ADVERTISEMENT

ಬೆರಗಿನ ಬೆಳಕು: ಇರಲಾರೆ, ಬಿಟ್ಟು ಹೋಗಲಾರೆ

ಡಾ. ಗುರುರಾಜ ಕರಜಗಿ
Published 11 ಅಕ್ಟೋಬರ್ 2020, 20:57 IST
Last Updated 11 ಅಕ್ಟೋಬರ್ 2020, 20:57 IST
   

ಸಾಕು ಸಾಕೆನಿಸುವುದು ಲೋಕಸಂಪರ್ಕ ಸುಖ |

ಸೋಕಿದೊಡೆ ತುರಿಯನೆಬ್ಬಿಸುವ ತುರುಚಿಯದು ||
ಮೂಕನವೆ ತುರಿಸದಿರೆ, ತುರಿಯುತಿರೆ ಹುಣ್ಣುರಿತ |
ಮೂಕನಪಹಾಸ್ಯವದು – ಮಂಕುತಿಮ್ಮ || 343 ||

ಪದ-ಅರ್ಥ: ಸಾಕು ಸಾಕೆನಿಸುವುದು=ಸಾಕು+

ADVERTISEMENT

ಸಾಕು+ಎನಿಸುವುದು, ತುರಿಯನೆಬ್ಬಿಸುವ=
ತುರಿಯನು(ನವೆಯನ್ನು)+ಎಬ್ಬಿಸುವ, ತುರುಚಿ=ನವೆಯನ್ನುಂಟುಮಾಡುವ ಸೊಪ್ಪು, ತುರಿಯುತಿರೆ=ತುರಿಸುತ್ತಿದ್ದರೆ, ಹುಣ್ಣುರಿತ=ಹುಣ್ಣು+ಉರಿತ, ಮೂಕನಪಹಾಸ್ಯವದು=ಮೂಕನ+

ಅಪಹಾಸ್ಯ+ಅದು.

ವಾಚ್ಯಾರ್ಥ: ಲೋಕಸಂಪರ್ಕದ ಸುಖ ಸಾಕು ಸಾಕೆನಿಸುತ್ತದೆ. ಅದು ಮುಟ್ಟಿದರೆ ನವೆಯನ್ನುಂಟು ಮಾಡುವ ತುರಿಕೆಯ ಸೊಪ್ಪಿದ್ದಂತೆ. ತುರಿಸದಿದ್ದರೆ ನವೆ ಕಾಡುತ್ತದೆ. ತುರಿಸಿದರೆ ಹುಣ್ಣು, ಉರಿತ ಉಂಟಾಗುತ್ತದೆ. ಒಟ್ಟಿನಲ್ಲಿ ಅದು ಮೂಕ ಅಪಹಾಸ್ಯಕ್ಕೆ ಎಳಸಿದಂತೆ ಆಗಿದೆ.

ವಿವರಣೆ: ಅವನೊಬ್ಬ ಎಪ್ಪತ್ತೈದು ವರ್ಷದ ವೃದ್ಧ. ಮನೆಯಲ್ಲಿ ಬಡತನಕ್ಕೆ ಮುಗಿವಿಲ್ಲ. ಮಗನಿಗೆ ಕಾಲಿಲ್ಲ, ಮಗಳು ಗಂಡನನ್ನು ಕಳೆದುಕೊಂಡು, ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಬಂದಿದ್ದಾಳೆ. ಅವರೆಲ್ಲರ ತುತ್ತಿನ ಚೀಲ ತುಂಬುವುದು ಅವನ ಪರಿಶ್ರಮದಿಂದಲೇ. ಅವನಿಗೆ ಗೊತ್ತಿರುವುದು ಕಾಡಿಗೆ ಹೋಗಿ ಮರ ಕಡಿದು ಮಾರುವುದು. ಅದರಿಂದ ಎಷ್ಟು ಬಂದೀತು? ಎರಡು ಹೊತ್ತಿನ ಊಟಕ್ಕೆ ತತ್ಪಾರ. ಅಂದು ಕಾಡಿಗೆ ಬಂದು ಮರ ಕಡಿದ. ಆಸೆಯಿಂದ ಮತ್ತಷ್ಟು ಕಡಿದ. ಕತ್ತರಿಸಿದ ಮರದ ತುಂಡುಗಳನ್ನು ಹಗ್ಗದಿಂದ ಕಟ್ಟಿದ. ಹೊರೆ ದೊಡ್ಡದಾಯಿತು. ಎತ್ತಬೇಕೆಂದು ಶಕ್ತಿ ಹಾಕಿ ಪ್ರಯತ್ನಿಸಿದ. ಕಾಲು ಜಾರಿತು. ತಾನೇ ಕತ್ತರಿಸಿದ ಚೂಪಾದ ಮರದ ಬೇರೊಂದು ಕಾಲಿಗೆ ಚುಚ್ಚಿ ರಕ್ತ ಛಿಲ್ಲನೇ ಚಿಮ್ಮಿತು. ಅಯ್ಯೋ ಎಂದು ಕೂಗಿ ಕುಸಿದ. ತಲೆಯ ರುಮಾಲಿನ ತುಂಡನ್ನು ಹರಿದು ಕಾಲಿಗೆ ಕಟ್ಟಿಕೊಂಡ. ಬದುಕು ಸಾಕೆನಿಸಿತು. ಎಂದು ಮುಗಿದೀತು ಈ ಕರ್ಮ? ಆಕಾಶದ ಕಡೆಗೆ ಮುಖ ಮಾಡಿ ಕೂಗಿದ. ‘ಅಯ್ಯಾ ಯಮಧರ್ಮ, ನನ್ನನ್ನು ಕರೆದೊಯ್ಯಪ್ಪಾ. ಸಾಕಿನ್ನು’. ಯಮಧರ್ಮನಿಗೆ ಈ ಮಾತು ಕೇಳಿಸಿ ಕೆಳಗೆ ಬಂದ. ‘ಯಾಕಪ್ಪಾ, ನನ್ನನ್ನು ಕರೆದೆ?’ ಎಂದು ವೃದ್ಧನನ್ನು ಕೇಳಿದ. ಮುದುಕನಿಗೆ ಗಾಬರಿ. ‘ನೀನು ಯಾರು?’ ಎಂದು ಕೇಳಿದ. ‘ನಾನೇ ಯಮ ನೀನೇ ಕರೆದೆಯಲ್ಲ’ ಎಂದ ಯಮ. ಮುದುಕ ಹೌಹಾರಿದ. ‘ಅಪ್ಪಾ ಯಮಧರ್ಮ, ನನಗೆ ವಯಸ್ಸಾಗಿದೆ, ಅರಳು-ಮರಳು, ಯಾರು ಯಾರನ್ನೋ ಕರೆಯುತ್ತೇನೆ. ಈ ಹೊರೆ ತುಂಬ ಭಾರವಾಗಿದೆ, ಎತ್ತುವುದಕ್ಕೆ ಆಗುತ್ತಿಲ್ಲ. ಅದನ್ನು ಎತ್ತಿಕೊಡು ಎಂದು ನಿನ್ನನ್ನು ಕರೆದೆ. ಆಮೇಲೆ ನಾನು ಮತ್ತೆ ಯಾವಾಗಲಾದರೂ ಕರೆದರೆ ಬಂದು ಬಿಡಬೇಡ. ನಾನು ತುಂಬ ಚೆನ್ನಾಗಿ ಬದುಕುತ್ತಿದ್ದೇನೆ’ ಎಂದ.

ಇದು ಬದುಕು. ಬೇಡ, ಸಾಕು ಎನ್ನಿಸುತ್ತದೆ. ಒಂದು ಸಂತೋಷದ ಗೆರೆ ಮೂಡಿತೋ, ಅದೇ ಚೆಂದ ಎಂದು ಭಾಸವಾಗುತ್ತದೆ. ಕಗ್ಗ ಇದನ್ನು ತುಂಬ ಚೆನ್ನಾಗಿ ಕಣ್ಣ ಮುಂದಿಡುತ್ತದೆ. ಸಂಸಾರ ಒಂದು ತುರಿಕೆಯ ಸೊಪ್ಪು ಇದ್ದಂತೆ. ಮುಟ್ಟಿದರೆ ತುರಿಕೆಯುಂಟಾಗುತ್ತದೆ. ತುರಿಸಿಕೊಳ್ಳದಿದ್ದರೆ ನವೆಯನ್ನು ತಡೆದುಕೊಳ್ಳುವುದು ಅಸಾಧ್ಯ. ತುರಿಸಿಕೊಂಡರೆ ಅದು ಹುಣ್ಣಾಗಿ ಉರಿಯುತ್ತದೆ. ಸಂಸಾರದ ಕಷ್ಟ ಸುಖಗಳು ಬದುಕನ್ನು ಸಾಕೆನ್ನಿಸುವಂತೆ ಮಾಡುತ್ತವೆ. ಆದರೆ ಅದನ್ನು ಬಿಡಲೂ ಆಗದು. ಇದು ಮೂಕನೊಬ್ಬ ಅಪಹಾಸ್ಯ ಮಾಡಲು ಹೊರಟಂತಿದೆ. ಅವನು ಏನೋ ಹೇಳಲು ಇಚ್ಛೆಪಡುತ್ತಿದ್ದಾನೆ ಆದರೆ ಮಾತನಾಡಲಾರ. ಈ ಹೇಳಲಾಗದ ಒದ್ದಾಟದಲ್ಲೇ ಕಳೆದು ಹೋಗುತ್ತಿದೆ ಬದುಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.