ADVERTISEMENT

ಬೆರಗಿನ ಬೆಳಕು | ಪುನರಾವರ್ತನೆ

ಡಾ. ಗುರುರಾಜ ಕರಜಗಿ
Published 7 ಜೂನ್ 2020, 19:30 IST
Last Updated 7 ಜೂನ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ವಾರಾಣಸಿಯಲ್ಲಿ ದಶರಥ ಮಹಾರಾಜ ಅತ್ಯಂತ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ. ಅವನಿಗೆ ಹದಿನಾರು ಸಾವಿರ ಹೆಂಡತಿಯರು. ಅವನ ಪಟ್ಟದ ರಾಣಿ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಗೆ ಜನ್ಮವಿತ್ತಳು. ಹಿರಿಯ ಮಗನ ಹೆಸರು ರಾಮ ಪಂಡಿತ. ಎರಡನೆಯವನು ಲಕ್ಷಣ ಕುಮಾರ. ಮಗಳು ಸೀತಾದೇವಿ. ಪಟ್ಟದ ರಾಣಿ ತೀರಿ ಹೋದಮೇಲೆ ಮತ್ತೊಬ್ಬಳನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಂಡ. ಅವಳಿಗೊಬ್ಬ ಮಗ ಹುಟ್ಟಿದ. ಅವನ ಹೆಸರು ಭರತಕುಮಾರ. ಕಿರಿಯ ಪತ್ನಿ ಅತ್ಯಂತ ಪ್ರಿಯಳಾದ್ದರಿಂದ ರಾಜ ಆಕೆಗೆ ಒಂದು ವರ ಕೊಟ್ಟ. ಆಕೆ ಅದನ್ನು ತನಗೆ ಬೇಕಾದಾಗ ಕೇಳುತ್ತೇನೆ ಎಂದಳು.

ಮಗನಿಗೆ ಇಪ್ಪತ್ತು ವರ್ಷವಾದಾಗ ಹೆಂಡತಿ ತಾನು ಪಡೆದಿದ್ದ ವರವನ್ನು ನೆನಪಿಸಿ, ‘ರಾಜ, ಈ ರಾಜ್ಯವನ್ನು ನನ್ನ ಮಗನಿಗೆ ಕೊಡು’ ಎಂದು ಬೇಡಿದಳು. ಆಗ ರಾಜ ಕೋಪದಿಂದ, ‘ಚಾಂಡಾಲಿ, ನೀನು ವಂಶವನ್ನು ಹಾಳು ಮಾಡುತ್ತೀ. ನನ್ನ ಹಿರಿಯ ಪುತ್ರ ರಾಮಪಂಡಿತ ತುಂಬ ಒಳ್ಳೆಯವ. ಅವನಿಗೆ ರಾಜ್ಯವನ್ನು ತಪ್ಪಿಸುತ್ತೀ’ ಎಂದು ಶಪಿಸಿದ. ಆಕೆ ಕೇಳಲಿಲ್ಲ. ರಾಜ ಅಂದು ರಾತ್ರಿ ರಾಮಪಂಡಿತ, ಲಕ್ಷಣ ಕುಮಾರ ಮತ್ತು ಸೀತಾದೇವಿಯರನ್ನು ತನ್ನ ಅರಮನೆಗೆ ಕರೆಸಿಕೊಂಡು, ‘ನನ್ನ ಕಿರಿಯ ಪತ್ನಿ ಮಹಾ ಮೋಸಗಾರ್ತಿ. ತನ್ನ ಮಗನಿಗೆ ಅಧಿಕಾರ ಕೊಡಿಸಲು ನಿಮ್ಮನ್ನು ಕೊಲ್ಲಲೂ ಹೇಸಲಾರಳು. ಅದಕ್ಕೆ ನೀವು ಮೂವರೂ ಹನ್ನೆರಡು ವರ್ಷ ಕಾಡಿಗೆ ಹೋಗಿಬಿಡಿ. ನಾನು ಸತ್ತ ಸುದ್ದಿ ಕೇಳಿದ ತಕ್ಷಣ ಮರಳಿ ಬಂದು ಅಧಿಕಾರವನ್ನು ವಹಿಸಿಕೊಳ್ಳಿ’ ಎಂದ. ತಂದೆಗೆ ನಮಸ್ಕರಿಸಿ ರಾಮಪಂಡಿತ ಮತ್ತು ಲಕ್ಷಣಕುಮಾರ ಹೊರಟರು. ಅವರ ತಂಗಿ ಸೀತಾದೇವಿ ತಾನೂ ಅವರೊಂದಿಗೇ ಹೊರಟುಬಿಟ್ಟಳು.

ಮೂವರೂ ಹಿಮಾಲಯಕ್ಕೆ ಬಂದು ನದಿಯ ತೀರದಲ್ಲಿ ಒಂದು ಆಶ್ರಮವನ್ನು ಕಟ್ಟಿಕೊಂಡು ಬದುಕಿದರು. ರಾಮಪಂಡಿತ ಆಶ್ರಮದಲ್ಲೇ ಇರುತ್ತಿದ್ದ ಲಕ್ಷಣಕುಮಾರ ಮತ್ತು ಸೀತಾದೇವಿ ಉಳಿದೆಲ್ಲ ಕೆಲಸಗಳನ್ನು ಮಾಡಿ ಅವನ ಆರೈಕೆ ಮಾಡುತ್ತಿದ್ದರು. ಇತ್ತ ಮಹಾರಾಜ ದಶರಥ ಪುತ್ರಶೋಕದಲ್ಲಿ ಸವೆದು ಒಂಭತ್ತು ವರ್ಷಗಳ ನಂತರ ತೀರಿಹೋದ. ಅಂತ್ಯಕ್ರಿಯೆಗಳು ಮುಗಿದ ಮೇಲೆ ರಾಣಿ ಮಗ ಭರತಕುಮಾರನಿಗೆ ಅಧಿಕಾರ ವಹಿಸಿಕೋ ಎಂದಳು. ಆದರೆ ಭರತಕುಮಾರ, ಈ ಸಿಂಹಾಸನಕ್ಕೆ ಅರ್ಹರಾದವರು ಕಾಡಿನಲ್ಲಿದ್ದಾರೆ, ಅವರನ್ನು ಕರೆ ತರುತ್ತೇನೆ ಎಂದು ಸೈನ್ಯ ಸಮೇತ ಹಿಮಾಲಯದಲ್ಲಿ ರಾಮಪಂಡಿತನ ಆಶ್ರಮಕ್ಕೆ ಬಂದ. ಅಣ್ಣನಿಗೆ ತಂದೆ ತೀರಿಹೋದ ವಿಷಯವನ್ನು ತಿಳಿಸಿದ. ರಾಮಪಂಡಿತ ಯಾವ ಭಾವನೆಗಳನ್ನು ತೋರದೆ ಸುಮ್ಮನಿದ್ದ. ಕಾರಣ ಕೇಳಿದರೆ, ‘ದೇಹ ಶಾಶ್ವತವಲ್ಲ, ಅಶಾಶ್ವತವಾದುದ್ದಕ್ಕೆ ದುಃಖವೇಕೆ? ತಂದೆಗೆ ಕಷ್ಟದಿಂದ ಮುಕ್ತಿಯಾಯಿತು ಸಾಕು’ ಎಂದ. ಭರತ, ರಾಮಪಂಡಿತನಿಗೆ ರಾಜ್ಯ ಪದವಿಯನ್ನು ವಹಿಸಿಕೋ ಎಂದಾಗ, ‘ನಾನು ಬರಲಾರೆ. ತಂದೆ ಹನ್ನೆರಡು ವರ್ಷಗಳ ಅವಧಿ ಹೇಳಿದ್ದಾರೆ. ಅದಕ್ಕಿನ್ನೂ ಮೂರು ವರ್ಷ ಸಮಯವಿದೆ. ಲಕ್ಷಣಕುಮಾರ ಮತ್ತು ಸೀತಾದೇವಿಯವರು ಬಂದು ರಾಜ್ಯ ನಡೆಸುತ್ತಾರೆ’ ಎಂದ. ಆಗ ಭರತಕುಮಾರ, ಲಕ್ಷಣಕುಮಾರ ಮತ್ತು ಸೀತಾದೇವಿಯರು ರಾಮಪಂಡಿತನ ಪಾದುಕೆಗಳನ್ನು ತೆಗೆದುಕೊಂಡು ವಾರಾಣಸಿಗೆ ಬಂದು, ಅವುಗಳನ್ನೇ ಸಿಂಹಾಸನದ ಮೇಲಿಟ್ಟು ರಾಜ್ಯ ನಡೆಸಿದರು. ಮೂರು ವರ್ಷಗಳ ನಂತರ ರಾಮಪಂಡಿತ ವಾರಾಣಸಿಗೆ ಮರಳಿ ಬಂದು ರಾಜನಾದ. ಮುಂದೆ ಹದಿನಾರು ಸಾವಿರ ವರ್ಷ ರಾಜ್ಯವಾಳಿ, ಬಳಿಕ ಸ್ವರ್ಗ ಸೇರಿದ.

ADVERTISEMENT

ಒಂಭತ್ತು ಸಾವಿರ ವರ್ಷಗಳ ಹಿಂದಿನ ರಾಮಾಯಣ ಬದಲಾಗಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ರೂಪುಗೊಂಡದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.