ADVERTISEMENT

ಬೆರಗಿನ ಬೆಳಕು: ಪ್ರೇರಣೆ

ಡಾ. ಗುರುರಾಜ ಕರಜಗಿ
Published 29 ಡಿಸೆಂಬರ್ 2020, 19:30 IST
Last Updated 29 ಡಿಸೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವಾರಾಣಸಿಯ ರಾಜ ತನ್ನ ಪಟ್ಟದ ರಾಣಿಯೊಂದಿಗೆ ನಗರ ಪ್ರವಾಸಕ್ಕೆ ಹೊರಟಿದ್ದ. ರಥ ಒಂದೆಡೆಗೆ ಸಾಗುವಾಗ ಒಂದು ದೃಶ್ಯ ಕಣ್ಣಿಗೆ ಬಿತ್ತು. ರಥ ನಿಲ್ಲಿಸಿ ರಾಜ ಅದನ್ನು ನೋಡಿದ. ಒಬ್ಬ ಮನುಷ್ಯ ಕಟುಕನ ಅಂಗಡಿಗೆ ಬಂದು ದೊಡ್ಡ ಮಾಂಸದ ತುಂಡನ್ನು ಪಡೆದು ಅದನ್ನು ಅಲ್ಲಿಯೇ ಸುಡಿಸಿ, ತಣ್ಣಗೆ ಮಾಡಲು ಕಟ್ಟೆಯ ಮೇಲೆ ಇಡಿಸಿದ್ದ. ಅವನ ಗಮನ ಬೇರೆ ಕಡೆಗೆ ಇರುವುದನ್ನು ಕಂಡ ಒಂದು ಬೀದಿಯ ನಾಯಿ ಅದಕ್ಕೆ ಬಾಯಿ ಹಾಕಿ ಎತ್ತಿಕೊಂಡು ಓಡಿತು. ಆ ಮನುಷ್ಯ ಅದರ ಬೆನ್ನು ಹತ್ತಿದ. ದಕ್ಷಿಣ ದ್ವಾರದವರೆಗೂ ಓಡಿದ. ನಾಯಿ ಎದುರಿಗೆ ಬಂದ ಸೈನಿಕರನ್ನು ಕಂಡು ಹೆದರಿ ಮಾಂಸವನ್ನು ಕೆಳಗೆ ಹಾಕಿ ಓಡಿ ಹೋಯಿತು. ಬೆನ್ನು ಹತ್ತಿದ ಮನುಷ್ಯ ಅದನ್ನು ತೆಗೆದುಕೊಂಡು, ಮೇಲೆ ಅಂಟಿದ ಧೂಳನ್ನು ಜಾಡಿಸಿ ತಿನ್ನತೊಡಗಿದ. ಅದು ಕಂಡ ರಾಣಿ, ‘ಛೇ ಇದೇನು ಅಸಹ್ಯ, ನಾಯಿ ಕಚ್ಚಿದ, ಮಣ್ಣಲ್ಲಿ ಬಿದ್ದ ಆಹಾರವನ್ನು ಯಾರಾದರೂ ತಿನ್ನುತ್ತಾರೆಯೇ?’ ಎಂದು ಕೇಳಿದಳು. ಆಗ ರಾಜ, ‘ಮಾಂಸ ಕಣ್ಣಿಗೆ ಕಾಣುತ್ತದೆ. ಆದ್ದರಿಂದ ಅಸಹ್ಯ. ನಾವೂ ಅದನ್ನೇ ಮಾಡುತ್ತಿಲ್ಲವೇ? ಹಿಂದೆ ಯಾರೋ ಕಟ್ಟಿ ಭೋಗಿಸಿದ ರಾಜ್ಯ, ಅವರು ಬಿಸಾಕಿ ಹೋದ ಸಾಮ್ರಾಜ್ಯವನ್ನು ನಾವು ಆಳುತ್ತಿಲ್ಲವೇ?’ ಎಂದು ಕೇಳಿದ.

ಮುಂದೆ ಸಾಗಿದಾಗ ದಾರಿಯಲ್ಲೊಬ್ಬ ತರುಣಿ ಮತ್ತೊಂದಿಷ್ಟು ಪುಟ್ಟ ಹುಡುಗಿಯರೊಂದಿಗೆ ಬರುತ್ತಿದ್ದಳು. ಆಕೆಯ ಬಲಗೈಯಲ್ಲಿ ಎರಡು ಕಂಚಿನ ಕಡಗಗಳಿದ್ದವು. ಎಡಗೈಯಲ್ಲಿ ಒಂದೇ. ಆಕೆ ಬಲಗೈಯನ್ನು ಬಳಸಿ ಮಾತನಾಡುವಾಗ ಸದ್ದಾಗುತಿತ್ತು. ಎಡಗೈಯನ್ನು ಆಡಿಸಿದಾಗ ಯಾವ ಸದ್ದು ಇರಲಿಲ್ಲ. ಪುಟ್ಟ ಹುಡುಗಿಯೊಬ್ಬಳು ತರುಣಿಯನ್ನು ಕೇಳಿದಳು, ‘ಅಕ್ಕಾ, ನಿನ್ನ ಒಂದು ಭುಜ ಸಪ್ಪಳ ಮಾಡುತ್ತದೆ ಆದರೆ ಇನ್ನೊಂದು ಸದ್ದು ಮಾಡುವುದಿಲ್ಲ. ಏಕೆ?’ ತರುಣಿ ನುಡಿದಳು, ‘ತಂಗೀ, ನನ್ನ ಬಲಗೈಯಲ್ಲಿ ಎರಡು ಕಡಗಗಳಿವೆ. ಅವು ಒಂದನ್ನೊಂದು ಉಜ್ಜಿ ಸದ್ದಾಗುತ್ತದೆ. ಎಡಗೈಯಲ್ಲಿ ಒಂದೇ ಇರುವುದರಿಂದ ಸದ್ದಿಲ್ಲ. ಯಾವಾಗಲೂ ಎರಡಿದ್ದರೆ ವಿವಾದ. ಒಂದೇ ಇದ್ದರೆ ಮನಃಶಾಂತಿ. ರಾಜ ಬೆರಗಾಗಿ ಹೆಂಡತಿಯ ಮುಖ ನೋಡಿದ.

ಹಾಗೆಯೇ ನಗರದ ತುದಿಗೆ ಬಂದಾಗ ಅಲ್ಲೊಬ್ಬ ಬಿದಿರಿನ ಬುಟ್ಟಿಗಳನ್ನು ಮಾಡುವ ಮೇದ ಕಣ್ಣಿಗೆ ಬಿದ್ದ. ಆತ ಒಂದು ಬಿದಿರನ್ನು ಬೆಂಕಿಯಲ್ಲಿ ಬಿಸಿ ಮಾಡುತ್ತ, ಗಂಜಿಯಲ್ಲಿ ಅದ್ದಿ, ಒಂದು ಕಣ್ಣುಮುಚ್ಚಿ, ಒಂದೇ ಕಣ್ಣಿನಿಂದ ನೋಡುತ್ತ ಅದನ್ನು ನೇರ ಮಾಡುತ್ತಿದ್ದ. ರಾಜ ಅವನನ್ನು ಕೇಳಿದ, ‘ಮೇದ, ನೀನು ಹೀಗೆ ಒಂದು ಕಣ್ಣು ಮುಚ್ಚಿಕೊಂಡು ಬಿದಿರು ಸೊಟ್ಟಗಾಗಿರುವುದನ್ನು ಸರಿ ಮಾಡುವುದು ಏಕೆ? ಹಾಗೆ ಮಾಡಿದರೆ ಮಾತ್ರ ಸರಿಯಾಗಿ ಕಾಣುತ್ತದೆಯೇ?’. ಮೇದ ಹೇಳಿದ, ‘ರಾಜಾ, ಎರಡೂ ಕಣ್ಣು ತೆರೆದಾಗ ಎಲ್ಲವೂ ವಿಸ್ತಾರವಾಗಿ ಕಾಣುತ್ತದೆ. ಬಿದಿರಿನ ಜೊತೆಗೆ ಸುತ್ತಲಿನ ಎಲ್ಲ ವಸ್ತುಗಳೂ ಕಂಡು ಏಕಾಗ್ರತೆ ಕಷ್ಟವಾಗುತ್ತದೆ. ಒಂದೇ ಕಣ್ಣಿನಿಂದ ನೋಡಿದಾಗ ಬಿದಿರು ಮಾತ್ರ ಕಂಡು ವಕ್ರತೆ ತಿಳಿಯುತ್ತದೆ. ಎರಡಿದ್ದರೆ ಸ್ಪಷ್ಟತೆ ಇಲ್ಲ. ಒಂದಿದ್ದರೆ ಮಾತ್ರ ಸ್ಪಷ್ಟತೆ ಸಾಧ್ಯ. ಯಾವಾಗಲೂ ಎರಡು ದೃಷ್ಟಿ ದ್ವಂದ್ವವನ್ನು ಉಂಟುಮಾಡುತ್ತದೆ’.

ADVERTISEMENT

ರಾಜ–ರಾಣಿಯನ್ನು ನೋಡಿ ಹೇಳಿದ, ‘ಈ ಮೂರು ಘಟನೆಗಳು ನನಗೊಂದು ಪ್ರೇರಣೆಯನ್ನು ನೀಡಿವೆ. ನಾವು ಪಡೆದಿದ್ದೆಲ್ಲವೂ ಮತ್ತೊಬ್ಬರ ಎಂಜಲು, ಎರಡಿದ್ದಲ್ಲಿ ಏಕಾಂತವಿಲ್ಲ. ಸಾಕು ನನಗೆ ದ್ವಂದ್ವ’ ಹೀಗೆ ಹೇಳಿ ಪ್ರವ್ರಜ್ಜತೆಯನ್ನು ಪಡೆದು ಹಿಮಾಲಯಕ್ಕೆ ಹೋಗಿ ಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.