ADVERTISEMENT

‘625’ರ ಕೊರಿಯಾ ಬಿರುಕಿಗೆ ‘427’ರ ಬೆಸುಗೆ

ಸುಧೀಂದ್ರ ಬುಧ್ಯ
Published 3 ಮೇ 2018, 19:30 IST
Last Updated 3 ಮೇ 2018, 19:30 IST
‘625’ರ ಕೊರಿಯಾ ಬಿರುಕಿಗೆ ‘427’ರ ಬೆಸುಗೆ
‘625’ರ ಕೊರಿಯಾ ಬಿರುಕಿಗೆ ‘427’ರ ಬೆಸುಗೆ   

ಕಳೆದ ಶುಕ್ರವಾರ ಕೊರಿಯಾ ಪರ್ಯಾಯ ದ್ವೀಪದ ಬಾಂದಳದಲ್ಲಿ ಯುದ್ಧದ ಕಾರ್ಮೋಡಗಳು ಬದಿಗೆ ಸರಿದು ಭರವಸೆಯ ಬೆಳ್ಳಿರೇಖೆಗಳು ಮೂಡಿದ್ದವು. ಅದರ ಛಾಯೆಯಲ್ಲೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತನ್ನನ್ನು ಬರಮಾಡಿಕೊಳ್ಳಲು ಕೊರಿಯಾ ಗಡಿಯ ಸೇನಾ ಮುಕ್ತ ವಲಯಕ್ಕೆ (Korea DMZ) ಆಗಮಿಸಿದ್ದ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಅವರ ಕೈ ಕುಲುಕಿದರು. ಬಳಿಕ ಉದಾರತೆಯನ್ನು ವಿಸ್ತರಿಸಿದ ಕಿಮ್, ಪೂರ್ವನಿಗದಿತ ಕಾರ್ಯಕ್ರಮದಿಂದ ಆಚೆ ಸರಿದು, ಮೂನ್ ಅವರನ್ನು ಗಡಿರೇಖೆ ದಾಟಿ ತಮ್ಮ ನೆಲಕ್ಕೆ ಬರಮಾಡಿಕೊಂಡರು, ನಂತರ ಇಬ್ಬರೂ ಒಟ್ಟಿಗೇ ದಕ್ಷಿಣ ಕೊರಿಯಾ ಪ್ರವೇಶಿಸಿದರು. ಕಿಮ್ ಮತ್ತು ಮೂನ್ ಅವರ ಈ ನಡೆಯನ್ನು ‘ಐತಿಹಾಸಿಕ’ ಎಂದು ಬಣ್ಣಿಸಲಾಯಿತು.

ಅದು ನಿಜವೇ ಆಗಿತ್ತು. ‘ಲಿಟ್ಲ್ ಫ್ಯಾಟ್ ಕಿಡ್’, ‘ಲಿಟ್ಲ್ ರಾಕೆಟ್ ಮ್ಯಾನ್’ ಎಂದು ಕರೆಯಲಾಗುವ ಕಿಮ್ ಜಾಂಗ್ ಉನ್, ಉತ್ತರ ಕೊರಿಯಾದ ಅಧ್ಯಕ್ಷರಾದ ಮೇಲೆ ಆ ದೇಶದಲ್ಲಿ ಕ್ಷಿಪಣಿಗಳು ಚಿಮ್ಮಿದ್ದೇ ಹೆಚ್ಚು. ಕ್ಷಿಪಣಿಯ ಹಿಂದೆ ಮಾತಿನ ಸಿಡಿಗುಂಡುಗಳು ಸ್ಫೋಟಿಸುತ್ತಿದ್ದವು. ಶಾಂತಿ, ಸಂಧಾನದ ಪಿಸುದನಿಯೂ ಕಿಮ್ ಎಂಬ ಸರ್ವಾಧಿಕಾರಿಯ ನೆಲದಲ್ಲಿ ಕೇಳಸಿಗುವುದು ಕಷ್ಟ ಎಂಬ ಸನ್ನಿವೇಶ ಇತ್ತು. ಹಾಗಾಗಿ ಮೊನ್ನೆ ಏಪ್ರಿಲ್ 27ರ ಶುಕ್ರವಾರ ಕಿಮ್ ಮತ್ತು ಮೂನ್ ಭೇಟಿಯಾಗಿ ಗಡಿಯಲ್ಲಿನ ದೇವದಾರು ಮರಕ್ಕೆ ಉಭಯ ದೇಶಗಳಿಂದ ತಂದಿದ್ದ ಮಣ್ಣು ಸುರಿದು ಕೈಕುಲುಕಿ, ಮುಖದ ಬಿಗಿ ಸಡಿಲಿಸಿ ನಕ್ಕು ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಮುನ್ನುಡಿ ಬರೆದಾಗ, ಕೊರಿಯಾ ಮತ್ತದರ ಉಪಟಳಗಳನ್ನು ಹಲವು ದಶಕಗಳಿಂದ ಗಮನಿಸುತ್ತಿದ್ದವರು ಮೂಗಿನ ಮೇಲೆ
ಬೆರಳಿಟ್ಟುಕೊಳ್ಳುವುದು ಅನಿವಾರ್ಯವಾಯಿತು.

ಹಾಗಾದರೆ ಕಿಮ್ ಮತ್ತು ಮೂನ್ ಭೇಟಿ ಐತಿಹಾಸಿಕ ಎನಿಸಿಕೊಳ್ಳಲು ಕಾರಣವೇನು? ಉತ್ತರವನ್ನು ಇತಿಹಾಸದ ಹಿಲಾಲು ಹಿಡಿದೇ ನೋಡಬೇಕು. 1910ರಿಂದ ಕೊರಿಯಾದ ಅಖಂಡ ಭೂಮಿ ಜಪಾನ್ ಹಿಡಿತದಲ್ಲಿತ್ತು. 1943ರ ನವೆಂಬರ್‌ನಲ್ಲಿ ನಡೆದ ಕೈರೋ ಸಮಾವೇಶದಲ್ಲಿ ಅಮೆರಿಕ ಅಧ್ಯಕ್ಷ ರೂಸ್ವೆಲ್ಟ್, ಇಂಗ್ಲೆಂಡ್ ಪ್ರಧಾನಿ ಚರ್ಚಿಲ್ ಮತ್ತು ಚೀನಾದ ಚಿಯಾಂಗ್ ಕೈಶೇಕ್ ಸೇರಿ ‘ಕೊರಿಯಾವನ್ನು ಜಪಾನ್ ಹಿಡಿತದಿಂದ ಮುಕ್ತಗೊಳಿಸಬೇಕು’ ಎಂಬ ನಿರ್ಣಯ ಕೈಗೊಂಡರು. ಇದಕ್ಕೆ ಪ್ರತಿಯಾಗಿ ಜಪಾನ್ ಸುಮಾರು 3 ಲಕ್ಷ ಯೋಧರನ್ನು ಕೊರಿಯಾದಲ್ಲಿ ಜಮಾವಣೆ ಮಾಡಿತು. ಅಮೆರಿಕ-ಸೋವಿಯತ್ ಒಪ್ಪಂದದ ಅನ್ವಯ, ಸೋವಿಯತ್ ರಷ್ಯಾ 1945ರ ಆಗಸ್ಟ್ 9ರಂದು ಜಪಾನ್ ಹಿಡಿತದಲ್ಲಿದ್ದ ಕೊರಿಯಾ ಮೇಲೆರಗಿತು. ಒಂದೇ ದಿನದಲ್ಲಿ ರಷ್ಯಾದ ಕೆಂಪು ಸೇನೆ (ರೆಡ್ ಆರ್ಮಿ) ಕೊರಿಯಾದ ಉತ್ತರ ಭಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತು. ದಕ್ಷಿಣ ಭಾಗದಿಂದ ಮುನ್ನುಗ್ಗಿದ ಅಮೆರಿಕ ಪಡೆ ದಕ್ಷಿಣ ಕೊರಿಯಾವನ್ನು ವಶ ಮಾಡಿಕೊಂಡಿತು. 38 ಡಿಗ್ರಿ ಉತ್ತರ ಅಕ್ಷಾಂಶ ರೇಖೆಯ ಆಚೀಚೆ ಕೊರಿಯಾ ಹೋಳಾಯಿತು. 1945ರ ಮಾಸ್ಕೊ ಅಧಿವೇಶನದಲ್ಲಿ, ‘ಮುಂದಿನ 5 ವರ್ಷಗಳ ಅವಧಿಗೆ ಅಮೆರಿಕ ಮತ್ತು ರಷ್ಯಾ ಜಂಟಿಯಾಗಿ ಕೊರಿಯಾ ಆಡಳಿತವನ್ನು ನೋಡಿಕೊಳ್ಳಬೇಕು’ ಎಂಬ ನಿರ್ಧಾರ ತಳೆಯಲಾಯಿತು.

ADVERTISEMENT

ಎರಡನೇ ವಿಶ್ವಯುದ್ಧದ ಬಳಿಕ ಕಮ್ಯುನಿಸಂ ವಿಸ್ತರಣೆ ತಡೆಯುವುದನ್ನೇ ತನ್ನ ವಿದೇಶಾಂಗ ನೀತಿಯ ಕೇಂದ್ರ ಆಶಯವಾಗಿಸಿಕೊಂಡಿದ್ದ ಅಮೆರಿಕ, ‘ಕೊರಿಯಾವನ್ನು ಸಂಪೂರ್ಣ ವಶಮಾಡಿಕೊಳ್ಳಲು ರಷ್ಯಾ ಪ್ರಯತ್ನಿಸುತ್ತಿದೆ’ ಎಂಬ ಗುಮಾನಿ ಹೊಂದಿತ್ತು. ರಷ್ಯಾ ವಿಸ್ತರಣೆಯನ್ನು ತಡೆಯಲು ಕೊರಿಯಾ ಹಿಡಿತವನ್ನು ಬಿಗಿ ಮಾಡಿತು. 1948ರ ಮೇ 10 ರಂದು ದಕ್ಷಿಣ ಕೊರಿಯಾದಲ್ಲಿ ಕಮ್ಯುನಿಸಂ ವಿರೋಧಿ ಸರ್ಕಾರ ರಚನೆಯಾಯಿತು. ಸೋವಿಯತ್ ಇದನ್ನು ವಿರೋಧಿಸಿ ಮಾಸ್ಕೊ ಕರಾರಿನ ವಿರುದ್ಧವಾಗಿ ಅಮೆರಿಕ ನಡೆದುಕೊಂಡಿದೆ ಎಂದು ಆರೋಪಿಸಿತು. ಪ್ರತಿದಾಳ ಉರುಳಿಸಿ ತನ್ನ ಪ್ರಭಾವಲಯದಲ್ಲಿದ್ದ ಉತ್ತರ ಕೊರಿಯಾದಲ್ಲಿ ಕಮ್ಯುನಿಸ್ಟ್‌ ಸರ್ಕಾರ ರಚನೆಯಾಗುವಂತೆ ನೋಡಿಕೊಂಡಿತು. ದಕ್ಷಿಣ ಕೊರಿಯಾದಿಂದ ಅಮೆರಿಕ ಸೇನೆ ಹಂತಹಂತವಾಗಿ ಹಿಂದೆ ಸರಿಯಿತು. ಆದರೆ ಸೈದ್ಧಾಂತಿಕವಾಗಿ ಹೋಳಾಗಿದ್ದ ಉಭಯ ಕೊರಿಯಾಗಳ ನಡುವೆ ಬಿರುಕು ಹಿಗ್ಗಿತು.

ಇತ್ತ ಚೀನಾ-ಜಪಾನ್ ಯುದ್ಧ ಸಂದರ್ಭದಲ್ಲಿ ಕೊರಿಯನ್ನರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (PLA) ಭಾಗವಾಗಿ ಸೆಣಸಿದ್ದರು. 1949ರಲ್ಲಿ ಪೀಪಲ್ ರಿಪಬ್ಲಿಕ್ ಚೀನಾವಾಗಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡ ಬಳಿಕ, ತನ್ನ ಪರವಾಗಿ ಸೆಣಸಿದ್ದ ಅಂದಾಜು 70 ಸಾವಿರ ಕೊರಿಯನ್ ಮೂಲದ ಯೋಧರನ್ನು ಚೀನಾ ಸತ್ಕರಿಸಿ ಶಸ್ತ್ರಗಳೊಂದಿಗೇ ಅವರನ್ನು ಬೀಳ್ಕೊಟ್ಟಿತ್ತು. ಈ ಸಮಯದಲ್ಲೇ ಉತ್ತರ ಕೊರಿಯಾದ ಕಮ್ಯುನಿಸ್ಟ್‌ ಸರ್ಕಾರ, ದಕ್ಷಿಣ ಕೊರಿಯಾವನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಚೀನಾದಿಂದ ಶಸ್ತ್ರಾಸ್ತ್ರಗಳೊಂದಿಗೆ ತವರಿಗೆ ಬಂದಿದ್ದ ಯೋಧರು ಈ ಪ್ರಯತ್ನಕ್ಕೆ ಜೊತೆಯಾದರು. 1950ರ ಜೂನ್ 25ರಂದು ಉತ್ತರ ಕೊರಿಯಾದ ಸೇನೆ 38ನೇ ಅಕ್ಷಾಂಶ ರೇಖೆಯುದ್ದಕ್ಕೂ ದಾಳಿ ನಡೆಸಿ ದಕ್ಷಿಣದ ಸೋಲ್‌ನತ್ತ ನುಗ್ಗಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡಲೇ ಸಭೆ ಸೇರಿ ‘ಇದು ಶಾಂತಿ ಉಲ್ಲಂಘನೆಯ ಪ್ರಯತ್ನ’ ಎಂಬ ನಿರ್ಣಯ ತೆಗೆದುಕೊಂಡಿತು. ಅಮೆರಿಕ ಅಧ್ಯಕ್ಷ ಟ್ರೂಮನ್ ಅಮೆರಿಕದ ಸೇನೆಯನ್ನು ವಿಶ್ವಸಂಸ್ಥೆಯ ಸೇನಾ ಕಾರ್ಯಾಚರಣೆಯ (Police Action) ಭಾಗವಾಗಿ ದಕ್ಷಿಣ ಕೊರಿಯಾಕ್ಕೆ ಕಳುಹಿಸಿದರು.

ಉತ್ತರ ಕೊರಿಯಾದ ಮೇಲೆ ಪ್ರತಿದಾಳಿ ನಡೆಸಲು ಅಮೆರಿಕಕ್ಕೆ ಮತ್ತೊಂದು ಕಾರಣವಿತ್ತು. 1950ರ ಹೊತ್ತಿಗೆ ಸೋವಿಯತ್ ಸಾಮರಿಕವಾಗಿ ತನ್ನ ಶಕ್ತಿ ವೃದ್ಧಿಸಿಕೊಂಡಿತ್ತು, ಅಣುಬಾಂಬ್ ಪರೀಕ್ಷಿಸಿತ್ತು. ಇದರ ಜೊತೆಗೆ ಚೀನಾದಲ್ಲಿ ಮಾವೋತ್ಸೆ ತುಂಗಾ ಬಲಗೊಂಡು ರಷ್ಯಾದತ್ತ ವಾಲಿದ್ದರು ಮತ್ತು ಸಹಕಾರ ಒಪ್ಪಂದಕ್ಕೆ ಮುಂದಾದರು. ಹಾಗಾಗಿ ಉತ್ತರ ಕೊರಿಯಾದ ಕಮ್ಯುನಿಸ್ಟ್‌ ಸರ್ಕಾರ ದಕ್ಷಿಣ ಕೊರಿಯಾವನ್ನು ಮಣಿಸಿ, ಪೂರ್ಣಪ್ರಮಾಣದ ಮತ್ತೊಂದು ಕಮ್ಯುನಿಸ್ಟ್‌ ರಾಷ್ಟ್ರವಾಗಿ ಉದಯವಾಗುವುದನ್ನು ತಡೆಯಬೇಕಾದ ಜರೂರು ಅಮೆರಿಕಕ್ಕಿತ್ತು.

ಹಾಗಾಗಿ ಅಮೆರಿಕ ತನ್ನ ಸೇನಾಬಲವನ್ನು ದಕ್ಷಿಣ ಕೊರಿಯಾಕ್ಕೆ ಜೋಡಿಸಿ ಸೆಣಸಲು ಮುಂದಾಯಿತು. ಉತ್ತರ ಕೊರಿಯಾದ ಕಮ್ಯುನಿಸ್ಟ್‌ ಸರ್ಕಾರವನ್ನು ಬೆಂಬಲಿಸಿ ಚೀನಾಕದನ ಕಣಕ್ಕಿಳಿಯಿತು. ಉತ್ತರ ಕೊರಿಯಾ ಮತ್ತು ಚೀನಾದ ಸೇನೆಗೆ ಹಿಂಬದಿ ನಿಂತು ಸೋವಿಯತ್ ರಷ್ಯಾ ಯುದ್ಧೋಪಕರಣ ಒದಗಿಸಿತು. 1953ರಲ್ಲಿ ಅನಧಿಕೃತ ಗಡಿಯ ಉದ್ದಕ್ಕೂ ಸುಮಾರು 4 ಕಿ.ಮೀ. ಅಗಲದ ಭೂ ವಿಸ್ತೀರ್ಣವನ್ನು ಗುರುತಿಸಿ ಅದನ್ನು ‘ಸೇನಾಮುಕ್ತ ವಲಯ’ ಎಂದು ಗುರುತಿಸಿ ಕದನ ವಿರಾಮ ಘೋಷಿಸಲಾಯಿತು. ಆದರೂ ಗಡಿಯಲ್ಲಿ ಚಕಮಕಿ, ಘರ್ಷಣೆ ಮುಂದುವರಿಯಿತು. ಅಮೆರಿಕದ ಸುಮಾರು 28 ಸಾವಿರ ಸೈನಿಕರು ದಕ್ಷಿಣ ಕೊರಿಯಾದಲ್ಲಿ ಬೀಡುಬಿಡುವಂತಾಯಿತು. ಯಾವುದೇ ಶಾಂತಿ ಒಪ್ಪಂದವಾಗದೇ ಕೇವಲ ಕದನ ವಿರಾಮ ಘೋಷಣೆಯೊಂದಿಗೆ ಎರಡು ಬಣಗಳು ತಟಸ್ಥವಾಗಿದ್ದರಿಂದ ತಾಂತ್ರಿಕವಾಗಿ ಯುದ್ಧ ಅಂತ್ಯಗೊಂಡಂತಾಗಲಿಲ್ಲ, ಅಮೆರಿಕ ಎಂದಾದರೂ ಮೇಲೆರಗಿಬರಬಹುದು ಎಂಬ ಭಯದಲ್ಲೇ ಉತ್ತರ ಕೊರಿಯಾ ರಕ್ಷಣಾ ವಲಯಕ್ಕೆ ಹೆಚ್ಚೆಚ್ಚು ಖರ್ಚು ಮಾಡುತ್ತಾ, ಕ್ಷಿಪಣಿ, ಅಣ್ವಸ್ತ್ರ ಎಂದು ಬತ್ತಳಿಕೆ ತುಂಬಿ ಕೊಳ್ಳುವುದರಲ್ಲೇ ಬಡವಾಗಬೇಕಾದ ಸ್ಥಿತಿ ಉದ್ಭವಿಸಿತು. 53ರ ಯುದ್ಧದ ತರುವಾಯ ಉತ್ತರ ಕೊರಿಯಾದ ಯಾವ ನಾಯಕರೂ ದಕ್ಷಿಣ ಕೊರಿಯಾವನ್ನು ಪ್ರವೇಶಿಸಲಿಲ್ಲ, ಆ ಕಾರಣದಿಂದಲೇ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ ಭೇಟಿ ಐತಿಹಾಸಿಕ ಎನಿಸಿಕೊಂಡಿತು.

ಹಾಗಾದರೆ ಉತ್ತರ ಕೊರಿಯಾ ಇದೀಗ ಅಭದ್ರತೆಯ ಮನಸ್ಥಿತಿಯಿಂದ ಹೊರಬಂತೇ? ಕಿಮ್ ದಕ್ಷಿಣ ಕೊರಿಯಾ ಭೇಟಿ ತಕ್ಷಣಕ್ಕೆ ಆದ ಬೆಳವಣಿಗೆಯೇ? ಇಲ್ಲ. ಕಳೆದ ನಾಲ್ಕಾರು ತಿಂಗಳಿನಿಂದಲೇ ಈ ಭೇಟಿಗೆ ಪೂರ್ವತಯಾರಿಗಳು ನಡೆದಿದ್ದವು. ಕಳೆದ ವರ್ಷದ ಮೇ ತಿಂಗಳಿನಲ್ಲಿ ಮೂನ್ ಜೆ ಇನ್ ದಕ್ಷಿಣ ಕೊರಿಯಾದ ಅಧ್ಯಕ್ಷರಾದ ಬಳಿಕ, ಉತ್ತರ ಕೊರಿಯಾದೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡರು. ಚೀನಾ ಮತ್ತು ಅಮೆರಿಕವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಆದರೆ ಉತ್ತರ ಕೊರಿಯಾ ಬಡಪೆಟ್ಟಿಗೆ ಬಗ್ಗಲಿಲ್ಲ. ತನ್ನ ಅಣ್ವಸ್ತ್ರ ಮತ್ತು ದೂರಗಾಮಿ ಕ್ಷಿಪಣಿ ಪರೀಕ್ಷೆಯನ್ನು ಮುಂದುವರೆಸಿತು. ಯಾರ ಬಳಿ ಶಕ್ತಿಶಾಲಿಯಾದ ಅಣ್ವಸ್ತ್ರ ಸ್ಫೋಟಕ ಒತ್ತುಗುಂಡಿಯಿದೆ ನೋಡೋಣ ಎಂಬ ಸವಾಲನ್ನು ಅಮೆರಿಕಕ್ಕೆ ಎಸೆದಿತ್ತು.

ಈ ಉದ್ಧಟತನವನ್ನು ಮಣಿಸುವ ಸಲುವಾಗಿ ಮೂರು ದಿಕ್ಕಿನಿಂದ ಉತ್ತರ ಕೊರಿಯಾ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಟ್ರಂಪ್ ಮಾಡಿದರು. ಮೊದಲಿಗೆ ವಿಶ್ವಸಂಸ್ಥೆ ಉತ್ತರ ಕೊರಿಯಾದ ಮೇಲೆ ದಿಗ್ಬಂಧನ ಹೇರಿತು. ವಿಶ್ವಸಂಸ್ಥೆಯ ಕ್ರಮವನ್ನು ಚೀನಾ ಅನುಸರಿಸಬೇಕು ಎಂಬ
ಒತ್ತಡವನ್ನು ಟ್ರಂಪ್ ಆಡಳಿತವು ಷಿ ಜಿನ್ ಪಿಂಗ್ ಸರ್ಕಾರದ ಮೇಲೆ ಹೇರಿ ಚೀನಾದ ಕೈಕಟ್ಟಿತು. ಜೊತೆಗೆ ಯುದ್ಧನೌಕೆಗಳನ್ನು ಆಯಕಟ್ಟಿನ ಸ್ಥಳಗಳಿಗೆ ಕಳುಹಿಸುವ ಮೂಲಕ ಸಾಮರಿಕವಾಗಿ ತಕ್ಕ ಪಾಠ ಕಲಿಸಲು ಅಮೆರಿಕ ಸನ್ನದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಲಾಯಿತು. ಮೊದಲಿಗೆ ಉತ್ತರ ಕೊರಿಯಾ ಇದಕ್ಕೆ ಸಿಟ್ಟಿನ ಪ್ರತಿಕ್ರಿಯೆ ತೋರಿ ದಾಳಿ ಮಾಡುವ ಬೆದರಿಕೆ ಒಡ್ಡಿತಾದರೂ ನಂತರ ಕಿಮ್ ಜಾಂಗ್ ಉನ್ ಮೆತ್ತಗಾದರು.

ಮೊದಲಿಗೆ, ದಕ್ಷಿಣ ಕೊರಿಯಾದಲ್ಲಿ ಆಯೋಜನೆಯಾಗಿದ್ದ ಚಳಿಗಾಲದ ಕ್ರೀಡಾಕೂಟಕ್ಕೆ (ವಿಂಟರ್ ಒಲಿಂಪಿಕ್ಸ್) ತಂಡವನ್ನು ಕಳುಹಿಸುವುದಾಗಿ ಕಿಮ್ ಘೋಷಿಸಿದರು. ಅಮೆರಿಕ ದಾಳಿ ಮಾಡುವುದಿಲ್ಲ ಎಂದು ಭರವಸೆ ಇತ್ತರೆ, ಅಣುಬಾಂಬ್ ಮತ್ತು ದೂರಗಾಮಿ ಕ್ಷಿಪಣಿಗಳ ಪರೀಕ್ಷೆಯನ್ನು ಸ್ಥಗಿತಗೊಳಿಸುತ್ತೇವೆ ಮತ್ತು ಇರುವ ಏಕೈಕ ಅಣ್ವಸ್ತ್ರ ಪರೀಕ್ಷಾ ಘಟಕವನ್ನು ನಿಷ್ಕ್ರಿಯಗೊಳಿಸುವುದಾಗಿ ಹೇಳಿದರು. ಟ್ರಂಪ್ ಮತ್ತು ಕಿಮ್ ಭೇಟಿಗೆ ವೇದಿಕೆ ಸಜ್ಜಾಗತೊಡಗಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಅಂತ್ಯದ ವೇಳೆಗೆ ಟ್ರಂಪ್ ಮತ್ತು ಕಿಮ್ ಭೇಟಿಯಾಗುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ದಕ್ಷಿಣ ಮತ್ತು ಉತ್ತರ ಕೊರಿಯಾಗಳು ಶಾಂತಿಯ ಮರಕ್ಕೆ ನೀರೆರೆದಿವೆ. ಅಷ್ಟರಮಟ್ಟಿಗೆ ವಿರೋಧಿಗಳ ಟೀಕೆಗಳನ್ನು ಮೀರಿ ಟ್ರಂಪ್ ಮಹತ್ವದ್ದನ್ನು ಸಾಧಿಸಿದ್ದಾರೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹತ್ತಿರವಾಗಿದ್ದಾರೆ.

ಇನ್ನು, ಈ ಐತಿಹಾಸಿಕ ಭೇಟಿಯಿಂದ ಅವಳಿ ಕೊರಿಯಾಗಳ ಮಧ್ಯೆ ಮೂಡಿರುವ ಬಿರುಕಿಗೆ ಬೆಸುಗೆ ಸಾಧ್ಯವೇ? ಹೇಳುವುದು ಕಷ್ಟ. ಈ ಹಿಂದೆ 1991ರಲ್ಲಿ ಮತ್ತು 2000ನೇ ಇಸವಿಯಲ್ಲಿ ಅಂದಿನ ದಕ್ಷಿಣ ಕೊರಿಯಾ ಅಧ್ಯಕ್ಷ ಕಿಮ್ ಡೇ ಜಂಗ್ ಸಂಧಾನದ ಹಾದಿ ತುಳಿದಿದ್ದರು. ಈ ಪ್ರಯತ್ನಗಳಿಗಾಗಿಯೇ ಕಿಮ್ ಡೇ ಜಂಗ್ ನೊಬೆಲ್ ಶಾಂತಿ ಪುರಸ್ಕಾರ ಪಡೆದರು. ಆದರೆ ಕೆಲದಿನಗಳಲ್ಲೇ ಪರಿಸ್ಥಿತಿ ಮತ್ತೆ ಬಿಗಡಾಯಿಸಿತು. ಹಾಗಾಗಿ ಉತ್ತರ ಮತ್ತು ದಕ್ಷಿಣ ಕೊರಿಯಾ ಜೊತೆಗೆ ಅಮೆರಿಕ, ಚೀನಾ, ಜಪಾನ್ ಮತ್ತು ರಷ್ಯಾಗಳೂ ಮಾತುಕತೆಯ ಭಾಗವಾದರೆ ಆ ಮೂಲಕ ಶಾಂತಿ ಒಪ್ಪಂದ ಜರುಗಿದರೆ ಆಗ ಕೊರಿಯಾ ಕದನ ಸಮಾಪ್ತಿಯಾಗಬಹುದು. ಕೊರಿಯಾ ಪರ್ಯಾಯ ದ್ವೀಪದಲ್ಲಿ ಕ್ಷಿಪಣಿ, ಸ್ಫೋಟಕಗಳ ಸದ್ದು ಅಡಗಬಹುದು. ಮುಖ್ಯವಾಗಿ ಉತ್ತರ ಕೊರಿಯಾ ರಕ್ಷಣಾ ವೆಚ್ಚಕ್ಕೆ ಸುರಿಯುವ ಹಣವನ್ನು ಪ್ರಜೆಗಳ ಕ್ಷೇಮಾಭಿವೃದ್ಧಿಗೆ ಬಳಸಬಹುದು.

ಬಿಡಿ, ಕೊರಿಯಾ ಯುದ್ಧವನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ನೋಡಿದ್ದಾರೆ. ಟ್ರೂಮನ್ ಕೊರಿಯಾ ಕದನವನ್ನು ‘Police Action’ ಎಂದು ಕರೆದಿದ್ದರು. ಎರಡನೇ ವಿಶ್ವಯುದ್ಧ ಮತ್ತು ವಿಯೆಟ್ನಾಂ ಕದನಗಳ ನಡುವೆ ಮರೆಗೆ ಸರಿದ ಈ ಕದನವನ್ನು ಅಮೆರಿಕನ್ನರು ‘The Forgotten War’ ಎಂದು ಈಗಲೂ ಕರೆಯುತ್ತಾರೆ. ಇತ್ತ ಚೀನಾ ‘ಅಮೆರಿಕಕ್ಕೆ ತೋರಿದ ಪ್ರತಿರೋಧ’ ಎನ್ನುತ್ತಾ ಕಾಲರ್ ಏರಿಸಿಕೊಳ್ಳುತ್ತದೆ. ಉತ್ತರ ಕೊರಿಯಾ ‘ಫಾದರ್ ಲ್ಯಾಂಡ್ ಲಿಬರೇಷನ್ ವಾರ್’ ಎಂದು ಕರೆದು ಇತಿಹಾಸ ಪುಸ್ತಕದಲ್ಲಿ ದಾಖಲಿಸಿದೆ. ಜೂನ್ 25ರಂದು ಆರಂಭವಾದ ಯುದ್ಧವನ್ನು ಆ ದಿನಾಂಕದ ಆಧಾರದ ಮೇಲೆ ದಕ್ಷಿಣ ಕೊರಿಯಾ ‘625ರ ಕದನ’ ಎಂದು ಇಂದಿಗೂ ಕರೆಯುತ್ತದೆ. ಹಾಗಾಗಿ ಏಪ್ರಿಲ್ 27ರಂದು ನಡೆದ ದ್ವಿಪಕ್ಷೀಯ ಮಾತುಕತೆ ಮತ್ತು ಶಾಂತಿ ಪ್ರಸ್ತಾಪವನ್ನು ‘427ರ ಬೆಸುಗೆ’ ಎನ್ನಲಡ್ಡಿಯಿಲ್ಲ. ಈ ಬೆಸುಗೆಯ ಆಯಸ್ಸು ಎಷ್ಟು ಎಂಬ ಪ್ರಶ್ನೆ ಹಿರಿದಾಗಿದ್ದರೂ, ಅವಳಿ ಕೊರಿಯಾ ನಡುವಿನ ಬಂಧ ಉಳಿಯಲಿ ಎಂಬ ಹಾರೈಕೆಯಂತೂ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.