ADVERTISEMENT

ಬೆರಗಿನ ಬೆಳಕು | ಬಾಗದ ಆತ್ಮಗೌರವ

ಡಾ. ಗುರುರಾಜ ಕರಜಗಿ
Published 14 ಜೂನ್ 2022, 20:17 IST
Last Updated 14 ಜೂನ್ 2022, 20:17 IST
   

ರಾಗಿಮುದ್ದೆಯ ತಿಂದು ನಲಿದು ಬಾಳ್ವಾತಂಗೆ |
ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ ? ||
ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ|
ಬಾಗಿಸದಿರಾತ್ಮವನು – ಮಂಕುತಿಮ್ಮ || 650 ||

ಪದ-ಅರ್ಥ: ಬಾಳ್ವಾತಂಗೆ=ಬಾಳುವವನಿಗೆ, ಕದ್ದುಣುವ=ಕದ್ದು+ಉಣುವ, ಕರುಬೆ=ಅಸೂಯೆಯೆ, ಉಣಿಸೆಂತಪ್ಪುದಾದೊಡಂ=ಉಣಿಸು(ಊಟ)+ಎಂತಪ್ಪುದು (ಎಂತಹುದು) +ಆದೊಡಂ, ಬಾಗಿಸದಿರಾತ್ಮವನು=ಬಾಗಿಸದಿರು+ಆತ್ಮವನು

ವಾಚ್ಯಾರ್ಥ: ಹೊಟ್ಟೆ ತುಂಬ ರಾಗಿಮುದ್ದೆಯನ್ನು ತಿಂದು ಸಂತೋಷವಾಗಿ ಬಾಳುವವನಿಗೆ ಕಾಗೆಯೊಂದು ಸಿಹಿತಿಂಡಿಯನ್ನು ಕದ್ದು ತಿನ್ನುವುದನ್ನು ಕಂಡು ಅಸೂಯೆಯೇ? ಆಹಾರ ಯಾವುದಾದರೇನು? ಹಸಿವು ಹಿಂಗಿದರೆ ಸಾಕು. ಅದಕ್ಕಾಗಿ ನಿನ್ನ ಆತ್ಮವನ್ನು ಬಾಗಿಸಬೇಡ.

ವಿವರಣೆ: ಅವನೊಬ್ಬ ಬಹುದೊಡ್ಡ ಶ್ರೀಮಂತ. ಅರಮನೆಯಂಥ ಮನೆ. ಅದರಲ್ಲಿ ಸಕಲ ಭಾಗ್ಯ, ಸೌಭಾಗ್ಯಗಳು ತುಂಬಿವೆ. ಆದರೆ ಯಜಮಾನನಿಗೆ ಸಮಾಧಾನವಿಲ್ಲ. ಅವನದು ಬಹುದೊಡ್ಡ ವ್ಯಾಪಾರ. ಹಗಲು ರಾತ್ರಿ ಹಣ ತರುವ, ಹೊಂದಿಸುವ ಯೋಚನೆ. ಹೇಗೆ ಮಾಡಿದರೆ ಲಾಭ ಹೆಚ್ಚಾದೀತೆಂಬ ಲೆಕ್ಕ. ಊಟದ ರುಚಿಯೇ ತಪ್ಪಿ ಹೋಗಿದೆ. ತಟ್ಟೆಯಲ್ಲಿರುವುದು ಪಂಚಭಕ್ಷ್ಯ ಪರಮಾನ್ನ. ಆದರೆ ಮನಸ್ಸು ಎಲ್ಲಿಯೋ. ರಾತ್ರಿ ನಿದ್ರೆ ಸರಿಯಾಗಿ ಬರದೇ ಒದ್ದಾಡುತ್ತಿದ್ದ. ಆಗ ಕೇಳಿಸಿತು, ಯಾರೋ ಸಂತೋಷದಿಂದ ಹೇಳಿಕೊಳ್ಳುತ್ತಿದ್ದ ಹಾಡು. ಮಹಡಿಯ ಮೇಲೆ ಹೋಗಿ ನೋಡಿದ. ಅವನ ಅರಮನೆಯ ಪಕ್ಕದಲ್ಲೊಂದು ಮುರುಕು ಗುಡಿಸಲು. ಅದರ ಮುಂದೆ ದಿನಗೂಲಿ ಮಾಡುವ ಮನುಷ್ಯ ಮತ್ತು ಅವನ ಹೆಂಡತಿ ಕುಳಿತಿದ್ದಾರೆ. ಅವರು ಸಂತೋಷದಿಂದ ಕೈ-ಕೈ ಹಿಡಿದುಕೊಂಡು ಮನದುಂಬಿ ಹಾಡುತ್ತಿದ್ದಾರೆ. ಅವರ ಊಟವೆಂದರೆ ನೀರು ಗಂಜಿ. ಶ್ರೀಮಂತನಿಗೆ ಆಶ್ಚರ್ಯ! ತಾನು ಅಷ್ಟು ದೊಡ್ಡ ಶ್ರೀಮಂತ. ತನ್ನ ಬಳಿ ಏನಿಲ್ಲ? ಆದರೆ ಆ ಸಂತೋಷವೆಲ್ಲಿ? ಅವನಿಗೆ ಹೊಟ್ಟೆಕಿಚ್ಚಾಯಿತು. ತಾನು ಅಷ್ಟು ಕಷ್ಟಪಟ್ಟು ಹಣ ಸಂಪಾದನೆ ಮಾಡಿದ್ದು ಆನಂದಕ್ಕೋಸ್ಕರ. ಈಗ ಹಣ ಬಂದಿದೆ ಆದರೆ ಆನಂದ ಮಾಯವಾಗಿದೆ. ಅವನು ಆ ಬಡಕೂಲಿಯ ಸಂತೋಷವನ್ನು ಕಂಡು ಕರುಬಿದ.

ADVERTISEMENT

ಇಂಥದ್ದೇ ಒಂದು ಸನ್ನಿವೇಶವನ್ನು ಕಗ್ಗ ಕಣ್ಣಮುಂದೆ ತರುತ್ತದೆ. ಒಬ್ಬ ಮನುಷ್ಯ ರಾಗಿಮುದ್ದೆಯನ್ನು ತಿಂದು ಸಂತೋಷದಿಂದ ಬಾಳುತ್ತಿದ್ದಾನೆ. ಒಂದು ದಿನ ಅವನ ಕಣ್ಣಿಗೆ ಕಾಗೆಯೊಂದು ಪಕ್ಕದ ಮನೆಯ ಹಿತ್ತಲಿನಿಂದ ಒಂದು ಸಿಹಿತಿಂಡಿಯನ್ನು ಕದ್ದುಕೊಂಡು ಹೋಗುವುದು ಕಂಡಿತು. ಈಗ ಇಲ್ಲಿ ಎರಡು ಪ್ರಶ್ನೆಗಳು. ಮೊದಲಿಗೆ ತನಗಿಲ್ಲದ ಸಿಹಿತಿಂಡಿ ಕಾಗೆಗೆ ದೊರಕಿತಲ್ಲ ಎಂದು ಈತನಿಗೆ ಕಾಗೆಯ ಬಗ್ಗೆ ಅಸೂಯೆಯಾದೀತೇ? ನಂತರ, ಅಸೂಯೆಯಾಗುವುದು ಸರಿಯೆ?

ತನಗೆ ತನ್ನ ಪ್ರಯತ್ನದ ಫಲವಾಗಿ ರಾಗಿಮುದ್ದೆ ದೊರಕಿದೆ. ಅದನ್ನು ತಾನು ಸ್ವಂತ ಪರಿಶ್ರಮದಿಂದ ಗಳಿಸಿದ್ದು, ಕದ್ದದ್ದಲ್ಲ. ಕಾಗೆಗೆ ದೊರೆತದ್ದು ಸಿಹಿತಿಂಡಿಯೇ ಇರಬಹುದು, ತನ್ನ ರಾಗಿಮುದ್ದೆಗಿಂತ ರುಚಿಯಾಗಿದ್ದೇ ಇರಬಹುದು, ಆದರೆ ತನ್ನ ಆಹಾರ ಆತ್ಮಗೌರವದಿಂದ ಗಳಿಸಿದ್ದು. ಊಟ ಯಾವುದಾದರೇನು? ಅದು ಇರುವುದು ಹಸಿವನ್ನು ತಣಿಸುವುದಕ್ಕೆ. ಆತ್ಮಗೌರವದಿಂದ ಗಳಿಸಿದ ರಾಗಿಮುದ್ದೆ ಕದ್ದ ಸಿಹಿತಿಂಡಿಗಿಂತ ಮಿಗಿಲಾದದ್ದು ಎಂಬ ನಂಬಿಕೆ, ಅಭಿಮಾನವನ್ನು ತರುತ್ತದೆ. ಅದು ಆತ್ಮಗೌರವವನ್ನು ಕುಂದಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.