ADVERTISEMENT

ಬೆರಗಿನ ಬೆಳಕು: ಸ್ವಪ್ನ-ಜಾಗ್ರತ ಅವಸ್ಥೆಗಳು

ಬೆರಗಿನ ಬೆಳಕು

ಡಾ. ಗುರುರಾಜ ಕರಜಗಿ
Published 28 ಮೇ 2023, 21:56 IST
Last Updated 28 ಮೇ 2023, 21:56 IST
ಬೆರಗಿನ ಬೆಳಕು
ಬೆರಗಿನ ಬೆಳಕು   

ಸ್ವಪ್ನಲೋಕವ ಜಾಗ್ರತಂ ಸುಳ್ಳೆನುವನಲ್ತೆ? |
ಸುಪ್ತಂಗೆ ಜಾಗ್ರತನ ಲೋಕಮುಂ ಸುಳ್ಳೇ ||
ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ - |
ಗುಪ್ತಾತ್ಮನಿಹುದು ದಿಟ – ಮಂಕುತಿಮ್ಮ || 893 ||

ಪದ-ಅರ್ಥ: ಜಾಗ್ರತಂ=ಎಚ್ಚರಿರುವವನು, ಸುಳ್ಳೆನುವನಲ್ತೆ=ಸುಳ್ಳು+ಎನ್ನುವನು+ಅಲ್ತೆ(ಅಲ್ಲವೇ), ಸುಪ್ತಂಗೆ=ಮಲಗಿದವನಿಗೆ, ಜಾಗ್ರತ್ಸುಪ್ತಿಗಳ=ಜಾಗ್ರತ್+ಸುಪ್ತಿಗಳ, ನಿರ್ಲಿಪ್ತ ಗುಪ್ತಾತ್ಮನಿಹುದು=ನಿರ್ಲಿಪ್ತ+ಗುಪ್ತಾತ್ಮನು+ಇಹುದು(ಇರುವುಂ), ದಿಟ=ಸತ್ಯ.

ವಾಚ್ಯಾರ್ಥ: ಎಚ್ಚರವಾಗಿದ್ದವನು ಸ್ವಪ್ನದಲ್ಲಿ ಕಂಡದ್ದನ್ನು ಸುಳ್ಳೆನ್ನುವನವಲ್ಲವೆ? ಅದೇ ರೀತಿ ನಿದ್ರೆ ಹೋದವನಿಗೆ ಎಚ್ಚರದ ಪ್ರಪಂಚವೂ ಸುಳ್ಳೇ. ಈ ಸ್ವಪ್ನ ಮತ್ತು ಜಾಗ್ರತಗಳ ಹಿಂದೆ ನಿರ್ಲಿಪ್ತವಾದ, ಗುಪ್ತವಾದ ಆತ್ಮವಿರುವುದು ಸತ್ಯ.

ADVERTISEMENT

ವಿವರಣೆ: ಮಾಂಡೂಕ್ಯೋಪನಿಷತ್ತು ಮೂರು ಅವಸ್ಥೆಗಳನ್ನು ಗುರುತಿಸುತ್ತದೆ. ಅವು ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ. ಇವುಗಳನ್ನು ಅವಸ್ಥಾತ್ರಯಗಳೆಂದು ಕರೆಯುತ್ತಾರೆ. ಗೌಡಪಾದರು ತಮ್ಮ ಕಾರಿಕೆಗಳಲ್ಲಿ ಅವಸ್ಥಾತ್ರಯಗಳ ಬಗ್ಗೆ ವಿಶಿಷ್ಟವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಕಗ್ಗ ಆ ವಿಶ್ಲೇಷಣೆಯ ಸಂಕ್ಷಿಪ್ತರೂಪದಂತಿದೆ. ಜಾಗ್ರತ್ ಅವಸ್ಥೆಯಲ್ಲಿ ಆತ್ಮ ಬಾಹ್ಯಪ್ರಜ್ಞೆಯನ್ನು ಹೊಂದಿ ಸ್ಥೂಲ ವಿಷಯಗಳನ್ನು ಅನುಭವಿಸುತ್ತದೆ. ಸ್ವಪ್ನಾವಸ್ಥೆಯಲ್ಲಿ ಅಂತಃಪ್ರಜ್ಞವಾಗಿ ಸೂಕ್ಷ್ಮ ವಿಷಯಗಳನ್ನು ಅರಿಯುತ್ತದೆ . ನಮಗೆ ತಿಳಿದಿರುವಂತೆ ಸ್ವಪ್ನದಲ್ಲಿ ಕಾಣುವ ದೃಶ್ಯಗಳೆಲ್ಲ ಮಿಥ್ಯೆ. ಅವು ನಿಜವಾಗಿದ್ದರೆ ಕನಸು ಕಾಣುವವನ ಶರೀರದಲ್ಲೇ ಇರಬೇಕಿತ್ತು. ಇದು ಅಸಾಧ್ಯ. ‌

ಯಾಕೆಂದರೆ ಕನಸಿನಲ್ಲಿ ಹಿಮಾಲಯ ಪರ್ವತ ಬರಬಹುದು, ಕಾಶ್ಮೀರದ ಕಣಿವೆ ಬರಬಹುದು, ಮಹಾನಗರಗಳು, ಜಲಪಾತಗಳು ಬರಬಹುದು. ಕನಸು ಕಾಣುವವ ಶರೀರದಿಂದ ಹೊರಗೆ ಹೋಗಿ ಆ ಪ್ರದೇಶಗಳನ್ನು ನೋಡಿದ್ದರೆ, ಎಚ್ಚರವಾದಾಗ ಅಲ್ಲಿಯೇ ಇರಬೇಕಿತ್ತು. ಕನಸಿನ ದೃಶ್ಯಗಳು ದೇಶಕಾಲಗಳಿಗೆ ಸಂಬಂಧಿಸಿಲ್ಲದಿರುವುದರಿಂದ ಅವು ಸುಳ್ಳು ಎಂದೇ ಹೇಳಬೇಕು. ಕನಸಿನಲ್ಲಿ ಓಡಾಡುವ ಶರೀರ ಕೇವಲ ಮತಿಭ್ರಾಂತಿ. ಜಾಗ್ರತ್ ಅವಸ್ಥೆಯೂ ಒಂದು ರೀತಿಯಲ್ಲಿ ಸ್ವಪ್ನವೇ. ಎಚ್ಚರದಲ್ಲಿ ನಾವು ಯಾವ ವಸ್ತುಗಳನ್ನು ಕಂಡು, ಸತ್ಯವೆಂದು ಭಾವಿಸುತ್ತೇವೋ ಅವೆಲ್ಲ ಅಶಾಶ್ವತವಾದವು, ಕ್ಷಣಿಕವಾದವು. ನಮ್ಮನ್ನು ಸಾಕಿ ಬೆಳೆಸಿದ ಹಿರಿಯರನ್ನು, ಸ್ನೇಹಿತರನ್ನು ಸತ್ಯವೆಂದು ನಂಬಿ ಬದುಕಿದ್ದೆವು. ಅವರೆಲ್ಲ ಕನಸಿನಂತೆ ಮಾಯವಾದರು.

ಬಾಲ್ಯದಲ್ಲಿ ನೀವು ಕಂಡ, ಬೆಳೆದ ಹಳ್ಳಿ ಗುರುತೇ ಸಿಗದಂತೆ ಮಾಯವಾಗಿದೆ. ಅಲ್ಲಿ ನೀವೇ ಈಗ ಪರಕೀಯರು. ಯಾವುದು ಸತ್ಯವೆಂದು ಭಾಸವಾಗಿತ್ತೋ ಅದು ಈಗ ಕನಸು ಮಾತ್ರ.ಕಗ್ಗ ಅದನ್ನು ಒತ್ತಿ ಹೇಳುತ್ತದೆ. ಎಚ್ಚರದಲ್ಲಿದ್ದವನುಕನಸನ್ನು ಸುಳ್ಳೆನ್ನುತ್ತಾನೆ. ಸ್ವಪ್ನದಲ್ಲಿ ಮೈಮರೆತವನು ಪ್ರಪಂಚವನ್ನೇ ಕನಸಿನಂತೆ ಕಾಣುತ್ತಾನೆ. ಎರಡೂ ಅವಸ್ಥೆಗಳಿಗೆ ಕಾರಣನಾಗಿ, ಸಾಕ್ಷಿಯಾಗಿ ಒಂದು ಅಲೌಕಿಕವಾದ, ನಿರ್ಲಿಪ್ತವಾದ, ಗುಪ್ತವಾದ ಆತ್ಮವಿದೆ. ಅದೇ ಪರಮಾತ್ಮ ತತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.