ADVERTISEMENT

ಬೆರಗಿನ ಬೆಳಕು: ರಾಜಕಾರ್ಯಕ್ಕೆ ಬರುವ ಪಾಪ

ಡಾ. ಗುರುರಾಜ ಕರಜಗಿ
Published 15 ಡಿಸೆಂಬರ್ 2020, 19:30 IST
Last Updated 15 ಡಿಸೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ವಾರಾಣಸಿಯನ್ನು ಕಾಶೀರಾಜ ಆಳುತ್ತಿದ್ದ. ಅವನಿಗೆ ಹದಿನಾರು ಸಾವಿರ ಹೆಂಡತಿಯರು. ಆದರೆ ಯಾರಿಗೂ ಮಕ್ಕಳಾಗಲಿಲ್ಲ. ರಾಜನಿಗೆ, ನಾಗರಿಕರಿಗೆ ಬಹಳ ಚಿಂತೆಯಾಯಿತು. ಎಲ್ಲ ಹೆಂಡತಿಯರೂ ಉಪೋಸಥ ವೃತವನ್ನು ಮಾಡಿ ಪ್ರಾರ್ಥಿಸಿದರು. ಇಂದ್ರನಿಗೆ ಈ ಪ್ರಾರ್ಥನೆ ತಲುಪಿ ಮಹಾರಾಣಿ ಚಂದ್ರಾದೇವಿಗೆ ಪುತ್ರನನ್ನು ಕೊಡಬೇಕೆಂದು ತೀರ್ಮಾನಿಸಿದ. ಯಾರನ್ನು ಕಳುಹಿಸಬೇಕು ಎಂದು ಯೋಚಿಸಿದಾಗ ಬೋಧಿಸತ್ವನ ನೆನಪಾಯಿತು. ಆತ ವಾರಾಣಸಿಯ ರಾಜನಾಗಿ ಇಪ್ಪತ್ತು ವರ್ಷ ರಾಜ್ಯಭಾರ ಮಾಡಿ ನಂತರ ಎಂಭತ್ತು ಸಾವಿರ ವರ್ಷ ಉಸ್ಸದ ನರಕದಲ್ಲಿ ಕಳೆದು ಇನ್ನು ಮೇಲೆ ದೇವಲೋಕಕ್ಕೆ ಹೋಗುವವನಿದ್ದ. ಅವನನ್ನೇ ಚಂದ್ರಾದೇವಿಯ ಗರ್ಭಕ್ಕೆ ಕಳುಹಿಸಿದ. ಬೋಧಿಸತ್ವನ ಜೊತೆಗೆ ಐದುನೂರು ಮಂದಿ ದೇವಪುತ್ರರು ರಾಜನ ಅಮಾತ್ಯರ ಹೆಂಡತಿಯರ ಗರ್ಭಗಳನ್ನು ಪ್ರವೇಶಿಸಿದರು.

ಬೋಧಿಸತ್ವ ಹುಟ್ಟಿದ ದಿನವೇ ಅಮಾತ್ಯರ ಹೆಂಡಂದಿರೂ ಮಕ್ಕಳನ್ನು ಹೆತ್ತರು. ರಾಜ ಸಂತೋಷದಿಂದ ಎಲ್ಲ ಮಕ್ಕಳ ಆರೈಕೆಗೆ ವ್ಯವಸ್ಥೆ ಮಾಡಿದ. ಮಕ್ಕಳು ಹಾಲು ಕುಡಿಯಲು ದೀರ್ಘದೋಷಗಳಾವವೂ ಇಲ್ಲದ ಎದೆ ಹಾಲು ನೀಡಬಹುದಾದ ಮಹಿಳೆಯರನ್ನು ಗೊತ್ತು ಮಾಡಿದ. ರಾಜ ಕುಮಾರನ ಜಾತಕ ಬರೆಸಿದ. ಜ್ಯೋತಿಷಿಗಳು ಹೇಳಿದರು. ‘ಕುಮಾರನ ಜಾತಕ ತುಂಬ ಚೆನ್ನಾಗಿದೆ. ಆತ ನಾಲ್ಕು ಮಹಾದ್ವೀಪಗಳ ರಾಜ್ಯಭಾರ ಮಾಡುವಷ್ಟು ಸಮರ್ಥನಾಗುತ್ತಾನೆ’. ಮಗುವಿಗೆ ತೇಮಿಯಕುಮಾರ ಎಂದು ನಾಮಕರಣ ಮಾಡಿದರು.

ತೇಮಿಯಕುಮಾರ ಒಂದು ವರ್ಷದವನಿದ್ದಾಗ ರಾಜ ಅವನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ದರ್ಬಾರಿನಲ್ಲಿ ಇದ್ದ. ಆಗ ಅವನ ಮುಂದೆ ಬಂದಿದ್ದ ನಾಲ್ಕು ಕಳ್ಳರಿಗೆ ಅತ್ಯಂತ ಕಠಿಣವಾದ ಶಿಕ್ಷೆಗಳನ್ನು ನೀಡಿದ. ಅದನ್ನು ಕೇಳಿದ ತೇಮಿಯಕುಮಾರ ಗಾಬರಿಯಾದ. ಅವನಿಗೆ ಹಿಂದಿನ ಜನ್ಮದ ನೆನಪಾಯಿತು. ಇಪ್ಪತ್ತು ವರ್ಷ ರಾಜನಾಗಿ ಮಾಡಿದ ಕರ್ಮಕ್ಕೆ ಎಂಭತ್ತು ಸಾವಿರ ವರ್ಷಗಳ ಕಾಲ ನರಕವನ್ನು ಅನುಭವಿಸಿದ್ದು ನೆನಪಾಗಿ ಭಯವಾಯಿತು. ಮತ್ತೆ ತಾನು ವಾರಾಣಸಿಯ ರಾಜನ ಮಗನೇ ಆಗಿದ್ದೇನೆ. ಮತ್ತೆಷ್ಟು ವರ್ಷ ನರಕವೋ? ದೇವತೆಗಳನ್ನು ಪ್ರಾರ್ಥಿಸಿದ. ಒಬ್ಬ ದೇವತೆ ಅವನಿಗೆ ಹೇಳಿದಳು.

ADVERTISEMENT

‘ನೀನು ಈ ಪ್ರಪಂಚದಿಂದ ಯಾವ ತಪ್ಪೂ ಮಾಡದೆ ಬೇಗನೆ ಮುಕ್ತನಾಗಬೇಕಾದರೆ ಹೆಳವವನಲ್ಲದಿದ್ದರೂ ಹೆಳವನಂತಾಗು, ಮೂಗನಲ್ಲದಿದ್ದರೂ ಮೂಗನಂತಾಗು, ಕಿವುಡನಲ್ಲದಿದ್ದರೂ ಕಿವುಡನಂತಾಗು, ನಿನ್ನಲ್ಲಿ ಮಹಾಬುದ್ಧಿ ಇದ್ದರೂ ಪಾಂಡಿತ್ಯವನ್ನು ತೋರಬೇಡ’. ಅವನು ಒಪ್ಪಿದ. ಮರುದಿನದಿಂದ ಮಗು ಹಾಲು ಕುಡಿಯುವುದಿಲ್ಲ, ಮಾತನಾಡುವುದಿಲ್ಲ, ನಡೆಯುವುದೇ ಇಲ್ಲ, ಅದಕ್ಕೆ ಬುದ್ಧಿಯಾದರೂ ಸರಿ ಇದೆಯೋ ಇಲ್ಲವೋ ತಿಳಿಯದು ಎಂದು ದಾಸಿಯರು ದೂರತೊಡಗಿದರು. ಏನು ಮಾಡಿದರೂ ಮಗು ಅಲುಗಾಡುವುದಿಲ್ಲ. ಅದಕ್ಕೆ ಯಾವ ಆಸೆಯೂ ಇಲ್ಲ. ಹೀಗೆಯೇ ದಿನಗಳು ಉರುಳಿದವು. ತೇಮಿಯಕುಮಾರನಿಗೆ ಹದಿನಾರು ವರ್ಷಗಳಾದವು. ರಾಜ ಮತ್ತೆ ಜ್ಯೋತಿಷಿಗಳನ್ನು ಕೇಳಿದ. ಅವರು, ‘ಸ್ವಾಮಿ ಇಷ್ಟು ವರ್ಷಗಳಾದರೂ ರಾಜಕುಮಾರ ಸರಿಯಾಗದಿದ್ದರೆ ಅವನು ಅಮಂಗಲನೇ ಸರಿ. ಅವನಿಂದ ದೇಶಕ್ಕೆ, ದೊರೆಗೆ ಅಪಾಯ. ಆದ್ದರಿಂದ ಅವನನ್ನು ಕೊಂದುಬಿಡುವುದು ವಾಸಿ’ ಎಂದರು. ರಾಜ ತನ್ನ ಸಾರಥಿಗೆ ಹೇಳಿ ಮಗನನ್ನು ಕರೆದೊಯ್ದು ಕೊಂದು ಸಮಾಧಿ ಮಾಡಲು ಹೇಳಿದ, ಸಾರಥಿ ಸ್ಮಶಾನಕ್ಕೆ ಬಂದಾಗ ತೇಮಿಯಕುಮಾರನಿಗೆ ಆಸೆ ಬಂದು ರಥದಿಂದ ಕೆಳಗಿಳಿದ. ಅವನಲ್ಲಿ ಅಪಾರ ಶಕ್ತಿ ಅವತರಿಸಿತು. ಆತ ಸಾರಥಿಗೆ ಹೇಳಿದ, ‘ತಂದೆಗೆ ಹೇಳು. ನಾನು ಹೆಳವನಲ್ಲ, ಮೂಗನಲ್ಲ, ಕಿವುಡನಲ್ಲ, ಬುದ್ಧಿಹೀನನಲ್ಲ. ರಾಜಕಾರ್ಯದಲ್ಲಿ ಬರುವ ಪಾಪಕ್ಕೆ ಹೆದರಿ ಹೀಗೆ ನಟನೆ ಮಾಡಿದ್ದೆ. ಈಗ ಪ್ರವ್ರಜಿತನಾಗಿ ಹೋಗುತ್ತೇನೆ’. ಹೀಗೆ ಹೇಳಿ ಹಿಮಾಲಯಕ್ಕೆ ಹೋಗಿಬಿಟ್ಟ.

ಇಪ್ಪತ್ತು ವರ್ಷದ ರಾಜಕಾರಣ ತೇಮಿಯಕುಮಾರನಿಗೆ ಎಂಭತ್ತು ಸಾವಿರ ವರ್ಷಗಳ ನರಕವನ್ನು ನೀಡಿತ್ತೆಂದರೆ ಇಡೀ ಬದುಕನ್ನೇ ಅದರಲ್ಲಿ ಕಳೆದವರ ಗತಿಯೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.