ADVERTISEMENT

ಜಾಗತಿಕ ರಾಜಕೀಯದ ಒಳಸುಳಿ: ಅರಬ್– ಇಸ್ರೇಲಿ ಸಖ್ಯ- ಏನಿದರ ತಥ್ಯ?

ಈ ಒಪ್ಪಂದದ ಹಿಂದೆ

ಸುಧೀಂದ್ರ ಬುಧ್ಯ
Published 31 ಆಗಸ್ಟ್ 2020, 20:50 IST
Last Updated 31 ಆಗಸ್ಟ್ 2020, 20:50 IST
   
""

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಭರಾಟೆಯ ನಡುವೆಯೇ ಇಸ್ರೇಲ್ ಹಾಗೂ ಯುಎಇ ನಡುವಿನ ಐತಿಹಾಸಿಕ ಒಪ್ಪಂದವೊಂದಕ್ಕೆ ಡೊನಾಲ್ಡ್‌ ಟ್ರಂಪ್ ಮಧ್ಯವರ್ತಿಯಾದರು. ಈ ಒಪ್ಪಂದದ ಅನ್ವಯ, ಇಸ್ರೇಲನ್ನು ಒಂದು ದೇಶವಾಗಿ ಯುಎಇ ಅನುಮೋದಿಸಿ
ದಂತಾಗುತ್ತದೆ ಮತ್ತು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಡುತ್ತದೆ. ಇದಕ್ಕೆ ಪ್ರತಿಯಾಗಿ ಪಶ್ಚಿಮ ದಂಡೆಯನ್ನು (ವೆಸ್ಟ್ ಬ್ಯಾಂಕ್) ಸ್ವಾಧೀನಪಡಿಸಿಕೊಳ್ಳುವ ತನ್ನ ಯೋಜನೆಯನ್ನು ಕೈಬಿಡುವುದಾಗಿ ಇಸ್ರೇಲ್ ಹೇಳಿದೆ. ಈ ಒಪ್ಪಂದವು ಆರಂಭಿಕ ಉತ್ಸಾಹವನ್ನು ದಾಟಿ ಊರ್ಜಿತವಾದರೆ, ಇಸ್ರೇಲಿನೊಂದಿಗೆ ಕೈಜೋಡಿಸಿ ಶಾಂತಿಗಾಗಿ ಮುಂದಡಿಯಿಟ್ಟ ಮೂರನೇ ಅರಬ್ ರಾಷ್ಟ್ರ ಮತ್ತು ಮೊದಲ ಕೊಲ್ಲಿ ರಾಷ್ಟ್ರ ಯುಎಇ ಆಗಲಿದೆ.

ಹಾಗಾದರೆ ಈ ಒಪ್ಪಂದ ಏನನ್ನು ಸೂಚಿಸುತ್ತಿದೆ? ಮೊದಲನೆಯದಾಗಿ, ಮುಸ್ಲಿಂ ಜಗತ್ತಿನ ಬಿರುಕು ಇದೀಗ ಎದ್ದು ಕಂಡಂತಾಗಿದೆ. ಅರಬ್ ಜಗತ್ತು ಬದಲಾಗುತ್ತಿರುವ ಸೂಚನೆ ಈ ಮೂಲಕ ಗೋಚರಿಸಿದೆ ಮತ್ತು ಪ್ಯಾಲೆಸ್ಟೀನ್ ವಿಷಯವನ್ನು ಅರಬ್ ರಾಷ್ಟ್ರಗಳು ಆದ್ಯತೆಯ ಸಂಗತಿಯಾಗಿ ಪರಿಗಣಿಸಿಲ್ಲ ಎಂಬುದು ಜಾಹೀರಾಗಿದೆ.

ಸುಧೀಂದ್ರ ಬುಧ್ಯಾ

ಇತಿಹಾಸದ ಪುಟಗಳಲ್ಲಿ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಸಂಘರ್ಷದ ಅಧ್ಯಾಯಗಳೇ ಇದ್ದವು. 1948ರ ಅರಬ್- ಇಸ್ರೇಲ್ ಯುದ್ಧದಿಂದ ಆರಂಭಗೊಂಡು, 1956ರ ಸುಯೇಜ್ ಬಿಕ್ಕಟ್ಟು, 1967ರ ಆರು ದಿನಗಳ ಯುದ್ಧ, 1973ರ ಯಾಮ್ ಕಿಪ್ಪೂರ್ ಕದನ ಹೀಗೆ ನಾಲ್ಕಾರು ದೊಡ್ಡ ಪ್ರಮಾಣದ ಯುದ್ಧಗಳು, ಆಗೀಗ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆಗಳು, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳನ್ನು ಮೂರು ದಶಕಗಳ ಕಾಲ ಎದುರುಬದುರು ನಿಲ್ಲಿಸಿಬಿಟ್ಟಿದ್ದವು. ನಂತರವೂ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯನ್ನು ಆಕ್ರಮಿಸಿಕೊಂಡಿದೆ ಎನ್ನುವ ಕಾರಣಕ್ಕೆ ಇಸ್ರೇಲನ್ನು ಅರಬ್ ರಾಷ್ಟ್ರಗಳು ಶತ್ರು ರಾಷ್ಟ್ರ ಎಂದೇ ನೋಡುತ್ತಿದ್ದವು. ಆದರೆ ಕಾಲ ಸರಿದಂತೆ ಚಿತ್ರಣ ಬದಲಾಯಿತು.

ADVERTISEMENT

1979ರಲ್ಲಿ ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್ ಹಾಗೂ ಇಸ್ರೇಲ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತು. 1994ರ ಕ್ಲಿಂಟನ್ ಅವಧಿಯಲ್ಲಿ ಇಸ್ರೇಲ್ ಮತ್ತು ಜೋರ್ಡನ್ ಕೈ ಕುಲುಕಿದ್ದವು. ನಂತರ ಅಧಿಕೃತ ಒಪ್ಪಂದಗಳು ಏರ್ಪಡದಿದ್ದರೂ ಪ್ರಾದೇಶಿಕ ಹಿತಾಸಕ್ತಿಗೆ ಪೂರಕವಾಗಿ ಕೆಲವು ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆ ಸಹಕರಿಸತೊಡಗಿದವು. ಲೆಬನಾನ್ ಮತ್ತು ಸಿರಿಯಾದಲ್ಲಿ ಬೀಡುಬಿಟ್ಟಿದ್ದ ಉಗ್ರರ ಕೇಂದ್ರಗಳ ಮೇಲೆ ಕರಾರುವಾಕ್ಕಾಗಿ ದಾಳಿ ನಡೆಸಲು ಹಾಗೂ ಇರಾನ್ ಅಣ್ವಸ್ತ್ರ ಯೋಜನೆಯ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲು ಇಸ್ರೇಲಿಗೆ ಸಾಧ್ಯವಾಗಿದ್ದು ಅರಬ್ ರಾಷ್ಟ್ರಗಳೊಂದಿಗೆ ಹೊಂದಿದ್ದ ರಹಸ್ಯ ಸಂಪರ್ಕದಿಂದಲೇ! ಈ ರಹಸ್ಯ ಮೈತ್ರಿ ಗಾಢವಾಗುತ್ತಲೇ ಬಂತು. ಲೆಬನಾನ್‍ನಲ್ಲಿ ಸೌದಿ ಹಸ್ತಕ್ಷೇಪದ ವಿವಾದ ಉಂಟಾದಾಗ ಸೌದಿ ಅರೇಬಿಯಾದ ಬೆನ್ನಿಗೆ ಇಸ್ರೇಲ್ ನಿಂತಿತು. ದೆಹಲಿ ಮತ್ತು ಟೆಲ್ ಅವೀವ್ ನಡುವಿನ ಏರ್ ಇಂಡಿಯಾ ವಿಮಾನ ಸಂಚಾರಕ್ಕೆ ತನ್ನ ದೇಶದ ಮೂಲಕ ಹಾದುಹೋಗಲು ಸೌದಿ ಅನುವು ಮಾಡಿಕೊಟ್ಟಿತು.

‘ಅರಬ್ ರಾಷ್ಟ್ರಗಳೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧ ಹೊಂದಲು ಪ್ಯಾಲೆಸ್ಟೀನ್ ಸಂಘರ್ಷ ಅಡ್ಡಿಯಾಗಬಾರದು’ ಎಂದು ನೆತನ್ಯಾಹು 2009ರಿಂದಲೂ ಹೇಳುತ್ತಿದ್ದರು. ಅವಕಾಶ ಸಿಕ್ಕಾಗೆಲ್ಲಾ ಗಲ್ಫ್ ದೊರೆಗಳ ಎದುರು ಈ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಆಗೆಲ್ಲಾ ‘ಮೊದಲು ಪ್ಯಾಲೆಸ್ಟೀನ್ ಸಂಘರ್ಷ ಕೊನೆಯಾಗಲಿ’ ಎಂಬ ಪ್ರತಿಕ್ರಿಯೆಯೇ ಬರುತ್ತಿತ್ತು. ಬರಬರುತ್ತಾ ಈ ಧೋರಣೆಯಲ್ಲಿ ಬದಲಾವಣೆ ಆಯಿತು. ಅದಕ್ಕೆ ಕಾರಣ, ಬದಲಾದ ಮಧ್ಯಪ್ರಾಚ್ಯ ಸಮೀಕರಣ. ಲೆಬನಾನ್, ಸಿರಿಯಾ, ಇರಾಕ್ ಮತ್ತು ಯೆಮನ್ ಭಾಗಗಳಲ್ಲಿ ಇರಾನ್ ತನ್ನ ಪರ ಇರುವ ಉಗ್ರ ಸಂಘಟನೆಗಳಿಗೆ ಶಕ್ತಿ ತುಂಬುತ್ತಾ ಮಧ್ಯಪ್ರಾಚ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ್ದರಿಂದ ಕೊಲ್ಲಿ ರಾಷ್ಟ್ರಗಳು ಆತಂಕಗೊಂಡವು. ಅವು ಇರಾನ್‍ನಿಂದಲೇ ತಮಗೆ ಅಪಾಯ ಹೆಚ್ಚು ಎಂದು ಭಾವಿಸಿದವು. ಹೆಚ್ಚಿನ ಸಹಕಾರಕ್ಕೆ
ಸಾಮರಿಕವಾಗಿ ಶಕ್ತವಾಗಿದ್ದ ಇಸ್ರೇಲಿನತ್ತ ನೋಡಿದವು. ಈ ಸಂದರ್ಭ ಬಳಸಿಕೊಂಡ ಇಸ್ರೇಲ್ ತಾನು ನಂಬಿಕಸ್ಥ ರಾಷ್ಟ್ರ ಎನ್ನಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡತೊಡಗಿತು.

ರಾಷ್ಟ್ರೀಯ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಸಹಾಯವನ್ನು ಮತ್ತು ವಿಶ್ವಾಸಾರ್ಹತೆಯನ್ನು ಈಜಿಪ್ಟ್ ಹಾಗೂ ಜೋರ್ಡನ್ ಅನುಮೋದಿಸಿದವು. ಆದರೆ ಬಹಿರಂಗವಾಗಿ ಇಸ್ರೇಲ್ ಜೊತೆ ಕೈ ಜೋಡಿಸಲು ಅರಬ್ ರಾಷ್ಟ್ರಗಳಿಗೆ ಪ್ಯಾಲೆಸ್ಟೀನ್ ವಿಷಯ ತೊಡಕಾಗಿತ್ತು. ಇಸ್ರೇಲ್ ಜೊತೆ ಗುರುತಿಸಿಕೊಂಡರೆ ಜನ ದಂಗೆ ಎದ್ದಾರು ಎಂಬ ಭೀತಿ ಇತ್ತು. ಆ ಭೀತಿಯೂ ಕರಗಿತು. ಆಡಳಿತದ ದಬ್ಬಾಳಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಜನ ಬೀದಿಗೆ ಇಳಿಯುತ್ತಾರೆಯೇ ಹೊರತು, ಪ್ಯಾಲೆಸ್ಟೀನ್ ವಿಷಯದಲ್ಲಿ ಆಡಳಿತ ತಟಸ್ಥ ಧೋರಣೆ ಹೊಂದಿದೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸುವುದಿಲ್ಲ ಎಂಬುದು ಅರಬ್ ದಂಗೆಗಳಿಂದ ಸಾಬೀತಾಯಿತು.

ಅಷ್ಟಲ್ಲದೇ, ಈ ಒಪ್ಪಂದದ ಹಿಂದೆ ಜಾಗತಿಕ ರಾಜಕೀಯದ ಒಳಸುಳಿಗಳೂ ಇವೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಪ್ರಾಬಲ್ಯ ತಡೆಯುವುದು ಅಮೆರಿಕದ ಉದ್ದೇಶ. ಅಣು ಒಪ್ಪಂದದ ರದ್ದತಿಯ ಬಳಿಕ ಹೇರಲಾದ ಆರ್ಥಿಕ ದಿಗ್ಬಂಧನದ ಹೊಡೆತ ತಪ್ಪಿಸಿಕೊಳ್ಳಲು ಚೀನಾದೊಂದಿಗೆ 25 ವರ್ಷಗಳ ಅವಧಿಗೆ, ಸಾವಿರಾರು ಕೋಟಿ ರೂಪಾಯಿ ಮೊತ್ತದ ಸಹಭಾಗಿತ್ವ ಒಪ್ಪಂದಕ್ಕೆ ಇರಾನ್ ಅಣಿಯಾಯಿತು. ಹೀಗಾಗಿ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಸಖ್ಯಕ್ಕೆ ಅಮೆರಿಕ ತ್ವರಿತ ವೇದಿಕೆ ಒದಗಿಸಿತು.

ಇನ್ನೊಂದೆಡೆ, ಮುಸ್ಲಿಂ ಜಗತ್ತಿನಲ್ಲಿ ಕಾಣಿಸಿಕೊಂಡ ಬಿರುಕಿನ ಬಗ್ಗೆ ಟರ್ಕಿ ಮತ್ತು ಪಾಕಿಸ್ತಾನ ಕಳವಳಗೊಂಡವು. ಕಳೆದ ವರ್ಷ ಮುಸ್ಲಿಂ ಜಗತ್ತಿನ ನಾಯಕತ್ವವನ್ನು ಅರಬ್ ರಾಷ್ಟ್ರಗಳಿಂದ ಹೊರತರುವ ನಿಟ್ಟಿನಲ್ಲಿ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಮುಸ್ಲಿಂ ರಾಷ್ಟ್ರಗಳ ಸಮಾವೇಶ ನಡೆಸಲಾಗಿತ್ತು. ಅದರ ನೇತೃತ್ವವನ್ನು ಪಾಕಿಸ್ತಾನ, ಮಲೇಷ್ಯಾ, ಇರಾನ್ ಮತ್ತು ಟರ್ಕಿ ವಹಿಸಿದ್ದವು. ಸಮಾವೇಶದ ಕುರಿತು ಸೌದಿ ಸಿಟ್ಟಾದ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಾವು ಸಮಾವೇಶದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು.

ಈ ಎಲ್ಲ ಬೆಳವಣಿಗೆಗಳಿಂದ ಪಾಕಿಸ್ತಾನ ಕಳವಳಗೊಂಡಿರುವುದಕ್ಕೆ ಮತ್ತೊಂದು ಕಾರಣವೂ ಇದೆ. ಈ ಹಿಂದೆ ಕಾಶ್ಮೀರದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಸಮಾವೇಶ ನಡೆಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿತ್ತು. ಸೌದಿ ಒಪ್ಪದಿದ್ದಾಗ ಆ ಸಂಘಟನೆಯನ್ನು ಒಡೆಯುವ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ ಮಾತನಾಡಿದ್ದರು. ಸೌದಿ ಗದರಿದಾಗ ಸುಮ್ಮನಾಗಿದ್ದರು. ಪ್ಯಾಲೆಸ್ಟೀನ್ ವಿಷಯವನ್ನೇ ಅರಬ್ ರಾಷ್ಟ್ರಗಳು ಆದ್ಯತೆಯಾಗಿ ನೋಡುತ್ತಿಲ್ಲವೆಂದ ಮೇಲೆ ಇನ್ನು ಕಾಶ್ಮೀರದ ವಿಷಯವಾಗಿ ಅವು ಪಾಕಿಸ್ತಾನದ ಪರ ನಿಲ್ಲುತ್ತವೆಯೇ? ಬಾಲಾಕೋಟ್ ಘಟನೆ ನಡೆದಾಗ ಪಾಕಿಸ್ತಾನ ದೊಡ್ಡ ಗಂಟಲಿನಲ್ಲಿ ಬೊಬ್ಬೆಯಿಟ್ಟಿತ್ತು. ಆದರೆ ಅರಬ್ ಜಗತ್ತು ಮಾತನಾಡಲಿಲ್ಲ. ಮೇಲಾಗಿ ಇಸ್ರೇಲ್, ಭಾರತದ ರಕ್ಷಣಾ ಪಾಲುದಾರ ದೇಶ. ಇಸ್ರೇಲ್ ಜೊತೆಗೆ ಅರಬ್ ರಾಷ್ಟ್ರಗಳು ಸಖ್ಯ ಬೆಳೆಸಿದರೆ ಪಾಕಿಸ್ತಾನಕ್ಕೆ ನಿಶ್ಶಕ್ತಿ ಕಾಡದಿದ್ದೀತೇ?

ಅದೇನೇ ಇರಲಿ, ಇಂದಿಗೂ ಅರಬ್ ಜಗತ್ತಿನ 19 ರಾಷ್ಟ್ರಗಳು ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. ಈ ಪೈಕಿ ಎಷ್ಟು ದೇಶಗಳು ಯುಎಇ ಹಾದಿ ಹಿಡಿದು ಇಸ್ರೇಲ್ ಕೈ ಕುಲುಕಲಿವೆ ಕಾದು ನೋಡಬೇಕು. ಇಸ್ರೇಲ್ ಹಾಗೂ ಯುಎಇ ನಡುವಿನ ಶಾಂತಿ ಒಪ್ಪಂದವನ್ನು ‘ಅನುಕೂಲಕ್ಕೆ ಆದ ತಾತ್ಕಾಲಿಕ ಮೈತ್ರಿ’ ಎನ್ನಲಾಗುತ್ತಿದೆ. ಅದು ಆಂತರಿಕ ರಾಜಕೀಯವೇ ಇರಲಿ, ಜಾಗತಿಕ ರಾಜಕೀಯವೇ ಇರಲಿ, ರಾಜಕೀಯದಲ್ಲಿ ಕಾಯಂ ಮೈತ್ರಿ ಎಂಬುದು ಇರುವುದಿಲ್ಲ ಎನ್ನುವುದು ನಮಗೆ ನೆನಪಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.