ADVERTISEMENT

ನಾವು ಇರುವುದೇ ಮಾಯೆಯಲ್ಲಿ

ಡಾ. ಗುರುರಾಜ ಕರಜಗಿ
Published 30 ಡಿಸೆಂಬರ್ 2018, 19:52 IST
Last Updated 30 ಡಿಸೆಂಬರ್ 2018, 19:52 IST

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ - ಮಂಕುತಿಮ್ಮ || 74 ||

ಪದ-ಅರ್ಥ: ಸುಮ್ಮನೊಬ್ಬಂಟಿಯೆಂತಿಹುದು=ಸುಮ್ಮನೆ+ಒಬ್ಬಂಟಿ+ಎಂತಿಹುದು(ಹೇಗಿರುವುದು), ಹೊಮ್ಮುವೆನು=ಹಬ್ಬುವೆನು, ಬೊಮ್ಮನೆಳಸಿದನಂತೆ-ಬೊಮ್ಮ(ಬ್ರಹ್ಮ)+ಎಳಸಿದನಂತೆ(ಆಸೆ ಪಟ್ಟನಂತೆ). ಆಯೆಳಸಿಕೆ=ಆ+ಎಳಸಿಕೆ(ಆಸೆ,ಅಪೇಕ್ಷೆ), ನಮ್ಮಿರವು=ನಮ್ಮ+ಇರವು

ವಾಚ್ಯಾರ್ಥ: ಸುಮ್ಮನೆ ಒಬ್ಬನೇ ಹೇಗಿರುವುದು.? ಬೇಸರವಾಗುತ್ತದೆ. ಅದ್ದರಿಂದ ಕೋಟಿರೂಪದಲ್ಲಿ ಹರಡುತ್ತೇನೆ ಎಂದು ಬ್ರಹ್ಮ ಬಯಸಿದನಂತೆ. ಅವನ ಅಪೇಕ್ಷೆಯೇ ಮಾಯೆ. ನಮ್ಮ ಎಲ್ಲರ ಇರವು ಈ ಮಾಯೆಯಲ್ಲಿಯೇ.

ADVERTISEMENT

ವಿವರಣೆ: ಇದೊಂದು ಮಹತ್ತರವಾದ ಆಧ್ಯಾತ್ಮಿಕ ಸತ್ಯವನ್ನು ಅತ್ಯಂತ ಸರಳವಾಗಿ ಕಂಡರಿಸಿದ ಕಗ್ಗ.
‘ಮಮೈವಾಂಶೋ ಜೀವಲೋಕೇ ಜೀವಭೂತ: ಸನಾತನ: ’

ನನ್ನ (ಬ್ರಹ್ಮದ) ಒಂದಂಶವೇ ಪ್ರಾಣಿ ಪ್ರಪಂಚದಲ್ಲಿ ಜೀವವಾಗಿರುವ ಶಾಶ್ವತ ಸತ್ಯ. ಬ್ರಹ್ಮ ಏಕೆ ಜೀವವಾಗುತ್ತದೆ? ಅದರ ಉದ್ದೇಶವೇನು? ಅದರ ಅಪೇಕ್ಷೆ ಏನು? ಬೃಹದಾರಣ್ಯಕ ಉಪನಿಷತ್ತು ಹೇಳುವುದು ಹೀಗೆ –
ಸವೈನೈವ ರೇಮೇ | ಏಕಾಕಿ ನ ರಮತೇ |
ಸ ದ್ವಿತೀಯ ಮೈಚ್ಛತ್ ||

ಬ್ರಹ್ಮ ಏಕಾಕಿಯಾಗಿತ್ತು ಆದರೆ ಸಂತೋಷಪಡಲಿಲ್ಲ. ಒಬ್ಬಂಟಿಯಾದವನಿಗೆ ಸಂತೋಷವಿಲ್ಲ. ಅದಕ್ಕೆ ಮತ್ತೊಬ್ಬನನ್ನು ಜೊತೆಗಾರನನ್ನಾಗಿ ಬಯಸಿತು. ಆ ಜೊತೆಗಾರನೇ ಜಗತ್ತು. ತೈತ್ತರೀಯ ಉಪನಿಷತ್ತು ಹೇಳುತ್ತದೆ –
ಸೋsಕಾಮಯತ | ಬಹು ಸ್ಯಾಮ್ ಪ್ರಜಾಯೇಯೇತಿ | ..... ತದಾssತ್ಮಾನಂ ಸ್ವಯಮಕುರುತ |
ಬ್ರಹ್ಮವು ಒಂದೇ ಆಗಿದ್ದು ‘ನಾನು ಅನೇಕವಾಗಿ ಹುಟ್ಟುತ್ತೇನೆ’ ಎಂದು ಬಯಸಿತು. ಆಗ ತನ್ನನ್ನು ತಾನೇ ಬಹುರೂಪದ ಪ್ರಪಂಚವನ್ನಾಗಿ ಮಾಡಿಕೊಂಡಿತು. ಈ ಪ್ರಪಂಚ ಅವನ ಲೀಲೆ. ಲೀಲೆಯೆಂದರೆ ಮಾಯೆ, ಆಟ.

‘ಲೋಕವತ್ ತು ಲೀಲಾಕೈವಲ್ಯಮ್’ - ಬ್ರಹ್ಮಸೂತ್ರ

ಅಂದರೆ ಭಗವಂತ ಯಾವುದೇ ಪ್ರಯೋಜನವನ್ನು ಅಪೇಕ್ಷೆ ಮಾಡದೆ, ಕೇವಲ ತನ್ನ ಸ್ವತಂತ್ರವಾದ ಲೀಲೆಗೋಸ್ಕರ ಈ ಜಗತ್ತನ್ನು ರಚಿಸಿದ.

ಪುಣ್ಯಾತ್ಮ ಜಗತ್ತನ್ನೇನೋ ಸೃಷ್ಟಿಸಿದ. ಅದರಲ್ಲಿ ನಮ್ಮನ್ನೆಲ್ಲ ಭಾಗಿಗಳಾಗುವಂತೆ ಮಾಡಿದ. ಅವನ ಲೀಲೆಯಲ್ಲಿ ನಾವೂ ಪಾತ್ರಧಾರಿಗಳು. ಅದನ್ನೇ ಕಗ್ಗ ನಮ್ಮಿರವು ಮಾಯೆಯಲ್ಲಿ ಎನ್ನುತ್ತದೆ. ನಾವು ಪಾತ್ರಧಾರಿಗಳಾದರೂ ನಮ್ಮ ಪಾತ್ರದ ವಿವರ, ವೇಷಭೂಷಣ, ಸಂಭಾಷಣೆ, ಆರಂಭ, ಅಂತ್ಯ ಯಾವುದೂ ನಮ್ಮ ಕೈಯಲ್ಲಿ ಇಲ್ಲ. ಈ ಬ್ರಹನ್ನಾಟಕದ ಸೂತ್ರಧಾರನೂ ಅವನೇ, ನಿರ್ದೇಶಕನೂ ಅವನೇ, ಕೊನೆಗೆ ಪ್ರೇಕ್ಷಕನೂ, ತೀರ್ಪುಗಾರನೂ ಅವನೇ. ನಾವು ಇರುವಂತೆ, ಇರಬೇಕಾದ ಹಾಗೆ ಇದ್ದು ಸಂತೋಷಪಡುವುದೇ ನಮ್ಮ ಧರ್ಮ, ಕರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.