ADVERTISEMENT

ಬಾಲ್ಯದಲ್ಲೇ ಚಿವುಟಬೇಕಾದ ಗುಣಗಳು

ಡಾ. ಗುರುರಾಜ ಕರಜಗಿ
Published 27 ಜನವರಿ 2019, 19:40 IST
Last Updated 27 ಜನವರಿ 2019, 19:40 IST
   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿ, ಬೆಳೆದು ತಕ್ಷಶಿಲೆಗೆ ಹೋಗಿ ವೇದಗಳನ್ನು, ವಿದ್ಯೆಗಳನ್ನು ಕಲಿತ. ತಂದೆ-ತಾಯಿಯರು ಕಾಲವಾದ ಮೇಲೆ ಪಬ್ಬಜಿತನಾಗಿ ಹಿಮಾಲಯದಲ್ಲಿ ಉಳಿದುಬಿಟ್ಟ. ಮುಂದೆ ಒಂದು ವರ್ಷಋತುವಿನಲ್ಲಿ ಪರ್ವತಗಳಿಂದ ಕೆಳಗಿಳಿದು ಬಂದು ವಾರಾಣಸಿಯನ್ನು ಸೇರಿದ.

ತಪಸ್ವಿ ರೂಪದಲ್ಲಿ ಭಿಕ್ಷೆ ಬೇಡಲು ರಾಜನ ಅರಮನೆಯ ಹತ್ತಿರ ಬಂದ. ರಾಜ ಕಿಟಕಿಯ ಮೂಲಕ ಈ ತಪಸ್ವಿಯ ಸಿಂಹ ಗಾಂಭೀರ್ಯವನ್ನು ನೋಡಿ ಸಂತೋಷಪಟ್ಟ. ಈತ ತುಂಬ ಸಾಧಕನಾಗಿರಬೇಕು ಎಂದುಕೊಂಡು ಅಮಾತ್ಯರಿಗೆ ತಪಸ್ವಿಯನ್ನು ಕರೆದುಕೊಂಡು ಬರಲು ಹೇಳಿದ.

ಅಮಾತ್ಯ ತಪಸ್ವಿಯನ್ನು ಅರಮನೆಗೆ ಕರೆದಾಗ ಆತ, ‘ನಾನು ಅರಮನೆಗೆ ಬರುವವನಲ್ಲ. ನಾವು ಹಿಮಾಲಯದಲ್ಲಿರುವವರು’ ಎಂದ. ಅಮಾತ್ಯ ರಾಜನಿಗೆ ವರದಿ ಒಪ್ಪಿಸಿದಾಗ ಆತ, ‘ಹೇಗಾದರೂ ಮಾಡಿ ಅರಮನೆಗೆ ಬರಲೇಬೇಕೆಂದು ಹೇಳಿ ಕರೆದು ತಾ’ ಎಂದ. ಮತ್ತೆ ಅಮಾತ್ಯ ಹೋಗಿ, ‘ತಪಸ್ವಿಗಳೇ, ಇದುವರೆಗೂ ನಮ್ಮ ರಾಜ್ಯಕ್ಕೆ ಬಂದ ಯಾವ ತಪಸ್ವಿಯೂ ರಾಜನ ಅತಿಥ್ಯ ಪಡೆಯದೆ ಹೋಗಿಲ್ಲ. ತಾವು ಬರಲೇಬೇಕು’ ಎಂದು ಒತ್ತಾಯಮಾಡಿ ಕರೆತಂದ.

ADVERTISEMENT

ರಾಜ ತಪಸ್ವಿಯೊಂದಿಗೆ ಮಾತನಾಡುತ್ತ ಇಲ್ಲಿಗೆ ಏಕೆ ಬಂದದ್ದು ಎಂದು ಕೇಳಿದ. ಆಗ ತಪಸ್ವಿ, ‘ಸ್ವಾಮಿ, ವರ್ಷಋತುವನ್ನು ಕಳೆಯಲು ಸೂಕ್ತ ಸ್ಥಳವನ್ನು ಅರಸುತ್ತ ಬಂದಿದ್ದೇನೆ’ ಎಂದ. ‘ಹಾಗಾದರೆ ನಮ್ಮ ರಾಜ್ಯೋದ್ಯಾನದಲ್ಲೇ ತಮಗೆ ಅನುಕೂಲ ಮಾಡಿಕೊಡುತ್ತೇನೆ. ತಾವು ಇಲ್ಲಿಯೇ ಇರಬೇಕು’ ಎಂದು ರಾಜ ಒತ್ತಾಯಿಸಿ ಒಪ್ಪಿಸಿದ.

ರಾಜನ ಮಗನ ಹೆಸರು ದುಷ್ಟಕುಮಾರ. ಹೆಸರಿನಂತೆ ಅತ್ಯಂತ ದುಷ್ಟನಾಗಿದ್ದ. ಕ್ರೂರಿಯಾಗಿದ್ದ. ಯಾರಿಗೂ ಅವನನ್ನು ತಿದ್ದುವುದು ಸಾಧ್ಯವಾಗಿರಲಿಲ್ಲ. ಈ ತಪಸ್ವಿ ತನ್ನ ಮಗನನ್ನು ಸರಿಮಾಡಬಹುದೆಂದುಕೊಂಡು ತಪಸ್ವಿಯ ಹತ್ತಿರ ಬಂದು ಕೇಳಿಕೊಂಡ. ಪ್ರಯತ್ನಿಸುವೆನೆಂದು ಹೇಳಿ ತಪಸ್ವಿ ಮರುದಿನ ದುಷ್ಟಕುಮಾರನನ್ನು ಕರೆದುಕೊಂಡು ಉದ್ಯಾನದಲ್ಲಿ ತಿರುಗಾಡುತ್ತ ಅಲ್ಲೊಂದು ಪುಟ್ಟ ಬೇವಿನಮರದ ಸಸಿಯನ್ನು ಕಂಡ.

ಅದರ ಎರಡು ಎಲೆಯನ್ನು ಕಿತ್ತು ಇದರ ರುಚಿನೋಡು ಎಂದು ಕುಮಾರನಿಗೆ ಕೊಟ್ಟ. ಅದನ್ನು ಕಚ್ಚಿದಾಗ ಕಹಿ ತಲೆಗೇರಿ ಕುಮಾರ ತಕ್ಷಣ ಉಗುಳಿ, ‘ಛೇ, ಛೇ ಇದೊಂದು ವಿಷವೃಕ್ಷ ಕೆಟ್ಟ ಕಹಿ, ಇದನ್ನು ಈಗಲೇ ನಾಶಮಾಡಬೇಕು’ ಎಂದು ಬೇರು ಸಹಿತ ಕಿತ್ತುಹಾಕಿ ಕಾಲಿನಿಂದ ಹೊಸಕಿ ಹಾಕಿದ. ಬೋಧಿಸತ್ವ, ‘ಏನಾಯಿತು?’ ಎಂದು ಕೇಳಿದಾಗ ಕುಮಾರ ಹೇಳಿದ, ‘ಇದು ಸಣ್ಣದಿದ್ದಾಗಲೇ ಇಷ್ಟು ಕಹಿಯಾಗಿದೆ. ಇನ್ನು ದೊಡ್ಡದಾದ ಮೇಲೆ ಎಷ್ಟು ಜನಕ್ಕೆ ತೊಂದರೆ ಕೊಡುತ್ತದೋ? ಅದಕ್ಕೇ ಈಗಲೇ ಅದನ್ನು ನಾಶಮಾಡಿದೆ’ ಎಂದ.

ಆಗ ಬೋಧಿಸತ್ವ, ‘ಕುಮಾರ, ಈಗ ನಿನ್ನ ಕೋಪ, ಕ್ರೂರತನ ಹೀಗೆಯೇ ಜನರ ಕಣ್ಣಿಗೆ ಬಿದ್ದಿದೆ. ಅವರೂ ಹಾಗೆಯೇ ಯೋಚಿಸಬಹುದಲ್ಲ? ಇವನು ಚಿಕ್ಕವನಾಗಿದ್ದಾಗಲೇ ಇಷ್ಟು ಕೋಪಿಷ್ಠ ಮತ್ತು ಕ್ರೂರಿಯಾಗಿರುವುದಾದರೆ ಮುಂದೆ ದೊಡ್ಡವನಾದ ಮೇಲೆ ಎಷ್ಟು ಪರಪೀಡಕನಾಗಬಹುದು ಎಂದು ಯೋಚಿಸಿ ಜನ ನಿನ್ನನ್ನು ಹೀಗೆಯೇ ಹೊಸಕಿ ಹಾಕಲು ನೋಡಬಹುದಲ್ಲ? ಆದ್ದರಿಂದ ನೀನು ನಿನ್ನ ಕಹಿ ಸ್ವಭಾವವನ್ನು ಬಿಟ್ಟು ಶಾಂತಿ, ಮೈತ್ರಿ ಹಾಗೂ ಕರುಣೆಯಿಂದ ಕೂಡಿದ ವ್ಯಕ್ತಿಯಾಗು.

ಆಗ ಎಲ್ಲರೂ ನಿನ್ನನ್ನು ಮೆಚ್ಚುತ್ತಾರೆ’ ಎಂದ. ಆ ಕ್ಷಣದಿಂದ ದುಷ್ಟಕುಮಾರ ಸಂತೋಷಕುಮಾರನಾಗಿ ಬದಲಾಗಿ ತಂದೆಯ ನಂತರ ಆದರ್ಶವಾಗಿ ರಾಜ್ಯವನ್ನು ಪಾಲಿಸಿದ.

ಕೆಟ್ಟ ಗುಣಗಳನ್ನು ಬಾಲ್ಯದಲ್ಲಿಯೇ ಬದಲಿಸದೆ ಹೋದರೆ ಮುಂದೆ ಅವು ಸಮಾಜಕ್ಕೆ ಅಪಾಯಕಾರಿಯಾಗಿ ಬೆಳೆಯುತ್ತವೆ. ಇದು ಹಿರಿಯರ, ಶಿಕ್ಷಕರ ಹಾಗೂ ಸಮಾಜದ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.