ADVERTISEMENT

ಎಂದೂ ಮುಗಿಯದ ಕದನ, ಏನೀ ಮೂರ್ಖತನ?

ಸುಧೀಂದ್ರ ಬುಧ್ಯ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಎಂದೂ ಮುಗಿಯದ ಕದನ, ಏನೀ ಮೂರ್ಖತನ?
ಎಂದೂ ಮುಗಿಯದ ಕದನ, ಏನೀ ಮೂರ್ಖತನ?   

ಕಳೆದ ಶುಕ್ರವಾರ ಅಫ್ಗಾನಿಸ್ತಾನದ ಕುರಿತಾಗಿ ನಡೆದ ವಿಶ್ವಸಂಸ್ಥೆಯ ಚರ್ಚೆಯಲ್ಲಿ ಅಮೆರಿಕ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಮಾತನಾಡಿತು– ‘ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನ ಕಠಿಣ ನಿಲುವು ಕೈಗೊಳ್ಳಬೇಕು’ ಎಂದು. ಅಮೆರಿಕ ಮತ್ತು ಅಫ್ಗಾನಿಸ್ತಾನದ ರಾಯಭಾರಿಗಳು ಒಕ್ಕೊರಲಿನಿಂದ ಆಗ್ರಹಿಸಿದರು. ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಕೂಡ ತಮ್ಮ ಮಾತು ಜೋಡಿಸಿದರು. ಅಲ್ಲಿಗೆ ಕಳೆದ ಮೂರು ವಾರಗಳಲ್ಲಿ ಅಮೆರಿಕ ಎರಡು ಬಾರಿ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ರವಾನಿಸಿದಂತಾಗಿದೆ.

ಮೊದಲಿಗೆ, ವರ್ಷಾರಂಭದ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಒಂದು ಅಪ್ರಿಯ ಸತ್ಯವನ್ನು ಟ್ವೀಟ್ ಮಾಡಿದರು. ಅದು ಅಮೆರಿಕ ಮತ್ತು ಪಾಕಿಸ್ತಾನ ಎರಡರ ಮಟ್ಟಿಗೂ ಅಪ್ರಿಯ ಸತ್ಯವೇ ಆಗಿತ್ತು. ‘ಪಾಕಿಸ್ತಾನವು ಉಗ್ರ ನಿಗ್ರಹದ ಸೋಗಿನಲ್ಲಿ ಉಗ್ರರಿಗೆ ಪುಷ್ಟಿ ತುಂಬುವ ಕೆಲಸ ಮಾಡುತ್ತಿದೆ’ ಎಂಬುದು ಪಾಕಿಸ್ತಾನದ ಪಾಲಿಗೆ ಅಪ್ರಿಯ ಸತ್ಯವಾದರೆ. ಅಮೆರಿಕ ಅಧ್ಯಕ್ಷರು ‘ನಾವು ಮೂರ್ಖರಾದೆವು’ ಎಂಬ ಆಡಬಾರದ ಸತ್ಯವನ್ನು ಕೊಂಚ ಬೇಸರದಲ್ಲಿ ಹೊಸವರ್ಷದ ದಿನ ಆಡಿದರು. ‘ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಬರೋಬ್ಬರಿ 2.1 ಲಕ್ಷ ಕೋಟಿ ರೂಪಾಯಿ ನೀಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕಕ್ಕೆ ದೊರೆತಿರುವುದು ವಂಚನೆ ಮತ್ತು ಸುಳ್ಳಿನ ಬಳುವಳಿ ಮಾತ್ರ. ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದೆ. ಅಮೆರಿಕದ ನಾಯಕರನ್ನು ಮೂರ್ಖರು ಎಂದು ಪಾಕಿಸ್ತಾನ ಭಾವಿಸಿರುವಂತಿದೆ. ಇನ್ನು ಮುಂದೆ ಇದು ನಡೆಯದು’ ಎಂಬ ಮಾತನ್ನು ಟ್ರಂಪ್ ಆಡಿದರು. ಇದಕ್ಕೆ ಅಮೆರಿಕದ ಹಲವು ಸಂಸದರು, ಡೆಮಾಕ್ರಟಿಕ್ ಪಕ್ಷದ ಮುಖಂಡರೂ ದನಿಗೂಡಿಸಿದರು.

ಇದಕ್ಕೆ ಪಾಕಿಸ್ತಾನವೂ ಒಕ್ಕೊರಲಿನಿಂದ ಪ್ರತಿಕ್ರಿಯಿಸಿತು. ‘ಮಿತ್ರ ರಾಷ್ಟ್ರದ ಕುರಿತು ಆಡುವ ಮಾತು ಇದಲ್ಲ. ಹಾಗಾಗಿ ಅಮೆರಿಕ ಮತ್ತು ಪಾಕಿಸ್ತಾನ ಮಿತ್ರ ರಾಷ್ಟ್ರಗಳಲ್ಲ’ ಎಂಬ ಪ್ರತಿಕ್ರಿಯೆಯನ್ನು ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಆಸೀಫ್ ನೀಡಿದರು. ಪಾಕಿಸ್ತಾನದ ಬಹುತೇಕ ರಾಜಕೀಯ ನಾಯಕರ ಮಾತು ‘ಅಮೆರಿಕದ ಸಹವಾಸ ಇನ್ನು ಸಾಕು’ ಎಂಬಂತೆ ಇತ್ತು.

ADVERTISEMENT

ಪರೋಕ್ಷವಾಗಿ ಭಾರತಕ್ಕೆ ತಗುಲಿಕೊಂಡಿರುವ ಇತ್ತೀಚಿನ ಈ ಬೆಳವಣಿಗೆಯನ್ನು ಕೆಲವು ಪ್ರಶ್ನೆಗಳನ್ನು ಇಟ್ಟುಕೊಂಡೇ ನೋಡಬೇಕು. ಮುಖ್ಯವಾಗಿ, ಪಾಕಿಸ್ತಾನ ಕುರಿತಾಗಿ ಅಮೆರಿಕದ ಧೋರಣೆ ಬದಲಾಗಿದ್ದಕ್ಕೆ ಕಾರಣವೇನು? ಅಮೆರಿಕದ ಅಧ್ಯಕ್ಷರು ಕಠಿಣ ಶಬ್ದಗಳನ್ನು ಒಂದು ಕಾಲದ ಮಿತ್ರನ ಕುರಿತು ಬಳಸಿದ್ದೇಕೆ? ಈ ಹೆದರು- ಗದರು ಆಟದಿಂದ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಸಾಧ್ಯವೇ?

ಹಾಗೆ ನೋಡಿದರೆ, ಅಮೆರಿಕ ಮತ್ತು ಪಾಕಿಸ್ತಾನದ ಸಖ್ಯ ತೀರಾ ಹಳೆಯದು. ವಿಭಜನೆಯ ಬಳಿಕ ಭಾರತ ಮೊದಲಿಗೆ ರಷ್ಯಾದತ್ತ, ನಂತರ ಅಲಿಪ್ತ ಒಕ್ಕೂಟ ಎನ್ನುತ್ತಾ ತಟಸ್ಥ ನಿಲುವು ತಳೆದರೆ, ಪಾಕಿಸ್ತಾನ ಅಮೆರಿಕದೊಂದಿಗೆ ಸಖ್ಯ ಬೆಳೆಸಿತ್ತು. 1954ರಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿದವು. ಆ ನಂತರ ಝುಲ್ಫಿಕರ್ ಅಲಿ ಭುಟ್ಟೊ ಅವಧಿಯಲ್ಲಿ ಅವರ ಕಮ್ಯುನಿಸಂ ಒಲವು, ದ್ವಿಪಕ್ಷೀಯ ಸಂಬಂಧದಲ್ಲಿ ಕೊಂಚ ವ್ಯತ್ಯಯವಾಗುವುದಕ್ಕೆ ಕಾರಣವಾಯಿತು. ಆದರೆ ಜನರಲ್ ಮೊಹಮದ್ ಜಿಯಾ ಮತ್ತು ರೇಗನ್ ಅವಧಿಯಲ್ಲಿ ಸಂಬಂಧ ಮತ್ತಷ್ಟು ಗಾಢವಾಯಿತು. ಪಾಕಿಸ್ತಾನ 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿತ್ತು ಎನ್ನುವುದು ಬಿಟ್ಟರೆ, ಕಠಿಣ ಮಾತುಗಳ ವಿನಿಮಯ ಎರಡು ದೇಶಗಳ ನಡುವೆ ಆದದ್ದು ಕಡಿಮೆ.

ನಂತರ ಅಲ್‌ ಕೈದಾ ಅಮೆರಿಕದ ಮೇಲೆರಗಿ, ‘ಭಯೋತ್ಪಾದನೆಯ ವಿರುದ್ಧ ಸಮರ’ವನ್ನು ಅಮೆರಿಕ ಸಾರಿದಾಗ ಪುನಃ ಪಾಕಿಸ್ತಾನವನ್ನು ತನ್ನ ಜೊತೆಗಾರನನ್ನಾಗಿಸಿಕೊಂಡು ದಿಗ್ಬಂಧನ ಸಡಿಲಿಸಿತು. ಅಂದಿನಿಂದ ಪಾಕಿಸ್ತಾನ ಅಮೆರಿಕವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಲು ಆರಂಭಿಸಿತು. ಒಂದೆಡೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸಾವಿರಾರು ಕೋಟಿ ಡಾಲರ್ ಪಡೆದುಕೊಳ್ಳುವುದು. ಆ ಹಣವನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವುದು ಪಾಕಿಸ್ತಾನದ ಕಸುಬಾಯಿತು. ‘ಉಗ್ರ ನಿಗ್ರಹ’ ಎಂದೂ ಮುಗಿಯದ ಕತೆಯಾಗಿ ಅಮೆರಿಕಕ್ಕೆ ಪರಿಣಮಿಸಿತು.

ಕಳೆದ ಅಧ್ಯಕ್ಷೀಯ ಚುನಾವಣೆಯ ವೇಳೆ, ‘ಜಗತ್ತಿನ ಉಸಾಬರಿಯನ್ನು ಅಮೆರಿಕ ತಲೆಗೆ ಕಟ್ಟಿಕೊಂಡು ಸಾಕಷ್ಟು ಹಣ ಖರ್ಚು ಮಾಡುತ್ತಿದೆ, ಅದನ್ನು ತನ್ನ ದೇಶದಲ್ಲೇ ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕು’ ಎಂಬ ವಾದ ಹುಟ್ಟಿಕೊಂಡಿತು. ಅಧಿಕಾರಕ್ಕೆ ಬಂದೊಡನೆ ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆಯನ್ನು ವಾಪಸು ಕರೆಸಿಕೊಳ್ಳುವ ಆಶ್ವಾಸನೆಯನ್ನು ಟ್ರಂಪ್ ನೀಡಿದ್ದರು. ಆದರೆ ಇದೀಗ ಅಮೆರಿಕದ ಆಡಳಿತಕ್ಕೆ ಅಫ್ಗಾನಿಸ್ತಾನದ ವಿಷಯ, ಇರುವೆ ಗೂಡಿನ ಮೇಲೆ ಕಾಲೂರಿ ಸಂಡಾಸಿಗೆ ಕೂತಂತೆ ಆಗಿದೆ. ಎದ್ದು ಓಡಲಾಗದು, ಕಚ್ಚಿಸಿಕೊಂಡು ಕೂರಲೂ ಆಗದು ಎನ್ನುವ ಪರಿಸ್ಥಿತಿ. ಹಾಗಾಗಿ ಟ್ರಂಪ್ ತಮ್ಮ ಅಸಹನೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಇನ್ನು, ಅಫ್ಗಾನಿಸ್ತಾನದ ವಿಷಯ ನೋಡುವುದಾದರೆ, ಅದರ ದುಃಸ್ಥಿತಿ ಆರಂಭವಾದದ್ದು 9/11 ದಾಳಿ ನಡೆದ ಬಳಿಕವಲ್ಲ. 1979ರಲ್ಲಿ ಅಂದಿನ ಸೋವಿಯತ್ ಯೂನಿಯನ್ ಮಣಿಸಲು ಅಮೆರಿಕ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಡಾಲರ್ ಗಂಟಿನ ಜೊತೆ ಶಸ್ತ್ರಗಳ ಮೂಟೆ ಹೊತ್ತು ಅಫ್ಗಾನಿಸ್ತಾನಕ್ಕೆ ಕಾಲಿಟ್ಟಾಗ. ಆಗ ಈ ಮೂರು ದೇಶಗಳು ‘ನಾವು ಅಫ್ಗಾನಿಸ್ತಾನವನ್ನು ಕಮ್ಯುನಿಸಂನಿಂದ ಮುಕ್ತಗೊಳಿಸುತ್ತಿದ್ದೇವೆ’ ಎಂದೇ ಸಾರಿದ್ದವು. ಸೋವಿಯತ್ ಪಡೆಯ ವಿರುದ್ಧ ಹೋರಾಡಲು ಯುವಕರ ಕೈಗೆ ಬಂದೂಕು ಕೊಟ್ಟು ಪೋಷಿಸಿದವು.

ಸೋವಿಯತ್ ಮರಳಿದ ಬಳಿಕ ಅಫ್ಗಾನಿಸ್ತಾನದ ಉಗ್ರ ಸಂಘಟನೆಗಳು ಐಎಸ್ಐ ಆಣತಿಯ ಮೇರೆಗೆ ಕಾರ್ಯನಿರ್ವಹಿಸಲು ಆರಂಭಿಸಿದವು. ಕೆಲ ಸಮಯದಲ್ಲೇ ಅಮೆರಿಕದ ಮೇಲೆ ತಿರುಗಿಬಿದ್ದವು. ಅಮೆರಿಕ, ನ್ಯಾಟೊ ಪಡೆಗಳೊಂದಿಗೆ ಉಗ್ರರ ವಿರುದ್ಧ ಯುದ್ಧ ಸಾರಿತು. ಒಂದು ಹಂತದವರೆಗೆ ಅಲ್ ಕೈದಾ ನಿರ್ಮೂಲನೆ ಸಾಧ್ಯವಾಯಿತಾದರೂ, ರಕ್ತ ಬೀಜಾಸುರನಂತೆ ಇತರ ಹತ್ತಾರು ಸಂಘಟನೆಗಳು ಜನ್ಮ ತಳೆದವು. ಇಂದಿಗೂ ಹಕ್ಕಾನಿ ಉಗ್ರ ಜಾಲ ಉತ್ತರ ಪಾಕಿಸ್ತಾನದಲ್ಲಿ ನೆಲೆಯೂರಿ ನ್ಯಾಟೊ ಪಡೆಗಳ ಮೇಲೆ ಎರಗುತ್ತಿದೆ.

ಹೀಗೆ ಅಫ್ಗಾನಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಸ್ಥಾಪಿಸುವ ತನ್ನ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿರುವುದು ಪಾಕಿಸ್ತಾನದ ದ್ವಿಮುಖ ನೀತಿಯಿಂದ ಎಂಬುದು ಬಹುಶಃ ಅಮೆರಿಕಕ್ಕೀಗ ಮನವರಿಕೆಯಾದಂತಿದೆ. ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನೆಯ ನೇತೃತ್ವ ವಹಿಸಿರುವ ಜನರಲ್ ಜಾನ್ ನಿಕೋಲ್ಸನ್, ‘ಭಯೋತ್ಪಾದನೆಯ ವಿರುದ್ಧದ ಸಮರ ಇಷ್ಟು ವರ್ಷಗಳ ಮೇಲೂ ತಾರ್ಕಿಕ ಅಂತ್ಯ ಕಾಣದಿರುವುದಕ್ಕೆ ಪಾಕಿಸ್ತಾನದ ಕಪಟ ನೀತಿಯೇ ಕಾರಣ’ ಎಂಬುದಾಗಿ ಈ ಹಿಂದೆ ಹೇಳಿದ್ದರು. ಆದರೆ ಇದುವರೆಗೆ ಅಮೆರಿಕದ ಅಧ್ಯಕ್ಷರು ಪಾಕಿಸ್ತಾನದ ವಿರುದ್ಧ ನೇರ ಆರೋಪ ಮಾಡಿರಲಿಲ್ಲ. ಅದಕ್ಕೂ ಕಾರಣವಿದೆ. ಅಮೆರಿಕ ಮತ್ತು ನ್ಯಾಟೊ ಪಡೆ, ಅಫ್ಗಾನಿಸ್ತಾನದಲ್ಲಿ ಬೀಡು ಬಿಟ್ಟ ತನ್ನ ಸೈನಿಕರಿಗೆ ಅಗತ್ಯ ಸಾಮಾನು, ಸಲಕರಣೆ ಒದಗಿಸಲು ಪಾಕಿಸ್ತಾನದ ಮೂಲಕವೇ ಹಾದು ಹೋಗಬೇಕು. ಈ ಅವಲಂಬನೆ ಇಷ್ಟು ದಿನ ಅಮೆರಿಕ ತುಟಿಕಚ್ಚುವಂತೆ ಮಾಡಿತ್ತು.

ಇದೀಗ ಟ್ರಂಪ್, ಪಾಕಿಸ್ತಾನದ ವಿರುದ್ಧ ಗುಡುಗಲು ಮತ್ತೊಂದು ಕಾರಣ ಎಂದರೆ ಅಮೆರಿಕದ ನೂತನ ದಕ್ಷಿಣ ಏಷ್ಯಾ ನೀತಿ. ಡಿಸೆಂಬರ್ 18ರಂದು ಟ್ರಂಪ್, ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ನೀಲನಕ್ಷೆಯನ್ನು ಪ್ರಕಟಿಸಿದರು. ಪ್ರತೀ ಅಧ್ಯಕ್ಷರೂ ತಮ್ಮ ಅಧ್ಯಕ್ಷೀಯ ಕಾಲಾವಧಿಯಲ್ಲಿ ಇಂತಹ ಯೋಜನಾ ನಕ್ಷೆಯನ್ನು ಪ್ರಕಟಿಸುವುದು ವಾಡಿಕೆ. ಈ ವಿಸ್ತೃತ ಮುನ್ನೋಟ ಜಾಗತಿಕವಾಗಿ ಆಯಾಭಾಗಗಳಿಗೆ ಸಂಬಂಧಿಸಿದಂತೆ ಅಮೆರಿಕದ ನೀತಿ ಏನಿರು
ತ್ತದೆ ಎಂಬುದನ್ನು ಹೇಳುತ್ತದೆ. ಈ ಬಾರಿಯ 68 ಪುಟಗಳ ಮುನ್ನೋಟದಲ್ಲಿ ಮುಖ್ಯವಾಗಿ ದಕ್ಷಿಣಾ ಏಷ್ಯಾಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಕೆಲವು ಸಂಗತಿಗಳನ್ನು ಪಟ್ಟಿ ಮಾಡಲಾಗಿದೆ. ಈ ಭಾಗದಿಂದ ಅಮೆರಿಕದ ಭದ್ರತೆಗೆ ಎದುರಾಗಬಹುದಾದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ, ಉಗ್ರ ಸಂಘಟನೆಗಳನ್ನು ನಿರ್ಮೂಲಗೊಳಿಸುವುದು. ಅಣ್ವಸ್ತ್ರ, ಯುದ್ಧ ಸಲಕರಣೆಗಳು ಮತ್ತು ತಂತ್ರಜ್ಞಾನ ಉಗ್ರರ ಕೈವಶವಾಗುವುದನ್ನು ತಪ್ಪಿಸುವುದು. ಭಾರತದೊಂದಿಗೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ಇಂಡಿಯನ್ ಓಷನ್ ಭಾಗದ ರಕ್ಷಣೆಯ ವಿಷಯದಲ್ಲಿ ನಾಯಕತ್ವ ವಹಿಸುವಂತೆ ಭಾರತವನ್ನು ಉತ್ತೇಜಿಸುವುದು ಆ ಪಟ್ಟಿಯಲ್ಲಿ ಸೇರಿದೆ.

ಇಲ್ಲಿ ಗೆರೆ ಎಳೆದು ಗಮನಿಸಬೇಕಿರುವ ಅಂಶ, ಅಮೆರಿಕ, ದಕ್ಷಿಣ ಏಷ್ಯಾ ಭಾಗದ ನಾಯಕತ್ವ ವಹಿಸಿಕೊಳ್ಳುವಂತೆ ಭಾರತವನ್ನು ಮುಂದು ಮಾಡುತ್ತಿದೆ ಎನ್ನುವುದು. ಅಮೆರಿಕದ ಈ ನಡೆಯನ್ನು ಕೊಂಚ ಅನುಮಾನದಿಂದಲೇ ನೋಡಬೇಕಾಗುತ್ತದೆ. ಭಯೋತ್ಪಾದನೆಯ ಆಘಾತ ಎದುರಿಸಿದ ದೇಶಗಳಲ್ಲಿ ಭಾರತ ಪ್ರಮುಖ ರಾಷ್ಟ್ರ. ಈ ಹಿಂದೆ ನಮ್ಮ ನೆಲದ ಮೇಲೆ ಸಾಕಷ್ಟು ಉಗ್ರ ದಾಳಿಗಳಾಗಿವೆ. ಹಲವು ವೇಳೆ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ಐ ನೆರಳು ನಿಚ್ಚಳವಾಗಿ ಕಂಡಿದೆ. ಆ ಬಗ್ಗೆ ವಿಶ್ವಸಂಸ್ಥೆ ಸೇರಿದಂತೆ ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಭಾರತ ಅಳಲು ತೋಡಿಕೊಂಡಿದೆ. ಆಗ ಭಾರತದ ಮಾತಿಗೆ ಅಸಡ್ಡೆ, ಆಲಸ್ಯದ ಕಿವಿಯೊಡ್ಡಿದ್ದ ಅಮೆರಿಕ ಇದೀಗ ಅಫ್ಗಾನಿಸ್ತಾನದಲ್ಲಿ ಸ್ಥಿರತೆ ಸ್ಥಾಪಿಸಲು ಭಾರತದ ಸಹಕಾರ ಕೋರುತ್ತಿದೆ!

ನಿಜ, ಭಾರತ ಬೆಳೆಯುತ್ತಿರುವ ಆರ್ಥಿಕ ಶಕ್ತಿ, ಸಾಮರಿಕವಾಗಿ ಬಲಾಢ್ಯ ದೇಶ. ಆದರೆ ಅದೊಂದೇ ಕಾರಣಕ್ಕೆ ಅಮೆರಿಕ ಭಾರತವನ್ನು ಬರಸೆಳೆದುಕೊಂಡಿಲ್ಲ. ಮುಖ್ಯವಾಗಿ ಚೀನಾಕ್ಕೆ ಪ್ರಾದೇಶಿಕ ಪ್ರತಿಸ್ಪರ್ಧಿಯನ್ನು ಮುಂದೊಡ್ಡುವ ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ. ಏಷ್ಯಾದ ಮಟ್ಟಿಗೆ ಚೀನಾದ ಪ್ರಾಬಲ್ಯವನ್ನು ಮೊಟಕುಗೊಳಿಸುವುದು ಅಮೆರಿಕದ ಆದ್ಯತೆಯಾಗಿ ಮಾರ್ಪಟ್ಟಿದೆ.

ಹಾಗಾದರೆ ಈ ಬೆಳವಣಿಗೆಗೆ ಭಾರತ ಹೇಗೆ ಪ್ರತಿಕ್ರಿಯಿಸಬೇಕು? ಪಾಕಿಸ್ತಾನ ಕುರಿತ ಅಮೆರಿಕ ನಿಲುವು ಅಚಲವಾಗಿರುತ್ತದೆ ಎಂಬುದು ಅನುಮಾನ. ಅಮೆರಿಕ ಈ ಹಿಂದೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದಾಗ, ಹಿರಿಯಣ್ಣನನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಪಾಕ್ ಪ್ರತಿಕ್ರಿಯಿಸಿತ್ತು. ಆದರೆ ತದನಂತರ ಮತ್ತದೇ ಚಾಳಿ ಮುಂದುವರೆಸಿತ್ತು. ಹಾಗಾಗಿ ಅಮೆರಿಕದ ಪೆಡಸು ಮಾತಿನಿಂದ ಹೆಚ್ಚೇನೂ ಲಾಭವಿದೆ ಎನಿಸುವುದಿಲ್ಲ. ಮೇಲಾಗಿ ಪಾಕಿಸ್ತಾನ ತನ್ನ ವಿದೇಶಾಂಗ ನೀತಿಯನ್ನು ಮಾರ್ಪಡಿಸಿಕೊಂಡಿದೆ. ಚೀನಾ ಇರಾನ್ ಮತ್ತು ರಷ್ಯಾದೊಂದಿಗೆ ಹೆಣೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಶೇಕಡ 63ರಷ್ಟು ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ಚೀನಾದಿಂದ ಆಮದಾಗುತ್ತಿದೆ. ಹಾಗಾಗಿ ಅಮೆರಿಕದ ನೆರವು ತಪ್ಪಿದರೂ ದಿಕ್ಕೆಡುವ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಇಲ್ಲ.

ಇನ್ನು, ರಾಜಕೀಯ ಮತ್ತು ಆಡಳಿತಾತ್ಮಕವಾಗಿ ಪಾಕಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳು ನೆರೆಯ ರಾಷ್ಟ್ರವಾಗಿ ಭಾರತದ ಆತಂಕ ಹೆಚ್ಚಿಸಿದರೆ ಅದು ಸಹಜವೇ. ಮುಂಬೈ ದಾಳಿಯ ಹಿಂದಿದ್ದ, ಅಂತರರಾಷ್ಟ್ರೀಯ ಉಗ್ರ ಎಂದು ಗುರುತಿಸಲಾಗಿರುವ ಹಫೀಜ್‌ ಸಯೀದ್‌ನನ್ನು ಈಗಾಗಲೇ ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಅಷ್ಟಲ್ಲದೇ ಸಯೀದ್, ‘ಮಿಲ್ಲೀ ಮುಸ್ಲಿಂ ಲೀಗ್’ ಎಂಬ ರಾಜಕೀಯ ಪಕ್ಷದ ನೇತೃತ್ವ ವಹಿಸಿ 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿಯನ್ನೂ ನಡೆಸಿದ್ದಾನೆ. ಈ ಹಿಂದೆ ಸೇನಾ ಸರ್ವಾಧಿಕಾರಿಯಾಗಿ ಪರಿಣಮಿಸಿದ್ದ ಪರ್ವೇಜ್ ಮುಷರಫ್ ಕೂಡ 2018ರ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷಗಳನ್ನು ಮುನ್ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಪಾಕಿಸ್ತಾನದ ಚುಕ್ಕಾಣಿ ಉಗ್ರ ಸಂಘಟನೆಗಳ ಕೈಗೆ ದೊರೆತರೆ ಅಥವಾ ಮಿಲಿಟರಿ ಸರ್ವಾಧಿಕಾರಕ್ಕೆ ಒಳಗಾದರೆ, ಭಾರತಕ್ಕೆ ಅಪಾಯ. ಇದನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ರಾಜತಾಂತ್ರಿಕವಾಗಿ ಜಾಣ ಹೆಜ್ಜೆ ಇಡಬೇಕಿದೆ.

ಒಟ್ಟಾರೆಯಾಗಿ, ಜಾಗತಿಕ ಉಗ್ರವಾದ ಇದೀಗ ಮತಾಂಧತೆಯ ಮೂಲವನ್ನು ದಾಟಿ ಬೆಳೆದಿದೆ. ಅದು ವೈರಿ ದೇಶವನ್ನು ಹೆಡೆಮುರಿ ಕಟ್ಟಲು, ತನ್ನ ಪ್ರಾಬಲ್ಯ ಸಾರಲು, ಪರೋಕ್ಷ ಯುದ್ಧ ಮಾದರಿಯಲ್ಲಿ ಹಗೆ ಸಾಧಿಸಲು ಬಳಕೆಯಾಗುತ್ತಿದೆ. ಹಾಗಾಗಿ ಜಾಗತಿಕ ರಾಜಕೀಯದ ಮೇಲಾಟ ಇರುವ
ವರೆಗೂ ಇದಕ್ಕೆ ಪರಿಹಾರ ಎಂಬುದಿಲ್ಲ. ಇದನ್ನು ಮನಗಂಡು, ಸ್ವಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಭಾರತ ಮುಂದಡಿ ಇರಿಸಬೇಕಾಗುತ್ತದೆ. ಅಫ್ಗಾನಿಸ್ತಾನದ ಜೊತೆ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳಲ್ಲಿ ಭಾರತ ಈಗಾಗಲೇ ಕೈಜೋಡಿಸಿದೆ. ಅಷ್ಟರಮಟ್ಟಿಗೆ ಭಾರತದ ಪಾಲ್ಗೊಳ್ಳುವಿಕೆ ಇದ್ದರೆ ಅಡ್ಡಿಯಿಲ್ಲ. ಅಮೆರಿಕದ ಮಾತಿಗೆ ಮರುಳಾಗಿಆರ್ಥಿಕವಾಗಿ, ಸಾಮರಿಕವಾಗಿ ಎದೆಸೆಟೆಸಿ ಮುಂದೆ ನಿಂತು ಮೈನೋವಿಸಿಕೊಳ್ಳುವ ಕೆಲಸಕ್ಕೆ ಮುಂದಾಗಬಾರದಷ್ಟೇ. ಮುಂದೊಂದು ದಿನ ‘ಮೂರ್ಖರಾದೆವು’ ಎನ್ನುವ ಸರದಿ ನಮ್ಮದಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.