ADVERTISEMENT

ಪಾಪಿ ದೇವರಾಜ ಪುನೀತನಾದ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಭಾಗ 7

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 26 ಡಿಸೆಂಬರ್ 2021, 19:30 IST
Last Updated 26 ಡಿಸೆಂಬರ್ 2021, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

‘ಕಲಿಯುಗದಲ್ಲಿ ಪಾಪಿಗಳು ಶಿವಪುರಾಣ ಕೇಳಿದರೆ ಪುನೀತರಾ ಗುವರೇ?’ ಎಂದು ಶೌನಕಮುನಿ ಕೇಳುತ್ತಾನೆ. ಅದಕ್ಕೆ ವ್ಯಾಸರ ಪರಮಶಿಷ್ಯ ಸೂತಮುನಿ ‘ಖಂಡಿತ ಪುನೀತರಾಗುವರು. ಇದಕ್ಕೆ ಪರಮ ಪಾಪಿಷ್ಟನಾದ ದೇವರಾಜನ ವೃತ್ತಾಂತವೇ ಸಾಕ್ಷಿ’ ಅಂತ ದೇವರಾಜನೆಂಬ ದುಷ್ಟ ಬ್ರಾಹ್ಮಣನ ಕಥೆಯನ್ನ ಹೇಳುತ್ತಾನೆ.

ಕಿರಾತವೆಂಬ ಪಟ್ಟಣದಲ್ಲಿ ದೇವರಾಜನೆಂಬ ಬ್ರಾಹ್ಮಣನಿದ್ದ. ಅವನು ತನ್ನ ಸ್ವಧರ್ಮವಾದ ಬ್ರಾಹ್ಮಣಕರ್ಮವನ್ನೆಲ್ಲಾ ಬಿಟ್ಟು, ದೇವರ ಪೂಜೆಯನ್ನೂ ಮಾಡದೆ, ಸ್ನಾನ-ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನೂ ಮಾಡದೆ, ಸದಾ ಕಾಲ ರಸವಿಕ್ರಯ, ಪರವಂಚನೆಯಂಥ ದುರ್ವ್ಯವಹಾರ ಗಳಲ್ಲಿ ತೊಡಗಿದ್ದ. ಎಲ್ಲಾ ಜಾತಿಯವರನ್ನೂ ಕೊಲ್ಲುತ್ತ, ಅವರ ಧನವ ನ್ನೆಲ್ಲಾ ಅಪಹರಿಸುತ್ತಿದ್ದ. ಅನ್ಯಾಯಮಾರ್ಗದಿಂದ ಬೇಕಾದಷ್ಟು ಹಣ ವನ್ನ ಸಂಪಾದಿಸಿದರೂ ಆ ಪಾಪಿ ಸ್ವಲ್ಪವನ್ನೂ ಧರ್ಮಕಾರ್ಯಗಳಿಗೆ ಉಪಯೋಗಿಸುತ್ತಿರಲಿಲ್ಲ.

ಒಂದು ದಿನ ದೇವರಾಜ ಸ್ನಾನಕ್ಕೆಂದು ಕೆರೆಗೆ ಹೋದ. ಅಲ್ಲಿ ಶೋಭಾವತಿ ಎಂಬ ವೇಶ್ಯೆಯನ್ನು ನೋಡಿ ಮೋಹಿತನಾದ. ಶೋಭಾವತಿಯು ದೇವರಾಜನಲ್ಲಿ ಹಣ ಇದೆ ಅಂತ, ಅವನೊಂದಿಗೆ ಮೋಹಕವಾಗಿ ಮಾತನಾಡಿ, ತನ್ನ ಮೋಹ ಪಾಶಕ್ಕೆ ಬೀಳಿಸಿಕೊಂಡಳು. ದೇವರಾಜ ಅವಳೊಂದಿಗೆ ಸಂಸಾರ ಮಾಡುತ್ತಾ, ಇಹಪರ ಮರೆತು ಸುಖ ಅನುಭವಿಸುತ್ತಿದ್ದ.

ADVERTISEMENT

ಹೀಗೆ ದೇವರಾಜ ವೇಶ್ಯೆಯೊಂದಿಗೆ ಸುಖ-ಭೋಗ ಅನುಭವಿಸುತ್ತಿದ್ದ. ವೇಶ್ಯೆಯ ಸಹವಾಸ ಬಿಡು ಎಂದು ಬುದ್ಧಿ ಹೇಳಿದ ತನ್ನ ತಂದೆ-ತಾಯಿ-ಪತ್ನಿಯನ್ನ ಕೊಂದು, ಮನೆಯಲ್ಲಿದ್ದ ಹಣವನ್ನೆಲ್ಲಾ ದೋಚಿಕೊಂಡು ವೇಶ್ಯೆ ಶೋಭಾಳಿಗೆ ಕೊಟ್ಟ. ದೇವರಾಜ ನಿತ್ಯ ಮಾಂಸ ತಿನ್ನುತ್ತಾ, ಮದ್ಯವನ್ನು ಕುಡಿಯುತ್ತಾ, ವೇಶ್ಯೆಯೊಡನೆ ಒಂದೇ ತಟ್ಟೆಯಲ್ಲಿ ಊಟ ಮಾಡುವ ಮಹಾಪಾಪಿಯಾಗಿದ್ದ. ಕಾಲಕಳೆದಂತೆ ದೇವರಾಜನ ಕೈ ಬರಿದಾಯಿತು. ಹಣವಿಲ್ಲದ ದೇವರಾಜನನ್ನು ವೇಶ್ಯೆ ತನ್ನ ಮನೆಯಿಂದ ಹೊರ ಹಾಕಿದಳು. ಬೀದಿಪಾಲಾದ ದೇವರಾಜ ತಿನ್ನಲು ಅನ್ನವಿಲ್ಲದೆ ಅಲ್ಲಲ್ಲಿ ತಿರುಗುತ್ತಾ ಒಂದು ದಿನ ಶಿವದೇವಾಲಯದ ಬಳಿ ಬಂದ. ಅಲ್ಲಿ ಅನೇಕ ಸಾಧುಗಳು ನೆರೆದು ಶಿವಕಥಾಶ್ರವಣ ಮಾಡುತ್ತಿದ್ದರು. ವಿಪರೀತವಾದ ಜ್ವರದಿಂದ ಬಳಲುತ್ತಿದ್ದ ದೇವರಾಜ ನಡೆಯಲಾಗದೆ, ಆ ಶಿವದೇವಾಲಯದಲ್ಲಿಯೇ ಕುಳಿತ. ಅಲ್ಲಿ ಬ್ರಾಹ್ಮಣರು ಹೇಳುತ್ತಿದ್ದ ಶಿವನ ಕಥೆ ಅವನ ಕಿವಿಗೆ ಬೀಳು ತ್ತಿತ್ತು. ಹೀಗೆ ಶಿವಪುರಾಣ ಕೇಳಿದ ಒಂದು ತಿಂಗಳ ನಂತರ ದೇವರಾಜನ ಜ್ವರವಾಸಿಯಾಗದೆ ಸತ್ತುಹೋದ. ಯಮನಭಟರು ಅವನನ್ನ ಯಮಪಾಶಗಳಿಂದ ಬಿಗಿದು, ಯಮನಪಟ್ಟಣಕ್ಕೆ ಒಯ್ದರು.

ಇದನ್ನು ಕಂಡ ಶಿವದೂತರು ಕೈಲಾಸದಿಂದ ತ್ರಿಶೂಲಗಳನ್ನು ಹಿಡಿದು ಉರಿಗೋಪದಿಂದ ಯಮನ ಪಟ್ಟಣಕ್ಕೆ ಧಾವಿಸಿ ಬಂದರು. ಯಮದೂತರನ್ನ ತಡೆದು, ದೇವರಾಜನನ್ನ ನರಕಲೋಕದಿಂದ ಬಿಡಿಸಿ ದರು. ಇನ್ನೇನು ದೇವರಾಜನನ್ನು ದೇವವಿಮಾನದಲ್ಲಿ ಕೈಲಾಸಕ್ಕೆ ಕರೆದೊ ಯ್ಯುವಷ್ಟರಲ್ಲಿ, ಮತ್ತೆ ಯಮದೂತರು ದುಷ್ಟ ದೇವರಾಜನನ್ನು ಆತನ ಪಾಪಕೃತ್ಯಕ್ಕಾಗಿ ನರಕದಲ್ಲೇ ಇರಬೇಕೆಂದು ಅಡ್ಡಿಪಡಿಸಿದರು. ಈ ಗಲಾಟೆ ಕೇಳಿ ಯಮಪುರಿ ಮಹಾರಾಜನಾದ ಸ್ವತಃ ಯಮನೇ ಅಲ್ಲಿಗೆ ಬಂದು ಶಿವದೂತರಿಗೆ ವಿನೀತನಾಗಿ ನಮಸ್ಕರಿಸಿದ. ಶಿವದೂತರು ಏಕೆ ಯಮಪುರಿಗೆ ಬಂದು, ದೇವರಾಜನನ್ನ ಕೈಲಾಸಕ್ಕೆ ಕರೆದೊಯ್ಯುತ್ತಿದ್ದಾರೆ ಎಂಬುದನ್ನ ತನ್ನ ದಿವ್ಯದೃಷ್ಟಿಯಿಂದ ತಿಳಿದುಕೊಂಡ. ನಂತರ ಯಮರಾಜ ಶಿವದೂತರನ್ನ ಯಥೋಚಿತವಾಗಿ ಪೂಜಿಸಿ ಬೀಳ್ಕೊಟ್ಟ. ದೇವರಾಜನನ್ನು ಕೈಲಾಸಕ್ಕೆ ಕರೆದೊಯ್ದ ಶಿವದೂತರು ಈಶ್ವರನಿಗೆ ಅರ್ಪಿಸಿದರು.

ವೇದ ಬಲ್ಲ ಜ್ಞಾನಿಗಳೆಲ್ಲಾ ಹೇಳೋ ಪ್ರಕಾರ ‘ಎಲ್ಲ 14 ಲೋಕ ಗಳಿಗಿಂತಲೂ ಕೈಲಾಸಲೋಕ ಶ್ರೇಷ್ಠವಾದದ್ದು. ಕೈಲಾಸಲೋಕ ಮೇಲಿದ್ದರೆ, ಅದರ ಕೆಳಗೆ ಇತರೆ ಲೋಕಗಳಿವೆ. ಇಂಥ ಕೈಲಾಸ ಸೇರಲು ಬಹಳ ಪುಣ್ಯ ಮಾಡಿರಬೇಕು. ಪರಮಪವಿತ್ರವಾದ ಕೈಲಾಸವನ್ನ ಪರಮಪಾಪಿಯಾದ ದೇವರಾಜ ಸೇರಿದ್ದು ಶಿವಪುರಾಣಾಮೃತದಿಂದ. ದೇವರಾಜನಂತಹ ಪಾಪಿಯೇ ಶಿವಪುರಾಣದಿಂದ ಸದ್ಗತಿ ಪಡೆಯುತ್ತಾನೆಂದ ಮೇಲೆ, ಶಿವಪುರಾಣವನ್ನ ಕೇಳಿದ ಉತ್ತಮರು ಇನ್ನೆಂಥ ಪುಣ್ಯ ಸಂಪಾದಿಸಿ, ಶಿವನ ಪ್ರೀತಿಗೆ ಪಾತ್ರರಾಗುತ್ತಾರೆ ಎಂಬುದನ್ನ ಊಹಿಸಬಹುದು’ ಎಂದ ಸೂತಮುನಿ.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.