ADVERTISEMENT

ಬೆರಗಿನ ಬೆಳಕು: ನಿರಹಂಕೃತಿಯ ಕವಚ

ಡಾ. ಗುರುರಾಜ ಕರಜಗಿ
Published 1 ಫೆಬ್ರುವರಿ 2023, 19:30 IST
Last Updated 1 ಫೆಬ್ರುವರಿ 2023, 19:30 IST
   

ಬಿಟ್ಟೆನೆಲ್ಲವನೆಂಬ ಹೃದಯ ಶೋಷಣೆ ಬೇಡ |

ಕಟ್ಟಿಕೊಳ್ಳುವ ಶಿರ:ಪೀಡೆಯುಂ ಬೇಡ ||
ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು |
ಮುಟ್ಟದಿಳೆಯಸಿ ನಿನ್ನ – ಮಂಕುತಿಮ್ಮ || 813 ||‌

ಪದ-ಅರ್ಥ: ಬಿಟ್ಟೆನೆಲ್ಲವನೆಂಬ=ಬಿಟ್ಟೆನು+ಎಲ್ಲವನು+ಎಂಬ, ಶಿರ:ಪೀಡೆ=ತಲೆನೋವು ನಿರಹಂಕೃತಿಯ=ನಿರ್+ಅಹಂಕೃತಿಯ(ಅಹಂಕಾರದ),ಪೋರು=ತೊಡು, ಮುಟ್ಟದಿಳೆಯಸಿ=ಮುಟ್ಟದು+ಇಳೆಯ(ಜಗತ್ತಿನ)+ಅಸಿ(ಖಡ್ಗ, ಕತ್ತಿ)

ADVERTISEMENT

ವಾಚ್ಯಾರ್ಥ: ಎಲ್ಲವನ್ನೂ ಬಿಟ್ಟಿದ್ದೇನೆ ಎಂಬ ಹೃದಯ ಶೋಷಣೆ ಬೇಡ. ಎಲ್ಲವೂ ನನ್ನದೆ ಎಂದು ಕಟ್ಟಿಕೊಳ್ಳುವ ತಲೆನೋವೂ ಬೇಡ. ನನ್ನದೇನೂ ಇಲ್ಲ ಎನ್ನುವ ನಿರಹಂಕಾರದ ಕವಚವನ್ನು ತೊಟ್ಟರೆ ಜಗತ್ತಿನ ಕಷ್ಟಗಳ ಕತ್ತಿ ನಿನ್ನನ್ನು ತಾಗುವುದಿಲ್ಲ.

ವಿವರಣೆ: ಒಬ್ಬ ಮನುಷ್ಯ ಕರ್ನಾಟಕದ ನಗರವೊಂದರಲ್ಲಿ ವ್ಯವಹಾರ ಮಾಡಿಕೊಂಡು ಸುಖವಾಗಿದ್ದ. ಶ್ರೀಮಂತಿಕೆ, ಸುಂದರಳಾದ ಹೆಂಡತಿ, ಎರಡು ಪುಟ್ಟಮಕ್ಕಳೊಂದಿಗೆ ಹಾಯಾಗಿದ್ದ. ಒಂದು ದಿನ ಏನೆನ್ನಿಸಿತೋ, ಮನೆ ಬಿಟ್ಟು ಹಿಮಾಲಯಕ್ಕೆ
ಹೋಗಿಬಿಟ್ಟ. ಅಲ್ಲಿಯೇ ಗುರುವೊಬ್ಬರನ್ನು ಪಡೆದು ಸನ್ಯಾಸಿಯಂತೆ ನೆಲೆಸಿಬಿಟ್ಟ. ಆರೆಂಟು ವರ್ಷಗಳು ಕಳೆದವು ಒಂದು ಬಾರಿ ಕನ್ನಡದ ಪ್ರವಾಸಿಗನೊಬ್ಬ ಹಿಮಾಲಯದ ಆ ಪ್ರದೇಶಕ್ಕೆ ಹೋದ. ಈ ಸನ್ಯಾಸಿಯನ್ನು ಕಂಡ. ಮಾತನಾಡುತ್ತಿರುವಾಗ ಈ ಪ್ರವಾಸಿ ಕನ್ನಡದವನೆಂದು ತಿಳಿದು ಸನ್ಯಾಸಿಗೆ ಸಂತೋಷ ನಿಮ್ಮದು ಯಾವ ಊರು ಎಂದು ಕೇಳಿದ. ಇವನು ಹೇಳಿದ. ಆಶ್ಚರ್ಯ! ಪ್ರವಾಸಿಯದೂ, ಸನ್ಯಾಸಿಯ ಊರೆ! ಕುತೂಹಲ ಗರಿಗೆದರಿತು. ಸನ್ಯಾಸಿ ತನ್ನ ಊರಿನ ಬಗ್ಗೆ, ತನ್ನ
ಮನೆಯ ಬಗ್ಗೆ, ತನ್ನ ಹೆಂಡತಿ, ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಮತ್ತೆ ಮತ್ತೆ ಕೇಳಿದ. ಸನ್ಯಾಸಿಯ ಕಣ್ಣಲ್ಲಿಯ ಹೊಳಪು, ಆಸಕ್ತಿಗಳನ್ನು ಕಂಡು ಪ್ರವಾಸಿ ಹೇಳಿದ, “ಸ್ವಾಮಿ, ನೀವು ಮರಳಿ ನಿಮ್ಮೂರಿಗೆ ಹೋಗುವುದು ವಾಸಿ. ನೀವು ಮನೆ, ಹೆಂಡತಿ, ಮಕ್ಕಳನ್ನು ಬಿಟ್ಟು ಹಿಮಾಲಯಕ್ಕೆ ಬಂದಿರಿ ಆದರೆ ಅವು ನಿಮ್ಮನ್ನು ಬಿಟ್ಟೇ ಇಲ್ಲ. ಸುಮ್ಮನೇ ಏಕೆ ಎಲ್ಲವನ್ನೂ ಬಿಟ್ಟೆ ಎಂದುಕೊಂಡು ನಿಮ್ಮ ಹೃದಯಕ್ಕೆ ಮೋಸಮಾಡುತ್ತಿದ್ದೀರಿ?” ಇದೇ ಕಷ್ಟ. ಬಿಟ್ಟೆ ಎಂದುಕೊಂಡರೂ ಮನಸ್ಸಿನಲ್ಲಿ ಅದರ ಬಗ್ಗೆಯೇ ಕೊರಗುತ್ತಿರುವುದು ಹೃದಯಶೋಷಣೆ.
ಇದು ಒಂದು ಬಗೆಯಾದರೆ, ಇನ್ನೊಂದು ಬಗೆಯ ಜನರೂ ಇದ್ದಾರೆ. ಅವರು ಪ್ರಪಂಚದ ಚಿಂತೆಗಳನ್ನೆಲ್ಲ ತಮ್ಮ ತಲೆಯ ಮೇಲೆಯೇ ಹೊತ್ತಂತೆ ಒದ್ದಾಡಿ ಸಂಕಟಪಡುವವರು. ತಾವಿಲ್ಲದಿದ್ದರೆ ಪ್ರಪಂಚದ ಗತಿ ಏನು ಎಂದು ಆತಂಕಪಡುವವರು. ಅವರಿಗೆ ತಾವು ಹುಟ್ಟುವ ಮೊದಲೂ ಪ್ರಪಂಚವಿತ್ತು ಮತ್ತು ತಾವು ತೀರಿ ಹೋದ ಬಳಿಕವೂ ಪ್ರಪಂಚ ಹಾಗೆಯೇ ಇರುತ್ತದೆಂಬುದು ಸ್ಮರಣೆಗೆ ಬರುವುದಿಲ್ಲ.
ಹಾಗಾದರೆ ಬದುಕುವುದು ಹೇಗೆ? ಬುದ್ಧ, ಮಹಾವೀರ, ಶಂಕರ, ಬಸವಣ್ಣ ಇವರೆಲ್ಲ ಪ್ರಪಂಚದಲ್ಲಿ ಕೊನೆಯವರೆಗೂ
ಕಾರ್ಯೋನ್ಮಖರಾಗಿಯೇ ಇದ್ದವರು. ಆದರೂ ಮಹಾತ್ಮರಾದರು. ಕಾರಣ ಇಷ್ಟೇ. ಅವರು ಮಾಡಿದ ಕಾರ್ಯ ಅವರಿಗಾಗಿಯೇ ಇರಲಿಲ್ಲ.
ಸಮಾಜಕ್ಕೆ ಯಾವುದು ಒಳಿತೋ ಅದನ್ನು ಯಾವ ಪ್ರತಿಫಲಾಕ್ಷೆ ಇಲ್ಲದೆ ಮಾಡಿದರು. ಅಲ್ಲಿ ಯಾವ ಅಹಂಕಾರವೂ ಇರಲಿಲ್ಲ. ಈ ನಿರಹಂಕಾರದ ಕವಚವನ್ನು ಅವರೆಲ್ಲ ಧರಿಸಿದ್ದರಿಂದ ಪ್ರಪಂಚದ ನಡೆಗಳು ಅವರನ್ನು ಗಾಸಿ ಮಾಡಲಿಲ್ಲ. ಹಾಗೆಂದರೆ
ಭೌತಿಕವಾಗಿ ಅವರಿಗೆ ತೊಂದರೆಗಳು ಬರಲೇ ಇಲ್ಲವೆ? ಬಂದವು, ಬೇಕಾದಷ್ಟು ಬಂದವು. ಆದರೆ ಅವು ಅವರ ಆತ್ಮಶಕ್ತಿಯನ್ನು ಕುಂದಿಸದೆ, ವೃದ್ಧಿಸಿದವು. ಅವರನ್ನು ಅಮರರನ್ನಾಗಿ ಮಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.