟಿಕದ ಗೂಡು ಮಾಡಿದ. ಇಲಿ ಒಳಗೆ ಕುಳಿತಿತು. ಅದನ್ನು ಕಂಡು ಒಂದು ಬೆಕ್ಕು ಬಂದು ಆಹಾರಕೊಡು ಎಂದು ಜೋರು ಮಾಡಿತು. ಆಗ ಇಲಿ, ‘ನಿನಗೇಕೆ ಆಹಾರ ಕೊಡಬೇಕು? ನಾನೇನು ನಿನ್ನ ಆಳೇ? ಬೇಕಾದರೆ ನೀನೆ ಹುಡುಕಿಕೊ’ ಎಂದಿತು. ಬೆಕ್ಕು ಕೋಪದಿಂದ ಇಲಿಯ ಮೇಲೆ ಹಾರಿತು. ಅದಕ್ಕೆ ಸ್ಫಟಿಕ ಕಾಣದೆ ರಪ್ಪನೇ ಅಪ್ಪಳಿಸಿತು. ಅದರ ಹೃದಯ ಒಡೆದು ಚೂರಾಗಿ ಸತ್ತು ಹೋಯಿತು. ಉಳಿದ ಬೆಕ್ಕುಗಳಿಗೂ ಇದೇ ಹಣೆಯ ಬರಹವಾಯಿತು. ನಂತರ ಇಲಿ ಸಂತೋಷವಾಗಿ ಎಲ್ಲ ಕಹಾಪಣಗಳನ್ನು ಬೋಧಿಸತ್ವನಿಗೆ ಕೊಟ್ಟು ಅವನು ಕೊಟ್ಟ ಸಾಕಷ್ಟು ಆಹಾರ ತಿಂದು ಸಾಯುವವರೆಗೆ ಸಂತೋಷವಾಗಿತ್ತು. ಬೋಧಿಸತ್ವನೂ ಶ್ರೀಮಂತನಾಗಿ ಸುಖವಾಗಿದ್ದ.

ಒಂದು ಸಲ ದಾಕ್ಷಿಣ್ಯಕ್ಕೆ ಬಿದ್ದರೆ ಬದುಕು ಭಾರವಾಗುತ್ತದೆ. ಸುಖ ಮರೀಚಿಕೆಯಾಗುತ್ತದೆ. ದಾಕ್ಷಿಣ್ಯದ ಜೀವನ ದಾಸ್ಯದ ಜೀವನ. ಅಕಸ್ಮಾತ್ ಯಾವುದೋ ಕಾರಣಕ್ಕೆ ದಾಕ್ಷಿಣ್ಯಕ್ಕೆ ಒಳಗಾದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ಅದರಿಂದ ಋಣಮುಕ್ತರಾಗುವುದು ವಾಸಿ. ಇಲ್ಲದೆ ಹೋದರೆ ಅದು ಸದಾಕಾಲ ಪಕ್ಕೆಯ ಮುಳ್ಳಾಗಿ ಕಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.