ADVERTISEMENT

ಮನುಷ್ಯರೋ ರಾಕ್ಷಸರೋ ?

ಡಾ. ಗುರುರಾಜ ಕರಜಗಿ
Published 15 ಜುಲೈ 2018, 19:43 IST
Last Updated 15 ಜುಲೈ 2018, 19:43 IST

ಮಾನವರೋ ದಾನವರೊ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ?||
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ|
ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ ||12||

ಶೋಣಿತವನೆರೆಯುವರು = ಶೋಣಿತವನು (ರಕ್ತವನ್ನು)+ಎರೆಯುವರು, ಬಾಷ್ಪ=ನೀರು, ಸಲುವುದಿರೆ=ಸಲ್ಲಿಸಬೇಕಾದಾಗ, ಸೌನಿಕನ = ಕಟುಕನನಾವೇನು ಮನುಷ್ಯರೋ, ರಾಕ್ಷಸರೋ? ಭೂಮಾತೆಯನ್ನು ತೃಪ್ತಿಗೊಳಿಸಲು ನೀರು ಸಲ್ಲಬೇಕಾದಾಗ ರಕ್ತವನ್ನು ಎರೆಯುತ್ತಿದ್ದೇವೆ. ಏನು ದ್ವೇಷ? ಅದರಿಂದ ಉಂಟಾಗುವ ಧಗೆ ಎಂಥಹದು? ಅದು ಹುಟ್ಟುಹಾಕುವ, ಕಣ್ಣು ಕಟ್ಟುವ ಹೊಗೆ ಎಷ್ಟು? ಈ ಭೂಮಿ ಕಟುಕನಂಗಡಿಯ ಮಾಂಸ ಕತ್ತರಿಸುವ ಕಟ್ಟೆಯೇನು?

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಭೀಮಸೇನ ಕೃಷ್ಣನಿಗೆ ಹೇಳುತ್ತಾನೆ, ‘ಕೃಷ್ಣ, ಯುದ್ಧ ಮುಗಿಯುವುದರಲ್ಲಿ ಈ ನೆಲ ಅದೆಷ್ಟು ರಕ್ತವನ್ನು ಕುಡಿದಿರುತ್ತದೆಂದರೆ ಮುಂದೆ ಶತಮಾನಗಳ ಕಾಲ ನೀರನ್ನು ಬೇಡುವುದಿಲ್ಲ’. ಅಂದು ಭೀಮಸೇನ ಹೇಳಿದ ಮಾತನ್ನು ಇಂದಿಗೂ ಕ್ರೌರ್ಯ ತುಂಬಿದ ಮನಸ್ಸುಗಳು ನಡೆಸಿಕೊಂಡು ಬಂದಿವೆ. ಮೊದಲು ಕಂಡರಿಯದ, ಕೇಳಲರಿಯದ ಹಿಂಸೆಯ ಪ್ರದರ್ಶನ ನಡೆಯುತ್ತಿದೆಯಲ್ಲವೇ? ಹಣಕ್ಕಾಗಿ ತಾಯಿಯನ್ನೇ ಕೊಲ್ಲುವ ಮಕ್ಕಳಿದ್ದಾರೆ; ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸುವ ಹೆಂಡತಿ, ಹೆಂಡತಿಯ ನಾಶಕ್ಕಾಗಿ ಯೋಜಿಸುವ ಗಂಡ; ಆಸ್ತಿಗಾಗಿ, ದ್ವೇಷಕ್ಕಾಗಿ ಪರಸ್ಪರ ಅಸ್ತ್ರ ಹಿಡಿದಿರುವ ಅಣ್ಣ-ತಮ್ಮಂದಿರು, ತಮ್ಮ ಮತವೇ ಶ್ರೇಷ್ಠ ಎಂದುಕೊಂಡು ಬೇರೆಯವರ ನಾಶಕ್ಕಾಗಿ ದ್ವೇಷದ ಬೆಂಕಿ ಉಗುಳುವ ಧಾರ್ಮಿಕ (?) ಸಂಘಟನೆಗಳು; ದೇಶ-ದೇಶಗಳ ನಡುವೆ ಅಪನಂಬಿಕೆಯ ಹೊಗೆ ಇವೆಲ್ಲ ಏನನ್ನು ಸಾರುತ್ತಿವೆ? ಸಹಸ್ರಮಾನಗಳಿಂದ ನಾಗರಿಕತೆಯನ್ನು, ಸಜ್ಜನಿಕೆಯನ್ನು ಬೆಳೆಸಬೇಕಾದ ಮನುಷ್ಯ ವರ್ಗ ಭೂಮಾತೆಗೆ ಕೃತಜ್ಞತೆಯಿಂದ ಪ್ರೀತಿಯ ಬಾಷ್ಪವನ್ನು ಧಾರೆ ಎರೆಯುವ ಬದಲು ರಕ್ತವನ್ನು ಸುರಿದು ಅದನ್ನೊಂದು ಕಟುಕನ ಕಟ್ಟೆಯನ್ನಾಗಿಸಿದ್ದಾರೆ ಎಂದು ಕೊರಗುತ್ತಾರೆ ಡಿ.ವಿ.ಜಿ.

ADVERTISEMENT

ನಾವು ಇಂದು ಬಾಹ್ಯ ಗೊಂದಲ ಹಾಗೂ ಆಂತರಿಕ ಆತಂಕಗಳ ನಡುವೆ ಬದುಕುತ್ತಿದ್ದೇವೆ. ಹೊರಜಗತ್ತಿನ ತೀವ್ರ ಸ್ಪರ್ಧೆ ಮತ್ತು ಭಿನ್ನಾಭಿಪ್ರಾಯಗಳಲ್ಲಿ ನಮ್ಮ ಜೀವನ ಪ್ರತಿಕ್ಷಣ ಹೊಸ ಸಂದರ್ಭಗಳು ಹಾಗೂ ಜನರೊಂದಿಗೆ ಹೋರಾಟ ಮಾಡುವುದರಲ್ಲೇ ಕಳೆದುಹೋಗುತ್ತಿದೆ. ನಾವು ನಮ್ಮ ಅನಿಯಂತ್ರಿತ ಅಪೇಕ್ಷೆಗಳು ಮತ್ತು ಅಶಿಸ್ತಿನ ಚಿಂತನೆಗಳಿಗೆ ದಾಸರಾಗಿರುವುದರಿಂದ ಘರ್ಷಣೆ ಅನಿವಾರ್ಯವಾಗುತ್ತಿದೆ. ಈ ಘರ್ಷಣೆಗಳನ್ನು ತಡೆಯಲು ಸಮಾಜಜೀವನದಲ್ಲಿ ಎರಡೇ ಉಪಾಯಗಳು. ಭಿನ್ನಾಭಿಪ್ರಾಯ ಬಂದಾಗ ತಾಳ್ಮೆ ಮತ್ತು ಒಮ್ಮತ ಬಂದಾಗ ಪ್ರೀತಿಯ ಸಹಕಾರ. ಇವೆರಡರಿಂದ ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿ. ಆದಾಗದೇ ಸ್ವಪ್ರತಿಷ್ಠೆಯ ಅಹಂಕಾರ ಮೊರೆತಾಗ ಹಿಂಸೆ ತಲೆ ಎತ್ತುತ್ತದೆ, ಸಸ್ಯಶ್ಯಾಮಲೆಯಾಗಬೇಕಿದ್ದ ಭೂತಾಯಿ ರಕ್ತರಂಜಿತಳಾಗುತ್ತಾಳೆ, ಘೋರಳಾಗುತ್ತಾಳೆ, ಕಟುಕನ ಕಟ್ಟೆಯಾಗುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.