ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ|
ಎತ್ತಲೋ ಸಖನೋರ್ವನಿಹನೆಂದು ನಂಬಿ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು|
ಭಕ್ತಿಯಂತೆಯೆ ನಮದು – ಮಂಕುತಿಮ್ಮ ||484||
ಪದ-ಅರ್ಥ: ಕತ್ತಲೆಯೊಳೇನನೋ= ಕತ್ತಲೆಯೊಳು+ ಏನನೋ, ಸಖನೋರ್ವನಿಹನೆಂದು= ಸಖನು+ ಓರ್ವನು (ಒಬ್ಬನು)+ ಇಹನೆಂದು (ಇದ್ದಾನೆಂದು), ಮೋಳಿಡುತ= ಊಳಿಡುತ್ತ, ಕೂಗುತ್ತ.
ವಾಚ್ಯಾರ್ಥ: ಕತ್ತಲೆಯಲ್ಲಿ ಏನನ್ನೋ ಕಂಡು ಹೆದರಿದ ನಾಯಿ, ತನ್ನ ಸ್ನೇಹಿತ ಹತ್ತಿರದಲ್ಲಿಯೇ ಎಲ್ಲೋ ಇದ್ದಾನೆ ಎಂದು ನಂಬಿಕೊಂಡು, ಕತ್ತನ್ನು ಮೇಲಕ್ಕೆತ್ತಿ, ಊಳಿಡುತ್ತ್ತಾ, ಬೊಗಳಿ ಹಾರಾಡುತ್ತದೆ, ಧೈರ್ಯ ತಂದುಕೊಳ್ಳುತ್ತದೆ. ನಮ್ಮ ಭಕ್ತಿಯೂ ಅದೇ ತೆರನಾದದ್ದು.
ವಿವರಣೆ: ಭಕ್ತರಲ್ಲಿ ನಾಲ್ಕು ತರಹ. 1. ಆರ್ತಭಕ್ತರು 2. ಅರ್ಥಾರ್ಥಿ ಭಕ್ತರು, 3. ಜಿಜ್ಞಾಸು ಭಕ್ತರು ಮತ್ತು 4. ಜ್ಞಾನಿ ಭಕ್ತರು. ಸದಾಕಾಲ ತಮ್ಮ ಕಷ್ಟ, ನಷ್ಟ, ಕಾರ್ಪಣ್ಯಗಳನ್ನು ಹೇಳಿಕೊಂಡು ಭಯದಿಂದ ಅವುಗಳ ನಿವಾರಣೆಗೆ ದೇವರ ಮೊರೆ ಹೋಗುವವರು ಆರ್ತಭಕ್ತರು. ಲೌಕಿಕ ಸುಖಕ್ಕಾಗಿ ಹಣಪ್ರಾಪ್ತಿಗಾಗಿ ದೇವರನ್ನು ಬೇಡುವವರು ಅರ್ಥಾರ್ಥಿಗಳು. ಜೀವನಗುರಿಯನ್ನು ಅರಸಲು ದೇವರನ್ನು ಬೇಡುವವರು ಜಿಜ್ಞಾಸುಗಳು. ಜೀವ-ಜಗತ್ತು-ಭಗವಂತ ಇವುಗಳ ಸಂಬಂಧಿತವಾದ ಜ್ಞಾನಕ್ಕಾಗಿ, ಸರ್ವವಸ್ತುಗಳಲ್ಲಿ ಭಗವಂತನನ್ನೇ ಕಾಣುತ್ತ ಪ್ರಾರ್ಥಿಸುವವರು ಜ್ಞಾನಿಗಳು. ಈ ನಾಲ್ಕು ಬಗೆಗಳಲ್ಲಿ ಮೊದಲನೆಯವರೆ ಹೆಚ್ಚಿನವರು. ಭಕ್ತಿ ಮೊದಲಿಗೆ ಭಯದಿಂದ ಪ್ರಾರಂಭವಾಗುತ್ತದೆ. ಈ ಅದ್ಭುತ ಪ್ರಪಂಚವನ್ನು, ವಿಶ್ವಜೀವನದಲ್ಲಿ ಬಿರುಮಳೆ, ಬಿರುಗಾಳಿ, ಬಿರುಬಿಸಿಲು, ಸಿಡಿಲು, ಭೂಕಂಪ, ಪ್ರಳಯದ ಪ್ರವಾಹ, ಸಾಂಕ್ರಾಮಿಕ ರೋಗಗಳಿಂದ ಜನರು ಹುಳಗಳಂತೆ ಸಾಯುವುದು, ಇವುಗಳನ್ನು ಕಂಡ ಮನುಷ್ಯ ತನ್ನ ಅಸಹಾಯಕತೆಯನ್ನು ಮನಗಂಡು ಭಯಭೀತನಾಗುತ್ತಾನೆ. ಯಾವ ಶಕ್ತಿ ಇದನ್ನು ಮಾಡುತ್ತಿದೆಯೋ, ಆ ಶಕ್ತಿಯನ್ನೇ ಪ್ರಾರ್ಥಿಸಿ ಆಪತ್ತುಗಳಿಂದ ಪಾರಾಗಲು ಯೋಚಿಸುತ್ತಾನೆ. ಆದ್ದರಿಂದ ನಾವು ಭಕ್ತಿ ಎನ್ನುವ ವಿಷಯದಲ್ಲಿ ಭಯದ ಪಾತ್ರವೆ ದೊಡ್ಡದು. ನಮ್ಮ ಬಹುಮಂದಿಯ ದೈವಭಕ್ತಿ ಕೇವಲ ದೈವಭೀತಿಯೇ. ಅದಕ್ಕಾಗಿಯೇ ಜನರು ದೇವರೊಂದಿಗೆ ವ್ಯಾಪಾರಕ್ಕಿಳಿಯುತ್ತಾರೆ.
‘ದೇವರೆ, ನನ್ನ ಮಗನಿಗೆ ಮೆಡಿಕಲ್ ಸೀಟು ಸಿಕ್ಕಿದರೆ ನಿನಗೆ ಬೆಳ್ಳಿಯ ತೊಟ್ಟಿಲು ಕೊಡಿಸುತ್ತೇನೆ’. ‘ನನ್ನ ಮಗ ಡ್ರಗ್ ಹಗರಣದಿಂದ ಪಾರಾಗಿಬಂದರೆ ಸರ್ವಸೇವೆ ಮಾಡುತ್ತೇನೆ’. ‘ನಾನೀಗ ಸಿಕ್ಕುಹಾಕಿಕೊಂಡಿರುವ ಅತ್ಯಾಚಾರದ ಪ್ರಕರಣದಿಂದ ಸುಸೂತ್ರವಾಗಿ ಹೊರಗೆ ಬಂದರೆ ನಿನಗೊಂದು ದೇವಸ್ಥಾನ ಕಟ್ಟಿಸುತ್ತೇನೆ’. ಇದು ಮುಯ್ಯಿಗೆ ಮುಯ್ಯಿ. ಸರಕಿಗೆ ಪ್ರತಿಸರಕು, ಬಹುಮಂದಿಯ ಭಕ್ತಿ. ಒಬ್ಬ ದೇವರಿಂದ ಪ್ರತಿಫಲ ದೊರಕದಿದ್ದರೆ ಮತ್ತೊಬ್ಬ ದೇವರ ಮೊರೆ. ಇದು ಭೀತಿಮೂಲವಾದ ಭಕ್ತಿ. ದೇವರು ಎಲ್ಲಿ ತೊಂದರೆ ಮಾಡಿಯಾನೋ ಎಂದು ಹೆದರಿ ಮಾಡುವ ಕ್ರಿಯೆ. ಕಗ್ಗ ಈ ಭೀತಿ ಮೂಲವಾದ ಭಕ್ತಿಯನ್ನು ಸುಂದರವಾದ ಉಪಮೆಯೊಂದಿಗೆ ತಿಳಿಸುತ್ತದೆ. ದಟ್ಟ ಗಾಢಾಂಧಕಾರದ ರಾತ್ರಿ. ಮಲಗಿದ್ದ ನಾಯಿಗೆ ಏನೋ ಅಲುಗಾಡಿದಂತೆ ಕಂಡಿತು. ಭಯವಾಯಿತು. ಜೊತೆಗಾರರು ಯಾರೂ ಹತ್ತಿರದಲ್ಲಿಲ್ಲ. ಪಕ್ಕದ ಬೀದಿಯಲ್ಲಾದರೂ ಸ್ನೇಹಿತನೊಬ್ಬನಿರಬಹುದೆಂದು ನಂಬಿ, ಕತ್ತೆತ್ತಿ ಊಳಿಟ್ಟು, ಬೊಗಳಿ ಹಾರಾಡುವುದು. ಹತ್ತಿರದ ಬೀದಿಯ ನಾಯಿಯ ಮರುಧ್ವನಿ ಬಂದರೆ ಅದಕ್ಕೆ ಧೈರ್ಯ. ಅದು ಕೂಗುವುದು ಮತ್ತೊಬ್ಬರನ್ನು ಎಚ್ಚರಿಸಲಿಕ್ಕಲ್ಲ. ತನ್ನ ಭಯ ಕಳೆದುಕೊಳ್ಳಲು! ನಮ್ಮ ಭಕ್ತಿಯೂ ಹಾಗೆಯೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.