ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಒಂದೇ ಕಾಲಿನ ನಡಿಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಒಂದು ದಿನವೌಂತಣಕೆ, ಉಪವಾಸಕಿನ್ನೊಂದು |
ಸಂದಣಿಯ ದಿನವೊಂದು, ಬಿಡುವು ದಿನವೊಂದು
ಹೊಂದರ‍್ದೊಡುಭಯಮುಂ ಜೀವಕದು ಸುಖಚಲನ
ಒಂದು ಕಾಲ್ನಡೆ ಸುಖವೆ ? – ಮಂಕುತಿಮ್ಮ || 769 ಪದ-ಅರ್ಥ: ದಿನವೌತಣಕೆ=ದಿನ+ಔತಣಕೆ, ಉಪವಾಸಕಿನ್ನೊಂದು=ಉಪವಾಸಕೆ+ಇನ್ನೊಂದು, ಸಂದಣಿಯ=ಒತ್ತಡದ, ಹೊಂದರ‍್ದೊಡುಭಯಮುಂ=ಹೊಂದರ‍್ದೊಡೆ(ಹೊಂದಿದರೆ)+
ಉಭಯಮುಂ(ಎರಡನ್ನೂ), ಕಾಲ್ನಡೆ=ಕಾಲುನಡೆ.

ವಾಚ್ಯಾರ್ಥ: ಒಂದು ದಿನ ಔತಣದ ಸಂಭ್ರಮ, ಒಂದು ದಿನ ಉಪವಾಸ. ಒಂದು ಒತ್ತಡದ ದಿನ ಮತ್ತೊಂದು ಬಿಡುವಿನ ದಿನ. ಹೀಗೆ
ಎರಡೂ ಹೊಂದಿಕೊಂಡಾಗಲೇ ಜೀವಕ್ಕೆ ಸುಖ. ಒಂದೇ ಕಾಲಿನ ಮೇಲೆ ನಡೆಯುವುದು ಸುಲಭವೇ, ಸುಖವೇ?
ವಿವರಣೆ: ಬದುಕೊಂದು ತೆರಪಿಲ್ಲದ ಜೋಕಾಲಿ. ಮೇಲೆ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಕೆಳಗೆ ಬಂದಿರುತ್ತದೆ. ಕೆಳಗೆ ಬಂತು ಎಂದು ನೋಡುವಾಗ ಅದು ಮೇಲಿದೆ. ಇದು ವ್ಯಕ್ತಿಗೂ ಸತ್ಯ, ಜಗತ್ತಿಗೂ ಸತ್ಯ, ರೋಮ್ ಆಧಿಪತ್ಯ ಶಕ್ತಿಯ, ಖ್ಯಾತಿಯ ಉತ್ತುಂಗಕ್ಕೇರಿತು. ಅದರೊಂದಿಗೆ ಅದನ್ನು ನಡೆಸುವವರ ಅಮಲೂ ಏರಿತು. ಒಂದೇ ದಶಕದಲ್ಲಿ ನೆಲಕ್ಕೆ ಬಿದ್ದು ನಿರ್ನಾಮವಾಯಿತು. ಮತ್ತೊಂದು ಸಾಮ್ರಾಜ್ಯ ಎದ್ದು ನಿಂತಿತು. ತನ್ನ ಅವಧಿ ಮುಗಿದ ಮೇಲೆ ಮರೆಯಾಯಿತು. ಹೀಗೆ ತೆರೆ ಏಳುತ್ತದೆ, ಮೇಲೇರಿ ಮತ್ತೆ ಇಳಿಯುತ್ತದೆ. ಮೇಲೇರಿದಾಗ ಸಂತೋಷದ ಔತಣವಿದ್ದಂತೆ. ಕೆಳಗೆ ಇಳಿದಾಗ ಉಪವಾಸದ ಮನಸ್ಥಿತಿ. ಈಗ ಅಮೇರಿಕೆಯ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರ ಬದುಕನ್ನು ಗಮನಿಸಿದರೆ ಅವರು ಹೇಗೆ ಔತಣ ಮತ್ತು ಉಪವಾಸದ ದಿನಗಳನ್ನು ಸಮತ್ವದಿಂದ ನೋಡಿ, ಕೊನೆಗೆ ಈ ಎತ್ತರಕ್ಕೇರಿದರು ಎಂಬುದು ತಿಳಿದೀತು. ಅತ್ಯಂತ ಕಿರಿಯ ವಯಸ್ಸಿಗೇ ರಾಜಕೀಯ ಪ್ರವೇಶಿಸಿದ ಬೈಡೆನ್ ಕ್ಷಿಪ್ರಗತಿಯಲ್ಲಿ ಮೇಲೇರಿ 1972 ರಲ್ಲಿ ಅತ್ಯಂತ ಪ್ರಬಲ ರಿಪಬ್ಲಿಕನ್ ಅಭ್ಯರ್ಥಿಯನ್ನು ಸೋಲಿಸಿ ಕೇವಲ ಮೂವತ್ತು ವರ್ಷಕ್ಕೇ ಸೆನೆಟರ್ ಆದರು. ಆಗ ಎಲ್ಲರೂ ಬೈಡೆನ್ ನಲವತ್ತು ವರ್ಷವಾಗುವುದರೊಳಗೆ ರಾಷ್ಟ್ರಪತಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆಗ ಅವರು ಕಂಡದ್ದು ಸಂಭ್ರಮದ ಶಿಖರ. ಆದರೆ ಮುಂದೆರಡು ವಾರದಲ್ಲಿಯೇ ಅವರ ಪತ್ನಿ ಮತ್ತು ಪುತ್ರಿ ಅಪಘಾತಕ್ಕೆ ಬಲಿಯಾಗಿ ಅವರ ಇಬ್ಬರು ಪುತ್ರರು ತೀವ್ರ ಗಾಯಗೊಂಡರು. ಅದು ಬೈಡೆನ್‌ರನ್ನು ನಿರಾಸೆಯ ಕೂಪಕ್ಕೆ ತಳ್ಳಿತು. ಅದರಿಂದ ಪಾರಾಗಿ ಹೊರಬಂದ ಬೈಡೆನ್ ಮುಂದೆ 2004 ರ ವರೆಗೆ ಸೋಲನ್ನೇ ಕಾಣಲಿಲ್ಲ. 1987 ರಲ್ಲಿಯೇ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ. ಖಂಡಿತ ಆಯ್ಕೆಯಾಗುತ್ತಾರೆ ಎಂಬ ಭರವಸೆಯ ಅಲೆಯಲ್ಲಿ ಸಂತೋಷದಿಂದ ತೇಲಿದರು. ಆದರೆ ಯಾವುದೋ ಉತ್ಸಾಹದಲ್ಲಿ ಕೃತಿಚೌರ್ಯ ಮತ್ತಿತರ ವಿಷಯಗಳ ಮೇಲೆ ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಮುಖಭಂಗ, ಅಪಮಾನ ಕುದಿದು ಸಂಕಟಪಟ್ಟರು ಬೈಡೆನ್. ಎಲ್ಲ ಏಳು ಬೀಳುಗಳ ನಡುವೆ ಜೀವನೋತ್ಸಾಹವನ್ನು ಬಿಡದೆ ಹೋರಾಡಿ ಕೊನೆಗೆ ಉತ್ತುಂಗವನ್ನು ತಲುಪಿದರು. ಕಗ್ಗ ಈ ಮಾತನ್ನು ಹೇಳುತ್ತದೆ.

ಒಂದು ದಿನ ಸಂತೋಷದ ಔತಣ. ಮತ್ತೊಂದು ದಿನ ವೈಫಲ್ಯದ ಉಪವಾಸ. ಒಂದು ದಿನ ಬಿಡುವಿಲ್ಲದ ಜವಾಬ್ದಾರಿ, ಮತ್ತೊಂದು ದಿನ ಯಾವ ಕೆಲಸವೂ ಇಲ್ಲದ ವಿರಾಮ. ಇವೆರಡೂ ಸೇರಿ ಜೀವನದ ಚಲನೆಗೆ ಸುಖ ಕೊಡುತ್ತವೆ. ದು:ಖವೇ ಇಲ್ಲದಿದ್ದರೆ ಸುಖಕ್ಕೇನು ಅರ್ಥ? ಬರೀ ದುಃಖವೇ ಜೀವನವಾದರೆ ಬದುಕಿಗೇನು ಅರ್ಥ? ಯಾವುದೊಂದು ಇಲ್ಲದಿದ್ದರೆ, ಅದು ಒಂದೇ ಕಾಲಿನ ನಡಿಗೆ ಇದ್ದಂತೆ. ಅದು ಸುಖವೂ ಅಲ್ಲ, ಸೌಭಾಗ್ಯವೂ ಅಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.