ADVERTISEMENT

ಬೆರಗಿನ ಬೆಳಕು: ಅಜ್ಜನ ಮುಂದೆ ಮೊಮ್ಮಕ್ಕಳು

ಡಾ. ಗುರುರಾಜ ಕರಜಗಿ
Published 31 ಆಗಸ್ಟ್ 2021, 19:30 IST
Last Updated 31 ಆಗಸ್ಟ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ದೇವತೆಗಳ ದಯೆಯಿಂದ ಮಕ್ಕಳು ಆರೋಗ್ಯವಂತರಾಗಿಯೇ ಇದ್ದರು. ಅದಲ್ಲದೆ ಆ ಮುದುಕ ಬ್ರಾಹ್ಮಣನ ತಲೆಯ ಮೇಲೂ ದೇವತೆಗಳು ಏರಿದ್ದರು. ಹೀಗಾಗಿ ಆತ ತನ್ನ ಊರಾದ ಕಳಿಂಗ ದೇಶವನ್ನು ತಲುಪುವುದರ ಬದಲಾಗಿ, ಜೆತುತ್ತರ ನಗರಕ್ಕೆ ಬಂದುಬಿಟ್ಟ. ಆ ದಿನ ಬೆಳಗ್ಗಿನ ಮುಹೂರ್ತದಲ್ಲಿ ರಾಜನಾದ ಸಿವಿ ಚಕ್ರವರ್ತಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ರಾಜ ತನ್ನ ದರ್ಬಾರಿನಲ್ಲಿ ಕುಳಿತಿದ್ದ. ಆಗ ಮನುಷ್ಯನೊಬ್ಬ ಮುಂದೆ ಬಂದು ಎರಡು ಕಮಲದ ಹೂವುಗಳನ್ನು ತಂದು ಕೊಟ್ಟ. ಅದೇಕೋ, ಅವುಗಳ ಮೇಲೆ ತುಂಬ ಪ್ರೀತಿ ಉಕ್ಕಿ ಬಂದು ಆ ಹೂವುಗಳನ್ನು ತನ್ನ ಎರಡೂ ಕಿವಿಗಳ ಮೇಲೆ ಸಿಕ್ಕಿಸಿಕೊಂಡ. ಹಾಗೆ ಸಿಕ್ಕಿಸಿಕೊಳ್ಳುತ್ತಿರುವಾಗ ಕಮಲದ ರೇಣುಗಳು ಅವನ ಹೊಟ್ಟೆಯ ಮೇಲೆ ಉದುರಿದವು. ಆಗ ಅವನಿಗೆ ಎಚ್ಚರವಾಯಿತು. ತನ್ನ ದರ್ಬಾರಿನಲ್ಲಿದ್ದ ಜ್ಯೋತಿಷಿಗಳನ್ನು ಕರೆದು ಈ ಕನಸಿನ ಅರ್ಥವನ್ನು ಕೇಳಿದ. ಅವರು ಕನಸನ್ನು ಅರ್ಥೈಸಿಕೊಂಡು ಹೇಳಿದರು, ‘ಪ್ರಭೂ, ಇದೊಂದು ಶುಭ ಶಕುನ. ಬಹಳ ದಿನಗಳಿಂದ ನಿಮ್ಮನ್ನು ಅಗಲಿಹೋಗಿದ್ದ ನಿಮ್ಮ ರಕ್ತಸಂಬಂಧಿಗಳು ಮರಳಿ ಬಂದು ತಮ್ಮನ್ನು ಕಾಣುತ್ತಾರೆ’.

ದಿನದಂತೆ, ಮಧ್ಯಾಹ್ನ ರಾಜ ಬಂದು ದರ್ಬಾರಿನಲ್ಲಿ ಕುಳಿತ. ಯಾವ ದೇವತೆಗಳು ಮುದುಕ ಬ್ರಾಹ್ಮಣನನ್ನು ಜೆತುತ್ತರ ನಗರಕ್ಕೆ ಕರೆದು ತಂದಿದ್ದರೋ, ಅವರು ಆ ಮೂವರನ್ನು ರಾಜಾಂಗಣಕ್ಕೇ ಕರೆದುಕೊಂಡು ಬಿಟ್ಟರು. ರಾಜನ ದೃಷ್ಟಿ ಮಕ್ಕಳ ಮೇಲೆ ಬಿತ್ತು. ಆತ ಅವರನ್ನು ನೋಡಿ ಹೇಳಿದ, ‘ಅಕ್ಕಸಾಲಿಗನ ಬೆಂಕಿಯಿಂದ ಹಾದು ಬಂದ ಬಂಗಾರದಂತೆ, ಪುಟಕ್ಕಿಟ್ಟ ಚಿನ್ನದಂತೆ ಈ ಮಕ್ಕಳ ಮುಖಗಳು ಹೊಳೆಯುತ್ತಿವೆ. ಇಬ್ಬರೂ ಮಕ್ಕಳ ಅಂಗ-ಪ್ರತ್ಯಂಗಗಳು ಒಂದೇ ತೆರನದವಾಗಿವೆ. ಇಬ್ಬರ ಲಕ್ಷಣಗಳೂ ಒಂದೇ ಆಗಿವೆ. ಗಮನಿಸಿ ನೋಡಿದರೆ ಹುಡುಗ ಜಾಲಿಕುಮಾರನಂತೆ ಮತ್ತು ಹುಡುಗಿ ಕೃಷ್ಣಾಜಿನಳಂತೆ ಕಾಣುತ್ತಾರೆ. ಸ್ವರ್ಗದಲ್ಲಿರುವ ದೇವತೆಗಳಂತೆ ಹೊಳೆಯುತ್ತಿದ್ದಾರೆ. ಗುಹೆಯಿಂದ ಸಕಲ ಶಕ್ತಿಗಳೊಂದಿಗೆ ಅಬ್ಬರಿಸಿ ಹೊರಬರುತ್ತಿರುವ ಸಿಂಹಗಳಂತೆ ಆಕರ್ಷಕರಾಗಿದ್ದಾರೆ’.

ನಂತರ ಅಮಾತ್ಯರಿಗೆ ಹೇಳಿ ಮಕ್ಕಳನ್ನು ಹಾಗೂ ಮುದುಕನನ್ನು ಹತ್ತಿರಕ್ಕೆ ಕರೆಸಿದ. ಮುದುಕನನ್ನು ಕೇಳಿದ, ‘ಅಯ್ಯಾ, ಈ ಮಕ್ಕಳು ಯಾರು? ನೀನು ಬಂದದ್ದು ಎಲ್ಲಿಂದ?’. ಮುದುಕ ಹೇಳಿದ, ‘ಸಂಜಯ ಮಹಾರಾಜಾ, ನನಗೆ ಒಬ್ಬ ಮಹಾತ್ಮನಿಂದ ಈ ಮಕ್ಕಳು ದೊರೆತಿವೆ. ಅವರಿಬ್ಬರೂ ನನ್ನ ಜೊತೆಗೇ ಇದ್ದು ಹದಿನೈದು ದಿನಗಳಾದವು’. ‘ಯಾವನು ಆ ಮಹಾತ್ಮ ನಿನಗೆ ಮಕ್ಕಳನ್ನು ಕೊಟ್ಟವನು? ಈ ಮಕ್ಕಳು ಅವನ ಪುತ್ರ, ಪುತ್ರಿಯರೆ? ಯಾರಾದರೂ ಪುತ್ರ, ಪುತ್ರಿಯರನ್ನು ದಾನ ಮಾಡುತ್ತಾರೆಯೆ? ದಯವಿಟ್ಟು ಅದನ್ನು ಹೇಳಿ ನನ್ನಲ್ಲಿ ಶ್ರದ್ಧೆಯನ್ನುಂಟು ಮಾಡು. ಯಾಕೆಂದರೆ ಪುತ್ರದಾನ ಅತ್ಯಂತ ಕಷ್ಟವಾದದ್ದು ಮತ್ತು ಶ್ರೇಷ್ಠವಾದದ್ದು’ ಎಂದು ಕೇಳಿದ ರಾಜ. ಆಗ ಆ ಮುದುಕ ಬಾಯಿಬಿಟ್ಟ. ‘ಮಹಾರಾಜಾ, ಪ್ರಾಣಿಗಳಿಗೆ ಈ ಭೂಮಿಯೇ ಆಧಾರವಾಗಿರುವಂತೆ, ಎಲ್ಲ ಯಾಚಕರಿಗೂ ಆಧಾರನಾಗಿರುವ ವೆಸ್ಸಂತರ ಬೋಧಿಸತ್ವ ಕಾಡಿನಲ್ಲಿರುವಾಗ ಈ ಮಕ್ಕಳನ್ನು ನನಗೆ ದಾನವಾಗಿ ಕೊಟ್ಟುಬಿಟ್ಟ. ಎಲ್ಲ ನದಿಗಳ ನೀರಿಗೆ ಆಧಾರವಾದ ಸಮುದ್ರದಂತೆ, ಬೇಡುವವರಿಗೆ ಆಶ್ರಯಸ್ಥಾನವಾದ ವೆಸ್ಸಂತರ ಬೋಧಿಸತ್ವ ತನ್ನ ಸ್ವಂತ ಮಕ್ಕಳನ್ನು ನನಗೆ ದಾನವಾಗಿ ಕೊಟ್ಟಿದ್ದಾನೆ’.

ADVERTISEMENT

ಈ ಮಾತನ್ನು ಕೇಳಿ ಮಹಾರಾಜ ಸಂಜಯ ಬೆರಗಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.