ADVERTISEMENT

ಬೆರಗಿನ ಬೆಳಕು: ಗೊತ್ತು ಗುರಿಯಿಲ್ಲದ ಬದುಕು

ಡಾ. ಗುರುರಾಜ ಕರಜಗಿ
Published 2 ಜೂನ್ 2022, 19:31 IST
Last Updated 2 ಜೂನ್ 2022, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ದಾರಿಗುರಿಗಳ ಗೊತ್ತು ಕಾಗೆಗುಂಟೇನಯ್ಯ? |
ಆರ ಮನೆ ಸಂಡಿಗೆಯೊ, ಚುಂಡಿಲಿಯೊ, ಹುಳುವೊ||
ಆರ ಪಿಂಡವೊ, ಏನೊ, ಎಂತೊ, ಆ ಬಾಳ ಗತಿ ! |
ಮೀರಿದವನೇಂ ನೀನು? – ಮಂಕುತಿಮ್ಮ || 642 ||

ಪದ-ಅರ್ಥ: ಕಾಗೆಗುಂಟೇನಯ್ಯ=ಕಾಗೆಗೆ+ಉಂಟೇನಯ್ಯ, ಚುಂಡಿಲಿ=ಬೇಯಿಸಿದ ಕಾಳು, ಸೊಂಡೆ ಇಲಿ, ಮೀರಿದವನೇಂ=ಮೀರಿದವನೇ?
ವಾಚ್ಯಾರ್ಥ: ಕಾಗೆಗೆ ದಾರಿ, ಗುರಿಗಳು ಇರುತ್ತವೆಯೇ? ಎಲ್ಲಿ ಊಟ ಸಿಗುತ್ತದೋ ಅಲ್ಲಿಗೆ ಪ್ರಯಾಣ, ಯಾರ ಮನೆ ಸಂಡಿಗೆಯೋ, ಬೇಯಿಸಿದ ಕಾಳೋ, ಇಲಿಯೋ, ಹುಳುವೊ, ಅಥವಾ ಯಾರ ಮನೆ ಪಿಂಡವೊ, ಅದರ ಬಾಳಗತಿ ಹೇಗೋ, ಏನೋ? ನಿನ್ನ ಬಾಳು ಅದನ್ನು ಮೀರಿದ್ದೇ?

ವಿವರಣೆ: ಮೊನ್ನೆ ದಿನ ನ್ಯೂಯಾರ್ಕಿನಲ್ಲಿ ಒಬ್ಬರ ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದೆ. ಅಲ್ಲಿ ಹತ್ತಾರು ತರುಣ-ತರುಣಿಯರು. ಎಲ್ಲರೂ ಭಾರತೀಯರೇ. ಅನ್ನ ಅರಸಿ ಇಲ್ಲಿಗೆ ಬಂದಿದ್ದಾರೆ. ಕೆಲವರು ಕಾಯಂ ಆಗಿ ನೆಲೆಸಿದ್ದಾರೆ, ಕೆಲವರು ನೆಲೆಸಲು ಕಷ್ಟಪಡುತ್ತಿದ್ದಾರೆ. ಅವರಿಗೆ ಅಮೇರಿಕೆಯೆಂದರೆ ಸ್ವರ್ಗ. ಹೇಗಾದರೂ ಮಾಡಿ ಇಲ್ಲಿಯೇ ಉಳಿಯಬೇಕು. ಅವರಲ್ಲಿ ಬಹಳಷ್ಟು ಜನ ಕೆಳಮಧ್ಯಮ ವರ್ಗಗಳಿಂದ ಬಂದವರು. ಒಬ್ಬ ವೀಸಾಕ್ಕೋಸ್ಕರ ಯಾವುದೋ ಕಂಪನಿಗೆ ದುಡ್ಡು ಕೊಟ್ಟು, ಅದನ್ನು ತೀರಿಸಲು ನಾಲ್ಕಾರು ಕಡೆಗೆ ಓಡಾಡಿದ್ದಾನೆ. ಮತ್ತೊಬ್ಬ ಹುಡುಗ ಮುಂದಿನ ತಿಂಗಳು ಒಬ್ಬ ಅಮೇರಿಕನ್ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ. ‘ಆಕೆಯನ್ನು ಬಹಳ ಪ್ರೀತಿಸುತ್ತೀಯೇನೋ?’ ಎಂದು ಕೇಳಿದರೆ ಅವನು ನೇರವಾಗಿ ಹೇಳಿದ, ‘ಪ್ರೀತಿ ಆಮೇಲೆ, ಆಕೆಯನ್ನು ಮದುವೆಯಾದರೆ ನನಗೂ ಅಮೇರಿಕನ್ ಪೌರತ್ವ ದೊರಕುತ್ತದೆ. ಆಗ ಕೆಲಸಕ್ಕಾಗಿ ದಿಕ್ಕುದಿಕ್ಕಿಗೆ ಅಲೆಯಬೇಕಾಗಿಲ್ಲ’. ನನಗೆ ಆಶ್ಚರ್ಯ! ಪ್ರೀತಿಗಾಗಿ ಮದುವೆಯಲ್ಲ, ಕೆಲಸಕ್ಕಾಗಿ ಮದುವೆ. ನಾವು ಮಾತನಾಡುತ್ತಿರುವಾಗ ಹಿಂದೆ ವಯಸ್ಸಾದ ಗುಜರಾತೀ ದಂಪತಿಗಳು ಕುಳಿತಿದ್ದರು. ಅವರನ್ನು ಕೇಳಿದೆ, ‘ಪ್ರತಿವರ್ಷ ಭಾರತಕ್ಕೆ ಹೋಗಿ ಬರುತ್ತೀರಾ?’. ಆ ತಾಯಿಯ ಕಣ್ಣಿಂದ ನೀರು ಚಿಮ್ಮಿದವು. ಗಂಡ ಹೇಳಿದರು, ‘ಸಾರ್, ನಾವು ಇಲ್ಲಿಗೆ ಬಂದು ಇಪ್ಪತ್ತೈದು ವರ್ಷಗಳಾದವು. ಒಂದು ಬಾರಿಯೂ ಭಾರತಕ್ಕೆ ಹೋಗಲಾಗಲಿಲ್ಲ’. ‘ಕೆಲಸ ತುಂಬ ಜಾಸ್ತಿಯಾಗಿದೆಯೋ, ಸಮಯ ಸಿಗುತ್ತಿಲ್ಲವೇ?’ ಎಂದು ಕೇಳಿದೆ. ಅವರು, ‘ನಿಮಗೆ ನಮ್ಮ ಕಷ್ಟ ಗೊತ್ತಿಲ್ಲ. ಇಲ್ಲಿಗೆ ಬರಲೇಬೇಕೆಂದು, ಹೇಗೋ ವೀಸಾ ಮಾಡಿಸಿಕೊಂಡು ಬಂದೆವು. ವೀಸಾ ಅವಧಿ ಎಂದೋ ಮುಗಿದು ಹೋಗಿದೆ. ನಾವು ಜಾಗೆಗಳನ್ನು ಬದಲಾಯಿಸುತ್ತಾ ಇಲ್ಲಿ ಬಂದಿದ್ದೇವೆ. ಯಾರೋ ಒಂದು ಸೋಶಿಯಲ್ ಸೆಕ್ಯೂರಿಟಿ ನಂಬರ್ ಮಾಡಿಸಿಕೊಟ್ಟಿದ್ದಾರೆ. ನಾವು ಏರಪೋರ್ಟ್‌ ಹತ್ತಿರ ಹೋದೊಡನೆ ನಮ್ಮನ್ನು ಇಲ್ಲಿಗೆ ಬರದಂತೆ ಭಾರತಕ್ಕೆ ಕಳುಹಿಸಿಬಿಡುತ್ತಾರೆ. ಅದಕ್ಕೇ ಫೋನ್‌ನಲ್ಲಿಯೇ ವಿಡಿಯೋ ಕಾಲ್ ಮಾಡಿ ಭಾರತದೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮಂತಹವರು ಇಲ್ಲಿ ಬಹಳ ಜನರಿದ್ದಾರೆ’ ಎಂದರು!

ADVERTISEMENT

ಇದನ್ನೆಲ್ಲ ಕಂಡಾಗ ಈ ಕಗ್ಗ ತುಂಬ ಪ್ರಸ್ತುತ ಎನ್ನಿಸಿತು. ಡಿ.ವಿ.ಜಿ. ಕಾಗೆಯ ಉದಾಹರಣೆ ಕೊಡುತ್ತಾರೆ. ಎಲ್ಲಿ ಹೊಟ್ಟೆಗೆ ಆಹಾರ ಸಿಕ್ಕೀತೋ ಅಲ್ಲಿಗೆ ಕಾಗೆ ಧಾವಿಸುತ್ತದೆ. ಅದು ಸಂಡಿಗೆ, ಇಲಿ, ಹುಳ, ಪಿಂಡ ಏನಾದರೂ ಆಗಬಹುದು. ಅದಕ್ಕೆ ನಿಶ್ಚಿತವಾದ ದಾರಿ, ಗುರಿ ಎಂಬುದೇನಿಲ್ಲ, ನಮ್ಮ ಪರಿಸ್ಥಿತಿಯೂ ಅದೇ ಅಲ್ಲವೇ? ಹೊಟ್ಟೆ, ಭದ್ರತೆಗಾಗಿ ನಾವು ದಿಕ್ಕುದಿಕ್ಕಿಗೆ ಸುತ್ತುತ್ತಿಲ್ಲವೆ? ಕಾಗೆಗೆ ಬಹುಶ: ಹೊಟ್ಟೆಯದೊಂದೇ ಸೆಳೆತ. ನಮಗೆ ಐದು ಸೆಳೆತಗಳು! ಪಂಚೇಂದ್ರಿಯಗಳು ನಮ್ಮನ್ನು ಎಳೆಎಳೆದು, ಸುತ್ತಿಸಿ ಬದುಕನ್ನು ಕಾಗೆಯ ಬದುಕಿಗಿಂತ ಕಷ್ಟತರವನ್ನಾಗಿ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.