ADVERTISEMENT

ಬೆರಗಿನ ಬೆಳಕು | ಮೂವರು ಮೂರ್ಖರು

ಡಾ. ಗುರುರಾಜ ಕರಜಗಿ
Published 18 ಜೂನ್ 2020, 19:31 IST
Last Updated 18 ಜೂನ್ 2020, 19:31 IST
   

ಅಪ್ಪಾಲೆ ತಿಪ್ಪಾಲೆ ತಿರುಗಿಬಿದ್ದವನೊಬ್ಬ |
ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ ||
ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ |
ಬೆಪ್ಪನಾರ್ ಮೂವರಲಿ ? – ಮಂಕುತಿಮ್ಮ || 303||

ಪದ-ಅರ್ಥ
ತಿರೆ=
ಭೂಮಿ, ತೂಕವಳೆಯೆ=ತೂಕ+ಅಳೆಯೆ, ಬೆಪ್ಪ=ಮೂರ್ಖ

ವಾಚ್ಯಾರ್ಥ: ಹಗಲು ರಾತ್ರಿ ದುಡಿದು, ಶ್ರಮಿಸಿ ತಲೆತಿರುಗಿ ಬಿದ್ದವನು ಒಬ್ಬ. ಸದಾ ಕನಸಿನ ಲೋಕದಲ್ಲೇ ವಿಹರಿಸುತ್ತ ವಾಸ್ತವತೆಯನ್ನು ಮರೆತವನು ಮತ್ತೊಬ್ಬ. ಯಾರದು ತಪ್ಪು, ಯಾರದು ಸರಿ ಎಂದು ಉಳಿದವರನ್ನು ಅಳೆಯುತ್ತ ಕುಳಿತವನು ಇನ್ನೊಬ್ಬ. ಈ ಮೂವರಲ್ಲಿ ಮೂರ್ಖರಾರು ?

ADVERTISEMENT

ವಿವರಣೆ: ಈ ಕಗ್ಗ ನಮ್ಮ ಪ್ರಪಂಚದಲ್ಲಿರುವ ಮೂರು ತರಹದ ಜನರ ಬಗ್ಗೆ ತಿಳಿಸುತ್ತದೆ.

ಮೊದಲನೆಯವನು ಸದಾ ಕಾರ್ಯ ಮಾಡುತ್ತಲೇ ಇರುವವನು. ಅವನು ಒಂದು ರೀತಿಯಲ್ಲಿ ಅಪ್ಪಾಲೆ-ತಿಪ್ಪಾಲೆ ತಿರುಗುವವನು. ಇದೊಂದು ಚೆಂದದ ಆಟ. ಇಬ್ಬರು ತಮ್ಮ ಚಾಚಿದ ಕೈಗಳನ್ನು ಎದುರು ಬದುರಾಗಿ ನಿಂತು, ಗಟ್ಟಿಯಾಗಿ ಹಿಡಿದುಕೊಂಡು, ಗರಗರನೇ ವೃತ್ತಾಕಾರವಾಗಿ ತಿರುಗುತ್ತಾರೆ. ಅದು ಮೊದ ಮೊದಲು ಸಂತೋಷಕೊಡುತ್ತದೆ. ಹೆಚ್ಚು ಹೊತ್ತು ಹಾಗೆಯೇ ತಿರುಗಿದರೆ ತಲೆಗೆ ಚಕ್ರ ಬಂದಂತಾಗಿ, ಸಮತೋಲನ ತಪ್ಪಿ ಕೆಳಗೆ ಬೀಳುತ್ತಾರೆ. ಮೊದಲಿಗೆ ಸಂತೋಷ ನೀಡಿದ ಕ್ರಿಯೆ ಕೊನೆಗೆ ತಲೆ ತಿರುಗಿಸುತ್ತದೆ. ಅದಲ್ಲದೇ ಇಬ್ಬರೂ ದಣಿದದ್ದು ಸತ್ಯ, ಮೇಲುಸಿರು ಬಿಡುತ್ತಿದ್ದಾರೆ. ಆದರೆ ತಾವು ಮೊದಲು ಎಲ್ಲಿದ್ದರೋ ಅಲ್ಲಿಯೇ ಇದ್ದಾರೆ. ಅಂದರೆ ಶ್ರಮಪಟ್ಟದ್ದು ಸತ್ಯ, ಅಲ್ಲಿಯೇ ಉಳಿದದ್ದೂ ಸತ್ಯ. ಕಗ್ಗ ಹೇಳುವ ಮೊದಲನೆ ವರ್ಗದ ಜನ ಹಗಲು ರಾತ್ರಿ ದುಡಿಯುತ್ತಾರೆ, ಮನೆ, ಮಕ್ಕಳು, ಶಾಂತಿ ಯಾವುದನ್ನು ಗಮನಿಸದೆ ದುಡಿಯುವುದೊಂದೇ ಗುರಿ. ಕೊನೆಗೆ ಶಕ್ತಿ ಕುಂದಿದಾಗ, ಯಾಕೆ ತಾನಷ್ಟು ದುಡಿದೆ? ಅದರಿಂದ ಆದ ಪ್ರಯೋಜನವೇನು? ಎಂದು ದುಃಖಿಸುತ್ತಾರೆ. ಆದರೆ ಆಯುಷ್ಯ ಕಳೆದುಹೋಗಿದೆ.

ಎರಡನೆಯವರು ಸದಾಕಾಲ ಕನಸು ಕಾಣುತ್ತಲೇ ಇರುವವರು. ಅವರಿಗೆ ವಾಸ್ತವದ ಚಿಂತೆಯೇ ಇಲ್ಲ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತ, ಗೋಪುರಗಳನ್ನು ಕಟ್ಟುತ್ತ ಬದುಕನ್ನು ಸವೆಸುತ್ತಾರೆ. ಬದುಕು ಮುಗಿಯ ಬಂದಾಗ ವಾಸ್ತವಕ್ಕೆ ಮರಳಿ, ಇಡೀ ಬದುಕು ಕನಸಿನಲ್ಲಿಯೇ ಕಳೆದುಹೋಗಿ, ಯಾವ ಸಾಧನೆಯನ್ನೂ ಮಾಡಲಾಗದ್ದನ್ನು ಕಂಡು ಮರುಗುತ್ತಾರೆ.

ಇನ್ನು ಮೂರನೆಯವನು, ಕಾರ್ಯವನ್ನು ಮಾಡಲಾರ, ಕನಸನ್ನೂ ಕಾಣಲಾರ. ಮೊದಲನೆಯವನು ದುಡಿತದಲ್ಲಿಯೇ ಸಂತೋಷ ಕಂಡರೆ, ಎರಡನೆಯವನು ಕನಸಿನ ಸಾಮ್ರಾಜ್ಯದಲ್ಲಾದರೂ ಸಂತೋಷಪಟ್ಟಿದ್ದಾನೆ. ಅಷ್ಟರಮಟ್ಟಿಗೆ ಅವರಿಗೆ ಆನಂದ ದಕ್ಕಿದೆ. ಆದರೆ ಈ ಮೂರನೆಯಾತ, ಉಳಿದವರನ್ನು ನೋಡುತ್ತ, ಅವರ ಸರಿ-ತಪ್ಪುಗಳನ್ನು ಕಂಡು, ಅವುಗಳನ್ನು ಗುಣಿಸಿ, ತೂಕಮಾಡಿ, ತಾನೇ ನ್ಯಾಯಾಧೀಶನಂತೆ ತೀರ್ಪು ಕೊಡುತ್ತ ಕುಳಿತುಕೊಳ್ಳುತ್ತಾನೆ. ಇವರೆಲ್ಲ ಟೀಕಾಕಾರರು. ಅವರಿಗೆ ತಮ್ಮ ಬದುಕಿನ ಪರಿವೆ ಇಲ್ಲ. ಅದರ ಬಗ್ಗೆ ಜವಾಬ್ದಾರಿಯೂ ಇಲ್ಲ. ಈ ಮೂವರಲ್ಲಿ ಮೂರ್ಖನಾರು ಎಂದು ಪ್ರಶ್ನೆ ಕೇಳುತ್ತದೆ ಕಗ್ಗ. ಒಂದು ದೃಷ್ಟಿಯಲ್ಲಿ ಮೂವರೂ ಬೆಪ್ಪರೇ. ಯಾವುದೂ ಅತಿಯಾಗಬಾರದು. ಅತಿ ಕಾರ್ಯ, ಅತಿ ಕನಸು, ಅತಿಯಾದ ಟೀಕೆ ಒಳ್ಳೆಯದಲ್ಲ. ಯಾವುದೂ ಅತಿಯಾದಾಗ ಮೂರ್ಖತನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.