ಡೊನಾಲ್ಡ್ ಟ್ರಂಪ್ ಅವರು ಎರಡನೆಯ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾಡಿದ ಭಾಷಣದಲ್ಲಿ, ‘ಅಮೆರಿಕದ ಸ್ವರ್ಣಯುಗ ಇದೀಗ ಆರಂಭಗೊಳ್ಳುತ್ತಿದೆ’ ಎಂದಿದ್ದರು. ಯುದ್ಧಗಳನ್ನು ನಿಲ್ಲಿಸುವ ಮಾತನಾಡಿದ್ದರು. ತಮ್ಮನ್ನು ಶಾಂತಿ ಸ್ಥಾಪಕ ಎಂದು ಗುರುತಿಸಬೇಕು ಎಂಬ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಆಕಾಂಕ್ಷೆ ಹತಾಶೆಯಾಗಿ ಪರಿಣಮಿಸಿದ ಮನುಷ್ಯನ ಮಾತು, ವರ್ತನೆ ಹಾಗೂ ಧೋರಣೆಗಳು ಹೇಗಿರುತ್ತವೆ ಎಂಬುದಕ್ಕೆ ಇದೀಗ ಟ್ರಂಪ್ ಉದಾಹರಣೆಯಾಗಿ ಕಾಣುತ್ತಿದ್ದಾರೆ.
ಅಮೆರಿಕದಲ್ಲಿ ಟ್ರಂಪ್ ಜನಪ್ರಿಯತೆ ಕುಸಿದಿದೆ. ಜಾಗತಿಕವಾಗಿ ಅಮೆರಿಕದ ಹಿಡಿತ ಸಡಿಲಗೊಳ್ಳುತ್ತಿದೆ.ಜೋ ಬೈಡೆನ್ ಅವರ ಅವಧಿಯಲ್ಲಿ ಅಮೆರಿಕದ ಆರ್ಥಿಕತೆ ಕುಸಿದಿತ್ತು. ನಿರುದ್ಯೋಗ ಪ್ರಮಾಣ ಹೆಚ್ಚಿತ್ತು. ಹಣದುಬ್ಬರ ಜನರನ್ನು ಕಂಗಾಲುಗೊಳಿಸಿತ್ತು. ಆ ವಿಷಯಗಳ ಕುರಿತು ಮಾತನಾಡಿದ್ದ ಟ್ರಂಪ್, ತಾನು ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸಲಾಗುತ್ತದೆ, ಅಕ್ರಮ ವಲಸೆ ಹಾಗೂ ಹಣದುಬ್ಬರಕ್ಕೆ ಕಡಿವಾಣ ಹಾಕುತ್ತೇನೆ, ರಷ್ಯಾ–ಉಕ್ರೇನ್ ಯುದ್ಧವನ್ನು ಕೆಲವೇ ದಿನಗಳಲ್ಲಿ ನಿಲ್ಲಿಸುತ್ತೇನೆ ಎಂದೆಲ್ಲ ಭರವಸೆ ನೀಡಿದ್ದರು.
ಇದೀಗ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಯಾವ ಸಮಸ್ಯೆಯನ್ನೂ ಪರಿಹರಿಸಲು ಅವರಿಗೆ ಸಾಧ್ಯವಾಗಿಲ್ಲ. ಉದ್ಯೋಗ ಕಡಿತ ಕುರಿತ ಅಂಕಿ ಅಂಶಗಳನ್ನು ಟ್ರಂಪ್ ನಿರಾಕರಿಸುತ್ತಿದ್ದಾರೆ. ಅಮೆರಿಕದ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಆಂತರಿಕವಾಗಿ ಆಡಳಿತದಲ್ಲಿ ಶಿಸ್ತು ತರಲು, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಚುನಾವಣೆಯ ವೇಳೆ ಟ್ರಂಪ್ ನಿಕಟವರ್ತಿಯಾಗಿದ್ದ ಉದ್ಯಮಿ ಇಲಾನ್ ಮಸ್ಕ್ ಅವರಿಗೆ ಆಡಳಿತದಲ್ಲಿ ಸುಧಾರಣೆ ತರುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಕೆಲವು ತಿಂಗಳುಗಳಲ್ಲೇ ಟ್ರಂಪ್ ಅವರ ವರ್ತನೆ ಹಾಗೂ ನಿಲುವುಗಳಿಂದ ಬೇಸತ್ತ ಮಸ್ಕ್, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಟ್ರಂಪ್ ಅವರಿಂದ ದೂರ ಸರಿದಿದ್ದಾರೆ.
ಬೈಡೆನ್ ಅವಧಿಯಲ್ಲಿ ಅಮೆರಿಕ ತನ್ನ ಜಾಗತಿಕ ಪ್ರಭಾವವನ್ನು ಕಳೆದುಕೊಂಡಿತು. ಆ ಪ್ರಭಾವವನ್ನು ಪುನಃ ಸ್ಥಾಪಿಸಲು ಟ್ರಂಪ್‌ಗೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಅಧ್ಯಕ್ಷರನ್ನು ಶ್ವೇತಭವನಕ್ಕೆ ಕರೆಸಿಕೊಂಡು ಮಾಧ್ಯಮಗಳ ಎದುರು ಸಿಡಿಮಿಡಿಗೊಂಡಿದ್ದ ಟ್ರಂಪ್, ಇದುವರೆಗೂ ಉಕ್ರೇನ್ ಯುದ್ಧದ ವಿಷಯದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಉಕ್ರೇನ್ ಅಧ್ಯಕ್ಷರನ್ನು ಹೊರಗಿಟ್ಟು ರಷ್ಯಾದ ಜೊತೆಗೆ ಯುದ್ಧದ ಕುರಿತು ಅಮೆರಿಕ ಮಾತುಕತೆ ನಡೆಸಿದ್ದನ್ನು ಐರೋಪ್ಯ ರಾಷ್ಟ್ರಗಳು ಒಪ್ಪಲಿಲ್ಲ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರ ನೇತೃತ್ವದಲ್ಲಿ ಐರೋಪ್ಯ ರಾಷ್ಟ್ರಗಳ ನಾಯಕರು ಅಮೆರಿಕದ ಧೋರಣೆಯನ್ನು ಖಂಡಿಸಿದರು, ಅಸಮಾಧಾನ
ವನ್ನೂ ಬಹಿರಂಗಪಡಿಸಿದರು.
ಇಸ್ರೇಲ್ ಹಾಗೂ ಇರಾನ್ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲೂ ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳ ನಡುವಿನ ಒಡಕು ಹಾಗೂ ಅಸಮಾಧಾನ ಮತ್ತೊಮ್ಮೆ ಜಾಹೀರಾಯಿತು. ಫ್ರಾನ್ಸ್, ಬ್ರಿಟನ್ ಹಾಗೂ ಕೆನಡಾ ಇದೀಗ ಪ್ಯಾಲೆಸ್ಟೀನ್ ಅನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಗುರುತಿಸಲು ನಿರ್ಧರಿಸಿವೆ. ಅಮೆರಿಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಅರ್ಥಾತ್ ಟ್ರಂಪ್‌ಗೆ ಮುಖಭಂಗವಾಗಿದೆ.
ಅಮೆರಿಕದ ಆಂತರಿಕ ವಿಷಯಗಳಲ್ಲಿ ಆದ ಹಿನ್ನಡೆ ಹಾಗೂ ಜಾಗತಿಕವಾಗಿ ಕುಗ್ಗುತ್ತಲೇ ಇರುವ ಪ್ರಭಾವ ಟ್ರಂಪ್ ಅವರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ವಿದೇಶಿ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ, ಅಮೆರಿಕದ ಪ್ರಾಮುಖ್ಯ ಹಾಗೂ ತಮ್ಮ ಅಧಿಕಾರದ ವ್ಯಾಪ್ತಿಯೇನು ಎಂದು ತೋರಿಸಲು ಅವರು ಹೊರಟಂತೆ ಕಾಣುತ್ತಿದೆ.
ಅಷ್ಟಕ್ಕೂ ಭಾರತದ ಕುರಿತು ಟ್ರಂಪ್ ಮುನಿಸಿಕೊಳ್ಳಲು, ಪಾಕಿಸ್ತಾನದ ಪರ ಮಮಕಾರ ತೋರಲು ಕಾರಣಗಳಿವೆಯೇ? ಮೊದಲ ಅವಧಿಯಲ್ಲಿ ಟ್ರಂಪ್ ಅವರ ಆದ್ಯತೆ ಚೀನಾದ ಓಘಕ್ಕೆ ಕಡಿವಾಣ ಹಾಕುವುದಾಗಿತ್ತು. ಹಾಗಾಗಿಯೇ, ಭಾರತಕ್ಕೆ ಹತ್ತಿರ ವಾಗುವುದು ಅಮೆರಿಕಕ್ಕೆ ಅನಿವಾರ್ಯ ಎನಿಸಿತ್ತು. ಬಂಡವಾಳ ಆಕರ್ಷಣೆ, ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ವ್ಯೂಹಾತ್ಮಕ ದೃಷ್ಟಿಯಿಂದ ಭಾರತವೂ ಅಮೆರಿಕದ ಜೊತೆಗೆ ಸಂಬಂಧ ವೃದ್ಧಿಸಿ ಕೊಳ್ಳಲು ಕಾತುರವಾಗಿತ್ತು. ಹಾಗಾಗಿ ದ್ವಿಪಕ್ಷೀಯ ಸಂಬಂಧಕ್ಕೆ ಬಲಬಂತು. ಚೀನಾವನ್ನು ಗಮನದಲ್ಲಿಟ್ಟುಕೊಂಡು ‘ಕ್ವಾಡ್’ ರಚನೆಯಾಯಿತು.
ಭಾರತದ ವಿದೇಶಾಂಗ ನೀತಿ ಸ್ಪಷ್ಟವಿತ್ತು. ವ್ಯಾಪಾರ ಅಥವಾ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಒಂದು ರಾಷ್ಟ್ರ ಅಥವಾ ಒಕ್ಕೂಟದ ಮೇಲೆ ಅವಲಂಬಿತವಾಗಬಾರದು ಎಂಬುದು ಭಾರತದ ನಿಲುವಾಗಿತ್ತು. ರಷ್ಯಾ, ಅಮೆರಿಕ, ಫ್ರಾನ್ಸ್, ಅರಬ್ ರಾಷ್ಟ್ರಗಳು, ಇಸ್ರೇಲ್ ಹಾಗೂ ದಕ್ಷಿಣ ಜಗತ್ತಿನ ರಾಷ್ಟ್ರಗಳನ್ನು ಸಮಾನವಾಗಿ ಕಾಣುವ ಹಾಗೂ ಎಲ್ಲ ದೇಶಗಳ ಜೊತೆಗೆ ವ್ಯಾವಹಾರಿಕ ಸಂಬಂಧ ಹೊಂದುವ, ಜಾಗತಿಕ ಪೂರೈಕೆ ಜಾಲದಲ್ಲಿ ಪ್ರಮುಖ ಕೊಂಡಿಯಾಗುವ ಗುರಿಯೊಂದಿಗೆ ಭಾರತ ಹೆಜ್ಜೆಯಿರಿಸಿತು. ರಷ್ಯಾದಿಂದ ‘ಎಸ್–400’ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸಿದಾಗ ಅಮೆರಿಕ ಸಿಟ್ಟಾಗಿತ್ತು. ಆದರೆ, ಭಾರತ ಹಿಂದೆ ಸರಿಯಲಿಲ್ಲ. ಉಕ್ರೇನ್ ಯುದ್ಧ ಆರಂಭವಾದ ಮೇಲೆ ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ದಿಗ್ಬಂಧನ ಹೇರಿದವು. ರಷ್ಯಾದ ಜೊತೆಗೆ ಭಾರತ ವಾಣಿಜ್ಯಿಕ ವ್ಯವಹಾರ ಇಟ್ಟುಕೊಳ್ಳಬಾರದು ಎಂಬ ಒತ್ತಡ ಅಮೆರಿಕದಿಂದ ಬಂತು. ಭಾರತ ಒತ್ತಡಕ್ಕೆ ಮಣಿಯಲಿಲ್ಲ.
ಒತ್ತಡ ಹಾಗೂ ಬೆದರಿಕೆಗೆ ಬಗ್ಗದಿದ್ದಾಗ ಭಾರತವನ್ನು ಓಲೈಸುವ ಪ್ರಯತ್ನ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ವೇತಭವನಕ್ಕೆ
ಕರೆಸಿಕೊಂಡು ಬೈಡೆನ್ ವಿಶೇಷ ಆತಿಥ್ಯ ನೀಡಿದರು. ಭಾರತದ ನಿಲುವು ಬದಲಾಗಲಿಲ್ಲ. ರಷ್ಯಾದ ಗೆಳೆತನವನ್ನು ಭಾರತ ತೊರೆಯಲಿಲ್ಲ. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಭಾರತದ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಬೆದರಿಕೆ ಒಡ್ಡಿದರು. ಐರೋಪ್ಯ ರಾಷ್ಟ್ರಗಳು ಹಾಗೂ ದಕ್ಷಿಣ ಜಗತ್ತಿನ ರಾಷ್ಟ್ರಗಳ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವತ್ತ ಭಾರತ ಹೆಜ್ಜೆ ಇರಿಸಿತು. ಚೀನಾದ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿತು.
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಿದಾಗ, ಶಾಂತಿ ಸ್ಥಾಪಕನಾಗಬೇಕೆಂಬ ಆಸೆ ಟ್ರಂಪ್ ಅವರಲ್ಲಿ ಗರಿಗೆದರಿತು. ಟ್ರಂಪ್ ಮಧ್ಯಸ್ಥಿಕೆಗೆ ಪಾಕಿಸ್ತಾನ ದುಂಬಾಲು ಬಿತ್ತು. ಕದನ ವಿರಾಮ ಘೋಷಣೆಯಾದಾಗ ಟ್ರಂಪ್, ಜಾಗತಿಕ ವೇದಿಕೆಗಳಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಸತ್ಕಾರ ಏರ್ಪಟ್ಟಿತು. ಪಾಕಿಸ್ತಾನ, ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆಯಬೇಕು ಎಂದಿತು. ಕಳೆದ ವಾರ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘ಜಗತ್ತಿನ ಯಾವುದೇ ನಾಯಕನೂ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೇಳಲಿಲ್ಲ’ ಎಂದರು. ಮರುದಿನವೇ ಟ್ರಂಪ್ ಭಾರತದ ವಿರುದ್ಧ ಮಾತನಾಡಿದರು. ಭಾರತದ ಆರ್ಥಿಕತೆ ನಿಸ್ತೇಜ ಎಂದರು. ಪಾಕಿಸ್ತಾನದ ಕುರಿತು ಪ್ರೀತಿ ವ್ಯಕ್ತಪಡಿಸಿದರು.
ಟ್ರಂಪ್ ಅವರ ಪಾಕಿಸ್ತಾನ ಪ್ರೀತಿಗೆ ಇತರ ಕಾರಣಗಳೂ ಇವೆ. ಕೆಲವು ತಿಂಗಳುಗಳ ಹಿಂದೆ ಅಮೆರಿಕ ಬೆನ್ನತ್ತಿದ್ದ ಕೆಲವು ಉಗ್ರರನ್ನು ಪಾಕಿಸ್ತಾನ ಅಮೆರಿಕಕ್ಕೆ ಹಸ್ತಾಂತರಿಸಿದೆ. ಕ್ರಿಪ್ಟೊ ಕರೆನ್ಸಿ ವಿಷಯದಲ್ಲಿ ಟ್ರಂಪ್ ಅವರ ಕುಟುಂಬದ ಒಡೆತನದ ‘ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ಸ್’ ಜೊತೆಗೆ ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಟ್ರಂಪ್, ಅಮೆರಿಕ ಮತ್ತು ಪಾಕಿಸ್ತಾನ ಜಂಟಿಯಾಗಿ ಪಾಕಿಸ್ತಾನದಲ್ಲಿನ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಗೊಳಿಸಲಿವೆ ಎಂದಿದ್ದಾರೆ. ಮರುದಿನವೇ ಬಲೂಚಿಸ್ತಾನದ ನಾಯಕರು ತೈಲ ನಿಕ್ಷೇಪ ಹಾಗೂ ಖನಿಜ ಸಂಪತ್ತು ಇರುವುದು ಬಲೂಚಿಸ್ತಾನದಲ್ಲಿ, ಪಾಕಿಸ್ತಾನದಲ್ಲಲ್ಲ; ಚೀನಾ, ಪಾಕಿಸ್ತಾನ ಅಥವಾ ಇನ್ನಾವುದೇ ರಾಷ್ಟ್ರ ಬಲೂಚಿಸ್ತಾನದ ಸಂಪತ್ತನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ಭಾರತ ಈಗಾಗಲೇ ಜಗತ್ತಿನ ಬಲಿಷ್ಠ ಆರ್ಥಿಕತೆಗಳ ಪೈಕಿ ನಾಲ್ಕನೆಯ ಸ್ಥಾನದಲ್ಲಿದೆ. ವಾಜಪೇಯಿ ಅವರ ಅವಧಿಯಲ್ಲಿ ಭಾರತ ಪೋಕ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಇದೇ ಅಮೆರಿಕ ಭಾರತದ ಮೇಲೆ ಆರ್ಥಿಕ ದಿಗ್ಭಂಧನ ವಿಧಿಸಿತ್ತು. ಆ ದಿಗ್ಬಂಧನವನ್ನು ಭಾರತ ದಿಟ್ಟವಾಗಿ ಎದುರಿಸಿ ಎದ್ದುನಿಂತಿತು. ಹಾಗಾಗಿ ಟ್ರಂಪ್ ಅವರ ತೆರಿಗೆ ಹೆಚ್ಚಿಸುವ ಅಸ್ತ್ರಕ್ಕೆ ಭಾರತ ಸುಲಭವಾಗಿ ಮಣಿಯಬೇಕಿಲ್ಲ.
ಮುಖ್ಯವಾಗಿ ನೊಬೆಲ್ ಪ್ರಶಸ್ತಿಯ ಕನಸು ಟ್ರಂಪ್ ತಲೆಹೊಕ್ಕಿದೆ. ‘ಥಾಯ್ಲೆಂಡ್ ಹಾಗೂ ಕಾಂಬೋಡಿಯಾ, ಇಸ್ರೇಲ್ ಮತ್ತು ಇರಾನ್, ರವಾಂಡ ಹಾಗೂ ಕಾಂಗೋ, ಸೆರ್ಬಿಯಾ ಮತ್ತು ಕೊಸೊವೋ, ಭಾರತ ಹಾಗೂ ಪಾಕಿಸ್ತಾನ, ಈಜಿಪ್ಟ್ ಹಾಗೂ ಇಥಿಯೋಪಿಯಾ ನಡುವಿನ ಬಿಕ್ಕಟ್ಟನ್ನು ಟ್ರಂಪ್ ಅಂತ್ಯಗೊಳಿಸಿದ್ದಾರೆ. ಅಧಿಕಾರ ವಹಿಸಿಕೊಂಡ 6 ತಿಂಗಳ ಅವಧಿಯಲ್ಲಿ ತಿಂಗಳಿಗೊಂದು ಶಾಂತಿ ಒಪ್ಪಂದ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ನಡೆದಿದೆ’ ಎಂದು ಶ್ವೇತಭವನ ಹೇಳಿದೆ. ನೊಬೆಲ್ ಪಾರಿತೋಷಕ, ಕ್ರಿಪ್ಟೊ ಕರೆನ್ಸಿ, ತೈಲ ಮತ್ತು ಖನಿಜ ಒಪ್ಪಂದಗಳ ಮೂಲಕ ಟ್ರಂಪ್ ಅವರನ್ನು ಮರುಳು ಮಾಡಲು ಪಾಕಿಸ್ತಾನ ಯತ್ನಿಸುತ್ತಿದೆ. ಇರುಳು ಕಂಡ ಬಾವಿಯಲ್ಲಿ ಟ್ರಂಪ್ ಹಗಲಿನಲ್ಲಿ ಬಿದ್ದರೆ, ಇತಿಹಾಸ ಅವರನ್ನು ಮೂರ್ಖ ನಾಯಕರ ಸಾಲಿಗೆ ಸೇರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.