ADVERTISEMENT

ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!

ಎ.ಸೂರ್ಯ ಪ್ರಕಾಶ್
Published 27 ಜನವರಿ 2026, 0:05 IST
Last Updated 27 ಜನವರಿ 2026, 0:05 IST
   
ವರ್ತಮಾನದ ಹಲವು ಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮಂಕಾಗಿಸುವಂತಿವೆ. ಅರಾವಳಿಯ ಅಪವ್ಯಾಖ್ಯಾನ, ದೆಹಲಿಯ ವಾಯುಮಾಲಿನ್ಯದ ಪ್ರಕರಣಗಳಲ್ಲಿ ಸರ್ಕಾರದ ವರ್ತನೆ ಪ್ರಬುದ್ಧವಾಗಿಲ್ಲ. ಸಂಬಂಧಿಸಿದವರು ಶಿಸ್ತು ಹಾಗೂ ಜವಾಬ್ದಾರಿಯುತವಾಗಿ ವರ್ತಿಸುವಂತೆ ಕ್ರಮ ಕೈಗೊಳ್ಳಲು ಪ್ರಧಾನಿಯವರು ಇನ್ನೂ ಕಾಯುತ್ತಾ ಕೂರಬಾರದು.

ವರ್ತಮಾನದ ಹಲವು ಬೆಳವಣಿಗೆಗಳ ಕಾರಣದಿಂದಾಗಿ ದೇಶಕ್ಕೆ ಹಾಗೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಸವಾಲುಗಳು ಎದುರಾಗಲಿವೆ. ಈ ಬೆಳವಣಿಗೆಗಳ ನಡುವೆ ಪರಸ್ಪರ ಸಂಬಂಧ ಇಲ್ಲವಾದರೂ, ಎಲ್ಲವೂ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂಬ ಭಾವನೆ ಮೂಡಿಸಿರುವುದು ಅವೆಲ್ಲವುಗಳಲ್ಲಿನ ಸಮಾನ ಅಂಶ.

ಜಾಗತಿಕ ಮಟ್ಟದಲ್ಲಿ ಹಾಗೂ ರಾಜತಾಂತ್ರಿಕ ವಿಚಾರಗಳಲ್ಲಿ ಪ್ರಧಾನಿಯವರು ಅಸಂಖ್ಯ ಸವಾಲು
ಗಳನ್ನು ನಿಭಾಯಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹಲವು ವಿಷಯಗಳಲ್ಲಿ ಅನಿರೀಕ್ಷಿತ ಬಗೆಯಲ್ಲಿ ವರ್ತಿಸುತ್ತಿರುವುದನ್ನು ಮೋದಿ ಅವರು ಜಾಣತನದಿಂದ ನಿಭಾಯಿಸುತ್ತಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ನಿಭಾಯಿಸದ ಇತರ ಸಂಗತಿಗಳೂ ಇವೆ. ಉದಾಹರಣೆಗೆ, ಇಂಡಿಗೊ ಬಿಕ್ಕಟ್ಟನ್ನು ನಾಗರಿಕ ವಿಮಾನಯಾನ ಸಚಿವಾಲಯವು ಸರಿಯಾಗಿ ನಿರ್ವಹಿಸಲಿಲ್ಲ; ಅರಾವಳಿ ಗಣಿಗಾರಿಕೆ ಗುತ್ತಿಗೆ, ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವ ವಿಷಯವನ್ನು ಪರಿಸರ ಸಚಿವಾಲಯ ಸರಿಯಾಗಿ ನಿಭಾಯಿಸಲಿಲ್ಲ. 

ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಶಾಸಕರೊಬ್ಬರಿಗೆ ದೆಹಲಿ ಹೈಕೋರ್ಟ್‌ನಿಂದ ಜಾಮೀನು ದೊರೆಯಿತು. ಗೋವಾ ಸರ್ಕಾರದ ಅದಕ್ಷತೆಯನ್ನು ಹೇಳುವ ರೀತಿಯಲ್ಲಿ ಗೋವಾದ ನೈಟ್‌ ಕ್ಲಬ್‌ ಒಂದರಲ್ಲಿ ಅಗ್ನಿ ದುರಂತ ಘಟಿಸಿತು. ವಿಚಿತ್ರವೆಂದರೆ ಇವೆಲ್ಲವೂ 2025ರ ಕೊನೆಯ ತ್ರೈಮಾಸಿಕದಲ್ಲಿ ನಡೆದಿವೆ.

ADVERTISEMENT

ಮೊದಲಿಗೆ ಇಂಡಿಗೊ ಕಂಪನಿಯ ಬಿಕ್ಕಟ್ಟನ್ನು ಗಮನಿಸೋಣ. ಇಂಡಿಗೊ ಕಂಪನಿಗೆ ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಶೇಕಡ 65ರಷ್ಟು ಪಾಲು ತನ್ನದಾಗಿಸಿಕೊಳ್ಳಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಅವಕಾಶ ಮಾಡಿಕೊಟ್ಟಿದ್ದು ಏಕೆ? ಈ ಕಂಪನಿಯು ವಿಮಾನಯಾನ ಕ್ಷೇತ್ರದ ಕತ್ತು ಹಿಸುಕಲು ಆಗುವಷ್ಟು ಶಕ್ತಿಯನ್ನು ಸಂಪಾದಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಏಕೆ? ಡಿಜಿಸಿಎ ಸದಸ್ಯರು ಯಾರು? ಅವರು ವಿಮಾನಯಾನ ಕ್ಷೇತ್ರದ ಸಮರ್ಥ ವ್ಯಕ್ತಿಗಳೇ ಅಥವಾ ಅವರು ಅಧಿಕಾರಶಾಹಿ ವಲಯದ ವ್ಯಕ್ತಿಗಳೇ?

ಎರಡನೆಯದು, ಅರಾವಳಿ ಪರ್ವತಗಳಿಗೆ ಸಂಬಂಧಿಸಿದ್ದು. ಸುಪ್ರೀಂ ಕೋರ್ಟ್‌ ನವೆಂಬರ್‌ 20ರಂದು ನೀಡಿದ್ದ ತೀರ್ಪನ್ನು ಪರಿಸರ ಸಚಿವಾಲಯವು ಸಮರ್ಥಿಸುತ್ತಲೇ ಇತ್ತು. ಆದರೆ, ಕಿಚ್ಚನ್ನು ಆರಿಸಲು ಸುಪ್ರೀಂ ಕೋರ್ಟ್‌ ತಾನೇ ಖುದ್ದಾಗಿ ಮುಂದಾಯಿತು. ತನ್ನ ತೀರ್ಪನ್ನು ಅಮಾನತಿನಲ್ಲಿ ಇರಿಸಲು ನಿರ್ಧರಿಸಿತು. ಅರಾವಳಿ ಪರ್ವತ ಅಂದರೆ 100 ಮೀಟರ್‌ಗಿಂತ ಹೆಚ್ಚು ಎತ್ತರದ ಪರ್ವತ ಎಂದು ‘ತಜ್ಞರ ತಂಡ’ವೊಂದು ನೀಡಿದ್ದ ವಿಚಿತ್ರ ವ್ಯಾಖ್ಯಾನವನ್ನು ಕೋರ್ಟ್‌ ನವೆಂಬರ್‌ನಲ್ಲಿ ಮಾನ್ಯ ಮಾಡಿತ್ತು. ‘ತಜ್ಞರು’ ಎಂದು ಹೇಳಿಕೊಂಡವರು ನೀಡಿದ ಅಭಿಪ್ರಾಯವನ್ನು ಸಚಿವಾಲಯವು ಬಹಳ ಗಟ್ಟಿಯಾಗಿ ಸಮರ್ಥಿಸಿಕೊಂಡಿತ್ತಾದರೂ, ಸುಪ್ರೀಂ ಕೋರ್ಟ್‌ ತನ್ನ ಈಚಿನ ಆದೇಶದಲ್ಲಿ ಭಿನ್ನವಾಗಿ ಯೋಚಿಸಿತು. ವಿಷಯ ಇತ್ಯರ್ಥ ಆಗುವವರೆಗೆ ತೀರ್ಪಿಗೆ ತಡೆ ಇರುತ್ತದೆ ಎಂದು ಹೇಳಿತು. ಈ ತಜ್ಞರ ಪೈಕಿ ಬಹುತೇಕರು ಅಧಿಕಾರಿಗಳು; ಅವರು ಪರಿಸರ ಕ್ಷೇತ್ರದ ತಜ್ಞರಲ್ಲ.

ಪರಿಸರ ಸಚಿವರು ತಮ್ಮ ಸಚಿವಾಲಯವನ್ನು ಬಹಳ ಗಟ್ಟಿಯಾಗಿ ಸಮರ್ಥಿಸಿಕೊಂಡರೂ, ಅರಾವಳಿ ಪರ್ವತಗಳಿಗೆ ಸಂಬಂಧಿಸಿದ ತೀರ್ಪು ಹಾಗೂ ಸರ್ಕಾರದ ನಿಲುವಿನ ವಿರುದ್ಧವಾಗಿ ಸಾರ್ವಜನಿಕರು ಬಹಳ ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿಸಿದರು. ಈ ಪ್ರತಿರೋಧಕ್ಕೆ ಟಿ.ವಿ. ಹಾಗೂ ಪತ್ರಿಕಾ ಮಾಧ್ಯಮಗಳ ವರದಿಗಳೂ ಕಾರಣವಾದವು. ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ಪ್ರಕಟಿಸಿದ ನಂತರದಲ್ಲಿ ಸರ್ಕಾರವು ಡಜನ್ನುಗಟ್ಟಲೆ ಗಣಿಗಾರಿಕೆ ಗುತ್ತಿಗೆಗಳನ್ನು ಬಹಳ ತ್ವರಿತವಾಗಿ ನೀಡಿದೆ; ನವೆಂಬರ್‌ ತೀರ್ಪಿಗೆ ಮುಂದೆ ತಡೆಯಾಜ್ಞೆ ಬಂದರೆ ಅಥವಾ ಆ ತೀರ್ಪನ್ನು ಕೋರ್ಟ್‌ ಪುನರ್‌ ಪರಿಶೀಲನೆಗೆ ಒಳಪಡಿಸಿದರೆ ಅದರ ಪರಿಣಾಮ ಹೆಚ್ಚಿನ ಮಟ್ಟದಲ್ಲಿ ಇಲ್ಲದಂತಾಗಲಿ ಎಂಬ ಕಾರಣದಿಂದ ಹೀಗೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಕೂಡ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಇದು ನಿಜವೇ ಆಗಿದ್ದಲ್ಲಿ ಬಹಳ ಆಘಾತಕಾರಿ. ಇದು ಗಣಿಗಾರಿಕೆ ಮಾಫಿಯಾದ ಪ್ರಭಾವವು ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿ ಇರುವವರ ಮೇಲೆ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತದೆ. ದುರದೃಷ್ಟದ ಸಂಗತಿ ಎಂದರೆ, ನಡೆದುಹೋದ ವಿಚಾರಗಳಿಗೆ ಸಂಬಂಧಿಸಿದಂತೆ ತಾರ್ಕಿಕವಾಗಿ ಒಪ್ಪಿಗೆಯಾಗುವ ವಿವರಣೆ
ಯನ್ನು ಸರ್ಕಾರ ನೀಡಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಅಪಖ್ಯಾತಿ ತರುತ್ತಿದೆ.

ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಕುಸಿದಿದೆ. ದೆಹಲಿಯು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಲಿನಗೊಂಡ ನಗರಗಳಲ್ಲಿ ಒಂದಾಗಿದೆ. ಈ ವಿಚಾರದಲ್ಲಿ ಪರಿಸರ ಸಚಿವಾಲಯದ ಬಳಿ ಹೇಳಲು ಹೆಚ್ಚೇನೂ ಇಲ್ಲ. ಈ ವರ್ಷದಲ್ಲಿ ದೆಹಲಿಯ ಹಲವು ಕಡೆಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು 400ರಿಂದ 1000ದ ನಡುವೆ ಇತ್ತು. ಕಳೆದ ವರ್ಷದಲ್ಲಿ ಇದು 1000ದ ಗಡಿಯನ್ನು ತಲುಪಿತ್ತು. ಆದರೆ, ಇವೆಲ್ಲದಕ್ಕೂ ಪರಿಸರ ಸಚಿವಾಲಯದ ಬಳಿ ಇದ್ದ ಪ್ರತಿಕ್ರಿಯೆ ಎಂದರೆ, ಪಂಜಾಬ್‌ನಲ್ಲಿ ಕೂಳೆ ಸುಡುವ ಕೆಲಸವನ್ನು ದೂಷಿಸುವುದು, ಆಮ್‌ ಆದ್ಮಿ ಪಕ್ಷದ ಬಗ್ಗೆ ಉಲ್ಲೇಖಿಸುವುದು ಇತ್ಯಾದಿ. ಅಂದರೆ ಹೊಣೆಗಾರಿಕೆಯ ಸ್ಥಾನದಲ್ಲಿ ಇರುವವರು ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ. ಇದು ಕೇಂದ್ರ ಸರ್ಕಾರದ ಹೆಸರಿಗೆ ಧಕ್ಕೆ ತರುತ್ತಿದೆ.

ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್‌ಗೆ ನೀಡಿದ್ದ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿದ್ದ ದೆಹಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತು. ಸಿಬಿಐ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಅವರು, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದರು. ಆದರೆ, ಅಂತಹ ವ್ಯಕ್ತಿಯನ್ನು ಬಿಜೆಪಿಯಲ್ಲಿ ಇರಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಹಾಗೇ ಉಳಿದುಕೊಂಡಿದೆ. ಬೇಸರದ ಸಂಗತಿಯೆಂದರೆ, ಈ ವ್ಯಕ್ತಿ ಎಸಗಿರುವ ಅಪರಾಧ ಬಹಳ ಗಂಭೀರ ಸ್ವರೂಪದ್ದಾಗಿದ್ದರೂ, ಸಂತ್ರಸ್ತರನ್ನೇ ಅವಮಾನಿಸುವ ಜನರು ಇದ್ದಾರೆ. ಸಂತ್ರಸ್ತರನ್ನು ಬೆದರಿಸುವವರು ಇದ್ದಾರೆ. ಸಂತ್ರಸ್ತೆಯ ತಂದೆಯನ್ನು ಕೊಂದ ಪ್ರಕರಣದಲ್ಲಿ ಸೆಂಗರ್‌ ಜೈಲಿನಲ್ಲಿದ್ದರೂ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಅವರನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಸೆಂಗರ್‌ ಅವರನ್ನು ಬಿಡುಗಡೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಜೇಠ್ಮಲಾನಿ ಅವರು ಅರಾವಳಿ ಪರ್ವತಗಳು ಹಾಗೂ ಸೆಂಗರ್‌ ಜಾಮೀನು ಕುರಿತು ಸುಪ್ರೀಂ ಕೋರ್ಟ್‌ ನೀಡಿದ ಸೂಚನೆಗಳನ್ನು ಶ್ಲಾಘಿಸಿದ್ದಾರೆ. ಅರಾವಳಿ ಪರ್ವತಗಳ ವಿಚಾರದಲ್ಲಿ ಜೇಠ್ಮಲಾನಿ ಅವರ ಪ್ರಕಾರ, ಸುಪ್ರೀಂ ಕೋರ್ಟ್‌ ಮೊದಲು ನೀಡಿದ ತೀರ್ಪು ‘ಆಶ್ಚರ್ಯ ಮೂಡಿಸುವಂತೆ ಇತ್ತು’.

ಗೋವಾದ ನೈಟ್‌ ಕ್ಲಬ್‌ ಒಂದರಲ್ಲಿ ನಡೆದ ಬೆಂಕಿ ದುರಂತವು 25 ಜನರ ಜೀವವನ್ನು ಬಲಿ ಪಡೆಯಿತು. 50 ಮಂದಿಗೆ ಗಾಯಗಳಾದವು. ಈ ಘಟನೆಯ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಒಳಿತು. ಈ ಕ್ಲಬ್‌ ಒಂದು ದ್ವೀಪದಲ್ಲಿದೆ, ಅಲ್ಲಿಂದ ಹೊರಬರಲು ಕಿರಿದಾದ ದಾರಿ ಇದೆ. ಈ ಕ್ಲಬ್‌ ಹಲವು ನಿಯಮಗಳನ್ನು ಉಲ್ಲಂಘಿಸಿದೆ, ಅಗ್ನಿ ಸುರಕ್ಷತಾ ದೃಷ್ಟಿಯಿಂದ ಇದು ಯಾವ ರೀತಿಯಿಂದಲೂ ಸುಸ್ಥಿತಿಯಲ್ಲಿ ಇರಲಿಲ್ಲ. ಆದರೆ, ಇದಕ್ಕೆ ಪರವಾನಗಿ ನೀಡಿದ್ದು ಯಾರು? ಅಗ್ನಿ ಸುರಕ್ಷತಾ ಅನುಮತಿಗಳು ಇಲ್ಲದೆ ಇದು ಹೇಗೆ ನಡೆಯುತ್ತಿತ್ತು? ಇಲ್ಲಿ ಭ್ರಷ್ಟಾಚಾರವು ತನ್ನ ಅತ್ಯಂತ ಕೊಳಕು ರೂಪವನ್ನು ತೋರಿಸಿದಂತೆ ಕಾಣುತ್ತಿದೆ. ಈ ದುರ್ಘಟನೆಗೆ ಕಾರಣರಾದವರೆಲ್ಲ ಬೆಲೆ ತೆರುವಂತೆ ಮಾಡಬೇಕು.

ಇಂದೋರ್‌ನಲ್ಲಿ ಕುಡಿಯುವ ನೀರಿನಲ್ಲಿ ಕೊಳಚೆ ನೀರನ್ನು ಬೆರೆಸಿದ್ದು ಇನ್ನೂ ಹೆಚ್ಚು ಆಘಾತಕಾರಿ ಸುದ್ದಿ. ಇದರ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಕೇಳಿದಾಗ ಮಧ್ಯಪ್ರದೇಶದ ಬಿಜೆಪಿ ನಾಯಕ ಹಾಗೂ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗೀಯ ಅವರು ಬಹಳ ಉದ್ಧಟತನದಿಂದ ನಡೆದುಕೊಂಡರು. ಈವರೆಗೆ ಅಲ್ಲಿ ಹಲವು ಜನ ಮೃತಪಟ್ಟಿದ್ದಾರೆ, ಡಜನ್ನುಗಟ್ಟಲೆ ಜನ ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ಎಂದು ಟಿ.ವಿ. ವರದಿಗಾರರೊಬ್ಬರು ಕೇಳಿದಾಗ ವಿಜಯವರ್ಗೀಯ ಅವರು ಬಹಳ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದರು, ನಿಂದನೆಯ ಭಾಷೆಯನ್ನು ಬಳಸಿದರು. ಇವರಂತಹ ನಾಯಕರು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹಾನಿ ಉಂಟುಮಾಡುತ್ತಿದ್ದಾರೆ. ಪಕ್ಷದ ಹೆಸರು ಹಾಳು ಮಾಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಬಿಜೆಪಿಯ ನಾಯಕತ್ವವು ಕ್ರಮ ಜರುಗಿಸಬೇಕು. ಉದ್ಧಟತನದಿಂದ ವರ್ತಿಸುವ ನಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ಸಂಬಂಧಪಟ್ಟವರು ಶಿಸ್ತಿನಿಂದ ವರ್ತಿಸುವಂತೆ ಮಾಡಲು ಪ್ರಧಾನಿಯವರು ಕ್ರಮ ಜರುಗಿಸಲು ಸಮಯ ಬಂದಿದೆ ಎಂದು ಹೇಳಬೇಕಾಗುತ್ತದೆ. ಕೇಂದ್ರದ ಮಂತ್ರಿ ಪರಿಷತ್ತಿನಲ್ಲಿ ಯಾರಿರಬೇಕು ಎಂಬ ವಿಚಾರದಲ್ಲಿ, ಬಿಜೆಪಿಯು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಸರ್ಕಾರವನ್ನು ಯಾರು ನಡೆಸಬೇಕು ಎಂಬ ವಿಚಾರದಲ್ಲಿ ಅವರು ಗಟ್ಟಿಯಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡಿದಾಗ ಇಂತಹ ಅಹಿತಕರ ಬೆಳವಣಿಗೆಗಳು ಪ್ರಧಾನಿಯವರ ಹೆಸರಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುವುದನ್ನು ತಡೆಯಲು ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.