ADVERTISEMENT

ಬೆರಗಿನ ಬೆಳಕು: ನಾಳಿನ ಚಿಂತೆ ಬೇಡ

ಡಾ. ಗುರುರಾಜ ಕರಜಗಿ
Published 7 ಆಗಸ್ಟ್ 2022, 21:30 IST
Last Updated 7 ಆಗಸ್ಟ್ 2022, 21:30 IST
ಗುರುರಾಜ್‌ ಕರಜಗಿ
ಗುರುರಾಜ್‌ ಕರಜಗಿ   

ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ ? |

ಸಂದರ್ಭ ಬರಲಿ, ಬಂದಾಗಳಾ ಚಿಂತೆ ||
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು |
ಇಂದಿಗಿಂದಿನ ಬದುಕು – ಮಂಕುತಿಮ್ಮ || 681 ||

ಪದ-ಅರ್ಥ: ಮುಂದೇನೊ=ಮುಂದೆ+ಏನೊ, ಹೊಂದಿಸುವನಾರೊ=ಹೊಂದಿಸುವನು+ಆರೊ, ನಿನ್ನಾಳಲ್ಲ=ನಿನ್ನ+ಆಳಲ್ಲ, ಬೇರಿಹನು=ಬೇರೆ ಇದ್ದಾನೆ, ಇಂದಿಗಿಂದಿನ=ಇಂದಿಗೆ+ಇಂದಿನ
ವಾಚ್ಯಾರ್ಥ: ಮುಂದೆ ಏನೋ, ಮತ್ತೆ ಏನಾಗುತ್ತದೆಯೋ ಎನ್ನುವುದರ ಮಾತು ಇಂದಿಗೇಕೆ? ಸಂದರ್ಭ ಬಂದಾಗ ಅದರ ಚಿಂತೆ. ಪರಿಸ್ಥಿತಿಗಳನ್ನು ಹೊಂದಿಸುವವನು ಬೇರೆ ಇದ್ದಾನೆ. ಅವನು ನಿನ್ನ ಆಳಲ್ಲ. ಆದ್ದರಿಂದ ಇಂದಿಗೆ ಇಂದಿನ ಬದುಕನ್ನು ಗಮನಿಸಿ ಬದುಕು.

ADVERTISEMENT

ವಿವರಣೆ: ನಗರದ ಪ್ರಮುಖ ಬೀದಿಯ ಬದಿಯಲ್ಲಿ ಜನಜಂಗುಳಿ. ರಾಮಣ್ಣ ಒಳಗೆ ನುಗ್ಗಿ ನೋಡಿದ. ಹೃದಯವಿದ್ರಾವಕ ದೃಶ್ಯ. ಒಬ್ಬ ತಾಯಿ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿ ಅಸುನೀಗಿದ್ದಾಳೆ. ಒಂದು ಮಗು ಎದೆಯ ಮೇಲೆ ಮಲಗಿದೆ. ಮತ್ತೊಂದು ಪಕ್ಕದಲ್ಲಿ ಮಲಗಿ ಭೋರೆಂದು ಅಳುತ್ತಿದೆ. ರಾಮಣ್ಣನ ಕರುಳು ಕಿತ್ತು ಬಂದಿತು. ಪಾಪ! ಹುಟ್ಟಿದ ತಕ್ಷಣ ತಾಯಿಯನ್ನು ಕಳೆದುಕೊಂಡು ಮಕ್ಕಳು ಎಂಥ ನಿರ್ಭಾಗ್ಯರು. ಅವೆರಡೂ ಹೆಣ್ಣುಮಕ್ಕಳು. ಇಬ್ಬರ ಎಡೆಗೆನ್ನೆಯ ಮೇಲೂ ಒಂದು ಪುಟ್ಟ ಕಪ್ಪು ಮಚ್ಚೆ ಇದೆ. ಸ್ವಲ್ಪ ಹೊತ್ತಿಗೆ ಪೋಲೀಸರು ಬಂದು ಮಹಿಳೆಯ ದೇಹವನ್ನೆತ್ತಿಕೊಂಡು, ಮಕ್ಕಳನ್ನು ಕರೆದುಕೊಂಡು ಹೋದರು. ರಾಮಣ್ಣನಿಗೆ ನಿದ್ರೆ ಬರಲಿಲ್ಲ. ಮಕ್ಕಳ ಬಗ್ಗೆಯೇ ಚಿಂತೆ. ಅನಾಥಮಕ್ಕಳು ಹೇಗೆ ಬದುಕಿಯಾವು? ಅವೂ ಆರೈಕೆ ಕಾಣದೆ ಸತ್ತು ಹೋಗಬಹುದೇ? ಕೆಲ ತಿಂಗಳುಗಳ ನಂತರ ಚಿಂತೆಯ ತೀಕ್ಷ್ಣತೆ ಕಡಿಮೆಯಾದರೂ, ಆಗಾಗ ದೃಶ್ಯ ಕಣ್ಣಮುಂದೆ ಕಟ್ಟಿ, ಮಕ್ಕಳ ಭವಿಷ್ಯದ ಚಿಂತೆ ತೂರಿ ಬರುತ್ತಿತ್ತು.

ಐದಾರು ವರ್ಷಗಳು ಉರುಳಿದವು. ಒಂದು ದಿನ ರಾಮಣ್ಣ ಅಂಗಡಿಯ ಬೀದಿಯಲ್ಲಿ ನಡೆದು ಹೋಗುತ್ತಿದ್ದಾಗ ಒಂದು ದೊಡ್ಡ ಐಷಾರಾಮೀ ಕಾರು ಬಂದು ನಿಂತಿತು. ಅದರಿಂದ ಒಬ್ಬ ಶ್ರೀಮಂತ ಮಧ್ಯ ವಯಸ್ಸಿನ ಮಹಿಳೆ ಕೆಳಗಿಳಿದಳು. ಆಕೆಯ ವರ್ಚಸ್ಸು, ಧರಿಸಿದ್ದ ಆಭರಣಗಳು ಆಕೆಯ ಶ್ರೀಮಂತಿಕೆಯನ್ನು ಸಾರುತ್ತಿದ್ದವು. ಅವಳ ಹಿಂದೆಯೇ ಇಬ್ಬರು ಹೆಣ್ಣುಮಕ್ಕಳು ಇಳಿದರು. ಅವೆರಡೂ ಸುಮಾರು ಆರು ವರ್ಷದ ಹುಡುಗಿಯರು, ತುಂಬ ಸುಂದರವಾಗಿದ್ದರು. ಇಬ್ಬರ ಎಡಗೆನ್ನೆಯ ಮೇಲೆ ಪುಟ್ಟ ಕಪ್ಪು ಮಚ್ಚೆ. ರಾಮಣ್ಣನಿಗೆ ಆರು ವರ್ಷದ ಹಿಂದಿನ ಘಟನೆ ನೆನಪಾಯಿತು. ತಡೆಯಲಾಗದೆ ಹೋಗಿ ಆ ಮಹಿಳೆಯನ್ನು ಕೇಳಿದ, “ತಾಯೀ, ಅವೆರಡೂ ತಮ್ಮ ಮಕ್ಕಳೇ?”. ಆ ಮಹಿಳೆ, “ಹಾಗೆ ಇದ್ದರೆ ಚೆನ್ನಾಗಿತ್ತು” ಎಂದು ನಿಟ್ಟ್ಟುಸಿರು ಬಿಟ್ಟು ತಾನು ಅವೆರಡೂ ಮಕ್ಕಳನ್ನು ಪೋಲೀಸರಿಂದ ಪಡೆದು ದತ್ತು ತೆಗೆದುಕೊಂಡದ್ದನ್ನು ಹೇಳಿದಳು. ಈಗ ಆ ಮಕ್ಕಳು ಕೋಟ್ಯಾಂತರ ಆಸ್ತಿಗೆ ವಾರಸುದಾರರು.

ರಾಮಣ್ಣ ಸುಮ್ಮನೆ ಚಿಂತೆ ಮಾಡಿದ್ದ. ತಾನೇ ಮಕ್ಕಳ ಭವಿಷ್ಯವನ್ನು ತಿದ್ದುವವನಂತೆ ಕೊರಗಿದ್ದ. ಮಕ್ಕಳ ಭವಿಷ್ಯವನ್ನು ಹೊಂದಿಸುವವನು ಬೇರೆ ಇದ್ದ. ಕಗ್ಗ ಆ ಮಾತನ್ನು ಹೇಳುತ್ತದೆ. ನಾಳೆಗಳ ಚಿಂತೆಯಲ್ಲಿ ಇಂದಿನದನ್ನು ಕಳೆದುಕೊಳ್ಳುತ್ತೇವೆ. ಚಿಂತೆ ಬೇಡ. ಸಂದರ್ಭ ಬಂದಾಗ ಎದುರಿಸಿದರಾಯಿತು. ನಾಳೆಗಳನ್ನು ಜೋಡಿಸುವವನು ನಮ್ಮ ಆಳಲ್ಲ. ಆದ್ದರಿಂದ ನಮ್ಮ ಇಂದಿನ ಬದುಕನ್ನು ಚೆನ್ನಾಗಿ ಅನುಭವಿಸುತ್ತ, ನಾಳಿನ ಚಿಂತೆಗಳನ್ನು ದೂರವಿಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.