ADVERTISEMENT

ಬೆರಗಿನ ಬೆಳಕು: ದೈವದ ಸಂಚು

ಡಾ. ಗುರುರಾಜ ಕರಜಗಿ
Published 30 ನವೆಂಬರ್ 2020, 20:15 IST
Last Updated 30 ನವೆಂಬರ್ 2020, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಇನ್ನೇನು ಮತ್ತೇನು ಗತಿಯೆಂದು ಬೆದರದಿರು |
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ ? ||
ಕಣ್ಣಿಗೆಟುಕದೆ ಸಾಗುತಿಹುದುದೈವದಸಂಚು|
ತಣ್ಣಗಿರಿಸಾತ್ಮವನು – ಮಂಕುತಿಮ್ಮ || 360 ||

ಪದ-ಅರ್ಥ: ಕೈಯೊಳಗಿಹುದೆ=ಕೈಯೊಳಗೆ+
ಇಹುದೆ, ಕಣ್ಣಿಗೆಟುಕದೆ=ಕಣ್ಣಿಗೆ+ಎಟುಕದೆ
(ನಿಲುಕದೆ), ತಣ್ಣಗಿರಿಸಾತ್ಮವನು=
ತಣ್ಣಗಿರಿಸು+ಆತ್ಮವನು.

ವಾಚ್ಯಾರ್ಥ: ಇನ್ನು ಮುಂದೆ ಗತಿಯೇನು ಎಂದು ಬೆದರುವುದು ಬೇಡ. ಯಾಕೆಂದರೆ ವಿಧಿಯು ಬರೆಯುವ ಭವಿಷ್ಯದ ಲೆಕ್ಕಣಿಕೆ ನಮ್ಮ ಕೈಯಲಿಲ್ಲ.ದೈವದಸಂಚುನಮ್ಮ ಕಣ್ಣಿಗೆ ಸಾಗದಂತೆ ನಡೆಯುತ್ತಿದೆ. ಆದ್ದರಿಂದ ನಮಗಿರುವ ದಾರಿಯೆಂದರೆ ನಮ್ಮ ಆತ್ಮವನ್ನು ತಣ್ಣಗೆ ಇಟ್ಟುಕೊಳ್ಳುವುದು.

ADVERTISEMENT

ವಿವರಣೆ: ಯಾವುದಾದರೂ ಕಷ್ಟ ಕಣ್ಣ ಮುಂದೆ ಬಂದಾಗ ಭಯವಾಗುತ್ತದೆ. ಮುಂದೆ ಏನು ಗತಿ ಎಂಬ ಚಿಂತೆ ಕಾಡುತ್ತದೆ. ಅದರ ಪರಿಹಾರಕ್ಕಾಗಿ ಮನಸ್ಸು, ಬುದ್ಧಿಗಳು ಚಡಪಡಿಸುತ್ತವೆ. ಹೀಗಾದರೆ ಹಾಗೆ ಮಾಡಬೇಕು, ಹಾಗೆ ಪ್ರಸಂಗ ಬಂದರೆ ಹೀಗೆ ಕೆಲಸ ಮಾಡಬೇಕು ಎಂದು ಗುಣಾಕಾರ, ಭಾಗಾಕಾರ ಮಾಡುತ್ತ ಸೊರಗುತ್ತೇವೆ. ಆದರೆ ವಿಧಿಯ ಮನಸ್ಸಿನಲ್ಲಿ ಏನಿದೆಯೋ? ಅದರ ಬರಹ ನಮಗೆ ಕಾಣಿಸದು. ನಾವು ಏನೇ ಮಾಡಿದರೂ ಕೊನೆಗೆ ವಿಧಿ ತೀರ್ಮಾನಿಸಿದಂತೆಯೇ ಆಗುವುದು. ಒಂದು ವೇಳೆ ವಿಧಿಯ ಬರಹ ಮತ್ತು ನಮ್ಮ ಪ್ರಯತ್ನ ಒಂದಾದಾಗ, ನಾನೇ ಸಾಧಿಸಿದೆ ಎಂದು ಬೀಗುತ್ತೇವೆ. ನಮ್ಮ ಪ್ರಯತ್ನದ ವಿರುದ್ಧ ನಡೆದರೆ, ದೈವ ಬಲ ನಮಗಿಲ್ಲ ಎನ್ನುತ್ತೇವೆ. ಅದಕ್ಕೆ ಈ ಕಗ್ಗ ಹೇಳುತ್ತದೆ, ‘ಕಣ್ಣಿಗೆಟುಕದೆ ಸಾಗುತಿಹುದುದೈವದಸಂಚು’. ಅದೊಂದು ಸಂಚೇ. ಯಾಕೆಂದರೆ ನಮಗೆ ತಿಳಿಯದಂತೆ ಮಾಡುವ ಪ್ರತಿ ವ್ಯವಹಾರವೂ ಸಂಚೇ. ಮುಂದಾಗುವುದು ಮೊದಲೆ ತಿಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲ ಎನ್ನಿಸುತ್ತದೆ. ಆದರೆ ಮುಂದೆ ಬರುವ ಆಪತ್ತು ಮೊದಲೇ ತಿಳಿದರೆ ನಮ್ಮನ್ನು ಕಾರ್ಯಶೂನ್ಯರನ್ನಾಗಿಸಿಬಿಡುತ್ತದೆ. ಮುಂದೆ ಬರುವ ಸಂತೋಷದ ಪ್ರಸಂಗ ಮೊದಲೇ ಮೈಮರೆಸಬಹುದು. ಅದಕ್ಕೆ ಡಿ.ವಿ.ಜಿ ಕೇಳುತ್ತಾರೆ, ‘ವಿಧಿಯ ಲೆಕ್ಕಣಿಕೆ ನಿನ್ನ ಕೈಯಲ್ಲಿದೆಯೇ?’ ಅದು ಇಲ್ಲದಿದ್ದಾಗ ನಮಗೇನು ದಾರಿ? ಆ ದಾರಿಯನ್ನೂ ಕಗ್ಗ ತಿಳಿಸುತ್ತದೆ. ‘ತಣ್ಣಗಿರಿಸಾತ್ಮವನು’. ಆಗು ಹೋಗುಗಳು ನಮ್ಮ ಕೈಯಲ್ಲಿ ಇಲ್ಲದಿದ್ದಾಗ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಬಂದದ್ದನ್ನು ಸ್ವೀಕರಿಸುವುದು ನಮಗುಳಿದ ದಾರಿ.

ಮಹಾಭಾರತದಲ್ಲಿ ದುರ್ಯೋಧನ ಛಲದಂಕಮಲ್ಲ, ಖಳನಾಯಕ. ಆದರೆ ಅವನು ಮುಂದೆ ಬರುವ ಮಹಾನಾಶವನ್ನು ತಿಳಿದು, ಮನಸ್ಸನ್ನು ಹೇಗೆ ಸಿದ್ಧಮಾಡಿಕೊಂಡಿದ್ದಾನೆಂಬುದನ್ನು ಕುಮಾರವ್ಯಾಸ ಅದ್ಭುತವಾಗಿ ಚಿತ್ರಿಸುತ್ತಾನೆ. ಸಂಧಾನಕ್ಕೆ ಬಂದ ಕೃಷ್ಣ, ದುರ್ಯೋಧನ ಸಂಧಾನಕ್ಕೆ ಒಪ್ಪದೆ ಕೃಷ್ಣನಿಗೆ ಒರಟು ಮಾತನಾಡುತ್ತಾನೆ. ಕೃಷ್ಣ ದೊಡ್ಡವನು, ಈ ರೀತಿಯ ಮಾತು ತರವಲ್ಲವೆಂದಾಗ ಅವನ ಮಾತು ಆಶ್ಚರ್ಯವನ್ನುಂಟು ಮಾಡುತ್ತದೆ.

‘ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲ್ಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ’
‘ಕೊಲುವನನ್ಯರ ನನ್ಯರಿಂದವೆ
ಕೊಲಿಸುವನು ಕಮಲಾಕ್ಷನಲ್ಲದೆ
ಉಳಿದ ಜೀವವ್ರಾತಕೀ ಸ್ವಾತಂತ್ರ್ಯವಿಲ್ಲೆಂದ’

ಕೃಷ್ಣನೇ ಸಂಧಿಯನು ಮುರಿಯುವನು, ಒಬ್ಬರಿಂದ ಮತ್ತೊಬ್ಬರನ್ನು ಕೊಲ್ಲಿಸುವನು. ಆದ್ದರಿಂದ ನನಗೆ ಭೀತಿಯಿಲ್ಲ. ‘ಸಾವೆನೀತನ ಕೈಯ ಬಾಯಲಿ, ಭೀತಿ ಬೇಡೆಂದ’. ಇದು ಆಗುವುದನ್ನು ದೈವಕ್ಕೆ ಬಿಟ್ಟು ಆತ್ಮವನ್ನು ತಣ್ಣಗಿಟ್ಟುಕೊಳ್ಳುವ ಬಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.