ADVERTISEMENT

ಮನುಷ್ಯ ಜೀವನದ ಹಿರಿಮೆ

ಡಾ. ಗುರುರಾಜ ಕರಜಗಿ
Published 28 ನವೆಂಬರ್ 2019, 3:51 IST
Last Updated 28 ನವೆಂಬರ್ 2019, 3:51 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ?|
ಸಾಜವನು ಬಿಟ್ಟಲುಗದಿಹುದು ಮೃಗಕೀಟ ||
ಸಾಜವಂ ಶಿಕ್ಷಿಸುತ ಲೋಕಸಂಸ್ಥಿತಿಗದನು |
ಯೋಜಿಪುದೆ ನರಮಹಿಮೆ – ಮಂಕುತಿಮ್ಮ || 213 ||

ಪದ-ಅರ್ಥ: ಸಾಜಗುಣ=ಸಹಜಗುಣ, ಉಪೇಕ್ಷಿಪೆಯ=ಕಡೆಗಣಿಸುವೆಯಾ, ಬಿಟ್ಟಲುಗದಿಹುದು=ಬಿಟ್ಟು+ಅಲುಗದಿಹುದು, ಸಾಜವಂ=ಸಹಜವಾದದ್ದನ್ನು, ಲೋಕಸಂಸ್ಥಿತಿಗದನು=ಲೋಕಸಂಸ್ಥಿತಿಗೆ+ಅದನು.

ವಾಚ್ಯಾರ್ಥ: ನಿನ್ನ ಅವಗುಣಗಳನ್ನು ಸಹಜವೆಂದು ಕಡೆಗಣಿಸಿಬಿಡುತ್ತೀಯಾ? ಮೃಗಗಳು, ಕೀಟಗಳು ಎಂದಿಗೂ ಸಹಜ ಗುಣಗಳನ್ನು ಬಿಟ್ಟು ಬದುಕಲಾರವು. ಸಹಜವಾದದ್ದನ್ನು ಸರಿಯಾಗಿ ತಿದ್ದುತ್ತ ಜಗತ್ತಿನ ಕ್ಷೇಮಕ್ಕಾಗಿ ಹದಗೊಳಿಸಿ ಯೋಜನೆ ಮಾಡುವುದೆ ಮನುಷ್ಯನ ಹಿರಿಮೆ.

ADVERTISEMENT

ವಿವರಣೆ: ಒಂದು ಬಾರಿ ನಾನು ಹಿರಿಯರೊಬ್ಬರ ಮನೆಗೆ ಊಟಕ್ಕೆ ಹೋದಾಗ ಅವರು ತಮಾಷೆಯಾಗಿ ನನಗೆ ಕೇಳಿದರು, ‘ನೀವು ಹೇಗೆ ಊಟ ಮಾಡಬಯಸುತ್ತೀರಿ? ಪ್ರಾಣಿಗಳ ಹಾಗೆಯೋ ಅಥವಾ ಸಭ್ಯಗೃಹಸ್ಥರ ಹಾಗೆಯೋ?’ನಾನು ತಡಬಡಿಸಿ ಹೇಳಿದೆ, ‘ಸಭ್ಯಗೃಹಸ್ಥರ ಹಾಗೆ’. ಅವರು ನಕ್ಕು ಹೇಳಿದರು, ‘ಪ್ರಾಣಿಗಳು ಮತ್ತು ಪುಟ್ಟ ಮಕ್ಕಳು ತಮಗೆ ಬೇಕಾದ್ದಕ್ಕಿಂತ ಹೆಚ್ಚಾಗಿ ಎಂದೂ ತಿನ್ನುವುದಿಲ್ಲ. ಆದರೆ ಮನುಷ್ಯ ಹೊಟ್ಟೆ ತುಂಬಿದ ಮೇಲೂ ತಿನ್ನಬಲ್ಲ’.

ಹೌದಲ್ಲವೇ? ಪ್ರಾಣಿಗಳ ಮುಂದೆ ರಾಶಿ ಆಹಾರ ಹಾಕಿದರೂ ಹೊಟ್ಟೆ ತುಂಬಿದ ಮೇಲೆ ಒಂದು ಚೂರೂ ಹೆಚ್ಚಾಗಿ ತಿನ್ನುವುದಿಲ್ಲ. ಆದರೆ ನಾವು ರುಚಿಯಾಗಿದ್ದರೆ ಹೆಚ್ಚು ತಿಂದು ಅಜೀರ್ಣ ಮಾಡಿಕೊಳ್ಳುತ್ತೇವೆ. ಪ್ರಾಣಿಗಳು, ಕೀಟಗಳು ತಮ್ಮ ಸ್ವಭಾವದ ವಿರುದ್ಧ ಎಂದಿಗೂ ಹೋಗುವುದಿಲ್ಲ. ಅಷ್ಟು ಬಲಿಷ್ಠವಾದ ಆನೆ, ಎಂದಿಗೂ ಮಾಂಸ ತಿನ್ನುವುದಿಲ್ಲ, ಹುಲಿ ಹುಲ್ಲು ತಿನ್ನುವುದಿಲ್ಲ.

ಆದರೆ ಮನುಷ್ಯನಿಗೆ ತನ್ನದೇ ಆದ ಸ್ವಭಾವವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ, ತನಗೆ ಅನುಕೂಲವಾದಂತೆ ಬದಲಾಯಿಸುತ್ತಾನೆ. ತನ್ನ ಗುಣಗಳನ್ನು ಕಳೆದುಕೊಂಡು ಅವಗುಣಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ನಂತರ ಅವುಗಳಿಗೆ ದಾಸನಾಗಿ, ‘ಏನು ಮಾಡುವುದಕ್ಕಾಗುತ್ತದೆ, ನನ್ನ ಸ್ವಭಾವವೇ ಹೀಗೆ’ಎಂದು ಸಾಧಿಸಿಕೊಂಡು ತೃಪ್ತಿಪಡುತ್ತಾನೆ.

ತಂಬಾಕು ಕೆಟ್ಟದೆಂದು ಗೊತ್ತಿದೆ. ಆದರೆ ಅದರ ಅಭ್ಯಾಸ ಬಲವಾಗಿ ಅದನ್ನೇ ತನ್ನ ಶಕ್ತಿಯನ್ನಾಗಿ ಭ್ರಮಿಸುತ್ತಾನೆ. ‘ಏನನ್ನಾದರೂ ಬಿಟ್ಟೇನು, ತಂಬಾಕು ಬಿಡಲಾರೆ. ತಂಬಾಕು ಬಾಯಿಯಲ್ಲಿ ಇದ್ದಾಗ ನನ್ನ ತಲೆ ಚುರುಕಾಗಿ ಓಡುತ್ತದೆ’ಎನ್ನುತ್ತಾನೆ. ಸಿಗರೇಟು ಸೇದುವುದು ತನ್ನ ಅಂತಸ್ತಿಗೆ ಸರಿಯಾದದ್ದು, ಅದೊಂದು ಠೀವಿಯೆಂಬಂತೆ ವರ್ತಿಸುತ್ತಾನೆ. ಸ್ವಲ್ಪ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಧಿಸುತ್ತಲೇ ಅದಕ್ಕೆ ಅಡಿಯಾಳಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಾನೆ. ಇದನ್ನೇ ಕಗ್ಗ ವಿವರಿಸಿ ಹೇಳುತ್ತದೆ.

ನಮ್ಮ ಅವಗುಣಗಳನ್ನು ಸಹಜ ಎಂದು ಉಪೇಕ್ಷಿಸಬೇಡಿ. ಮೃಗ, ಕೀಟಗಳು ಸದಾ ಸಹಜ ಸ್ವಭಾವದಲ್ಲೇ ಇರುತ್ತವೆ. ಮನುಷ್ಯನಾದವನು ಸಮಾಜದ ಆರೋಗ್ಯಕ್ಕಾಗಿ, ಅದರ ವ್ಯವಸ್ಥಿತ ಇರುವಿಕೆಗಾಗಿ ತನ್ನ ಅವಗುಣಗಳನ್ನು ಮಾತ್ರವಲ್ಲ, ತನ್ನ ಸಹಜ ಸ್ವಭಾವವನ್ನೂ ತಿದ್ದಿಕೊಂಡು ಬದುಕಬೇಕು. ಇದೇ ನನ್ನ ಸ್ವಭಾವ, ಅದನ್ನು ಬದಲಾಯಿಸಲಾರೆ ಎಂದು ಹೆಮ್ಮೆಯಿಂದ ಬೀಗಿದರೆ, ವ್ಯವಸ್ಥೆ ಅವನ ತಲೆಯನ್ನು ತಟ್ಟಿ ಸರಿಮಾಡುತ್ತದೆ. ಮನಸ್ಸಿಗೆ ಬಂದ ಹಾಗೆ ಬದುಕಲು ಬಿಡುವುದಿಲ್ಲ.

ಹೀಗೆ ಪ್ರಪಂಚದ ನೆಮ್ಮದಿಯ ಬದುಕಿಗೆ ಅನುವಾಗುವಂತೆ ನಮ್ಮ ಸಹಜ ಸ್ವಭಾವಗಳನ್ನು, ಅವಗುಣಗಳನ್ನು ಸರಿಪಡಿಸಿಕೊಂಡು ಬದುಕುವುದೇ ಮನುಷ್ಯ ಜೀವನದ ಹಿರಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.