ADVERTISEMENT

ಭಾವನೆಗಳ ಸ್ಫುರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:30 IST
Last Updated 18 ಫೆಬ್ರುವರಿ 2020, 19:30 IST
   

ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಗರುಡನಾಗಿ ಹುಟ್ಟಿದ್ದ. ಅವನು ದೊಡ್ಡವನಾದಂತೆ ಬಹು ಬಲಿಷ್ಠವಾದ ಗರುಡನಾದ. ಅವನ ತಂದೆ-ತಾಯಿಗಳಿಗೆ ವಯಸ್ಸಾಗಿ ಎರಡೂ ಕಣ್ಣುಗಳು ಕಳೆದು ಹೋಗಿದ್ದವು. ಪೂರ್ತಿ ಕುರುಡರಾದ ತಂದೆ-ತಾಯಿಯನ್ನು ಬೋಧಿಸತ್ವ ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅವರಿಬ್ಬರನ್ನು ಬೆಟ್ಟಗಳ ಸಂದಿಯಲ್ಲಿದ್ದ ಗುಹೆಯಲ್ಲಿ ಇಟ್ಟು ತಾನು ಎಲ್ಲೆಲ್ಲೂ ಹಾರಾಡಿ ತರತರಹದ ಮಾಂಸ, ಹಣ್ಣುಗಳನ್ನು ತಂದುಕೊಟ್ಟು ಅತ್ಯಂತ ಕಾಳಜಿಯಿಂದ ಪೋಷಿಸುತ್ತಿದ್ದ.

ಒಂದು ದಿನ ಹೀಗೆಯೇ ಹಾರುತ್ತ, ಮಾಂಸವನ್ನು ಹುಡುಕುತ್ತ ವಾರಾಣಸಿಯ ಸ್ಮಶಾನದ ಕ್ಷೇತ್ರಕ್ಕೆ ಬಂದ. ಅವನ ದುರ್ದೈವಕ್ಕೆ ಅಂದು ಬೇಡನೊಬ್ಬ ಹಕ್ಕಿಗಳನ್ನು ಹಿಡಿಯಲು ಬಲೆಯನ್ನು ಹಾಸಿ ಕುಳಿತಿದ್ದ. ಯಾವುದೋ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡು ಹಾರುತ್ತಿದ್ದ ಗರುಡ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿತು. ಏನೆಲ್ಲ ಪ್ರಯತ್ನ ಮಾಡಿದರೂ, ಎಷ್ಟೇ ಶಕ್ತಿ ಹಾಕಿ ಎಳೆದರೂ ಬಲೆಯಿಂದ ಪಾರಾಗುವುದು ಸಾಧ್ಯವಾಗಲಿಲ್ಲ. ಈಗ ಗರುಡಕ್ಕೆ ಭಾರೀ ಆತಂಕವಾಯಿತು. ಅದಕ್ಕೆ ತನ್ನ ಬಗ್ಗೆ ಭಯವಿರಲಿಲ್ಲ. ಆದರೆ ತಾನು ಸತ್ತು ಹೋದರೆ ತನ್ನನ್ನೇ ನಂಬಿ, ತನಗಾಗಿಯೇ ಕಾದು ಕುಳಿತಿರುವ ಅಂಧ, ವೃದ್ಧ ಗರುಡ ದಂಪತಿಯ ಗತಿ ಏನು? ಅವುಗಳನ್ನು ನೋಡಿಕೊಳ್ಳುವವರು ಯಾರು? ಪಾಪ! ಅವೆರಡೂ ಆಹಾರಕ್ಕಾಗಿ ಕಾದು ಕಾದು ಏನೂ ದೊರೆಯದೆ ಭಯದಿಂದ, ಹಸಿವೆಯಿಂದ ಸೊರಗಿ ಸತ್ತು ಹೋಗುತ್ತವಲ್ಲ ಎಂದು ಚಿಂತಿಸಿ ಅಳತೊಡಗಿತು. ಆಳುತ್ತಲೇ ಜೋರಾಗಿ ಕೂಗತೊಡಗಿತು, ‘ಯಾರಾದರೂ ಮಹಾತ್ಮರು ನನ್ನ ಧ್ವನಿ ಕೇಳಿಸಿಕೊಂಡಿದ್ದರೆ ದಯವಿಟ್ಟು ಸಹಾಯಮಾಡಿ. ನನ್ನನ್ನು ಬಲೆಯಿಂದ ಬಿಡಿಸುವುದು ಬೇಡ. ಆದರೆ ಇಂಥದೊಂದು ಬೆಟ್ಟದ ಸಂದಿಯಲ್ಲಿರುವ ಗುಹೆಯಲ್ಲಿ ತನ್ನ ವೃದ್ಧ, ಅಂಧ ತಂದೆ-ತಾಯಿಯರಿದ್ದಾರೆ. ಅವರಿಗೆ ಯಾರಾದರೂ ಆಹಾರವನ್ನು ಕೊಟ್ಟು ಧೈರ್ಯ ತುಂಬಬಲ್ಲಿರಾ?’

ಈ ಗರುಡ ಪಕ್ಷಿ ಮಾನವರ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿ ಬೇಡನಿಗೆ ಆಶ್ಚರ್ಯವಾಯಿತು. ಆತ ಗರುಡನ ಹತ್ತಿರ ಬಂದು ಕೇಳಿದ, ‘ಗರುಡ, ಇದುವರೆಗೂ ಮನುಷ್ಯರ ಭಾಷೆಯಲ್ಲಿ ಮಾತನಾಡುವ ಹಕ್ಕಿಯನ್ನು ನಾನು ಕಂಡಿರಲಿಲ್ಲ. ಇನ್ನೊಂದು ವಿಷಯ, ನಾಲ್ಕು ಮೈಲಿ ಎತ್ತರದಿಂದ ನೆಲದ ಮೇಲಿದ್ದ ಸಣ್ಣ ಸೂಜಿಯನ್ನು ಗುರುತಿಸುವ ಚುರುಕಿನ ಕಣ್ಣಿರುವ ನೀನು ಈ ಬಲೆಯನ್ನು ನೋಡದೆ ಸಿಕ್ಕಿಕೊಂಡಿದ್ದು ಆಶ್ಚರ್ಯವಲ್ಲವೇ?’ ಗರುಡ ಹೇಳಿತು, ‘ಒಂದು ಜೀವದ ಬದುಕಿನ ಅವಧಿ ಮುಗಿಯುತ್ತ ಬಂದಾಗ ಅದರ ಕಣ್ಣುಗಳ, ಇತರ ಇಂದ್ರಿಯಗಳ ಶಕ್ತಿ ಕುಂದುತ್ತ ಹೋಗುತ್ತದೆ. ಹತ್ತಿರದ ವಸ್ತುವನ್ನು ಗಮನಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಬಹುಶಃ ನನಗೂ ಹಾಗೆಯೇ ಆಗಿರಬೇಕು. ಅದಲ್ಲದೆ ಯಾವುದೇ ಕಾರ್ಯವನ್ನು ಮಾಡುವಾಗ ಮತ್ತೊಂದನ್ನು ಚಿಂತಿಸುತ್ತಿದ್ದರೆ ಮನಸ್ಸಿನ ಏಕಾಗ್ರತೆ ಕಳೆದುಹೋಗಿ ಕಣ್ಣ ಮುಂದಿದ್ದ ವಸ್ತುವೂ ಸರಿಯಾಗಿ ಗೋಚರವಾಗುವುದಿಲ್ಲ. ಹಾಗೆಯೇ ನಾನು ತಂದೆ-ತಾಯಿಯ ಆಹಾರ ಸಂಗ್ರಹಣೆಯ ಚಿಂತೆಯಲ್ಲಿಯೇ ಮುಳುಗಿದ್ದಾಗ ಮುಂದಿದ್ದ ಬಲೆಯೂ ಕಾಣಲಿಲ್ಲ’.

ADVERTISEMENT

ಬೇಡನಿಗೆ ಗರುಡನ ಮಾತೃಪಿತೃ ವಾತ್ಸಲ್ಯದ ಬಗ್ಗೆ ಅಭಿಮಾನ ಉಕ್ಕಿತು. ಅದು ಅವನ ತಂದೆ-ತಾಯಿಯ ನೆನಪನ್ನು ಕೆದಕಿ ಕಣ್ಣೀರು ಒಸರುವಂತಾಯಿತು. ಆತ, ‘ಗರುಡ, ನೀನಿನ್ನೂ ಬದುಕಬೇಕು, ನಿನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಬದುಕಬೇಕು. ನಿನ್ನನ್ನು ಬಿಡಿಸುತ್ತೇನೆ. ಹಾರಿ ಹೋಗಿ ಅವರನ್ನು ಸೇರಿಕೋ’ ಎಂದು ಗರುಡನನ್ನು ಬಿಡಿಸಿದ. ಸಂತೋಷದಿಂದ ಗರುಡ ಒಳ್ಳೆಯ ಮಾಂಸವನ್ನು ಹುಡುಕಿ ತಂದೆ-ತಾಯಿಯತ್ತ ಹಾರಿಹೋಯಿತು.

ಒಂದು ಒಳ್ಳೆಯ ಭಾವನೆ ಸುತ್ತಲಿರುವವರ ಮನದಲ್ಲೂ ಒಳ್ಳೆಯ ಭಾವನೆಗಳು ಸ್ಫುರಿಸುವಂತೆ ಮಾಡುತ್ತದೆ. ಇದಲ್ಲದೆ ಏಕಕಾಲದಲ್ಲಿ ಬಹಳಷ್ಟು ವಿಚಾರಗಳನ್ನೂ ಮಾಡುತ್ತಿದ್ದರೆ ಯಾವುದರಲ್ಲೂ ಏಕಾಗ್ರತೆ ಇಲ್ಲದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.