ADVERTISEMENT

ಬೆರಗಿನ ಬೆಳಕು | ಸಹಬಾಳ್ವೆಯ ಸೊಗಸು

ಡಾ. ಗುರುರಾಜ ಕರಜಗಿ
Published 24 ಜೂನ್ 2021, 19:45 IST
Last Updated 24 ಜೂನ್ 2021, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು |
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ||
ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ |
ಒಟ್ಟು ಬಾಳ್ಪುದ ಕಲಿಯೊ – ಮಂಕುತಿಮ್ಮ
|| 432 ||

ಪದ-ಅರ್ಥ: ಪ್ರತ್ಯೇಕ ಸುಖವಲ್ಪದುದು=
ಪ್ರತ್ಯೇಕಸುಖ(ಏಕಾಂಗಿಯಾಗಿ ಪಡುವ ಸುಖ)+
ಅಲ್ಪದುದು(ಅಲ್ಪವಾದದ್ದು), ಸೊಂಪು=ಸುಖ, ತೃಪ್ತಿ, ಸಮಷ್ಟಿಜೀವನ=ಸಹಜೀವನ, ಜೊತೆಯಾಗಿ ಬಾಳುವುದು.

ವಾಚ್ಯಾರ್ಥ: ಏಕಾಂಗಿಯಾಗಿ ಪಡುವ ಸುಖ ಒಂದು ಕ್ಷಣದ್ದು ಮಾತ್ರ. ನಮಗೆ ಆತ್ಮವಿಸ್ತಾರವಾಗುವುದೇ ನಿತ್ಯಸುಖ. ವ್ಯಕ್ತಿ ಸಹಜೀವನದಲ್ಲಿ ಬದುಕಿದಾಗಲೇ ನಿಜವಾದ ಸುಖ. ಹಾಗೆ ಒಟ್ಟಾಗಿ ಬಾಳುವುದನ್ನು ಕಲಿ.

ADVERTISEMENT

ವಿವರಣೆ: ಗುರುದೇವ ರವೀಂದ್ರನಾಥ ಠಾಕೂರರ ಗೀತಾಂಜಲಿಯಲ್ಲಿ ಪುಟ್ಟ ಕಥೆಯೊಂದು ಬರುತ್ತದೆ. ಮನುಷ್ಯನೊಬ್ಬ ತಾನು ವಿಶೇಷವಾಗಿರಬೇಕು, ವಿಶಿಷ್ಟವಾಗಿರಬೇಕು ಎಂದುಕೊಂಡು ಎಲ್ಲರನ್ನು ದೂರವಿಡಲು ತನ್ನ ಸುತ್ತ ಕೋಟೆಗೋಡೆಯೊಂದನ್ನು ಕಟ್ಟತೊಡಗಿದ. ಕೋಟೆ ಮುಗಿದಾಗ, ಆತ ಗಮನಿಸಿದ. ತನ್ನ ಸುತ್ತಲೂ ಕಟ್ಟಿದ ಕೋಟೆಯಲ್ಲಿ ತಾನೊಬ್ಬನೇ ಬಂಧಿಯಾಗಿದ್ದಾನೆ. ರಾಜನಾಗಲು ಹೋಗಿ ಕೈದಿಯಾಗಿದ್ದ. ಇದೊಂದು ತುಂಬ ಸಾಂಕೇತಿಕವಾದದ್ದು. ತಾನೊಬ್ಬನೇ ಇರಬೇಕು, ತಾನು ವಿಶೇಷ ಎಂದುಕೊಳ್ಳುವವರೆಲ್ಲ ಒಂದು ರೀತಿಯಲ್ಲಿ ತಮ್ಮ ಚಿಂತನೆಗಳ ಬಂಧಿಯಾಗುತ್ತಾರೆ, ಏಕಾಂಗಿಯಾಗುತ್ತಾರೆ. ಹೀಗೆ ಪ್ರತ್ಯೇಕ ಸುಖವನ್ನು ಬಯಸುವವರಿಗೆ ದೊರೆಯುವ ಸಂತೋಷ ಅತ್ಯಲ್ಪವಾದದ್ದು. ಮತ್ತೊಬ್ಬರ ಸಂಪರ್ಕವಿಲ್ಲದೆ, ಅವರೊಂದಿಗೆ ಸಹಚಿಂತನೆ ನಡೆಸದ ಜೀವಿಯ ಆತ್ಮವಿಸ್ತಾರವಾಗುವುದು ಕಷ್ಟ. ಕೆಲವೇ ಕೆಲವು ತಪಸ್ವಿಗಳನ್ನು ಬಿಟ್ಟರೆ ಮನುಷ್ಯನ ಆತ್ಮವಿಸ್ತಾರವಾಗುವುದು ಪ್ರಪಂಚದೊಡನೆ ವ್ಯಕ್ತಿಯ ಸತತವಾದ ಸಂಪರ್ಕದಿಂದ, ಸಂವಹನದಿಂದ. ಒಂದು ಬಾರಿ ಈ ಕೊಡುಕೊಳ್ಳುವಿಕೆ ನಿಂತುಹೋದರೆ ಆತ್ಮವಿಕಸನ ನಿಂತುಹೋಗುತ್ತದೆ.

ಯೋಗಿ ಯು.ಜಿ. ಕೃಷ್ಣಮೂರ್ತಿಯವರನ್ನು ಒಬ್ಬರು ಕೇಳಿದರು, ‘ಮನುಷ್ಯನ ಬದುಕಿನಲ್ಲಿ ಅತ್ಯಂತ ಕಷ್ಟದ ಸ್ಥಿತಿ ಯಾವುದು?’ ಯು.ಜಿ. ಒಂದೇ ಮಾತಿನಲ್ಲಿ ಹೇಳಿದರು ‘ಒಂಟಿತನ’. ಈ ಒಂಟಿತನ ಪ್ರಪಂಚವನ್ನು ಇನ್ನಿಲ್ಲದಂತೆ ಕಾಡುತ್ತದೆ. ಬ್ರಿಟನ್‌ನಲ್ಲಿ ಇದು ಯಾವ ಪ್ರಮಾಣದಲ್ಲಿ ಕಾಡುತ್ತಿದೆಯೆಂದರೆ, ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ‘ಮಿನಿಸ್ಟರ್ ಫಾರ್ ಲೋನ್ಲಿನೆಸ್’ ಅಂದರೆ ‘ಏಕಾಂಗಿತನದ ಸಚಿವ’ ಹುದ್ದೆಯನ್ನು ಸೃಷ್ಟಿಸಿದ್ದರು. ಪ್ರಧಾನಿ ತೆರೆಸಾ ಮೇ ರವರು ಇದನ್ನು ‘ಆಧುನಿಕ ಜೀವನದ ಕಟುವಾಸ್ತವ’ ಎಂದು ಬಣ್ಣಿಸಿದ್ದರು. ಈ ಸಮಸ್ಯೆ ಮುಂದುವರೆದ ರಾಷ್ಟ್ರಗಳಾದ ಜರ್ಮನಿ, ಅಮೆರಿಕಗಳಲ್ಲಿ ಬಹಳವಾಗಿದೆ. ಈಗ ರಾಷ್ಟ್ರಪತಿಗಳ ಸಲಹೆಗಾರರಾದ ಭಾರತೀಯ ಮೂಲದ ಡಾ. ವಿವೇಕ ಮೂರ್ತಿಯವರು, ಅಮೆರಿಕದ ಶೇಕಡ 40 ರಷ್ಟು ತರುಣ-ತರುಣಿಯರು ಒಂಟಿತನದಿಂದ ಬಳಲುತ್ತಿದ್ದಾರೆಂದು ಹಾರ್ವರ್ಡ್‌ ಬಿಸಿನೆಸ್ ರಿವ್ಯೂಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ಏಕಾಂಗಿತನ ಹೆಚ್ಚಾದಂತೆ, ಸಿಗರೇಟು, ಮಾದಕವಸ್ತುಗಳು ಮತ್ತು ದುಷ್ಟಕೂಟಗಳಲ್ಲಿ ಅವರು ಸೇರಿಕೊಳ್ಳುವುದು ಅಪಾಯ ಎಂದಿದ್ದಾರೆ.

ಅದಕ್ಕೇ ಕಗ್ಗ ಒಂದು ಸುಂದರ ಉಪದೇಶವನ್ನು ನೀಡುತ್ತದೆ. ಮೇಲೆ ಹೇಳಿದ ಅನಾಹುತಗಳು ಕಡಿಮೆಯಾಗುವುದು ವ್ಯಕ್ತಿ ಸಮುದಾಯದಲ್ಲಿದ್ದಾಗ. ವ್ಯಕ್ತಿ ಜೀವನದ ಸೊಗಸು ಕಾಣುವುದು ಸಮಷ್ಟಿ ಜೀವನದಲ್ಲಿಯೇ. ನಾವು ಸಹಜೀವನವನ್ನು ಅಪ್ಪಿಕೊಳ್ಳಬೇಕು. ಒಟ್ಟು ಬಾಳುವುದನ್ನು ಕಲಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.