ADVERTISEMENT

ಬೆರಗಿನ ಬೆಳಕು: ಬದುಕೊಂದು ಗಾಳಿಪಟ

ಡಾ. ಗುರುರಾಜ ಕರಜಗಿ
Published 1 ಜೂನ್ 2022, 19:30 IST
Last Updated 1 ಜೂನ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? |
ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ||
ಏನೊ ಜೀವವನೆಳೆವುದೇನೊ ನೂಕುವುದದನು |
ನೀನೊಂದು ಗಾಳಿಪಟ – ಮಂಕುತಿಮ್ಮ || 641 ||

ಪದ-ಅರ್ಥ: ಬಾನೊಳಿರುವುದೆ=ಬಾನೊಳು (ಆಕಾಶದಲ್ಲಿ)+ಇರುವುದೆ, ಪಾರ್ವ=ಹಾರುವ, ಜೀವವನೆಳೆವುದೇನೊ=ಜೀವವನು+ಎಳೆವುದು+ಏನೊ, ನೂಕುವುದದನು=ನೂಕುವುದು+ಅದನು.
ವಾಚ್ಯಾರ್ಥ: ಹಕ್ಕಿ ಹಾರುವುದಕ್ಕೆ ಆಕಾಶದಲ್ಲಿ ದಾರಿಯ ನಕ್ಷೆ ಇದೆಯೆ? ಮೀನು ನೀರಿನಲ್ಲಿ ಸುಳಿದು ನುಸುಳುವುದಕ್ಕೆ ಏನಾದರೂ ದಾರಿನಿಯಮಗಳಿವೆಯೆ? ಯಾವುದೋ ಶಕ್ತಿ ಜೀವವನ್ನು ಎಳೆಯುವುದು, ಮತ್ತೊಂದು ಯಾವುದೋ ಅದನ್ನು ನೂಕುವುದು. ನೀನು ಒಂದು ಗಾಳಿಪಟ ಇದ್ದಂತೆ.

ವಿವರಣೆ: ಗಾಳಿಪಟ ಒಂದು ಸುಂದರ ಪ್ರತಿಮೆ. ಅದು ಕಾಗದದ್ದೋ, ಈಗೀಗ ಬರುವಂತೆ ತೆಳುವಾದ ಪ್ಲಾಸ್ಟಿಕ್ ಹಾಳೆಯದೋ ಆಗಿರುತ್ತದೆ. ಅದನ್ನು ಸರಿಯಾದ ಸೂತ್ರದಲ್ಲಿ ಕಟ್ಟಬೇಕು ಅದಕ್ಕೊಂದು ಹಾರಲು ಸರಿಯಾದ ರೂಪ ಕೊಡುವುದಕ್ಕೆ, ಬಿದಿರು ಕಡ್ಡಿಗಳನ್ನು ಅಂಟಿಸಬೇಕು. ತೂಕಕ್ಕೆ ಒಂದು ಬಾಲಂಗೋಚಿ. ಹಾರಲು ಅನುವಾಗುವಂಥ ಬಯಲು ಪ್ರದೇಶ ಬೇಕು ಮತ್ತು ಅದನ್ನು ಕಳೆದುಹೋಗದಂತೆ ಕಟ್ಟಿದ ಉದ್ದ ದಾರ ಬೇಕು. ಗಾಳಿಪಟ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಅದಕ್ಕೆ ಸರಿಯಾದ ಗಾಳಿ ಬೇಕು. ಅದು ಮೇಲೆ ಏರಿದ ಮೇಲೆ ದಾರ ಅದನ್ನು ಕೆಳಗೆ ಬಿಗಿಯಾಗಿ ಹಿಡಿದು ಎಳೆಯುತ್ತದೆ, ಗಾಳಿ ಮುಂದೆ ನೂಕುತ್ತದೆ. ಗಾಳಿಪಟ ಹೀಗೆ ಮುಂದೆ ನೂಕುವ ಗಾಳಿ, ಹಿಂದೆ ಎಳೆಯುವ ದಾರದ ನಡುವೆ ಓಲಾಡುತ್ತದೆ. ಗಾಳಿ ನಿಂತರೆ ಬಿದ್ದು ಹೋಗುತ್ತದೆ, ದಾರ ಹರಿದರೆ ದಿಕ್ಕು ತಪ್ಪಿ ಹಾರಿ ಹೋಗುತ್ತದೆ. ಆ ಎರಡೂ ನೂಕು-ತಳ್ಳುಗಳ ನಡುವೆಯೇ ಅದರ ಬಾಳ್ಪೆ. ಏರಿಳಿತ ಅದಕ್ಕೆ ತಪ್ಪಿದ್ದಲ್ಲ, ಯಾಕೆಂದರೆ ಎರಡು ಒತ್ತಡಗಳಲ್ಲಿ ಯಾವುದೋ ಒಂದು ಹೆಚ್ಚು ಕಡಿಮೆಯಾಗುತ್ತಲೇ ಇರುತ್ತದೆ.

ADVERTISEMENT

ಕಗ್ಗ ಹೇಳುತ್ತದೆ ಮನುಷ್ಯನ ಬದುಕೂ ನಕ್ಷೆ ಇಲ್ಲದ ದಾರಿ. ಜೀವವನ್ನು ಯಾವುದೋ ಶಕ್ತಿ ಮುಂದೆ ತಳ್ಳುತ್ತದೆ, ಆಗ ಪ್ರಗತಿ ಕಾಣುತ್ತದೆ. ಮತ್ತೊಂದು ಕಾಣದ ಶಕ್ತಿ ಅದನ್ನು ಹಿಂದಳೆಯುತ್ತದೆ, ಆಗ ಅವನತಿ ಕಾಣುತ್ತದೆ. ಶಕ್ತಿಗಳು ಕಣ್ಣಿಗೆ ಕಾಣವು. ಪ್ರಗತಿ, ಅವನತಿಗಳು ಕಾಣುತ್ತವೆ. ರಾಬರ್ಟ ಕ್ಲೈವ್ ಒಬ್ಬ ಮುಂಗೋಪಿ ಹುಡುಗ, ಅಭ್ಯಾಸದಲ್ಲಿ ಸರಿಯಾಗಲಿಲ್ಲ. ಮೇಲಿಂದ ಮೇಲೆ ಶಾಲೆ ಬದಲಾಯಿಸಿದ. ಯಾವುದಾದರೂ ನೌಕರಿ ಸಿಕ್ಕರೆ ಸಾಕೆಂದು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕ್ಲಾರ್ಕ ಎಂದು ಸೇರಿ ಮದ್ರಾಸಿಗೆ ಬಂದ. ಒದ್ದಾಡಿದ. ಭವಿಷ್ಯ ಕಾಣದೆಂದೆನಿಸಿದಾಗ ಆತ್ಮಹತ್ಯೆಗೆ ಪ್ರಯತ್ನ ಮಾಡಿದ. ಉಳಿದ ನಂತರ ಹೇಗೋ, ಯಾರದೋ ಸಹಾಯದಿಂದ ಸೈನ್ಯ ಸೇರಿದ. ಮೆಲುಕ್ಕೇರುತ್ತ ಬಂದ. ಪ್ಲಾಸಿ ಯುದ್ಧದ ನಂತರ ಪ್ರಚಂಡನಾದ, ಪ್ರಖ್ಯಾತನಾದ. ಅಸಾಧ್ಯ ಪ್ರಮಾಣದ ಹಣ ಬಂತು. ಅದರ ಹಿಂದೆಯೇ ಭ್ರಷ್ಟಾಚಾರ. ಬೆಂಗಾಲ್ ಪ್ರೆಸಿಡೆನ್ಸಿಯ ಪ್ರಥಮ ಗವರ್ನರ್ ಆದ. ರಿಟೈರ್ ಆಗಿ ಇಂಗ್ಲೆಂಡಿಗೆ ಹೋದ. ಪಾಪಪ್ರಜ್ಞೆ ಬೆನ್ನಟ್ಟಿತು. ಕೊನೆಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಇದೆಂಥ ಏರಿಳಿತ!

ಕಗ್ಗ ತಿಳಿ ಹೇಳುತ್ತದೆ. ನೀನೊಂದು ಗಾಳಿಪಟ ಇದ್ದ ಹಾಗೆ. ನೀನು ಮೇಲೆ ಏರುವುದಕ್ಕೆ ಮತ್ತು ಕೆಳಗೆ ಬರುವುದಕ್ಕೆ ನೀನೇ ಕಾರಣನಲ್ಲ. ನಿನ್ನ ಹಿಂದೆ ಯಾವುದೋ ಶಕ್ತಿಗಳು ಸಹಾಯಕವಾಗಿ ಅಥವಾ ವಿರುದ್ಧವಾಗಿ ಕಾರ್ಯಮಾಡುತ್ತವೆ. ಅವುಗಳನ್ನು ಅರಿತುಕೋ. ಅಹಂಕಾರದ ನಡೆ ನಮ್ಮನ್ನು ಹಿಂದೆ ತಳ್ಳಿದರೆ, ವಿನಯದ, ತಿಳುವಳಿಕೆಯ ಹೆಜ್ಜೆ ಮೇಲೆ ಏರಿಸೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.