ಪಡಸಾಲೆ.
‘ವೈಯಕ್ತಿಕವಾಗಿ ಹೇಳುವುದಾದರೆ, ಜೀವನದಲ್ಲಿ ನನಗೆ ಯಾರೂ ಬಂಧುಗಳಿಲ್ಲ. ಇರುವ ಏಕೈಕ ಬಂಧು ಧರ್ಮಸ್ಥಳದ ಮಂಜುನಾಥ.’
ವಿಧಾನಸಭೆಯಲ್ಲಿ ಶಾಸಕರೊಬ್ಬರು ಭಾವುಕ ದನಿಯಲ್ಲಿ ಹೇಳಿದ ಈ ಮಾತನ್ನು ಏನೆಂದು ಅರ್ಥೈಸುವುದು? ‘ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ’ (ಪುರಂದರದಾಸರು) ಎಂದು ಲೌಕಿಕಕ್ಕೆ ಬೆನ್ನುಹಾಕಿದ ವ್ಯಕ್ತಿ ಭಗವಂತನಲ್ಲಿ ಮೊರೆಯಿಡುವುದನ್ನೂ ಅರ್ಥ ಮಾಡಿಕೊಳ್ಳಬಹುದು. ಸಾಮಾನ್ಯ ವ್ಯಕ್ತಿಯೊಬ್ಬ ಹೀಗೆ ಹೇಳಿದರೆ, ಭಾವುಕ ಪ್ರತಿಕ್ರಿಯೆ ಎಂದುಕೊಳ್ಳಬಹುದು. ಆದರೆ, ಲೋಕ ವ್ಯವಹಾರಗಳಲ್ಲಿ ನಿರತರಾಗಿ ಕುಟುಂಬವನ್ನು ಹೊಂದಿರುವ ವ್ಯಕ್ತಿಯೊಬ್ಬರು, ಅದರಲ್ಲೂ ವಿಧಾನಸಭಾ ಕ್ಷೇತ್ರವೊಂದನ್ನು ಪ್ರತಿನಿಧಿಸುವ ಶಾಸಕರು ಹೀಗೆ ಹೇಳಿದರೆ ಅದನ್ನು ಸರಿಯೆನ್ನಬಹುದೆ? ಸಹಜ ಎನ್ನಬಹುದೆ?
ಶಾಸಕರು ಆಸ್ತಿಕರಾಗಿರುವುದರಲ್ಲಿ, ತಮ್ಮ ಭಕ್ತಿಯ ಬಗ್ಗೆ ಹೇಳಿಕೊಳ್ಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ, ಜನರಿಂದ ಚುನಾಯಿತನಾದ ಪ್ರತಿನಿಧಿಯೊಬ್ಬರು ದೇವರ ಹೊರತು ತನಗ್ಯಾರೂ ಬಂಧುಗಳಿಲ್ಲವೆಂದು ಹೇಳಿದರೆ, ಅದನ್ನು ‘ಆತ್ಮವಂಚನೆ’ ಎಂದೇ ಹೇಳಬೇಕಾಗುತ್ತದೆ. ಅದು ತನ್ನ ಕ್ಷೇತ್ರದ ಮತದಾರರಿಗೆ ಮಾಡುವ ವಂಚನೆಯೂ ಹೌದು, ಕುಟುಂಬದ ಸದಸ್ಯರಿಗೆ ಮಾಡುವ ವಂಚನೆಯೂ ಹೌದು.
ರಾಜಕಾರಣಿಯೊಬ್ಬನ ಪಾಲಿಗೆ ತನ್ನ ಕ್ಷೇತ್ರಕ್ಕಿಂತಲೂ ಮಿಗಿಲಾದ ‘ಧರ್ಮ’ಸ್ಥಳ ಹಾಗೂ ಕ್ಷೇತ್ರದ ಮತದಾರರು– ನಿವಾಸಿಗಳಿಗಿಂತಲೂ– ಮಿಗಿಲಾದ ದೈವ–ಬಂಧು ಇರಬಾರದು. ತನ್ನ ಕುಟುಂಬದಾಚೆಗೆ, ಮತಕ್ಷೇತ್ರದಾಚೆಗೆ ಬಂಧುಗಳನ್ನು ಯಾರಾದರೂ ಹುಡುಕ ಹೊರಟರೆ ಅವರ ರಾಜಕಾರಣದ ಪ್ರಾಮಾಣಿಕತೆಯೇ ಪ್ರಶ್ನಾರ್ಹ.
ಏಕೈಕ ಬಂಧುವಿನ ರೂಪದಲ್ಲಿ ದೇವರನ್ನು ನೋಡುವ ಶಾಸಕರ ಮಾತನ್ನು ವೈಯಕ್ತಿಕ ನೆಲೆಯಲ್ಲಿ ನೋಡುವ ಅಗತ್ಯವಿಲ್ಲ. ಅದು, ಈ ಹೊತ್ತಿನ ಅನೇಕ ಜನಪ್ರತಿನಿಧಿಗಳ ಹೃದಯದ ಮಾತೂ ಹೌದು. ಇಂಥ ಜನಪ್ರತಿನಿಧಿಗಳೇ, ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ಒದಗಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು. ಪಕ್ಷಭೇದ ಮರೆತು ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯ ರಕ್ಷಣೆಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು. ಧರ್ಮದ ಬಗೆಗಿನ, ಧರ್ಮಸ್ಥಳದ ಬಗೆಗಿನ ಇವರ ಬದ್ಧತೆ ಅಚ್ಚರಿ ಹುಟ್ಟಿಸುವಂತಿದ್ದರೂ ಅಸಹಜವೇನಲ್ಲ. ಆದರೆ, ಈ ಬದ್ಧತೆಯ ಬೆಳಕಿನಲ್ಲಿ ಅಸಹಜವಾಗಿ ಕಾಣಿಸುತ್ತಿರುವ ಸಂಗತಿಯೊಂದನ್ನು ಗಮನಿಸಬೇಕಾಗಿದೆ: ತಮಗೆ ನೇರವಾಗಿ ಸಂಬಂಧಪಡದ ಕ್ಷೇತ್ರವೊಂದರ ಕುರಿತು ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿರುವ ಬದ್ಧತೆ, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ಎಂದಾದರೂ ವ್ಯಕ್ತಪಡಿಸಿದ್ದಾರೆಯೆ? ತಮ್ಮ ಕ್ಷೇತ್ರದ ಪಾವಿತ್ರ್ಯಕ್ಕೆ ಗಾಸಿಯಾಯಿತೆನ್ನುವ ಆತಂಕ, ತಾವು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲವೆನ್ನುವ ಕಳವಳ ಅವರನ್ನು ಎಂದಾದರೂ ಕಾಡಿದೆಯೆ? ಕಾಡಿದ್ದೇ ಆದಲ್ಲಿ ಆ ಕ್ಷೇತ್ರಗಳು ಯಾಕೆ ಅಭಿವೃದ್ಧಿ ಹೊಂದಿಲ್ಲ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಜನಪ್ರತಿನಿಧಿಗಳು ವಿಧಾನಮಂಡಲದಲ್ಲಿ ಕಳವಳ, ಆಕ್ರೋಶ ವ್ಯಕ್ತಪಡಿಸಲು ಪೈಪೋಟಿ ನಡೆಸುತ್ತಿದ್ದ ಸಂದರ್ಭದಲ್ಲೇ, ಒಳಮೀಸಲಿನಲ್ಲಿ ತಾವು ಮೂಲೆಗುಂಪಾಗಿರುವ ಬಗ್ಗೆ ಅಲೆಮಾರಿ ಸಮುದಾಯಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ನೈಜ ಜನಪ್ರತಿನಿಧಿಯೊಬ್ಬನಿಗೆ ಅಸಹಾಯಕ ವ್ಯಕ್ತಿಗಳಿಗಿಂತಲೂ ಮಿಗಿಲಾದ ಬಂಧು ಅಥವಾ ದೈವವಿರಲಾರದು. ದುರದೃಷ್ಟಕರ ಸಂಗತಿಯೆಂದರೆ, ವಿಧಾನಸೌಧಕ್ಕೆ ಸಮೀಪದಲ್ಲಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಅಲೆಮಾರಿಗಳ ಹೋರಾಟದ ಬಗ್ಗೆ ಜನಪ್ರತಿನಿಧಿಗಳು ಸಂವೇದನಾಶೂನ್ಯರಾಗಿದ್ದಾರೆ. ಅಲೆಮಾರಿಗಳಿಗೆ ನ್ಯಾಯ ದೊರಕಿಸಿಕೊಡುವುದಕ್ಕಿಂತಲೂ ಮಿಗಿಲಾದ ‘ಧರ್ಮಪಾಲನೆ’ ಇಲ್ಲ ಎನ್ನುವುದು ಅವರಿಗೆ ತಿಳಿಯದ್ದೇನಲ್ಲ. ಆದರೆ, ಓಟು ತಂದುಕೊಡದ ‘ಧರ್ಮ’ ಸದ್ಯದ ರಾಜಕಾರಣಿಗಳಿಗೆ ಧರ್ಮವೇ ಅಲ್ಲ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ, ‘ವಿಶೇಷ ತನಿಖಾ ತಂಡ’ (ಎಸ್‌ಐಟಿ) ನಡೆಸಿದ ಶೋಧದಲ್ಲಿ ಅಸ್ಥಿಪಂಜರಗಳು ದೊರಕಿಲ್ಲ ಎನ್ನುವುದು ಖಚಿತವಾಗುತ್ತಿರುವಂತೆಯೇ, ಕ್ಷೇತ್ರದ ಪಾವಿತ್ರ್ಯದ ಬಗ್ಗೆ ಮಾತನಾಡುವವರಿಗೆ ಉತ್ಸಾಹಕ್ಕೆ ರೆಕ್ಕೆಗಳು ಮೂಡಿರುವಂತಿದೆ. ‘ಮಂಜುನಾಥನ ದರ್ಶನ ಪಡೆದು ಕ್ಷಮೆ ಕೇಳಲಿ’ ಎಂದು ಕೇಂದ್ರ ಸಚಿವರೊಬ್ಬರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ದರ್ಶನ ಮತ್ತು ಕ್ಷಮೆಯ ಪರಿಕಲ್ಪನೆ ಚೆನ್ನಾಗಿದೆ. ಆದರೆ, ಜನಪ್ರತಿನಿಧಿಗಳು ಮೊದಲು ಮಂಡಿಯೂರಿ ಕ್ಷಮೆ ಯಾಚಿಸಬೇಕಾದುದು ತಮ್ಮ ಮತಕ್ಷೇತ್ರಗಳ ಮತದಾರರನ್ನು ಅಲ್ಲವೇ? ತಾವು ಪ್ರತಿನಿಧಿಸುವ ಕ್ಷೇತ್ರದ ಜನರನ್ನು ಅಭಿವೃದ್ಧಿಯ ಬೆಳಕಿಗೆ ತರಲಾಗದ ತಮ್ಮ ಅಸಾಮರ್ಥ್ಯ–ವೈಫಲ್ಯದ ಬಗ್ಗೆ ಜನಪ್ರತಿನಿಧಿಗಳು ತೋರಿಕೆಗಾದರೂ ಮತದಾರರ ಕ್ಷಮೆ ಕೋರಿರುವ ನಿದರ್ಶನ ಈ ದೇಶದಲ್ಲಿ ಎಲ್ಲಿಯೂ ಇರುವಂತಿಲ್ಲ.
ರಾಜಕೀಯಕ್ಕಾಗಿ ಧರ್ಮವನ್ನು ಬಳಸುವ ರಾಜಕಾರಣಿಗಳು ನೈಜ ಧರ್ಮ ಯಾವುದೆನ್ನುವುದನ್ನು ಯೋಚಿಸುವುದಿಲ್ಲ. ಧರ್ಮದ ಮೂಲ ಮಾದರಿಗಳಿಗಾಗಿ ರಾಮಾಯಣ, ಮಹಾಭಾರತವನ್ನು ಉಲ್ಲೇಖಿಸುತ್ತೇವೆ. ರಾಮಾಯಣದ ಕಥಾನಾಯಕ ಶ್ರೀರಾಮ, ತನ್ನ ಧರ್ಮನಿಷ್ಠೆಯ ಒರೆಗಲ್ಲನ್ನಾಗಿ ನೆಚ್ಚಿದ್ದುದು ತಾನು ಪರಿಪಾಲಿಸುತ್ತಿದ್ದ ಸಾಮ್ರಾಜ್ಯದ ಶ್ರೀಸಾಮಾನ್ಯನ ಅಭಿಪ್ರಾಯಗಳನ್ನು. ಪತ್ನಿಯ ಚಾರಿತ್ರ್ಯದ ಬಗ್ಗೆ ಅಪರಿಮಿತ ನಂಬಿಕೆಯಿದ್ದರೂ, ಜನಾಭಿಪ್ರಾಯಕ್ಕೆ ಅಳುಕಿ ಸೀತೆಯನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಲು ರಾಮ ಹಿಂಜರಿಯಲಿಲ್ಲ. ಕೊನೆಗೆ, ಪ್ರಜೆಯೊಬ್ಬನ ಮಾತಿಗೆ ಅಳುಕಿ ಒಡಲು ತುಂಬಿಕೊಂಡಿದ್ದ ಪತ್ನಿಯನ್ನೇ ತ್ಯಜಿಸಿದ. ಉಗ್ರ ನೈತಿಕತೆ ರಾಮನ ಧರ್ಮವಾಗಿತ್ತು. ಸರಳವಾಗಿ ಹೇಳುವುದಾದರೆ, ತಾನು ಪ್ರತಿನಿಧಿಸುವ ಪ್ರಜೆಗಳ ಆಶೋತ್ತರಗಳಿಗೆ ಉತ್ತರದಾಯಿ ಆಗಿರುವುದು ರಾಮನ ಧರ್ಮವಾಗಿತ್ತು. ಆ ರಾಮನನ್ನು ಮಾದರಿ ಎಂದು ಹೇಳಿಕೊಳ್ಳುತ್ತಿರುವವರು ಅನುಸರಿಸುತ್ತಿರುವ ಧರ್ಮ ಯಾವುದು? ರಾಮನ ಹೆಸರನ್ನು ಹಾಗೂ ರಾಮಧನುವಿನ ಠೇಂಕಾರವನ್ನಷ್ಟೇ ಉಳಿಸಿಕೊಂಡಿ
ರುವ ಇಂದಿನ ರಾಜಕಾರಣಿಗಳು, ರಾಮನ ಧರ್ಮವನ್ನು ಮೂಲೆಗುಂಪು ಮಾಡಿದ್ದಾರೆ. ಧರ್ಮರಕ್ಷಣೆಯ ಹೆಸರಿನಲ್ಲಿ ಈಗ ಆಗುತ್ತಿರುವುದು, ಭಾರತೀಯ ಸ್ಮೃತಿಗಳ ಮೂಲ ಮಾದರಿಗಳನ್ನು ಅವಮಾನಿಸುವ ಕೆಲಸ.
ರಾಮನನ್ನು ಅಪಾರವಾಗಿ ಪ್ರೇಮಿಸುತ್ತಿದ್ದ ಮಹಾತ್ಮ ಗಾಂಧೀಜಿ ಅವರ ಧರ್ಮದ ಕೇಂದ್ರದಲ್ಲಿ ಇದ್ದುದು ನೈತಿಕತೆಯೇ. ಆದರೆ, ಗಾಂಧಿಯ ಧರ್ಮದ ಪರಿಕಲ್ಪನೆ ಏಕಮುಖವಾಗಿರಲಿಲ್ಲ. ಗಾಂಧಿ ರಾಜಕಾರಣದ ಧರ್ಮದಲ್ಲಿ ಬುದ್ಧನ ಪ್ರೇಮದೊಂದಿಗೆ ಕ್ರಿಸ್ತನ ಕರುಣೆಯೂ ಇದೆ. ಈಶ್ವರನ ಜೊತೆಗೆ ಅಲ್ಲಾಹು ಕೂಡ ಇದ್ದಾನೆ. ಗಾಂಧಿ ಸೇರಿದಂತೆ ಮಾತೃಮಾದರಿಯ ನಾಯಕರೆಲ್ಲರೂ, ದೇಶದ ಬಹುತ್ವವನ್ನು ಪ್ರತಿನಿಧಿಸುವುದು ಹಾಗೂ ಅನುಸರಿಸುವುದನ್ನೇ ರಾಜಕಾರಣದಲ್ಲಿನ ಧರ್ಮದ ರೂಪದಲ್ಲಿ ಕಂಡರು. ಸ್ವಾತಂತ್ರ್ಯಾನಂತರ ಅಂಬೇಡ್ಕರ್ ಅರಿವಿನ ಬೆಳಕಿನಲ್ಲಿ ರೂಪುಗೊಂಡ ಸಂವಿಧಾನ ಕೂಡ ‘ಬಹುತ್ವ ಧರ್ಮ’ವನ್ನೇ ಪ್ರತಿಪಾದಿಸುತ್ತದೆ. ಧರ್ಮ ನಿರಪೇಕ್ಷತೆ ಎನ್ನುವುದನ್ನು ಧರ್ಮರಹಿತ ಎನ್ನುವ ಅರ್ಥದಲ್ಲಿ ನೋಡಬೇಕಾಗಿಲ್ಲ. ಧಾರ್ಮಿಕ ಬಹುತ್ವವೇ ಸಂವಿಧಾನದ ಜೀವಾಳವಾದ ಧರ್ಮ ನಿರಪೇಕ್ಷತೆಯಾಗಿದೆ. ಹಾಗಾಗಿ, ರಾಜಕೀಯದಲ್ಲಿ ಧರ್ಮವನ್ನು ಅಪೇಕ್ಷಿಸುವವರಿಗೆ ಸಂವಿಧಾನವೇ ಧರ್ಮವಾಗಿದೆ. ಈ ವಾಸ್ತವವನ್ನು ಅರ್ಥ ಮಾಡಿಕೊಂಡರೆ, ಧರ್ಮ ರಕ್ಷಣೆಯ ಹೋರಾಟ ಎನ್ನುವುದೇ ಅರ್ಥಹೀನವಾಗುತ್ತದೆ; ರಾಜಕಾರಣದ ಹೆಸರಿನಲ್ಲಿ ಧರ್ಮರಕ್ಷಣೆ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ವರ್ತಮಾನದ ರಾಜಕಾರಣಿಗಳು ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವುದು, ಧರ್ಮದ ಹೆಸರಿನಲ್ಲಿ ಅಧರ್ಮ ಎಸಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳಿಗಾಗಿ ನಡೆಸಿದ ಶೋಧ ವರ್ತಮಾನದ ವಿರೋಧಭಾಸಗಳನ್ನು ಸಂಕೇತಿಸುವ ರೂಪಕದಂತಿದೆ. ಒಂದಷ್ಟು ಕಡೆ ಮಣ್ಣು ಅಗೆದು ಅಸ್ಥಿಪಂಜರಗಳ ಹುಡುಕಾಟ ನಡೆಯಿತಷ್ಟೇ; ಆದರೆ, ನಿಜವಾದ ಅಗೆತ ಆಗಬೇಕಾಗಿದ್ದುದು ನಮ್ಮನ್ನು ಪ್ರತಿನಿಧಿಸುವವರ ಮನಸ್ಸುಗಳಲ್ಲಿ. ಯಾವ ಜನಪ್ರತಿನಿಧಿಯ ಮನಸ್ಸಿನಲ್ಲಿ ಉತ್ಖನನ ನಡೆದರೂ, ಅಲ್ಲಿ ಅಸ್ಥಿಪಂಜರಗಳ ಬಣವೆಯೇ ದೊರೆಯುತ್ತದೆ ಎನ್ನುವುದನ್ನು ರಾಜಕಾರಣದ ಸೂಕ್ಷ್ಮಗಳನ್ನು ತಿಳಿದ ಯಾರೂ ಅಲ್ಲಗಳೆಯಲಾರರು. ದುರದೃಷ್ಟ
ಕರ ಸಂಗತಿಯೆಂದರೆ, ಭ್ರಷ್ಟಗೊಂಡ ವ್ಯವಸ್ಥೆಯ ಭಾಗವಾಗಿರುವ ನಮ್ಮ ಎದೆಗಳಲ್ಲೂ ಅಸ್ಥಿಪಂಜರಗಳ ಚೂರುಪಾರು ಮುರುಕುಗಳು ಯಾವುದೋ ಮಾಯದಲ್ಲಿ ಬಂದು ಬಿದ್ದಿರುವುದು. ಸತ್ಯ ಹುದುಗಿ
ರುವುದು ಮಣ್ಣಲ್ಲಲ್ಲ, ಮನಸ್ಸುಗಳಲ್ಲಿ. ಎಷ್ಟು ಜನರ ಅಂತರಂಗದಲ್ಲಿ ಅಂತಃಕರಣದ ಅಂತರ್ಜಲದ ಒರತೆ ಇದೆಯೆಂದು ಹೇಳಲಾಗದು; ಅಸ್ಥಿಪಂಜರಗಳಂತೂ ಇದ್ದೇ ಇವೆ.
ಯಾವುದೋ ಕ್ಷೇತ್ರದ ಬಗ್ಗೆ ಮಾತನಾಡುತ್ತ ತಮ್ಮ ಕ್ಷೇತ್ರವನ್ನು ನಿರ್ಲಕ್ಷಿಸುವ– ಕ್ಷೇತ್ರದ ಮತದಾರರು ತಮ್ಮ ಬಗ್ಗೆ ಏನನ್ನು ಯೋಚಿಸಬಹುದೆನ್ನುವುದರ ಬಗ್ಗೆ ಅಳುಕಿಲ್ಲದ– ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ ಆಶಯಗಳನ್ನು ನಿರಂತರವಾಗಿ ಮುಕ್ಕಾಗಿಸುತ್ತಿದ್ದಾರೆ. ಕಾಳಜಿ, ವಾತ್ಸಲ್ಯ ಹಾಗೂ ಸೇವೆಯ ಮೂಲಕ ಪ್ರಜೆಗಳ ಮನಸ್ಸನ್ನು ಗೆಲ್ಲುವ ರಾಜಕಾರಣದ ಮಾದರಿ ಈಗ ನೇಪಥ್ಯಕ್ಕೆ ಸರಿದಿದೆ. ಈಗ ಇರುವುದು, ಪ್ರಜೆಗಳನ್ನು ಒಂದಲ್ಲಾ ಒಂದು ಬಗೆಯ ಅಮಲಿನಲ್ಲಿ ಅಥವಾ ಅಂಕೆಯಲ್ಲಿ ಇರಿಸಿ
ಕೊಳ್ಳುವ ರಾಜಕಾರಣ. ಹಣ, ಜಾತಿ, ಧರ್ಮ, ಪಶುಬಲ, ಇವೆಲ್ಲವೂ ಯಶಸ್ವಿ ರಾಜಕಾರಣದ ಭಾಗವಾಗಿವೆ. ರಾಜಕಾರಣದಲ್ಲಿ ಮೌಲ್ಯಗಳೆನ್ನುವ ಅಸ್ಥಿಪಂಜರಗಳನ್ನು ಬಡಪಾಯಿ ಶ್ರೀಸಾಮಾನ್ಯ ಹುಡುಕುತ್ತಿದ್ದಾನೆ. ಸಿಕ್ಕರೆ ನಿರಾಶೆ, ಸಿಗದೆಹೋದರೆ ದಿಗ್ಭ್ರಮೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.