ADVERTISEMENT

ಬೆರಗಿನ ಬೆಳಕು: ಯಾವುದೂ ಅತಿಯಾಗದಿರಲಿ

ಡಾ. ಗುರುರಾಜ ಕರಜಗಿ
Published 27 ಸೆಪ್ಟೆಂಬರ್ 2022, 19:30 IST
Last Updated 27 ಸೆಪ್ಟೆಂಬರ್ 2022, 19:30 IST
   

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |

ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿಬೇಡವೆಲ್ಲಿಯುಂ- ಮಂಕುತಿಮ್ಮ || 724 ||

ಪದ-ಅರ್ಥ: ಸ್ಮಿತವಿರಲಿ=ಸ್ಮಿತ(ನಗು)+ಇರಲಿ, ವದನ=ಮುಖ, ಋತ=ಸತ್ಯ, ಧರ್ಮ, ಮನಸಿನುದ್ವೇಗದಲಿ=ಮನಸಿನ=ಉದ್ವೇಗದಲಿ, ಅತಿಬೇಡವೆಂಲ್ಲಿಯುಂ=ಅತಿ+ಬೇಡ+ಎಲ್ಲಿಯುಂ

ADVERTISEMENT

ವಾಚ್ಯಾರ್ಥ: ಮುಖದಲ್ಲಿ ನಗುವಿರಲಿ ಆದರೆ ಅಟ್ಟಹಾಸವಾಗದಿರಲಿ. ಮಾತಿನಲ್ಲಿ ಹಿತವಿರಲಿ. ಅದು ಸತ್ಯವನ್ನು, ಧರ್ಮವನ್ನು ಬಿಡದಿರಲಿ. ಮನಸ್ಸಿನ ಉದ್ವೇಗದಲ್ಲಿ, ಭೋಗದಲ್ಲಿ ಮಿತಿ ಇರಲಿ. ಎಲ್ಲಿಯೂ ಅತಿಯಾಗದಿರಲಿ.

ವಿವರಣೆ: ಈ ಚೌಪದಿಯ ನಾಲ್ಕು ಸಾಲುಗಳನ್ನು ಓದಿದಾಗ ನನ್ನ ಮನಸ್ಸಿನ ಮುಂದೆ ನಿಂತ ಚಿತ್ರ ಡಾ. ಕಲಾಂ ರವರದು. ಅವರನ್ನು ನಾನು ಹತ್ತಿರದಿಂದ ಕಂಡವನು. ಈ ಕಗ್ಗದ ಎಲ್ಲ ಗುಣಗಳನ್ನು ಅವರಲ್ಲಿ ಕಂಡಿದ್ದೆ. ಅವರು ಯಾವಾಗಲೂ ಹಸನ್ಮುಖಿ. ಯಾರಾದರೂ ಎದುರಿಗೆ ಬಂದರೆ ಅವರಿಗಿಂತ ಮುಂದಾಗಿ ಇವರೇ “ನಮಸ್ಕಾರ, ಚೆನ್ನಾಗಿದ್ದೀರಾ?” ಎಂದು ಕೇಳುವವರು. ಅವರು ಯಾರ ಬಗ್ಗೆಯೂ ಕೆಟ್ಟ ಮಾತನಾಡಿದ್ದನ್ನಾಗಲೀ, ಮತ್ತೊಬ್ಬರನ್ನು ಹೀಯಾಳಿಸಿ ನಕ್ಕಿದ್ದಾಗಲಿ ಕಾಣಲಿಲ್ಲ. ಅವರದು
ಯಾವಾಗಲೂ ಮೆಚ್ಚಿಗೆಯ ಮಾತೇ. ಏನಾದರು ಇಷ್ಟವಾಗದೆ ಹೋದರೆ, ಟೀಕೆ ಮಾಡದೆ ಸುಮ್ಮನಿದ್ದುಬಿಡುವರು. ಮಾತು ಎಂದೂ ತೂಕ ತಪ್ಪಿದ್ದಾಗಲೀ, ಅಸತ್ಯದ್ದಾಗಲಿ ಬರಲಿಲ್ಲ. ಡಾ. ಕಲಾಂರವರು ಅತಿಯಾದ ಉದ್ವೇಗವನ್ನು ಪ್ರಕಟಿಸಿದ್ದೇ ಇಲ್ಲ ಎನ್ನಿಸುತ್ತದೆ. ನಾನು ಅವರನ್ನು ರಾಷ್ಟ್ರಪತಿಯಾಗುವುದಕ್ಕಿಂತ ಮೊದಲು ಮತ್ತು ಆಮೇಲೆ ನೋಡಿದವನು. ರಾಷ್ಟ್ರಪತಿಯ ಹುದ್ದೆ ಅವರಲ್ಲಿ ಯಾವ ವ್ಯತ್ಯಾಸವನ್ನು ತಂದಿರಲಿಲ್ಲ. ಅದೇ ಮಗುತನ ಕಡೆಯವರೆಗೂ ಉಳಿದಿತ್ತು. ಬಹುಶ: ಎಷ್ಟೋ ಬಾರಿ ಅವರಿಗೆ, “ಸರ್, ನೀವು ಈಗ ರಾಷ್ತ್ರಪತಿ” ಎಂದು ನೆನಪು ಮಾಡಿ ಕೊಡಬೇಕಿತ್ತು. ಭಾರತ ರತ್ನದ ಕಿರೀಟವೂ ಅವರ ತಲೆಯ ಮೇಲೆ ತುಂಬ ಹಗುರವಾಗಿ ಕುಳಿತಿತ್ತು. ಒಂದು ಬಾರಿ ಚಂಡೀಗಡದಲ್ಲಿ ರಾತ್ರಿ ಎಂಟು ಗಂಟೆಗೆ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾರೆ. ರಾಷ್ಟ್ರಪತಿಗಳು ಹೋಗುತ್ತಾರೆಂದರೆ ರಸ್ತೆಗಳನ್ನು ಖಾಲಿ ಮಾಡಿದ್ದರು. ಅವರದು ಮಧ್ಯದ ಕಾರು. ಹಿಂದೆ, ಮುಂದೆ ಹತ್ತಾರು ಕಾರುಗಳು, ಪೊಲೀಸ್ ವಾಹನಗಳು. ಆಗ ಎಕಾಏಕಿ ವಾಹನಗಳು ನಿಂತುಬಿಟ್ಟವು. ಏನೋ ಅಪಾಯವೆಂದು ಬೆಂಗಾವಲಿನ ಸಂರಕ್ಷಕರು ಹಾರಿ ರಾಷ್ಟ್ರಪತಿಯ ಕಾರನ್ನು ಸುತ್ತುವರೆದರು. ಡಾ. ಕಲಾಂ ನಿಧಾನಕ್ಕೆ ಕಾರಿನಿಂದಿಳಿದು ರಸ್ತೆಯ ಬದಿಗೆ ನಡೆದರು. ಅಲ್ಲೊಬ್ಬ ಪುಟ್ಟ ಹುಡುಗಿ ಕೈಯಲ್ಲಿ ಮಾಲೆ ಹಿಡಿದು ನಿಂತಿದ್ದಾಳೆ! ಕಲಾಂ ಹೋಗಿ ಹಾರ ಹಾಕಿಸಿಕೊಂಡು, ತಮ್ಮ ಜೇಬಿನಲ್ಲಿದ್ದ ಪೆನ್ನನ್ನು ಆಕೆಗೆ ಕೊಟ್ಟು ಕೆನ್ನೆ ತಟ್ಟಿ ನಗುತ್ತ ಮರಳಿ ಬಂದರು. ರಾಷ್ಟ್ರಪತಿಯ ಹುದ್ದೆಯ ತುತ್ತತುದಿಯಲ್ಲಿದ್ದ ವ್ಯಕ್ತಿಗೆ, ಆ ರಾತ್ರಿ, ರಸ್ತೆಯ ಪಕ್ಕ ನಿಂತಿದ್ದ ಪುಟ್ಟ ಹುಡುಗಿಯ ಪ್ರೀತಿ ಸೆಳೆದಿತ್ತು. ಅವರದು ಒಂದು ರೀತಿಯಲ್ಲಿ ಸನ್ಯಾಸಿ ಜೀವನ. ತಮ್ಮ ಅಧಿಕಾರಾವಧಿ ಮುಗಿದ ನಂತರ ಅತ್ಯಂತ ಕಡಿಮೆ ಸಾಮಾನುಗಳೊಂದಿಗೆ ಹೊರಬಂದ ಅಪರೂಪದ ವ್ಯಕ್ತಿ ಅವರು. ಅವರದ್ದಾದದ್ದು ಕೆಲವು ಪುಸ್ತಕಗಳು ಮತ್ತು ಒಂದೆರಡು ಬಟ್ಟೆಗಳು. ಭೋಗದಲ್ಲಿ ಅತಿಯಾದ ಮಿತಿ ಅವರದು. ಈ ಕಗ್ಗ ಹೇಳುವುದು ಇವೇ ಗುಣಗಳನ್ನು. “ಅತಿಸರ್ವತ್ರ ವರ್ಜಯೇತ್” ಎನ್ನುವುದು ಪೂರ್ವಿಕರ ಮಾತು. ಯಾವುದೂ ಅತಿಯಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.