ADVERTISEMENT

ಆಲೋಚನೆಯಿಲ್ಲದ ಕೋಪದ ಫಲ

ಡಾ. ಗುರುರಾಜ ಕರಜಗಿ
Published 4 ಫೆಬ್ರುವರಿ 2019, 4:08 IST
Last Updated 4 ಫೆಬ್ರುವರಿ 2019, 4:08 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬ್ರಹ್ಮದತ್ತ ವಾರಾಣಾಸಿಯಲ್ಲಿ ರಾಜ್ಯಭಾರಮಾಡುವಾಗ ಬೋಧಿಸತ್ವ ಹಿಮಾಲಯದಲ್ಲಿ ಒಂದು ಸಿಂಹವಾಗಿ ಹುಟ್ಟಿದ್ದ. ಅವನ ಜೊತೆಗೆ ಆರು ಜನ ತಮ್ಮಂದಿರು ಹಾಗೂ ಒಬ್ಬ ಪುಟ್ಟ ತಂಗಿ ಇದ್ದರು. ಇವರಿದ್ದ ಗುಹೆ ಎತ್ತರದಲ್ಲಿದ್ದು ತುಂಬ ವಿಶಾಲವಾಗಿತ್ತು. ಈ ಗುಹೆಗೆ ಹತ್ತಿರದಲ್ಲೇ ರಜತಪರ್ವತವಿತ್ತು. ಅಲ್ಲಿ ಹಿಂದೆ ಯಾವುದೋ ಮಹಾನುಭಾವರು ಕಟ್ಟಿ ಹೋಗಿದ್ದ ಸ್ಫಟಿಕದ ಗುಹೆ ಇತ್ತು. ಸ್ಫಟಿಕ ಎಷ್ಟು ಶುದ್ಧವಾಗಿತ್ತೆಂದರೆ ಒಳಗಿದ್ದವರು ಗಾಳಿಯಲ್ಲಿದ್ದಂತೆ ತೋರುತ್ತಿತ್ತು. ಅದು ಹೇಗೋ ಅದರೊಳಗೆ ಒಂದು ನರಿ ಸೇರಿಕೊಂಡು
ಬಿಟ್ಟಿತ್ತು.

ಬೋಧಿಸತ್ವ ಹಾಗೂ ಅವನ ತಮ್ಮಂದಿರು ನಿತ್ಯ ದೊಡ್ಡ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ಗುಹೆಗೆ ತಂದು ತಮ್ಮ ಪ್ರೀತಿಯ
ತಂಗಿಗೆ ನೀಡುತ್ತಿದ್ದರು. ಒಂದು ದಿನ ಎಲ್ಲ ಸಿಂಹಗಳು ಗುಹೆಯಿಂದ ಹೊರಗೆ ಹೋಗಿದ್ದಾಗ ಹೆಣ್ಣು ಸಿಂಹದ ಮರಿ ಹೊರಗೆ ಬಂದು ಬಿಸಿಲಿನಲ್ಲಿ ಆರಾಮವಾಗಿ ಕುಳಿತಿತ್ತು. ಸ್ಫಟಿಕ ಗುಹೆಯಿಂದ ಹೊರಗೆ ಬಂದ ನರಿ ಸಿಂಹದ ಮರಿಯನ್ನು ಕಂಡು ಮೋಹಗೊಂಡಿತು. ನೇರವಾಗಿ ಗುಹೆಯ ಮುಂದೆ ಬಂದು ಹೇಳಿತು, “ಸುಂದರ ಸಿಂಹದ ಮರಿಯೇ, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಮ್ಮಿಬ್ಬರಲ್ಲಿ ಬಹಳ ವ್ಯತ್ಯಾಸವಿಲ್ಲ. ನನಗೂ ನಾಲ್ಕು ಕಾಲು, ನಿನಗೂ ನಾಲ್ಕು ಕಾಲು. ಇಬ್ಬರೂ ಕಾಡಿನಲ್ಲಿರುವ ಪ್ರಾಣಿಗಳೇ. ಆದ್ದರಿಂದ ನೀನು ನನ್ನನ್ನು ಮದುವೆಯಾಗಿ ಸುಂದರವಾದ ಸ್ಫಟಿಕದ ಗುಹೆಗೆ ಬಂದು ಬಿಡು. ಇಬ್ಬರೂ ಸುಖವಾಗಿರೋಣ’. ಇದು ಒಂದು ದಿನ ಮಾತ್ರವಲ್ಲ, ಪ್ರತಿದಿನ ಸಿಂಹಗಳು ಹೊರಗೆ ಹೋದೊಡನೆ ಇದು ಬಂದು ಮಾತನಾಡಿ ಸಿಂಹಕ್ಕೆ ಹಿಂಸೆಯನ್ನುಂಟು ಮಾಡುತ್ತಿತ್ತು.

ಸಿಂಹದ ಮರಿ ಯೋಚಿಸಿತು, ‘ಈ ನರಿಗೆ ಅದೆಷ್ಟು ಧೈರ್ಯ! ನಾಲ್ಕು ಕಾಲಿನ ಪ್ರಾಣಿಗಳಲ್ಲೇ ಕನಿಷ್ಠವಾದದ್ದು ನರಿ. ಅದು ನಮ್ಮ ಗುಹೆಯ ಮುಂದೆ ಬಂದು ಪ್ರೇಮಾಲಾಪ ಮಾಡುವುದಾದರೆ ನನ್ನ ಸಿಂಹದ ವಂಶಕ್ಕೆ ಅಪಮಾನ. ನಮ್ಮ ಮನೆತನದ ಅಪಮಾನಕ್ಕೆ ನಾನೇ ಕಾರಣವಾಗಿದ್ದೇನೆ. ಆದ್ದರಿಂದ ನಾನು ಬದುಕಿ ಇರುವುದು ಸೂಕ್ತವಲ್ಲ’. ಹೀಗೆ ಚಿಂತಿಸಿ ತಾನು ಸಾಯಬೇಕೆಂದು ತೀರ್ಮಾನಿಸಿತು. ಮಧ್ಯಾಹ್ನ ಅಣ್ಣಂದಿರು ಮಾಂಸವನ್ನು ತಂದು ಮುಂದೆ ಹಾಕಿದಾಗ ಅದು ತಿನ್ನಲು ನಿರಾಕರಿಸಿತು. ಕಾರಣ ಕೇಳಿದಾಗ ನಡೆದದ್ದನ್ನು ವಿವರವಾಗಿ ತಿಳಿಸಿತು. ಒಂದು ಸಿಂಹ ಕೋಪದಿಂದ ಉಗ್ರವಾಗಿ, ‘ಆ ನರಿ ಎಲ್ಲಿದೆ? ಅದನ್ನು ಈಗಲೇ ಮುಗಿಸಿಬಿಡುತ್ತೇನೆ’ ಎಂದು ಅಬ್ಬರಿಸಿತು. ಹೆಣ್ಣು ಸಿಂಹ ಹತ್ತಿರದ ಎತ್ತರದ ಸ್ಫಟಿಕ ಗುಹೆಯನ್ನು ತೋರಿಸಿತು. ಸ್ಫಟಿಕ ಕಾಣಿಸದೆ ಇರುವುದರಿಂದ ನರಿ ಆಕಾಶದಲ್ಲಿ ಮಲಗಿದಂತೆ ತೋರುತ್ತಿತ್ತು. ಆವೇಶದಿಂದ ಈ ಸಿಂಹ ನರಿಯ ಮೇಲೆ ಹಾರಿತು. ಸ್ಫಟಿಕ ಅದರ ಎದೆಗೆ ಜೋರಾಗಿ ಅಪ್ಪಳಿಸಿದಾಗ ಹಾರಿ ಬಿತ್ತು. ಆದರೆ ಎದೆ ಒಡೆದು ಸತ್ತು ಹೋಯಿತು. ಇದನ್ನು ಕಂಡು ಮತ್ತೊಂದು ಸಿಂಹ ಇನ್ನಷ್ಟು ಕೋಪದಿಂದ ಓಡಿಬಂದು ಹಾರಿತು. ಅದಕ್ಕೆ ಇನ್ನೂ ಹೆಚ್ಚು ಪೆಟ್ಟಾಗಿ ಅದೂ ಸತ್ತು ಬಿದ್ದಿತು. ಇದೇ ರೀತಿ ಆರೂ ಸಿಂಹಗಳು ಸತ್ತು ಹೋದವು. ನಂತರ ಬೋಧಿಸತ್ವ ಸಿಂಹ ಬಂದು ಆದದ್ದನ್ನು ಕೇಳಿ ತಿಳಿದುಕೊಂಡಿತು. ನರಿ ಆಕಾಶದಲ್ಲಿ ಮಲಗುವುದು ಸಾಧ್ಯವಿಲ್ಲ, ಅದು ಸ್ಫಟಿಕದ ಗುಹೆ ಇರಬೇಕೆಂದು ನಿಧಾನವಾಗಿ ಮೇಲೆ ಹತ್ತಿ ಹೋಗಿ ಗುಹೆಯ ಮುಂದೆ ನಿಂತು ಜೋರಾಗಿ ಅಬ್ಬರಿಸಿತು. ಆ ಅಬ್ಬರಕ್ಕೇ ನರಿಯ ಹೃದಯ ಒಡೆದು ಸತ್ತು ಹೋಯಿತು. ನಂತರ ಬೋಧಿಸತ್ವ ಮರಳಿ ಗುಹೆಗೆ ಬಂದು ತಂಗಿಗೆ ವಿಷಯ ತಿಳಿಸಿ ಸಮಾಧಾನಪಡಿಸಿತು.

ADVERTISEMENT

ಇದರಲ್ಲಿ ನಮಗೆ ಎರಡು ನೀತಿಗಳು. ಮೊದಲನೆಯದು ನಮಗಿಂತ ತುಂಬ ಎತ್ತರದಲ್ಲಿರುವವರ ಜೊತೆಗೆ ಸಂಬಂಧ ಬೆಳೆಸುವಾಗ ಬಹಳ ಎಚ್ಚರವಿರಬೇಕು. ಎರಡನೆಯದು ಕೋಪಕ್ಕೆ ತುತ್ತಾಗಿ ವಿಚಾರ ಮಾಡದೆ ಧುಮುಕುವುದು ಅನಾಹುತಕ್ಕೆ ಆಹ್ವಾನ ನೀಡಿದಂತೆ. ಆಗ ತುಂಬ ಆಲೋಚನೆಯ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.