ADVERTISEMENT

ಬೆರಗಿನ ಬೆಳಕು | ಆತ್ಮ ವಿಸ್ತರಣೆ

ಡಾ. ಗುರುರಾಜ ಕರಜಗಿ
Published 22 ಜೂನ್ 2021, 19:51 IST
Last Updated 22 ಜೂನ್ 2021, 19:51 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ |
ವಲಯವಲಯಗಳಾಗಿ ಸಾರುವುದು ದಡಕೆ ||
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು | ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ || 431 ||

ಪದ-ಅರ್ಥ: ಮೀವಂದು=ಸ್ನಾನ ಮಾಡುವಾಗ, ಪರಿಪರಿದು=ಹರಿದು, ಕಲೆತುಕೊಳ್ಳಲಿ=ಬೆರೆಯಲಿ.

ವಾಚ್ಯಾರ್ಥ: ಕೊಳದಲ್ಲಿ ಸ್ನಾನ ಮಾಡುವಾಗ ವ್ಯಕ್ತಿಯಿಂದ ಹೊರಟ ತೆರೆಗಳು ಎಲ್ಲೆಡೆಗೆ, ವಲಯ, ವಲಯಗಳಾಗಿ ಹರಿದು ದಂಡೆಯನ್ನು ಸೇರುತ್ತವೆ. ಆ ಅಲೆಗಳ ರೀತಿಯಲ್ಲಿಯೇ ನಿನ್ನ ಆತ್ಮವೂ ಸರ್ವದಿಕ್ಕುಗಳಲ್ಲಿ ಹರಡಿ ವಿಶ್ವದಲ್ಲಿ ಬೆರೆತುಕೊಳ್ಳಲಿ.

ADVERTISEMENT

ವಿವರಣೆ: ವಿಶ್ವದಲ್ಲಿರುವ ಸುಮಾರು ಏಳುನೂರು ಕೋಟಿ ಜನರಲ್ಲಿ ಒಬ್ಬರೂ ಮತ್ತೊಬ್ಬರಂತಿಲ್ಲ. ಕೆಲವರು ನೋಡಲು ಒಂದೇ ತೆರನಿದ್ದರೂ, ಬುದ್ಧಿ ಬೇರೆ. ನಮ್ಮ ಕೈ ಬೆರಳುಗಳ ತುದಿಯಲ್ಲಿರುವ ಗೆರೆಗಳು ಪ್ರಪಂಚದ ಉಳಿದ ಯಾವುದೇ ಮನುಷ್ಯನ ಕೈಬೆರಳುಗಳಿಗೆ ಹೊಂದುವುದಿಲ್ಲವೆಂಬುದು ಆಶ್ಚರ್ಯವಲ್ಲವೆ? ಅದೇ ಪ್ರತಿಯೊಬ್ಬ ವ್ಯಕ್ತಿಯ ವಿಶೇಷತೆ. ಅದೇ ‘ವ್ಯಕ್ತಿ-ತ್ವ’. ತ್ವ-ಎಂದರೆ ಯಾವ ವಿಶೇಷತೆಯಿಂದ ಅದು ಅದಾಗಿಯೇ ಉಳಿದಿದೆಯೋ ಅದು. ಪ್ರತಿಯೊಬ್ಬ ವ್ಯಕ್ತಿ ವಿಶೇಷವಾಗಿರಲೆಂದು ಪ್ರಕೃತಿ ಮಾಡಿದ ಏರ್ಪಾಡು ಅದು. ಈ ವ್ಯಕ್ತಿತ್ವ ಅರಳಬೇಕು. ಅದೇ ವಿಕಸನ. ಅದು ವ್ಯಕ್ತಿಯಿಂದ ಪ್ರಾರಂಭವಾಗಿ ಏಳು ಸುತ್ತಿನ ಮಲ್ಲಿಗೆಯಂತೆ ಅರಳುತ್ತ ಬರಬೇಕು. ಈ ಅರಳುವಿಕೆಗೆ ಕಾರಣವಾಗುವವು ಮೂರು ಪ್ರಭಾವಗಳು - ಸಂಸ್ಕಾರ, ಪರಿಸರ ಮತ್ತು ಶಿಕ್ಷಣ.

ಇವು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ವ್ಯಕ್ತಿಗೆ ದೊರೆತಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಈ ವಿಕಸನ ಕ್ರಿಯೆ ಮುಖ್ಯವಾಗಿ ನಾಲ್ಕು ಬಗೆಗಳಲ್ಲಿ ಆಗುತ್ತದೆ. ಅವುಗಳನ್ನು ಭೌತಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಎಂದು ಗುರುತಿಸುತ್ತಾರೆ. ಮೊದಲು ಪ್ರಾರಂಭವಾಗುವುದು ಶರೀರದಿಂದ. ಪ್ರಕೃತಿ ನಮಗೆ ಕೊಡಮಾಡಿರುವ ಅದ್ಭುತ ಕೊಡುಗೆ ಶರೀರ. ಧೃಡವಾದ ಶರೀರದಲ್ಲಿ ಮಾತ್ರ ಧೃಡವಾದ ಮನಸ್ಸು ಇರುವುದು. ಅದಕ್ಕೆ ಸರಿಯಾದ, ಪ್ರಮಾಣಬುದ್ಧವಾದ ಆಹಾರ, ವ್ಯಾಯಾಮ, ಪ್ರಾಣಾಯಾಮ, ವಿಶ್ರಾಂತಿ ಬೇಕು. ಇವು ದೇಹವನ್ನು ಯುದ್ಧಕ್ಕೆ ಸನ್ನದ್ಧವಾದ ಕುದುರೆಯಂತೆ ಸುಸ್ಥಿತಿಯಲ್ಲಿಡುತ್ತವೆ. ದೇಹಶಕ್ತಿಯೊಂದಿಗೆ ಬುದ್ಧಿಶಕ್ತಿಯೂ ಬೆಳೆಯಬೇಕು. ಅದಕ್ಕೆ ಶಿಸ್ತುಬದ್ಧವಾದ ಅಧ್ಯಯನ, ಪ್ರಪಂಚ ಪ್ರವಾಸ, ಧನಾತ್ಮಕ ಚಿಂತನೆಗಳು ಮುಖ್ಯ. ದೇಹ, ಬುದ್ಧಿಗಳ ಜೊತೆಗೆ ಭಾವನೆಗಳ ಪರಿಪಾಕವಾಗಬೇಕು. ತನ್ನ ಪರಿವಾರದವರ, ತನ್ನ ಜೊತೆಯವರ, ದೇಶವಾಸಿಗಳ ಮತ್ತು ಪ್ರಪಂಚದ ಎಲ್ಲರ ಬಗ್ಗೆ ಸರಿಯಾದ ಭಾವನೆಗಳನ್ನು, ಅಂತಃಕರಣವನ್ನು, ಪ್ರೇಮವನ್ನು ಬೆಳೆಸಿಕೊಳ್ಳುವುದು ಮುಖ್ಯ. ಇವೆಲ್ಲ ಹಂತಗಳ ನಂತರ ಆಧ್ಯಾತ್ಮಿಕ ಚಿಂತನೆ ಬೆಳೆಯಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಧ್ಯಾತ್ಮಿಕ ಅಂಶವಿದೆ. ಅದು ಜಾತಿ, ಮತ, ಭಾಷೆ, ದೇಶವನ್ನು ಮೀರಿದ್ದು. ಆಧ್ಯಾತ್ಮಿಕತೆ ಬೆಳೆದಂತೆ ಬದುಕು ವಿಸ್ತಾರವಾಗಿ ಮೌಲ್ಯಪ್ರಧಾನವಾಗುತ್ತದೆ.

ಕಗ್ಗ ಅದನ್ನು ಮನಮುಟ್ಟುವಂತೆ ಹೇಳುತ್ತದೆ. ಕೊಳದಲ್ಲಿ ಅಲೆಗಳು ಕೇಂದ್ರದಿಂದ ಹೊರಟು ಅಲೆಅಲೆಯಾಗಿ ದಡವನ್ನು ಸೇರುವಂತೆ, ವ್ಯಕ್ತಿತ್ವದ ವಿಕಸನದಿಂದ ವ್ಯಕ್ತಿಯ ಆತ್ಮಶಕ್ತಿ ಎಲ್ಲೆಡೆಗೆ ಹರಿದು ವಿಶ್ವದಲ್ಲಿ ಬೆರೆತುಹೋಗಬೇಕು. ಅದೇ ಬದುಕಿನ ಸ್ವಾರಸ್ಯ ಮತ್ತು ಸಾರ್ಥಕ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.