ADVERTISEMENT

ಖಳರು ಮತ್ತು ಕನ್ನಡದ ಹೀರೊಗಳು

ಎ.ಸೂರ್ಯ ಪ್ರಕಾಶ್
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST
ಖಳರು ಮತ್ತು ಕನ್ನಡದ ಹೀರೊಗಳು
ಖಳರು ಮತ್ತು ಕನ್ನಡದ ಹೀರೊಗಳು   

ಜೆ. ಜಯಲಲಿತಾ ಅವರು 1991ರಿಂದ 1996ರ ನಡುವೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಸಿದ ಭ್ರಷ್ಟಾಚಾರಕ್ಕೆ ನೆರವು ನೀಡಿದ ಆರೋಪ ಎದುರಿಸುತ್ತಿದ್ದ ಶಶಿಕಲಾ ಮತ್ತು ಇನ್ನಿಬ್ಬರನ್ನು ಜೈಲಿಗೆ ಕಳುಹಿಸುವ ಮೂಲಕ ಸುಪ್ರೀಂ ಕೋರ್ಟ್‌, ಸಾರ್ವಜನಿಕ ಜೀವನದಲ್ಲಿ ನೈತಿಕತೆಗೆ ಇಂಬು ಕೊಡುವ ಕೆಲಸವನ್ನು ಈಚೆಗೆ ಮಾಡಿತು.

ಈ ಪ್ರಕರಣ ಇತ್ಯರ್ಥಗೊಳ್ಳಲು ಸರಿಸುಮಾರು ಎರಡು ದಶಕ ತೆಗೆದುಕೊಂಡರೂ, ನ್ಯಾಯಾಲಯದ ಪ್ರಕ್ರಿಯೆಗಳು ತೀರಾ ನಿಧಾನಗತಿಯಲ್ಲಿ ಸಾಗಿದ್ದರೂ, ಶ್ರೀಮಂತರು ಮತ್ತು ಬಲಾಢ್ಯರು ತಮ್ಮ ತಪ್ಪುಗಳಿಗೆ ಉತ್ತರದಾಯಿ ಆಗಬೇಕು ಎಂದು ಬಯಸುವವರು ಸುಪ್ರೀಂ ಕೋರ್ಟ್‌ ನೀಡಿದ ಮೈಲುಗಲ್ಲಿನಂತಹ ತೀರ್ಪನ್ನು ಸ್ವಾಗತಿಸುತ್ತಾರೆ. ಭ್ರಷ್ಟಾಚಾರದ ವಿರುದ್ಧದ ಈ ಐತಿಹಾಸಿಕ ಪ್ರಕರಣದಲ್ಲಿ ಇಬ್ಬರು ಕನ್ನಡಿಗರು ಅತ್ಯಂತ ಮುಖ್ಯವಾದ ಪಾತ್ರ ವಹಿಸಿದ್ದರು. ಇದು ಸಂತಸದ ವಿಚಾರ.

ಭ್ರಷ್ಟ ರಾಜಕಾರಣಿಯೊಬ್ಬ ಅಕ್ರಮ ಆಸ್ತಿ ಸಂಪಾದನೆ ಆರಂಭಿಸುವುದು ಹೇಗೆ, ಅದರಲ್ಲಿ ಸಿಕ್ಕಿಬಿದ್ದರೆ ಆತ ತನ್ನ ರಾಜಕೀಯ ಶಕ್ತಿಯನ್ನು ಮತ್ತು ವಕೀಲರ ಬಳಿಯಿರುವ ಅಸ್ತ್ರಗಳನ್ನು ಕಾನೂನು ಪ್ರಕ್ರಿಯೆ ತಡೆಯಲು ಹೇಗೆ ಬಳಸಿಕೊಳ್ಳುತ್ತಾನೆ, ಸಾಧ್ಯವಾದರೆ ನ್ಯಾಯದಾನ ವ್ಯವಸ್ಥೆಯನ್ನೇ ಹೇಗೆ ನಿಷ್ಕ್ರಿಯಗೊಳಿಸುತ್ತಾನೆ ಎಂಬುದನ್ನು ಜಯಾ–ಶಶಿಕಲಾ ಪ್ರಕರಣದಲ್ಲಿ ಕಾಣಬಹುದು. ತಾವು ಕಾನೂನಿಗಿಂತ ಮಿಗಿಲು ಎಂದು ಭಾವಿಸುವ, ಹಾಗೇ ವರ್ತಿಸುವ ಕೆಲವು ರಾಜಕೀಯ ಮುಖಂಡರ ಬಗ್ಗೆಯೂ ಈ ಪ್ರಕರಣ ಬಹಳಷ್ಟು ಸಂಗತಿಗಳನ್ನು ಹೇಳುತ್ತದೆ.

ಜಯಲಲಿತಾ ಅವರು 1991ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಈ ಭ್ರಷ್ಟಾಚಾರದ ಕತೆ ಆರಂಭವಾಯಿತು. ಜಯಾ ಅಧಿಕಾರದಿಂದ ಕೆಳಗಿಳಿದ ನಂತರ ಸುಬ್ರಮಣಿಯನ್ ಸ್ವಾಮಿ ಅವರು, ‘ಜಯಾ ಅವರು ತಮ್ಮ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ’ ಎಂದು ಚೆನ್ನೈನ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದರು. ಜಯಾ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಹೊರಿಸಿದ್ದ ಆರೋಪಗಳು ಹೀಗಿದ್ದವು:

ಜಯಾ ಅವರು 1987ರಲ್ಲಿ ಹೊಂದಿದ್ದ ಆಸ್ತಿಗಳ ಒಟ್ಟು ಮೌಲ್ಯ ₹ 7.5 ಲಕ್ಷ ಆಗಿತ್ತು. ಇದಲ್ಲದೆ, ಬ್ಯಾಂಕ್‌ ಖಾತೆಯಲ್ಲಿ ₹ 1 ಲಕ್ಷ ಮತ್ತು ಕೆಲವು ಆಭರಣಗಳು ತಮ್ಮ ಬಳಿ ಇವೆ ಎಂದು ಜಯಾ ಹೇಳಿಕೊಂಡಿದ್ದರು. ಆ ಸಂದರ್ಭದಲ್ಲಿ ಶಶಿಕಲಾ ಅವರು ಪೋಯಸ್‌ ಗಾರ್ಡನ್‌ನಲ್ಲಿರುವ ಜಯಾ ಅವರ ನಿವಾಸಕ್ಕೆ ಆಗಾಗ ಭೇಟಿ ನೀಡುವವರಾಗಿದ್ದರು. 1988ರ ನಂತರ ಶಶಿಕಲಾ ಅವರು ಜಯಾ ಜೊತೆಯಲ್ಲೇ ವಾಸಿಸಲು ಆರಂಭಿಸಿದರು.

ಶಶಿಕಲಾ ಅವರನ್ನು ಜಯಾ ಅವರು ‘ನನ್ನ ಸ್ನೇಹಿತೆ ಮತ್ತು ಸಹೋದರಿ’ ಎಂದು ಸಾರ್ವಜನಿಕವಾಗಿ ಘೋಷಿಸಿದರು. ಶಶಿಕಲಾ ಅವರ ಅಕ್ಕನ ಮಗ ವಿ.ಎನ್. ಸುಧಾಕರನ್. ‘ಸುಧಾಕರನ್ ನನ್ನ ದತ್ತು ಮಗ’ ಎಂದು ಜಯಾ ಘೋಷಿಸಿದ್ದರು. ಪ್ರಕರಣದ ನಾಲ್ಕನೆಯ ಆರೋಪಿ ಜೆ. ಇಳವರಸಿ, ಶಶಿಕಲಾ ಅವರ ಅತ್ತಿಗೆ. ತಮ್ಮ ಪತಿ ತೀರಿಕೊಂಡ ನಂತರ ಇಳವರಸಿ ಕೂಡ ಜಯಾ ನಿವಾಸದಲ್ಲಿ ವಾಸಿಸಲು ಆರಂಭಿಸಿದರು.

1991ರ ಜುಲೈ ನಂತರ ಈ ನಾಲ್ವರು ಆಸ್ತಿ ಖರೀದಿಸುವುದು ಇದ್ದಕ್ಕಿದ್ದಂತೆ ಹೆಚ್ಚಾಯಿತು. ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಹೆಸರಿನಲ್ಲಿ 32 ಕಂಪೆನಿಗಳನ್ನು ಜಯಾ ಮತ್ತು ಶಶಿಕಲಾ ಆರಂಭಿಸಿದರು. ಈ ಪೈಕಿ ಆರು ಕಂಪೆನಿಗಳು ಒಂದೇ ದಿನ, ಅಂದರೆ 1994ರ ಜನವರಿ 25ರಂದು ನೋಂದಣಿಯಾದವು.

1995ರ ಫೆಬ್ರುವರಿ 15ರಂದು ಹತ್ತು ಕಂಪೆನಿಗಳ ನೋಂದಣಿ ನಡೆಯಿತು. ಇವೆಲ್ಲವುಗಳ ಬ್ಯಾಂಕ್‌ ಖಾತೆಗಳನ್ನು 1995ರ ಮಾರ್ಚ್‌ 23ರಂದು ತೆರೆಯಲಾಯಿತು. ಜಯಾ ಅವರು ಮುಖ್ಯಮಂತ್ರಿಯಾದ ನಂತರ ಹೊಸದಾಗಿ 50 ಬ್ಯಾಂಕ್‌ ಖಾತೆಗಳನ್ನು ತೆರೆಯಲಾಯಿತು, ‘ತೆರಿಗೆ ವಂಚಿಸಿದ ಹಣದ ಅಕ್ರಮ ವರ್ಗಾವಣೆ  ದೊಡ್ಡ ಪ್ರಮಾಣದಲ್ಲಿ ನಡೆಯಿತು’.

1991ರ ನಂತರ ಜಯಾ, ಇತರ ಮೂವರು ಹಾಗೂ ಇವರ ಹೆಸರಿನಲ್ಲಿ ಆರಂಭವಾಗಿದ್ದ ಕಂಪೆನಿಗಳ ಹೆಸರಿನಲ್ಲಿ ಸ್ಥಿರ ಹಾಗೂ ಚರ ಆಸ್ತಿಗಳನ್ನು ಖರೀದಿಸಲಾಯಿತು, ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಲಾಯಿತು. ಬ್ಯಾಂಕ್‌ ಖಾತೆಗಳಲ್ಲಿ ನಗದು ಹಣವನ್ನು ದೊಡ್ಡ ಪ್ರಮಾಣದಲ್ಲಿ ಮತ್ತೆ ಮತ್ತೆ ಜಮಾ ಮಾಡಲಾಯಿತು.

ಈ ಕ್ರಿಮಿನಲ್ ಪಿತೂರಿಗಳ ಮೂಲಕ ಇವರು ₹ 66.65 ಕೋಟಿ ಆಸ್ತಿ ಸಂಪಾದಿಸಿದರು. ಇದು ಅವರ ಘೋಷಿತ ಆದಾಯಕ್ಕಿಂತ ತೀರಾ ಹೆಚ್ಚಿನದಾಗಿತ್ತು. ತೆರಿಗೆ ವಂಚಿಸಿದ ನಗದು ಹಣವನ್ನು ದೊಡ್ಡ ಪ್ರಮಾಣದಲ್ಲಿ ಜಮಾ ಮಾಡಿದ್ದಕ್ಕೆ ಖಾತೆಯಿಂದ ಖಾತೆಗೆ ವರ್ಗಾವಣೆಯಾದ ಹಣದ ಮೊತ್ತ ಸಾಕ್ಷಿಯಾಗಿತ್ತು. ಅಕ್ರಮ ಮಾರ್ಗದ ಮೂಲಕ ಆಸ್ತಿ ಖರೀದಿ ನಡೆಯಿತು.

ಈ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನಿಂದ ಬೇರೆಡೆ ವರ್ಗಾಯಿಸಬೇಕು ಎಂಬ ಬೇಡಿಕೆ ಬಂದ ನಂತರ, ಇಷ್ಟವಿದ್ದೋ ಇಲ್ಲದೆಯೋ ಕರ್ನಾಟಕವನ್ನು ಪ್ರಕರಣದಲ್ಲಿ ಎಳೆದು ತರಲಾಯಿತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ ಜಯಾ ಮತ್ತು ಇತರ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಜಾನ್ ಮೈಕೇಲ್ ಡಿ’ಕುನ್ಹಾ ಮತ್ತು ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಜಯಾ ವಿರುದ್ಧದ ಆರೋಪಗಳನ್ನು ಗಟ್ಟಿಗೊಳಿಸಿದ ಬಿ.ವಿ. ಆಚಾರ್ಯ ಅವರ ಹೆಸರುಗಳನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು.

ಇವರಿಬ್ಬರು ಕಷ್ಟದ ಪರಿಸ್ಥಿತಿಗಳನ್ನು ನಿಭಾಯಿಸಿದ ರೀತಿಯಿಂದಾಗಿ ತಮ್ಮ ರಾಜ್ಯಕ್ಕೆ ಹಾಗೂ ನ್ಯಾಯದಾನ ವ್ಯವಸ್ಥೆಗೆ ಹೆಮ್ಮೆ ತಂದಿದ್ದಾರೆ. ‘ಈ ಪ್ರಕರಣದಿಂದಾಗಿ ಹಲವು ಹೀರೊಗಳು ಉದಯಿಸಿದ್ದಾರೆ. ಮೊದಲನೆಯವರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆಗಿದ್ದ ನ್ಯಾಯಮೂರ್ತಿ ಜಾನ್ ಮೈಕೇಲ್ ಡಿ’ಕುನ್ಹಾ. ಹಣ ಕೊಟ್ಟು ಆದೇಶವನ್ನು ಖರೀದಿಸಬಹುದು ಎಂದಿದ್ದರೆ, ಹಣ ಕೊಡುವ ತಾಕತ್ತು ಈ ಪ್ರಕರಣದ ಗ್ರಾಹಕರಿಗೆ ಇತ್ತು. ಆದರೆ ನ್ಯಾಯಾಧೀಶರು ಮಾರಾಟಕ್ಕೆ ಇರಲಿಲ್ಲ.

ಈಗ ಆ ನ್ಯಾಯಾಧೀಶರು ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಆಗಿದ್ದಾರೆ’ ಎಂದು ಡಿ’ಕುನ್ಹಾ ಅವರ ಬಗ್ಗೆ ಮಾತನಾಡುವ ವೇಳೆ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಹೇಳಿದ್ದಾರೆ. ಭಟ್ ಅವರು ಇದೇ ರೀತಿಯ ಗೌರವವನ್ನು ಆಚಾರ್ಯ ಅವರಿಗೂ ನೀಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಚಾರ್ಯ ಮತ್ತು ಅವರ ಕುಟುಂಬದ ಸದಸ್ಯರು ನಿರಂತರವಾಗಿ ಎದುರಿಸಿದ ಬೆದರಿಕೆಗಳ ಬಗ್ಗೆ ಅವರ ಸ್ನೇಹಿತರು ಹೇಳುತ್ತಾರೆ. ಪ್ರಕರಣದ ಮೇಲ್ಮನವಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ, ಆಚಾರ್ಯ ಅವರು ಅಲ್ಲಿ ಕರ್ನಾಟಕದ ಪರ ವಾದ ಮಂಡಿಸಿದ್ದರು.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಎರಡು ಅಂಶಗಳನ್ನು ಗುರುತಿಸಬೇಕು– ನ್ಯಾಯಮೂರ್ತಿ ಡಿ’ಕುನ್ಹಾ ಅವರ ಬಗ್ಗೆ ವ್ಯಕ್ತಪಡಿಸಿರುವ ಪ್ರಶಂಸೆ ಹಾಗೂ ನಾಲ್ಕೂ ಜನರನ್ನು ದೋಷಮುಕ್ತಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶದ ಬಗ್ಗೆ ವ್ಯಕ್ತಪಡಿಸಿರುವ ಅತೃಪ್ತಿ. ಇತರ ಆರೋಪಿಗಳ ಹೆಸರಿನಲ್ಲಿ ಇದ್ದ ಆಸ್ತಿಗಳು ವಾಸ್ತವದಲ್ಲಿ ಜಯಾ ಅವರಿಗೆ ಸೇರಿದ್ದವು, ಅಕ್ರಮ ಸಂಪತ್ತು ಸಂಗ್ರಹಕ್ಕಾಗಿ ಹಲವು ಕಂಪೆನಿಗಳನ್ನು ಹುಟ್ಟುಹಾಕಲಾಗಿತ್ತು ಎಂದು ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ADVERTISEMENT

ಆಸ್ತಿ ಮತ್ತು ವೆಚ್ಚಗಳ ಲೆಕ್ಕಾಚಾರದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ‘ಕರಾರುವಾಕ್ ಆಗಿದ್ದರು, ಸೂಕ್ಷ್ಮಮತಿಯಾಗಿದ್ದರು, ಜಾಗರೂಕತೆಯಿಂದ ಮತ್ತು ನ್ಯಾಯೋಚಿತವಾಗಿ’ ವರ್ತಿಸಿದ್ದರು ಎನ್ನುವ ಮೂಲಕ ಸುಪ್ರೀಂ ಕೋರ್ಟ್‌, ನ್ಯಾಯಮೂರ್ತಿ ಡಿ’ಕುನ್ಹಾ ಅವರನ್ನು ಪ್ರಶಂಸಿಸಿದೆ.

ಆದರೆ ಹೈಕೋರ್ಟ್‌ ಆದೇಶದ ಬಗ್ಗೆ ಹೇಳುವಾಗ, ‘ಕಾನೂನಿನ ಹಾಗೂ ಲೆಕ್ಕಾಚಾರದ ದೃಷ್ಟಿಯಿಂದ ಹೈಕೋರ್ಟ್‌ ಆದೇಶವು ತಪ್ಪುಗಳಿಂದ ಕೂಡಿರುವುದು ಕಾಣುತ್ತಿದೆ ಎಂಬುದನ್ನು ಹೇಳಲು ನಮಗೆ ಹಿಂಜರಿಕೆ ಇಲ್ಲ. ಹಾಗಾಗಿ ಈ ಆದೇಶವನ್ನು ರದ್ದು ಮಾಡಬೇಕಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ‘ದಾಖಲೆಗಳನ್ನು ತಪ್ಪಾಗಿ ಓದಿಕೊಂಡು, ತಪ್ಪು ಲೆಕ್ಕದ ಮೂಲಕ’ ಅಕ್ರಮ ಆಸ್ತಿಯ ಪ್ರಮಾಣವನ್ನು ಹೈಕೋರ್ಟ್‌ ಅಂದಾಜಿಸಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಈ ಪ್ರಕರಣದಲ್ಲಿ 20 ವರ್ಷ ಬೇಕಾಯಿತು ಎಂಬುದು ನಿಜ. ಆದರೆ, ಕಾನೂನಿನ ಕೈ ಭ್ರಷ್ಟರನ್ನು ಕೊನೆಗೂ ಹಿಡಿದಿರುವುದರಿಂದ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಪುನರ್‌ ಸ್ಥಾಪಿಸುವಲ್ಲಿ ಈ ಪ್ರಕರಣ ದೊಡ್ಡ ಕೊಡುಗೆ ನೀಡಲಿದೆ ಎನ್ನಲು ಅಡ್ಡಿಯಿಲ್ಲ.

ಕೊನೆ ಹನಿ:
ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಅಸಾಮಾನ್ಯ ಸಂಬಂಧವನ್ನು ವಾಟ್ಸ್‌ಆ್ಯಪ್‌ನಲ್ಲಿ ಬಂದ
ಈ ಹಾಸ್ಯದ ಸಾಲುಗಳು ಹಿಡಿದಿಡುತ್ತವೆ:
ತಮಿಳುನಾಡಿನವರಿಗೆ ನೀರು ಬೇಕಾದರೆ, ಕರ್ನಾಟಕದವರು ಕೊಡಬೇಕು.
ತಮಿಳುನಾಡಿಗೆ ಮುಖ್ಯಮಂತ್ರಿ ಬೇಕಾದರೆ, ಕರ್ನಾಟಕದವರು ಕೊಡಬೇಕು.
ತಮಿಳುನಾಡಿನವರಿಗೆ ಸೂಪರ್‌ ಸ್ಟಾರ್‌ ಬೇಕಾದರೆ, ಕರ್ನಾಟಕದವರು ಕೊಡಬೇಕು.
ಅಷ್ಟೇ ಅಲ್ಲ, ತಮಿಳುನಾಡಿನವರಿಗೆ ಜೈಲು ಕೊಠಡಿ ಬೇಕಾದಾಗಲೂ ಅದನ್ನು ಕರ್ನಾಟಕದವರೇ ಕೊಡಬೇಕು. ಏನಪ್ಪಾ ಇದು?
–ಲೇಖಕ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.