ADVERTISEMENT

ಬೆರಗಿನ ಬೆಳಕು: ಮಾರ್ಗ ತೋರದ ದೇವ

ಡಾ. ಗುರುರಾಜ ಕರಜಗಿ
Published 9 ಜನವರಿ 2022, 19:31 IST
Last Updated 9 ಜನವರಿ 2022, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ತರಣಿಶಶಿಪಥಗಳನು, ಧರೆವರುಣಗತಿಗಳನು |
ಮರುದಗ್ನಿ ವೇಗಗಳ ನಿಯಮಿಸಿಹ ದಕ್ಷನ್ ||
ನರನರಸಿಕೊಳಲಿ ದಾರಿಯ ತನಗೆ ತಾನೆಂದು |
ತೊರೆದನೇತಕೆ ನಮ್ಮ ? – ಮಂಕುತಿಮ್ಮ || 537 ||

ಪದ-ಅರ್ಥ: ತರಣಿಶಶಿಪಥಗಳನು=ತರಣಿ(ಸೂರ್ಯ)+ಶಶಿ(ಚಂದ್ರ)+ಪಥಗಳನು(ದಾರಿಗಳನ್ನು), ಧರೆವರುಣಗತಿಗಳನು+ಧರೆ(ಭೂಮಿ)+
ವರುಣ(ಮಳೆಯ ದೇವತೆ)+ಗತಿಗಳನು, ಮರುದಗ್ನಿ= ಮರುತ್(ವಾಯು)+ಅಗ್ನಿ, ನರನರಸಿಕೊಳಲಿ=ನರನು+ಅರಸಿಕೊಳಲಿ.

ವಾಚ್ಯಾರ್ಥ: ಸೂರ್ಯ, ಚಂದ್ರರ ಮಾರ್ಗಗಳನ್ನು, ಭೂಮಿ, ಮಳೆಗಳ ಗತಿಗಳನ್ನು, ವಾಯು, ಅಗ್ನಿಗಳ ವೇಗವನ್ನು ನಿಯಮ ಮಾಡಿದ ದಕ್ಷ ಭಗವಂತ, ತನ್ನ ದಾರಿಯನ್ನು ಮನುಷ್ಯ ತಾನೇ ಹುಡುಕಿಕೊಳ್ಳಲಿ ಎಂದು ಏತಕ್ಕೆ ನಮ್ಮನ್ನು ತೊರೆದನೋ?

ADVERTISEMENT

ವಿವರಣೆ: ಉಪನಿಷತ್ತಿನ ಮಾತೊಂದು ಹೀಗಿದೆ ಭೀಷಾಸ್ಮಾತ್ ವಾತ: ಪವತೇ, ಭೀಷೋದೇತಿ ಸೂರ್ಯ: |
ಭೀಷಾಸ್ಮಾದಗ್ನಿಶ್ಚೇಂದ್ರಶ್ಚ, ಮೃತ್ಯುರ್ಧಾವತಿ ಪಂಚಮ ಇತಿ ||

‘ಇದು ಈಶ್ವರ ನಿರ್ಮಿತ ಕಟ್ಟುಪಾಡು. ಗಾಳಿಯ ವೇಗ, ಸೂರ್ಯನ ಚಲನೆ ಎಲ್ಲವೂ ಪರಮಾತ್ಮನ ಕಟ್ಟುಪಾಡಿನಂತೆಯೇ. ಅಗ್ನಿಯೂ ಆತನ ನಿಯಮದಂತೆ ವರ್ತಿಸುತ್ತಾನೆ. ಅಷ್ಟೇಕೆ ಮೃತ್ಯುವೂ ಈಶ್ವರನ ಅನುಜ್ಞೆಯಂತೆ ನಡೆಯುತ್ತದೆ.’

ಜಗತ್ತಿನ ಎಲ್ಲ ಚರಾಚರ ವಸ್ತುಗಳೆಲ್ಲವೂ ಒಂದಾನೊಂದು ಸೂತ್ರಕ್ಕೆ, ಆಜ್ಞೆಗೆ ಬದ್ಧವಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂಬುದು ಸೂಕ್ಷ್ಮ ದೃಷ್ಟಿಗೆ ಗೋಚರಿಸುತ್ತದೆ. ಸ್ಥೂಲದೃಷ್ಟಿಗೆ ಮೃಗ, ಪಕ್ಷಿ, ಗಿಡ, ಮರಗಳು ಯಾವ ಅಳತೆಗೂ ಸಿಗದಂತೆ, ತಮಗೆ ಬೇಕಾದಂತೆ ವ್ಯವಹರಿಸುತ್ತವೆ ಎಂದೆನಿಸಬಹುದು. ಆದರೆ ಸರಿಯಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಆ ವಿಚಾರ ಸರಿಯಲ್ಲ ಎಂದು ಹೊಳೆಯುತ್ತದೆ.

ದಾರ್ಶನಿಕರು ಇದಕ್ಕೊಂದು ಉದಾಹರಣೆ ನೀಡುತ್ತಾರೆ. ಒಂದು ರೈಲಿನಲ್ಲಿ ಸಾವಿರಾರು ಜನ ಪ್ರಯಾಣ ಮಾಡುತ್ತಿದ್ದಾರೆ. ಆ ರೈಲಿಗೆ ಇಪ್ಪತ್ತಕ್ಕೂ ಹೆಚ್ಚು ಬೋಗಿಗಳು. ಒಂದೊಂದು ಬೋಗಿಯಲ್ಲಿ ಅರವತ್ತು-ಎಪ್ಪತ್ತು ಜನ. ಕೆಲವರು ಮಲಗಿ ನಿದ್ರೆ ಮಾಡುತ್ತಾರೆ. ಕೆಲವರು ಓದುತ್ತ ಕುಳಿತಿದ್ದಾರೆ. ಮತ್ತೆ ಕೆಲವರು ಇಸ್ಪೀಟು ಆಡುತ್ತಾರೆ. ಕೆಲವು ಸ್ನೇಹಿತರು ಸೇರಿ ಹಾಡು, ನೃತ್ಯ ಮಾಡುತ್ತಾರೆ. ಮತ್ತೆ ಕೆಲವರು ಕುಡಿದು, ತಿಂದು ಮೋಜು ಮಾಡುತ್ತಾರೆ. ಎಲ್ಲರನ್ನೂ ಗಮನಿಸಿದರೆ ಎಲ್ಲರೂ ತಮತಮಗೆ ಬೇಕಾದಂತೆ, ಯಾವ ನಿಯಮವೂ ಇಲ್ಲದಂತೆ ಇದ್ದಾರೆ ಎನ್ನಿಸುತ್ತದೆ. ಆದರೆ ಎಲ್ಲರೂ ರೈಲಿನ ಇಂಜನ್‌ನ ನಿಯಂತ್ರಣದಲ್ಲಿದ್ದಾರೆ. ಅದು ಹೋದ ವೇಗದಲ್ಲಿ, ಸ್ಥಳದಲ್ಲಿಯೇ ಇರುತ್ತಾರೆ. ಅಲ್ಲಿ ಪ್ರಯಾಣಿಕರ ಇಚ್ಛೆ ಇಲ್ಲ. ಮುಖ್ಯವಾಗಿ, ಅವರು ಜಾಗ್ರತವಾಗಿದ್ದು ತಮ್ಮ ನಿಲ್ದಾಣ ಬಂದೊಡನೆ ಇಳಿದು ಹೋಗಲೇಬೇಕು. ಹಾಗೆ ಪ್ರತಿಯೊಬ್ಬರೂ ಒಂದು ಸೂತ್ರಕ್ಕೆ ಸಿಲುಕಿದಂತೆ ನಡೆಯುತ್ತಾರೆ. ಕಗ್ಗದ ಕೊರಗು ಅದು. ವಿಶ್ವದ ಎಲ್ಲ ಸಿಕ್ಕ, ದೊಡ್ಡ ವಸ್ತುಗಳಿಗೆ ಸರಿಯಾದ ಗತಿಯನ್ನು, ಮಾರ್ಗವನ್ನು ತೋರಿ, ಅವು ಅದರಂತೆ ನಡೆಯುವ ವ್ಯವಸ್ಥೆ ಮಾಡಿದ ಭಗವಂತ ಮನುಷ್ಯರನ್ನೇಕೆ ಹಾಗೆಯೇ ಬಿಟ್ಟುಬಿಟ್ಟ. ತನ್ನ ದಾರಿಯನ್ನು ತಾನೇ ಕಂಡುಕೊಳ್ಳಲಿ ಎಂಬುದು ಅವನ ಉದ್ದೇಶವೇ? ಅಥವಾ ಉಳಿದ ಯಾವ ಪ್ರಾಣಿಗಳಿಗೂ ನೀಡದ ಬುದ್ಧಿಯನ್ನು ಮನುಷ್ಯನಿಗೆ ನೀಡಿದ್ದರಿಂದ, ಅವನು ಅದನ್ನು ಬಳಸಿ, ತನಗೆ ಕ್ಷೇಮವಾದದ್ದನ್ನು ಆರಿಸಿಕೊಳ್ಳಲಿ ಎಂದು ಬಿಟ್ಟಿದ್ದಾನೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.