ADVERTISEMENT

ಬೆರಗಿನ ಬೆಳಕು: ಆತ್ಮವಿಕಾಸದ ರೀತಿ

ಡಾ. ಗುರುರಾಜ ಕರಜಗಿ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಅದರಿಂದ ನೀತಿ ನಯವದರಿಂದ ಕುಲಗೋತ್ರ |
ವದರಿಂದ ರಾಜ್ಯ ಮಠಧರ್ಮ ಸಂಸ್ಥೆಗಳು ||
ಬದವುವದರಿಂದೆ ಮಮತಾನಾಶದವಕಾಶ |
ವದರಿನಾತ್ಮವಿಕಾಸ – ಮಂಕುತಿಮ್ಮ || 407 ||

ಪದ-ಅರ್ಥ: ನಯವದರಿಂದ=ನಯವು+
ಅದರಿಂದ, ಒದವುವದರಿಂದೆ+
ಒದವುದು=ಸಹಕಾರಿಯಾಗುವುದು+ಅದರಿಂದೆ, ಮಮತಾನಾಶದವಕಾಶ=ಮಮತಾ+
ನಾಶದ+ಅವಕಾಶ, ಅದರಿನಾತ್ಮವಿಕಾಸ=ಅದರಿನ್(ಅದರಿಂದ)+ಆತ್ಮವಿಕಾಸ.

ವಾಚ್ಯಾರ್ಥ: ನರನಾರಿಯರ ಮೋಹ, ಅದರಿಂದ ವಂಶ, ಮನೆ, ನೆರೆಹೊರೆ, ಊರು, ರಾಷ್ಟ್ರ, ಸಂಘಗಳು. ಇವೆಲ್ಲವುಗಳ ಕೇಂದ್ರ, ವ್ಯಕ್ತಿಯೇ, ಈ ವ್ಯವಸ್ಥೆಯಿಂದ ನೀತಿ, ನಯ. ಅದರಿಂದ ಕುಲಗೋತ್ರ, ಅದರಿಂದ ರಾಜ್ಯ, ಮಠ, ಧರ್ಮ, ಸಂಸ್ಥೆಗಳು. ಇವೆಲ್ಲ ಮಮತೆಯ ನಾಶಕ್ಕೆ ಸಹಕಾರಿಯಾಗುತ್ತವೆ. ಅದರಿಂದ ಆತ್ಮವಿಕಾಸ.

ADVERTISEMENT

ವಿವರಣೆ: ಇದು ಹಿಂದಿನ ಕಗ್ಗದ ಮುಂದುವರೆದ ಭಾಗ. ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಿ ಸರೋವರದ ಕೇಂದ್ರದಿಂದ ಅಲೆಗಳ ಬಳೆಗಳು ಹರಿಯುವಂತೆ ಅವನ ಜೀವನ ವಿಸ್ತಾರವಾಗುತ್ತದೆ. ಇದೇ ಸಂಸಾರದ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಬದುಕಲು ನೀತಿ, ನಯಗಳು ಬೇಕು. ಜನರು ತಮ್ಮ ತಮ್ಮನ್ನು ಬೇರೆ ಗುಂಪುಗಳಾಗಿ ಗುರುತಿಸಿಕೊಂಡರು. ಅವುಗಳನ್ನು ಕುಲಗಳೆಂದು ಕರೆದರು. ಕುಲಗಳ ಮೂಲ ಪುರುಷರ ಹೆಸರುಗಳೇ ಗೋತ್ರಗಳಾದವು. ಕುಲಗಳ ವೃದ್ಧಿಗೆ ಮಠಗಳು ಹುಟ್ಟಿಕೊಂಡವು. ಮಠಗಳ ವ್ಯವಸ್ಥೆಯಾದ ಮೇಲೆ ಅವುಗಳನ್ನು ನಿಭಾಯಿಸುವ ಧರ್ಮಸಂಸ್ಥೆಗಳು ಬಂದವು.

ಈ ಎಲ್ಲ ಬದಲಾವಣೆಯಿಂದ ಏನಾಯಿತು? ತಾನು ಒಬ್ಬನೇ ಎಂದುಕೊಂಡು ಬೇಕಾದ ಹಾಗೆ ಇರುತ್ತಿದ್ದ ಮನುಷ್ಯ ನಿಧಾನವಾಗಿ ಗುಂಪಿನಲ್ಲಿ, ಉಳಿದವರ ಜೊತೆಗೆ ಬದುಕಲು ಕಲಿತ. ಅವನ ನಡತೆಯಲ್ಲಿ ನಯ, ವಿನಯಗಳು ಮೂಡಿದವು. ಮಕ್ಕಳಿಗಾಗಿ, ಸಮಾಜಕ್ಕಾಗಿ ತನ್ನ ಕುಲಬಾಂಧವರಿಗಾಗಿ ಸಣ್ಣಪುಟ್ಟ ತ್ಯಾಗ ಮಾಡಿದ, ದಾನ ಮಾಡಿದ. ತಾನೇ ಎಲ್ಲರಿಗಿಂತ ಮುಖ್ಯ ಎಂಬುದು ಬದಿಗೆ ಸರಿದು ಸರ್ವರ ಹಿತದಲ್ಲಿ ತನ್ನ ಹಿತವನ್ನು ಕಾಣಲು ಪ್ರಯತ್ನಿಸಿದ. ಇದರಿಂದ ತಾನು, ತನ್ನದು ಎಂಬ ಅತಿಯಾದ ಮಮತೆಯ ಕರಗುವಿಕೆಗೆ ಸಹಾಯವಾಯಿತು. ಮಮತಾನಾಶದಿಂದ ಏನಾದೀತು? ಅದೇ ಮನುಷ್ಯನ ಆತ್ಮವಿಕಾಸಕ್ಕೆ ದಾರಿ.
ಸ್ವಾಮಿ ವಿವೇಕಾನಂದರು ಇದನ್ನು ಆತ್ಯಂತ ಸೂಚ್ಯವಾಗಿ, ಸಮರ್ಥವಾಗಿ ಹೇಳುತ್ತಾರೆ. ಅವರೊಂದು ಪ್ರಶ್ನೆ ಕೇಳುತ್ತಾರೆ, ‘ನೀವು ಜಿಮ್ನಾಶಿಯಂಗೆ (ವ್ಯಾಯಾಮ ಶಾಲೆಗೆ) ಹೋಗುವುದು ಏತಕ್ಕೆ?’ ಅವರೇ ಉತ್ತರಿಸುತ್ತಾರೆ. ‘ನಾವು ಜಿಮ್ನಾಶಿಯಂಗೆ ಹೋಗುವುದು ಅಲ್ಲಿ ವ್ಯಾಯಾಮ ಮಾಡಿ, ಸೈಕಲ್ ಹೊಡೆದು, ಟ್ರೆಡ್‌ಮಿಲ್‌ನಲ್ಲಿ ಬೆವರು ಸುರಿಸಿ, ತೂಕಗಳನ್ನು ಎತ್ತಿ, ಬೊಜ್ಜು ಕರಗಿಸಲು ಪ್ರಯತ್ನಿಸುವುದು. ಮುಖ್ಯವಾಗಿ, ನಮ್ಮ ಉದ್ದೇಶ, ದೇಹವನ್ನು ಗಟ್ಟಿಮಾಡಿಕೊಳ್ಳುವುದು. ನಾವು ಅಲ್ಲಿಗೆ ಜಿಮ್ನಾಶಿಯಂ ಅನ್ನು ಸರಿಮಾಡಲು, ರಿಪೇರಿ ಮಾಡಲು ಹೋಗುವುದಿಲ್ಲ. ಪ್ರಪಂಚವೂ ಒಂದು ಜಿಮ್ನಾಶಿಯಂ ಇದ್ದಂತೆ. ಅಲ್ಲಿ ಬರುವ ನೋವು, ನಲಿವುಗಳು, ಹೃದಯ ತಟ್ಟುವ ಸಂಬಂಧಗಳು, ಸಾಮಾಜಿಕ ಬಂಧಗಳು ಇವೆಲ್ಲ ಈ ಜಿಮ್ನಾಶಿಯಂ ಅಲ್ಲಿರುವ ಉಪಕರಣಗಳು. ಈ ಜಿಮ್ನಾಶಿಯಂ ಅನ್ನು ರಿಪೇರಿ ಮಾಡಲು, ಅಂದರೆ ಪ್ರಪಂಚವನ್ನು ತಿದ್ದಲು, ಬದಲಿಸಲು ಹೋಗಬೇಡಿ. ಅಲ್ಲಿ ಬರುವ ಪರಿವಾರದ, ಸಮಾಜದ, ರಾಷ್ಟ್ರದ, ಮಾನವತೆಯ ಅನುಭವಗಳು, ಆತ್ಮೀಯ ಬಂಧನಗಳು ಮನುಷ್ಯನನ್ನು ಬಲಪಡಿಸುತ್ತವೆ’. ಅದೇ ವ್ಯಕ್ತಿಯ ಆತ್ಮವಿಕಾಸದ ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.