ADVERTISEMENT

ಬೆರಗಿನ ಬೆಳಕು: ಬದುಕಿನ ಸೂತ್ರಗಳು

ಡಾ. ಗುರುರಾಜ ಕರಜಗಿ
Published 4 ಅಕ್ಟೋಬರ್ 2022, 0:00 IST
Last Updated 4 ಅಕ್ಟೋಬರ್ 2022, 0:00 IST
   

ನಗು ಮನದಿ ಲೋಗರ ವಿಕಾರಂಗಳನು ನೋಡಿ |

ಬಿಗಿ ತುಟಿಯ, ದುಡಿವಂದು ನೋವಪಡುವಂದು ||
ಪೊಗು, ವಿಶ್ವಜೀವನದ ಜೀವಾಂತರಂಗದಲಿ |
ನಗುನಗುತ ಬಾಳ್, ತೆರಳು – ಮಂಕುತಿಮ್ಮ || 728 ||

ಪದ-ಅರ್ಥ: ಲೋಗರ=ಲೋಕದ ಜನರ, ದುಡಿವಂದು=ದುಡಿವ+ಅಂದು, ಪೊಗು=ಸೇರು
ವಾಚ್ಯಾರ್ಥ: ಲೋಕದ ಜನ ವಿಕಾರಗಳನ್ನು ಕಂಡು ಮನಸ್ಸಿನಲ್ಲಿಯೇ ನಗು. ನೀನು ದುಡಿಯುವಾಗ, ನೋವುಪಡುವಾಗ ತುಟಿಯನ್ನು ಬಿಗಿ. ವಿಶ್ವಜೀವನದ
ಅಂತರಂಗದಲ್ಲಿ ಸೇರಿ ಹೋಗು. ನಗುನಗುತ್ತ ಬಾಳು, ತೆರಳು.

ADVERTISEMENT

ವಿವರಣೆ: ವೈಯಕ್ತಿಕವಾಗಿ, ನನ್ನ ಮಟ್ಟಿಗೆ ಹೇಳುವುದಾದರೆ, ಇದೊಂದು ಅತ್ಯದ್ಭುತ ಚೌಪದಿ. ಇಡೀ ಬದುಕಿನ ರೀತಿಯನ್ನು ನಾಲ್ಕೇ ಸಾಲುಗಳಲ್ಲಿ ಹೇಳಿಬಿಡುವ ಸಂಕ್ಷೇಪಣಾ ಶಕ್ತಿಗೆ ಶರಣು ಎನ್ನಬೇಕು.ಈ ಕಗ್ಗದಲ್ಲಿ ನಾಲ್ಕು ಬಹುದೊಡ್ಡ ವಿಷಯಗಳನ್ನು ಡಿ.ವಿ.ಜಿ ನಮ್ಮ ಮುಂದೆ ಇಡುತ್ತಾರೆ.
1. ಜನರ ಮಧ್ಯೆ ಕೆಲಸಮಾಡುವಾಗ ಅನೇಕರ ನಿಸ್ವಾರ್ಥ, ಸಮಾಜ ಪ್ರೇರಕವಾದ ಕೆಲಸಗಳು ಕಣ್ಣಿಗೆ ಬೀಳುವುದರೊಂದಿಗೆ, ಕೆಲವರ ಸಣ್ಣತನಗಳು,
ವಿಕಾರಗಳೂ ತೋರುತ್ತವೆ. ಆಗ ನಾವು ಏನು ಮಾಡಬಹುದು? ನಮಗೆ ಎರಡು ಆಯ್ಕೆಗಳು. ಮೊದಲನೆಯದು ಅವರ ತಪ್ಪುಗಳನ್ನು ನೋಡಿ ನಕ್ಕು, ಎಲ್ಲರ ಮುಂದೆ ಹೇಳಿ ಅಪಹಾಸ್ಯ ಮಾಡುವುದು. ಎರಡನೆಯದು, ಮತ್ತೊಬ್ಬರ ದೋಷಗಳನ್ನು ಕಂಡು ಅಟ್ಟಹಾಸ ಮಾಡಿ ನಗುವುದು ಬೇಡ, ಮನದಲ್ಲೇ ನಕ್ಕು ಅದನ್ನು ಮರೆತುಬಿಡುವುದು. ಕಗ್ಗ ಎರಡನೆಯದನ್ನು ಸೂಚಿಸುತ್ತದೆ. ಮತ್ತೊಬ್ಬರ ತಪ್ಪನ್ನು ಎತ್ತಿ ಟೀಕೆ ಮಾಡಲು ನಾವು ಯಾರು? ನಮಗೆ ಆ ಅಧಿಕಾರವಿದೆಯೆ?
2. ನಾವು ಕಷ್ಟಪಟ್ಟು ದುಡಿಯುವಾಗ, ಯಾವುದೇ ಕಾರಣಕ್ಕೆ, ಮನಸ್ಸಿಗೆ ನೋವಾದರೆ ಜಗತ್ತಿಗೆಲ್ಲ ಸಾರಿಕೊಂಡು ಬರುತ್ತೇವೆ. ನಮ್ಮ ಕಷ್ಟ ಕೋಟಲೆಗಳನ್ನೆಲ್ಲ ಹೇಳಿಕೊಂಡು ಬೇರೆಯವರ ಅನುಕಂಪೆಯನ್ನು ಅಪೇಕ್ಷಿಸುತ್ತೇವೆ. ಅನುಕಂಪೆಯನ್ನು ಅಪೇಕ್ಷಿಸುವಷ್ಟು ಕೀಳುತನ ಮತ್ತೊಂದಿರಲಾರದು. ಅದು ನಮ್ಮ ಆತ್ಮವಿಶ್ವಾಸವನ್ನು, ಪ್ರಯತ್ನಶೀಲತೆಯನ್ನು ಹೊಸಕಿಹಾಕುತ್ತದೆ. ಜಗತ್ತಿಗೆ ಅಳುಮೋರೆ, ದೈನ್ಯ ಬೇಕಿಲ್ಲ. ಒಂದೆರಡು ಬಾರಿ ಸಹಾನುಭೂತಿಯ ಮಾತನಾಡಿದವರೂ ಕೂಡ, ನಂತರ
ಮುಖ ತಪ್ಪಿಸುತ್ತಾರೆ, ಬಂತಪ್ಪ ಅಳುಮುಂಜಿ ಎನ್ನುತ್ತಾರೆ. ಆದ್ದರಿಂದ ತುಟಿ ಬಿಗಿದು, ನಮ್ಮ ಕರ್ಮಫಲವನ್ನು ನಾವೇ ಧೈರ್ಯದಿಂದ ಎದುರಿಸಬೇಕು.
3. ಜಗತ್ತಿನಲ್ಲಿ ಕಾರ್ಯಮಾಡುವಾಗ ನೋವಾದೀತು, ಕಷ್ಟವಾದೀತು ಎಂದು ಯಾವ ಕರ್ತವ್ಯವನ್ನೂ ಮಾಡದೆ ಕುಳಿತುಕೊಳ್ಳುವುದು ಸರಿಯಲ್ಲ. ಈ ವಿಶ್ವಜೀವನದ ಅಂತರಂಗಕ್ಕೇ ಹೋಗಿ, ನಮ್ಮ ಕೈಲಾದ ಕರ್ತವ್ಯಗಳನ್ನು ನಿರ್ವಂಚನೆಯಿಂದ, ಪ್ರೀತಿಯಿಂದ ಮಾಡತಕ್ಕದ್ದು. ಇದು ಯಾರದೋ ಜಗತ್ತಲ್ಲ, ನಮ್ಮದೇ. ಇರುವತನಕ ಅದರ ಶ್ರೇಯಸ್ಸಿಗೆ ದುಡಿಯುವುದು ಧರ್ಮ.
4. ಬದುಕಿರುವವರೆಗೆ ನಗುನಗುತ್ತ ಬಾಳಬೇಕು. ಇದು ನಮ್ಮ ಬದುಕು. ಸ್ವಂತದ್ದು, ಬಾಡಿಗೆಯದಲ್ಲ. ಬದುಕು ಸಂಭ್ರಮವಾಗಬೇಕು. ಹಾಗೆ ಬದುಕಿದರೆ ಸಾವೂ ಸಂಭ್ರಮವಾದೀತು. ಅದಕ್ಕೇ ನಗುನಗುತ್ತ ಬದುಕಿ,ನಗುನಗುತ್ತ ತೆರಳಬೇಕು. ಇವು ಮನುಷ್ಯನ ಆದರ್ಶ ಬದುಕಿನ ಸೂತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.