ADVERTISEMENT

ಬೆರಗಿನ ಬೆಳಕು: ಗುಣವನ್ನು ಮರೆಸಿದ ಕುರೂಪ

ಡಾ. ಗುರುರಾಜ ಕರಜಗಿ
Published 29 ನವೆಂಬರ್ 2020, 19:05 IST
Last Updated 29 ನವೆಂಬರ್ 2020, 19:05 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮಲ್ಲರಾಷ್ಟ್ರವನ್ನು ಕುಸಾವತಿ ರಾಜಧಾನಿಯಲ್ಲಿ ಒಕ್ಕಾಕನೆಂಬ ರಾಜ ಆಳುತ್ತಿದ್ದ. ಅವನ ಹದಿನಾರು ಸಾವಿರ ಹೆಂಡತಿಯರಲ್ಲಿ ಶೀಲವತಿ ಪಟ್ಟದ ರಾಣಿ. ಅದೆಷ್ಟೋ ವರ್ಷಗಳವರೆಗೆ ಅವನ ಯಾವ ರಾಣಿಯಿಂದಲೂ ಮಕ್ಕಳಾಗಲಿಲ್ಲ. ಕೊನೆಗೆ ಶಕ್ರನನ್ನು ಬೇಡಿಕೊಂಡಾಗ ಆತ ಶೀಲವತಿಯ ಕನಸಿನಲ್ಲಿ ಬಂದು ‘ನಿನಗೆ ಎಂಥ ಮಗ ಬೇಕು?’ ಎಂದು ಕೇಳಿದ. ಆಕೆ ತನಗೆ ಅತ್ಯಂತ ಪ್ರಜ್ಞಾವಂತ ಮಗ ಬೇಕೆಂದು ಬೇಡಿದಳು. ಆಗ ಶಕ್ರ ‘ನಿನಗೆ ಇಬ್ಬರು ಮಕ್ಕಳನ್ನು ಕೊಡುತ್ತೇನೆ. ಮೊದಲನೆಯವನು ಪ್ರಜ್ಞಾವಂತನಾಗುತ್ತಾನೆ, ಎರಡನೆಯವನು ಅತ್ಯಂತ ಸುಂದರನಾಗುತ್ತಾನೆ’ ಎಂದು ಆಕೆಯ ನಾಭಿಯನ್ನು ತನ್ನ ಉಂಗುರದಿಂದ ಮುಟ್ಟಿದ. ಹತ್ತು ತಿಂಗಳು ಕಳೆದ ಮೇಲೆ ಆಕೆಗೆ ಬೋಧಿಸತ್ವ ಮಗನಾಗಿ ಹುಟ್ಟಿದ. ಅವನ ಹೆಸರು ಕುಶಕುಮಾರ. ಅವನಿಗೆ ಎರಡು ವರ್ಷವಾದಾಗ ಮತ್ತೊಬ್ಬ ಮಗ ಹುಟ್ಟಿದ. ಅವನ ಹೆಸರು ಜಯಂಪ್ರತಿ. ದಿನ ಕಳೆದಂತೆ ಕುಶಕುಮಾರ ಯಾವ ಆಚಾರ್ಯರಿಂದಲೂ ಕಲಿಯದೆ ತನ್ನ ಪ್ರಜ್ಞೆಯಿಂದ ಸಕಲ ವಿದ್ಯಾಪಾರಂಗತನಾದ. ಆದರೆ ರೂಪದಿಂದ ಮಾತ್ರ ಕುರೂಪಿಯಾಗಿದ್ದ.

ಅವನಿಗೆ ಸರಿಯಾದ ವಯಸ್ಸಾದಾಗ ಮದುವೆ ಮಾಡೋಣವೆಂದು ಯೋಚಿಸಿ ಅವನನ್ನು ಕೇಳಿದಾಗ ಆತ, ‘ನನಗೆ ಮದುವೆ ಬೇಡ. ಯಾಕೆಂದರೆ ಯಾವ ರೂಪವತಿಯೂ ನನ್ನಂತಹ ಕುರೂಪಿಯನ್ನು ಮದುವೆಯಾಗಲು ಒಪ್ಪಲಾರಳು. ಅದಕ್ಕೇ ನಾನು ಪ್ರವ್ರಜಿತನಾಗುತ್ತೇನೆ. ತಮ್ಮ ರಾಜನಾಗಲಿ ಎಂದ. ಆದರೆ ತಂದೆ-ತಾಯಿಯರು ಬಿಡದೆ ಮಂತ್ರಿಗಳನ್ನು ದೇಶ ದೇಶಗಳಿಗೆ ಅನುರೂಪಳಾದ ಕನ್ಯೆಯನ್ನು ಆರಿಸಲು ಕಳುಹಿಸಿದರು. ಕೊನೆಗೆ ಅಮಾತ್ಯರು ಮದ್ಧರಾಷ್ಟ್ರದ ಸಾಗಲನಗರಕ್ಕೆ ಬಂದು ನೋಡಿದಾಗ ಆ ರಾಜನಿಗೆ ಏಳು ಜನ ಹೆಣ್ಣುಮಕ್ಕಳು. ಅವರಲ್ಲಿ ಹಿರಿಯಳು ಪ್ರಭಾವತಿ. ಆಕೆ ಅಪ್ಸರೆಯೇ. ಆಕೆ ಇದ್ದ ಸ್ಥಳದಲ್ಲಿ ಬೆಳಕು ಚಿಮ್ಮುತ್ತಿತ್ತು. ಅಮಾತ್ಯರು ರಾಜನ ಜೊತೆಗೆ ಮಾತನಾಡಿ ಸಂಬಂಧ ಕೂಡಿಸಿದರು. ಮದ್ಧರಾಷ್ಟ್ರದ ರಾಜನಿಗೂ ತನ್ನ ಮಗಳು ಒಕ್ಕಾಕನ ಮಗನನ್ನು ಮದುವೆಯಾಗುವುದು ತನ್ನ ಭಾಗ್ಯ ಎಂದು ಭಾವಿಸಿದ. ಒಕ್ಕಾಕ ಹಾಗೂ ಶೀಲವತಿ ಹೋಗಿ ತಮ್ಮ ಭಾವೀ ಸೊಸೆಯನ್ನು ನೋಡಿದರು. ರಾಜನಿಗೆ ಹೇಳಿದರು, ‘ಕನ್ಯೆಯನ್ನು ನಾವು ಒಪ್ಪುತ್ತೇವೆ. ಆದರೆ ನಮ್ಮ ಮನೆ ತನದ ವೃತವೊಂದಿದೆ. ಅದರ ಪ್ರಕಾರ ಸೊಸೆಯ ಗರ್ಭ ನಿಲ್ಲುವವರೆಗೆ ಆಕೆ ಗಂಡನನ್ನು ನೋಡುವ ಹಾಗಿಲ್ಲ’. ಅವರು ವೃತಕ್ಕೆ ಒಪ್ಪಿದರು. ಮದುವೆಯಾಯಿತು.

ಕುಶಕುಮಾರ ರಾಜನಾದ. ಅತ್ಯಂತ ಪ್ರಸಿದ್ಧಿಯನ್ನು ಗಳಿಸಿದ. ಆತ ಪ್ರಭಾವತಿಯನ್ನು ಬೆಳಕಿನಲ್ಲಿ ನೋಡಲಿಲ್ಲ. ಆಕೆಯೂ ಅವನ ಮುಖ ನೋಡಲಿಲ್ಲ. ಅವರು ಪರಸ್ಪರ ರಾತ್ರಿಯ ಹೊತ್ತಿನಲ್ಲೇ ಸೇರುತ್ತಿದ್ದರು. ಆಗ ಪ್ರಭಾವತಿಯ ದೇಹ ಕಾಂತಿಹೀನವಾಗಿರುತ್ತಿತ್ತು. ಒಂದು ದಿನ ಪ್ರಭಾವತಿಗೆ ಗಂಡನನ್ನು ಹಗಲು ಬೆಳಕಿನಲ್ಲಿ ನೋಡಬೇಕೆಂಬ ಆಸೆಯಾಯಿತು. ಅದರಂತೆಯೇ ಕುಶಕುಮಾರನಿಗೂ ಆಕೆಯನ್ನು ನೋಡುವ ಆಸೆ. ಆತ ತಾಯಿಗೆ ಹೇಳಿದ. ಆಕೆ ಅವನಿಗೆ ಆನೆಯ ಲಾಯದಲ್ಲಿ ಮಾವುತನಂತೆ ಇರ ಹೇಳಿ ಸೊಸೆಯನ್ನು ಕರೆದುಕೊಂಡು ಹೋದಳು. ಅವನಿಗೆ ತೃಪ್ತಿಯಾಯಿತು. ಆದರೆ ಪ್ರಭಾವತಿಗೆ ಗಂಡ ಯಾರು ಎಂಬುದು ತಿಳಿಯಲಿಲ್ಲ. ಒಮ್ಮೆ ಆನೆಯ ಮೆರವಣಿಗೆಯಲ್ಲಿ ಹೊರಟಾಗ ತಮ್ಮ ಜಯಂಪ್ರತಿಯನ್ನು ಅಂಬಾರಿಯಲ್ಲಿ ಕೂಡ್ರಿಸಿ ಕುಶರಾಜ ಮಾವಟಿಗನಂತೆ ಕುಳಿತಿದ್ದ. ತಮ್ಮನನ್ನೇ ಗಂಡನೆಂದು ತಿಳಿದು ಸಂತೋಷಪಟ್ಟಳು ಪ್ರಭಾವತಿ. ಆದರೆ ಆನೆಯಿಂದ ಇಳಿಯುವಾಗ ಮೊದಲು ಇಳಿದ ಕುಶಕುಮಾರನೇ ರಾಜನೆಂದು ತಿಳಿದಾಗ, ಈ ಕುರೂಪಿಯನ್ನು ನಾನೊಲ್ಲೆ ಎಂದು ಮರಳಿ ತನ್ನೂರಿಗೆ ಹೊರಟಳು. ಆಗ ಶಕ್ರ, ತನ್ನ ವರದಿಂದ ಹುಟ್ಟಿದ ಈ ಮಹಾಪ್ರಾಜ್ಞನನ್ನು ಆಕೆ ತಿರಸ್ಕರಿಸುವುದನ್ನು ಕಂಡು, ‘ಮಗಳೇ ಕೇವಲ ಸೌಂದರ್ಯ ನೋಡಬೇಡ. ಕೆಲವರ್ಷಗಳಲ್ಲಿ ನಿನ್ನ ರೂಪ ಅಳಿದುಹೋಗುತ್ತದೆ. ಆದರೆ ಕುಶರಾಜನ ಪರಾಕ್ರಮ, ಧರ್ಮ ಹೆಚ್ಚುತ್ತ ಹೋಗುತ್ತದೆ. ಆದರೂ ಇರಲಿ’ ಎಂದು ಕುಶರಾಜನಿಗೂ ಅತ್ಯಂತ ಸುಂದರರೂಪ ಕೊಟ್ಟ. ಮುಂದೆ ಅವರಿಬ್ಬರೂ ಸುಖಿಗಳಾಗಿ ಬದುಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.