ADVERTISEMENT

ನಂಟುಗಳ ಗಂಟು ಈ ವಿಶ್ವ

ಡಾ. ಗುರುರಾಜ ಕರಜಗಿ
Published 24 ಡಿಸೆಂಬರ್ 2018, 19:54 IST
Last Updated 24 ಡಿಸೆಂಬರ್ 2018, 19:54 IST

ತರಣಿ ಕಿರಣದ ನಂಟು ಗಗನ ಸಲಿಲದ ನಂಟು !

ಧರಣಿ ಚಲನೆಯ ನಂಟು ಮರುತನೊಳ್ನಂಟು ||
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |
ಕಿರಿದು ಪಿರಿದೊಂದಂಟು – ಮಂಕುತಿಮ್ಮ ||71||

ಪದ-ಅರ್ಥ: ತರಣಿ=ಸೂರ್ಯ, ಸಲಿಲ=ನೀರು, ಮರುತನೊಳ್ನಂಟು=ಮರುತನೊಳ್ (ವಾಯುವಿನಲ್ಲಿ)+ನಂಟು, ಪರಿದೊಂದಂಟು=ಪಿರಿದೊಂದು(ಹಿರಿದಾದದ್ದು)+ಅಂಟು.

ADVERTISEMENT

ವಾಚ್ಯಾರ್ಥ: ಸೂರ್ಯನಿಗೆ ಕಿರಣಗಳ ನಂಟು, ಆಕಾಶಕ್ಕೆ ನೀರಿನ ನಂಟು, ಭೂಮಿಗೆ ಚಲನೆಯ ನಂಟು, ವಾಯುವಿನೊಂದಿಗೆ ನಂಟು. ಇಡೀ ವಿಶ್ವವೇ ವಿಧವಿಧವಾದ ನಂಟುಗಳ ಗಂಟಾಗಿದೆ. ಕಿರಿದಾದಕ್ಕೂ, ಹಿರಿದಾದಕ್ಕೂ ನಂಟಿದೆ.

ವಿವರಣೆ: ಇಡೀ ವಿಶ್ವವೇ ಸಮನ್ವಯತೆಯ, ಏಕತ್ರತೆಯ ದರ್ಶನ. ಇಲ್ಲಿ ಯಾವುದೂ ಸ್ವಯಂ ಸ್ವತಂತ್ರವಲ್ಲ. ಒಂದು ಇನ್ನೊಂದರೊಂದಿಗೆ ಹೆಣೆದುಕೊಂಡಿದೆ. ಸೂರ್ಯನಿದ್ದಾನೆ ಎಂದರೆ ಕಿರಣಗಳು ಇರಲೇಬೇಕು. ಮೋಡಗಳಿರುವುದೇ ಆಕಾಶದಲ್ಲಿ. ಹಾಗಾಗಿ ಅವುಗಳ ಸಂಬಂಧ ಅನಿವಾರ್ಯ. ಭೂಮಿಯು ಎಂದಿಗೂ ನಿಂತಲ್ಲಿ ನಿಲ್ಲಲಾರದು. ಸೂರ್ಯನ ಸುತ್ತಲೂ ಅದರ ಪರಿಭ್ರಮಣೆ ಸೃಷ್ಟಿಯ ನಿಯಮ. ಅದು ಒಂದು ಕ್ಷಣಕಾಲ ಚಲನೆಯನ್ನು ನಿಲ್ಲಿಸಿದರೆ ಪ್ರಪಂಚ ಅಲ್ಲೋಲಕಲ್ಲೋಲವಾಗುತ್ತದೆ. ಇದರೊಂದಿಗೆ ವಾಯುವಿಲ್ಲದೆ ಒಂದು ಗಳಿಗೆಯಾದರೂ ಜೀವಗಳು ಬದುಕಬಹುದೇ? ಪ್ರಪಂಚದೊಂದಿಗೆ ಈ ಒಳನಂಟು ಅದರ ಇರುವಿಕೆಗೆ ಮೂಲ ಕಾರಣ. ಹಾಗೆ ನೋಡಿದರೆ ಒಂದಕ್ಕೆ ಮತ್ತೊಂದರ ನಂಟು. ಯಾವುದಕ್ಕೂ ಅಂಟದ ಯಾವ ವಸ್ತುವೂ ಪ್ರಪಂಚದಲ್ಲಿ ಇಲ್ಲ.

ಅಷ್ಟೇ ಅಲ್ಲ, ಜೀವ ಜಗತ್ತುಗಳಿಗೂ ಬಿಡಲಾರದ ನಂಟು. ಜೀವದಿಂದ ಜಗತ್ತು, ಜೀವಕ್ಕಾಗಿ ಜಗತ್ತು. ಜೀವವಿಲ್ಲದಲ್ಲಿ ಜಗತ್ತಿರಲು ಸಾಧ್ಯವಿಲ್ಲ. ಜೀವವನ್ನು ಬಿಟ್ಟು ಜಗತ್ತು ಇರಬೇಕಾದ ಕಾರಣವಿಲ್ಲ. ಜಗತ್ತು ಇಲ್ಲದೆ ಜೀವವಿರುವುದು ಸಾಧ್ಯವೇ? ಹೀಗೆ ಜೀವವೂ ಜಗತ್ತೂ ಅನ್ಯೋನ್ಯ ಅಪೇಕ್ಷಿಗಳು. ಹೀಗೆ ನಂಟುಗಳ ಗಂಟೇ ಈ ವಿಶ್ವ.

ಕಗ್ಗದ ಕೊನೆಯ ಸಾಲು ಬಹಳ ಮುಖ್ಯ. ಮೇಲ್ನೋಟಕ್ಕೆ ಸುಲಭ ಎನ್ನಿಸಿದರೂ ಅದು ಸೂಚಿಸುವುದು ಆಳವಾದ, ಆಧ್ಯಾತ್ಮಿಕ ಚಿಂತನೆಯನ್ನು. ಅದು ಹೇಳುತ್ತದೆ, ಕಿರಿದಾದದ್ದು ಹಿರಿಯದಾದದ್ದಕ್ಕೆ ಅಂಟಿಗೊಂಡಿದೆ ಎಂದು. ಒಂದು ಜೀವ ಪ್ರಪಂಚದಲ್ಲೆ ಅತ್ಯಂತ ಕಿರಿದಾದದ್ದು. ಪ್ರಪಂಚದಲ್ಲಿ ಅತ್ಯಂತ ಹಿರಿದಾದದ್ದು, ಅನಂತವಾದದ್ದು ದೈವ ಅಥವಾ ಭಗವಂತ. ಇವೆರಡಕ್ಕಂತೂ ಬಿಡಲಾರದ ನಂಟು. ಮನುಷ್ಯ ಪುಣ್ಯಕ್ಕೂ, ದೈವಾನುಗ್ರಹಕ್ಕೂ ಸಂಬಂಧವಿದೆಯೆಂದು ಎಲ್ಲ ಮತಗಳೂ ನಂಬುತ್ತವೆ. ಅಂತೆಯೇ ಮನುಷ್ಯ ಪಾಪಕ್ಕೂ, ದೈವದ ಆಗ್ರಹಕ್ಕೂ ಸಂಬಂಧವಿದೆ. ಇದು ಜೀವ-ದೈವಗಳ, ಕಿರಿದು-ಪಿರಿದುಗಳ ನಂಟು.

ಈ ಸಂಬಂಧಗಳ, ನಂಟುಗಳ ಚಕ್ರದ ಬಗ್ಗೆ ಗೀತೆ ಹೀಗೆ ಹೇಳುತ್ತದೆ –
ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾತ್ ಅನ್ನಸಂಭವಃ |
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞ: ಕರ್ಮ ಸಮುದ್ಭವಃ ||

‘ಪ್ರಪಂಚದ ಸಮಸ್ತ ಜೀವಿಗಳು ಅನ್ನದಿಂದ ಉಂಟಾಗುತ್ತವೆ, ಅನ್ನವೇ ಜೀವನದ ಮೂಲ. ಈ ಅನ್ನ ಸಾಧ್ಯವಾಗುವುದು ಮಳೆಯ ಕೃಪೆಯಿಂದ. ಮಳೆಯ ಕೃಪೆಯಾಗುವುದು ಯಜ್ಞದಿಂದ, ಎಂದರೆ ಭಗವದಾರಾಧನೆಯಿಂದ. ಆರಾಧನೆ ಅನೇಕ ಲೌಕಿಕ, ವೈದಿಕ ಕಾರ್ಯಗಳಿಂದಾದದ್ದು’.

ಹೀಗೆ ಪ್ರಪಂಚದ ಅಸ್ತಿತ್ವದ ಅನೇಕ ಮಗ್ಗುಲುಗಳು ಒಂದನ್ನೊಂದು ಅಂಟಿಕೊಂಡಿವೆ. ಇದೇ ಪ್ರಪಂಚದ ಸೊಗಸೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.