ADVERTISEMENT

ಬೆರಗಿನ ಬೆಳಕು: ದಾಸತ್ವದ ಮುಕ್ತಿಯ ಬೆಲೆ

ಡಾ. ಗುರುರಾಜ ಕರಜಗಿ
Published 2 ಆಗಸ್ಟ್ 2021, 15:35 IST
Last Updated 2 ಆಗಸ್ಟ್ 2021, 15:35 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮುದುಕನ ಒರಟು ಮಾತುಗಳನ್ನು ಕೇಳಿ ವೆಸ್ಸಂತರ ಬೋಧಿಸತ್ವ, ‘ಬ್ರಾಹ್ಮಣ, ನೀನು ನನ್ನ ಪ್ರಾಮಾಣಿಕತೆಯನ್ನು ಸಂದೇಹಿಸಬೇಡ. ನಾನೇ ಅವರನ್ನು ಹುಡುಕಿ ತಂದು ಒಪ್ಪಿಸುತ್ತೇನೆ. ನೀನು ನಿರಾಳವಾಗಿ ಕುಳಿತಿರು’ ಎಂದು ಹೇಳಿ ಪರ್ಣಕುಟಿಯ ಹಿಂಭಾಗಕ್ಕೆ ಹೋಗಿ ಹುಡುಕಿದ. ಅಲ್ಲಿ ಕಾಣದಿದ್ದಾಗ ಅವರು ದಟ್ಟವಾದ ಕಾಡಿನಲ್ಲಿ ಹೋಗಿರಬಹುದೆಂದು ಭಾವಿಸಿದ. ಹಾಗೆ ಹುಡುಕುತ್ತ ಪುಷ್ಕರಿಣಿಯ ಬಳಿ ಬರುತ್ತಿರುವಾಗ ಹಸೀಮಣ್ಣಿನಲ್ಲಿ ಮಕ್ಕಳ ಪಾದಗಳು ಕೊಳದೆಡೆಗೆ ಹೋಗಿದ್ದನ್ನು ಗಮನಿಸಿ, ಅವರು ಹೆದರಿ ನೀರಿನಲ್ಲಿ ಅಡಗಿ ಕುಳಿತಿರಬಹುದೆಂದು ಊಹಿಸಿದ. ‘ಮಕ್ಕಳೇ ಜಾಲೀ, ಕೃಷ್ಣಾಜಿನ’ ಎಂದು ಕೂಗುತ್ತ ನೀರಿನೆಡೆಗೆ ಬಂದ. ‘ಅಯ್ಯಾ ಮಗನೇ ಜಾಲಿ, ದಯವಿಟ್ಟು ಹೊರಗೆ ಬಾ. ನನ್ನ ಮಾತನ್ನು ನೀನು ನಡೆಸಬೇಕು. ನನ್ನ ಪಾರಮಿತವನ್ನು ಪೂರ್ಣಗೊಳಿಸು. ಅದರಿಂದ ನನ್ನ ಹೃದಯಕ್ಕೆ ತಂಪು ನೀಡು. ಭವಸಾಗರವನ್ನು ದಾಟಲು ನನ್ನ ನೌಕೆಗೆ ಸ್ಥಿರವಾದ ವಾಹನವಾಗು. ನಾನು ಜನನ ಮರಣ ಬಂಧನವನ್ನು ದಾಟಿ ಸದಾ ಲೋಕಕಲ್ಯಾಣ ಮಾಡುತ್ತೇನೆ’, ಎಂದು ಕೇಳಿಕೊಂಡ.

ತಂದೆಯ ಮಾತುಗಳನ್ನು ಕೇಳಿದ ಜಾಲಿಕುಮಾರ, ‘ನಾನು ಈ ಬ್ರಾಹ್ಮಣನ ದಾಸನಾದರೂ ಚಿಂತೆಯಿಲ್ಲ, ತಂದೆಯ ಮಾತುಗಳನ್ನು ಮೀರಲಾರೆ’ ಎಂದು ಯೋಚಿಸಿ ತಲೆಯ ಮೇಲಿನ ಎಲೆಗಳನ್ನು ಸರಿಸಿಬಿಟ್ಟು, ನೀರಿನಿಂದ ಹೊರಗೆ ಬಂದ. ದಂಡೆಯ ಮೇಲೆ ನಿಂತಿದ್ದ ತಂದೆಯ ಪಾದಗಳ ಮೇಲೆ ಬಿದ್ದು, ಅವನ ಬಲಪಾದದ ಗೆಣ್ಣನ್ನು ಬಿಗಿಯಾಗಿ ಹಿಡಿದುಕೊಂಡು ಅಳತೊಡಗಿದ. ಬೋಧಿಸತ್ವ ಅವನನ್ನು ಎಬ್ಬಿಸಿ, ಆಲಂಗಿಸಿಕೊಂಡು, ‘ಅಪ್ಪಾ, ನಿನ್ನ ತಂಗಿ ಎಲ್ಲಿ ಮಗೂ?’ ಎಂದು ಕೇಳಿದ. ‘ಅಪ್ಪಾ, ಆಕೆ ಭಯಗೊಂಡಿದ್ದಾಳೆ. ಭಯಗೊಂಡಾಗ ಪ್ರಾಣಿಗಳೂ ತಮ್ಮ ಆತ್ಮರಕ್ಷಣೆಗೆ ಪ್ರಯತ್ನಿಸುತ್ತವೆ’ ಎಂದ. ಹಾಗಾದರೆ ಮಕ್ಕಳಿಬ್ಬರೂ ಪ್ರತಿಜ್ಞೆ ಮಾಡಿಕೊಂಡು ಅಡಗಿರಬೇಕು ಎಂದು ಈ ಬಾರಿ ಮಗಳನ್ನು ಕೂಗಿದ, ‘ಅಮ್ಮಾ, ಕೃಷ್ಣಾಜಿನಾ, ದಯವಿಟ್ಟು ಹೊರಗೆ ಬಂದು ನನ್ನ ಪಾರಮಿತವನ್ನು ಪೂರ್ಣಗೊಳಿಸಲು ಅನುಕೂಲ ಮಾಡು. ನಾನು ಜನನ ಮರಣಗಳ ಬಂಧನದಿಂದ ಪಾರಾಗಬಯಸುತ್ತೇನೆ. ಲೋಕೋದ್ಧಾರ ನನ್ನ ಉದ್ದೇಶ’. ಅಣ್ಣನಂತೆ ತಂಗಿ ಕೃಷ್ಣಾಜಿನಳೂ ಕೊಳದಿಂದ ಮೇಲೆದ್ದು ಬಂದು ತಂದೆಯ ಎಡಪಾದವನ್ನು ಹಿಡಿದುಕೊಂಡು ಅಳತೊಡಗಿದಳು.

ಇಬ್ಬರೂ ಮಕ್ಕಳನ್ನು ತಬ್ಬಿಕೊಂಡು ಬೋಧಿಸತ್ವ ಗಟ್ಟಿಯಾಗಿ, ಬ್ರಾಹ್ಮಣನಿಗೆ ಕೇಳುವಂತೆ ಇಬ್ಬರ ಬೆಲೆಯನ್ನು ನಿಗದಿಮಾಡಿದ ‘ಮಗೂ, ಜಾಲಿಕುಮಾರ, ನೀನು ಮುಂದೆ ಈ ಬ್ರಾಹ್ಮಣನ ದಾಸತ್ವದಿಂದ ಬಿಡುಗಡೆಯಾಗಬಯಸಿದರೆ, ಅವನಿಗೆ ಸಾವಿರ ನಿಕಷಗಳನ್ನು ಕೊಟ್ಟು ಮುಕ್ತನಾಗು. ನಿನ್ನ ತಂಗಿ ಕೃಷ್ಣಾಜಿನೆ ಪರಮ ಸುಂದರಿ. ಯಾವನಾದರೂ ನೀಚ ವ್ಯಕ್ತಿ, ಆಕೆಯ ರೂಪಕ್ಕೆ ಮರುಳಾಗಿ, ಈ ಬ್ರಾಹ್ಮಣನಿಗೆ ಎಷ್ಟಾದರೂ ಹಣಕೊಟ್ಟು ದಾಸತ್ವದಿಂದ ಮುಕ್ತಗೊಳಿಸಿ, ಆಕೆಯನ್ನು ಕಳಂಕಿತೆಯನ್ನಾಗಿ ಮಾಡಬಲ್ಲ. ನಿನ್ನ ತಂಗಿಯನ್ನು ದಾಸತ್ವದಿಂದ ಮುಕ್ತಗೊಳಿಸಬೇಕಾದರೆ ‘ಎಲ್ಲ ನೂರು ವಸ್ತುಗಳನ್ನು’ ಕೊಡಬೇಕು. ಅವು, ನೂರು ದಾಸರು, ನೂರು ದಾಸಿಯರು, ನೂರು ಆನೆಗಳು, ನೂರು ಕುದುರೆಗಳು ಹಾಗೂ ನೂರು ನಿಕಷಗಳು. ಇವುಗಳನ್ನು ದೊಡ್ಡ ರಾಜ ಮಾತ್ರ ನೀಡಿ, ದಾಸತ್ವದಿಂದ ಮುಕ್ತ ಮಾಡಿ, ಆಕೆಯ ಕೈ ಹಿಡಿಯಬಲ್ಲ’ ಎಂದು ಘೋಷಿಸಿದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.