ADVERTISEMENT

ಬೆರಗಿನ ಬೆಳಕು | ಆಕಸ್ಮಿಕದ ಫಲಿತಾಂಶ

ಡಾ. ಗುರುರಾಜ ಕರಜಗಿ
Published 24 ಜೂನ್ 2020, 19:31 IST
Last Updated 24 ಜೂನ್ 2020, 19:31 IST
ಡಾ.ಗುರುರಾಜ ಕರಜಗಿ
ಡಾ.ಗುರುರಾಜ ಕರಜಗಿ   

ಕಾಕತಾಳೀಯ ಕಥೆ ಲೋಕಚರಿತೆಯೊಳೆಷ್ಟೊ! |

ಟೀಕೆಗೆಟುಕವು ನಮಗೆ ಕಾರ್ಯಕಾರಣಗಳ್ ||
ಏಕೊ ಕಣ್ಣಲೆಯುವುದು, ಏನೊ ಅದ ಪಿಡಿಯುವುದು |
ವ್ಯಾಕುಲತೆ ಫಲಿತಾಂಶ – ಮಂಕುತಿಮ್ಮ || 305 ||

ಪದ-ಅರ್ಥ: ಕಾಕತಾಳೀಯ=ಅಕಸ್ಮಾತ್ತಾಗಿ ಆದದ್ದು, ಟೀಕೆಗೆಟುಕವು=ಟೀಕೆಗೆ+ಎಟುಕವು(ನಿಲುಕುವುದಿಲ್ಲ), ವ್ಯಾಕುಲತೆ=ಸಂಕಟ, ದು:ಖ.
ವಾಚ್ಯಾರ್ಥ: ಅಕಸ್ಮಾತ್ತಾಗಿ ಆದ ಕಥೆಗಳು ಈ ಪ್ರಪಂಚದಲ್ಲಿ ಎಷ್ಟಿವೆಯೊ? ಅವುಗಳ ಕಾರ್ಯ ಮತ್ತು ಕಾರಣಗಳು ನಮ್ಮ ತರ್ಕಕ್ಕೆ ಸಿಗುವುದಿಲ್ಲ. ಕಣ್ಣು ಏನನ್ನೋ ಕಾಣುತ್ತದೆ, ಹಿಡಿಯುತ್ತದೆ. ಆದರೆ ಫಲಿತಾಂಶ ಮಾತ್ರ ಮನಸ್ಸಿನ ಸಂಕಟ, ದು:ಖ.

ADVERTISEMENT

ವಿವರಣೆ: ಇತ್ತೀಚಿಗೆ ಜಾನ್ ಮಿಚೆಲ್ ಬರೆದ, “ a book of wonders “ ಓದುತ್ತಿದ್ದೆ. ಅದರಲ್ಲೊಂದು ವಿಚಿತ್ರ ಪ್ರಸಂಗ. 1975 ರಲ್ಲಿ ಒಬ್ಬ ಮನುಷ್ಯ ತನ್ನ ಮೊಪೆಡ್ ಹತ್ತಿ ಹೊರಟಿದ್ದ. ಒಂದು ಸ್ಥಳದಲ್ಲಿ ಅದಕ್ಕೊಂದು ಟ್ಯಾಕ್ಸಿ ಬಡಿದು ಮೊಪೆಡ್ ಸವಾರ ಸತ್ತು ಹೋದ. ಮೋಪೆಡ್‌ಗೇನೂ ಹೆಚ್ಚು ಪೆಟ್ಟಾಗಿರಲಿಲ್ಲ. ಒಂದು ವರ್ಷದ ಮೇಲೆ ಅದೇ ದಿನ ತೀರಿಹೋದ ಮನುಷ್ಯನ ತಮ್ಮ ಅದೇ ಮೊಪೆಡ್‌ನ್ನು ಏರಿ ಅದೇ ರಸ್ತೆಯಲ್ಲಿ ಹೊರಟಿದ್ದಾಗ ಅದೇ ಜಾಗದಲ್ಲಿ ಮತ್ತೆ ಅದೇ ಟ್ಯಾಕ್ಸಿ ಬಡಿದು ಸತ್ತು ಹೋದ. ಟ್ಯಾಕ್ಸಿ ಡ್ರೆöÊವರ್ ಕೂಡ ಅದೇ ಮನುಷ್ಯ. ಅಷ್ಟೇ ಅಲ್ಲ, ಎರಡು ಅಪಘಾತ ನಡೆದಾಗಲೂ ಟ್ಯಾಕ್ಸಿಯಲ್ಲಿದ್ದ ಗಿರಾಕಿಯೂ ಒಬ್ಬನೇ ಆಗಿದ್ದ. ಇವೆಲ್ಲ ಯೋಜನೆ ಮಾಡಿದರೂ ಆಗುವಂತಹವಲ್ಲ. ಅವುಗಳನ್ನು ವಿಚಿತ್ರ ಆಕಸ್ಮಿಕ ಎನ್ನುತ್ತೇವೆ. ಸಂಸ್ಕೃತದಲ್ಲಿ ಕಾಕತಾಳೀಯ ಎನ್ನುತ್ತಾರೆ.

ತಾಳೆಮರ ಬಲು ಗಟ್ಟಿಯಾದದ್ದು. ಒಮ್ಮೆ ಕಾಗೆ ಬಂದು ಅದರ ಕೊಂಬೆಯ ಮೇಲೆ ಕುಳಿತ ತಕ್ಷಣ ಅದು ಮುರಿದು ಹೋಗಿ ಹಣ್ಣುಗಳು ಉದುರಿದವಂತೆ. ಕಾಗೆಯ ಭಾರಕ್ಕೆ ಅದು ಮುರಿದದ್ದಲ್ಲ, ಕಾಗೆ ಕೂಡುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಯಾಗಿತ್ತು. ಇಂಥ ಆಕಸ್ಮಿಕಗಳನ್ನು ಕಾಕತಾಳೀಯ ಎಂದು ಕರೆಯುವುದು ವಾಡಿಕೆಯಾಯಿತು. ಇವು ಆಕಸ್ಮಿಕಗಳೇ ಆದದ್ದರಿಂದ ಅಂಥ ಕಾರ್ಯಕ್ಕೆ ಕಾರಣವೇನಿದ್ದೀತು ಎಂಬುದು ತರ್ಕಕ್ಕೆ ನಿಲುಕಲಾರದು. ಈ ಪ್ರಪಂಚದ ವಿಷಯವೂ ಹಾಗೆಯೇ. ಯಾವುದೋ ವಸ್ತು, ವಿಷಯ, ಚಿಂತನೆ ಮನಸ್ಸನ್ನು ಸೆಳೆಯುತ್ತದೆ. ಅದನ್ನು ಪಡೆಯಲೇಬೇಕೆಂಬ ಛಲ ಹುಟ್ಟುತ್ತದೆ. ದೊರೆತೇಬಿಟ್ಟಿತು ಎಂಬ ಭ್ರಮೆ ಹುಟ್ಟುತ್ತದೆ. ಅದಕ್ಕಾಗಿ ದೇಹ ಶ್ರಮಪಡುತ್ತದೆ, ಅದು ದೊರೆಯುವವರೆಗೂ ಮನಸ್ಸು ಹಣ್ಣಾಗುತ್ತದೆ.

ಇನ್ನೇನೋ ಕೈಗೆ ಸಿಕ್ಕೇ ಬಿಟ್ಟಿತು ಎಂದು ಸಂತೋಷ ಉಕ್ಕುತ್ತದೆ. ಆದರೆ ಸಿಕ್ಕಿತು ಎನ್ನುವಾಗ ತಪ್ಪಿಹೋಗಿ ಮನಸ್ಸಿಗೆ ವಿಪರೀತ ನೋವುಂಟು ಮಾಡುತ್ತದೆ. ಕಂಡದ್ದನ್ನು ಪಡೆಯಲು ಅಪೇಕ್ಷೆ, ಅಪೇಕ್ಷೆಯ ತೀವ್ರತೆಯಿಂದ ಎಡೆಬಿಡದ ಪ್ರಯತ್ನ, ಪ್ರಯತ್ನ ಕೈಗೂಡದಿದ್ದಾಗ ದು:ಖ, ಸಂಕಟ. ಈ ಕಗ್ಗ ಇದನ್ನು ವಿಶದಪಡಿಸುತ್ತದೆ. ಪ್ರಪಂಚದಲ್ಲಿ ಎಷ್ಟೋ ಘಟನೆಗಳು ಆಕಸ್ಮಿಕದಂತೆ ನಡೆದುಹೋಗುತ್ತವೆ. ಯಾವ ತರ್ಕದಿಂದಲೂ ಅವುಗಳನ್ನು ವಿವರಿಸಲಾಗುವುದಿಲ್ಲ. ಹುಡುಕುವುದಕ್ಕೆ, ಪಡೆಯುವುದಕ್ಕೆ ಹೊರಟರೆ ಕೊನೆಗೆ ದಕ್ಕುವುದು ವ್ಯಾಕುಲತೆ ಮಾತ್ರ. ಹೀಗೆಂದ ಮಾತ್ರಕ್ಕೆ ಕಗ್ಗ ನಿರಾಸೆಯನ್ನೇ ಗುರಿಯೆಂದು ಹೇಳುವುದಿಲ್ಲ. ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಅತಿಯಾದ ಕಾರಣಗಳನ್ನು ಹುಡುಕುವುದು ಬೇಡ. ನಮ್ಮ ಕಣ್ಣುಗಳಿಗೆ, ಅಪೇಕ್ಷೆಗಳಿಗೆ ಮಿತಿ ಇದ್ದರೆ, ವ್ಯಾಕುಲತೆ ಕಡಿಮೆಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.