ADVERTISEMENT

ದಕ್ಷಿಣ ಧ್ರುವದಲ್ಲಿ ಶೋಕಾಲ್‌ಸ್ಕಿಯ ಶೋಕಯಾತ್ರೆ

ನಾಗೇಶ ಹೆಗಡೆ
Published 16 ಜೂನ್ 2018, 10:07 IST
Last Updated 16 ಜೂನ್ 2018, 10:07 IST
ದಕ್ಷಿಣ ಧ್ರುವದಲ್ಲಿ ಶೋಕಾಲ್‌ಸ್ಕಿಯ ಶೋಕಯಾತ್ರೆ
ದಕ್ಷಿಣ ಧ್ರುವದಲ್ಲಿ ಶೋಕಾಲ್‌ಸ್ಕಿಯ ಶೋಕಯಾತ್ರೆ   

ಹೊಸ ವರ್ಷದ ಮೊದಲ ಎರಡು ದಿನ ನಮ್ಮ ದೇಶದ ನಾಲ್ಕಾರು ಸಾವಿರ ವಿಜ್ಞಾನಿಗಳು ಸೂಟ್‌ಕೇಸ್ ಹಿಡಿದು ‘ಸೈನ್ಸ್ ಕಾಂಗ್ರೆಸ್’ ಅಧಿವೇಶನಕ್ಕೆ ಹೊರಡುತ್ತಿ­ರು­ತ್ತಾರೆ. ಪ್ರತಿವರ್ಷ ಜನವರಿ ೩ರಿಂದ ೬ರವರೆಗೆ ನಮ್ಮ ಒಂದಲ್ಲ ಒಂದು ನಗರದಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನಡೆಯಲೇಬೇಕು; ಅದನ್ನು ಪ್ರಧಾನ ಮಂತ್ರಿ ಉದ್ಘಾಟನೆ ಮಾಡಲೇಬೇಕು. ಇದು ಸ್ವಾತಂತ್ರ್ಯ ಸಿಕ್ಕಿದ ಲಾಗಾಯ್ತೂ  ತಪ್ಪದೆ ನಡೆದು ಬಂದ ವಿಧಿಯಾಗಿತ್ತು.

ಈ ವರ್ಷದ ವಿಶೇಷ ಏನೆಂದರೆ ಸೈನ್ಸ್ ಕಾಂಗ್ರೆಸ್ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಕಳೆದ ವರ್ಷ ಕೋಲ್ಕತ್ತದಲ್ಲಿ ೧೦೦ನೇ ಅಧಿವೇಶನ ನಡೆದ ನಂತರ ಈ ಅನೂಚಾನ ಪದ್ಧತಿಗೆ ತಡೆ ಬಿದ್ದಿದೆ. ಜನವರಿಯ ಬದಲು ಫೆಬ್ರುವರಿ ೩ರಿಂದ ಜಮ್ಮು ನಗರದಲ್ಲಿ ೧೦೧ನೇ ಅಧಿವೇಶನ ಏರ್ಪಾಟಾ­ಗಿದೆ. ಕಾಶ್ಮೀರದಲ್ಲಿ ಜನವರಿಯಲ್ಲಿ ತೀರಾ ಚಳಿ ಇರುವುದರಿಂದ ಈ ಬದಲಾವಣೆ ಎನ್ನಲಾಗಿದೆ.

ಅದು ಜಾಣ ನಿರ್ಧಾರವೆಂದೇ ಹೇಳಬೇಕು. ಏಕೆಂದರೆ ಕಳೆದ ಎರಡು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ದಾಖಲೆ ಪ್ರಮಾಣದ ಚಳಿ ಮತ್ತು ಹಿಮಪಾತ ವರದಿಯಾಗುತ್ತಿದೆ. ಗಿಡಮರ, ಕೆರೆಸರೋವರಗಳೆಲ್ಲ ತಟಸ್ಥವಾಗಿವೆ. ಜನರ ಬದುಕೂ ಮರಗಟ್ಟಿದೆ. ಚಳಿ ಎಂದರೆ ವಿಜ್ಞಾನ ಲೋಕವೂ ತತ್ತರಿಸುತ್ತದೆ.

ಅಂಟಾರ್ಕ್ಟಿಕಾ ಖಂಡ­ದಲ್ಲಿ ನಾನಾ ದೇಶಗಳ ೨೨ ವಿಜ್ಞಾನಿಗಳು, ೨೦ ವಿಜ್ಞಾನ ಸಹಾಯಕರು ಸೇರಿದಂತೆ ಒಟ್ಟು ೭೪ ಜನರು ವಿಲಕ್ಷಣ ಸಂಕಟದಲ್ಲಿ ಸಿಲುಕಿದ್ದಾರೆ. ಅವರು ಪಯಣಿಸುತ್ತಿದ್ದ ಹಡಗಿನ ಸುತ್ತಲಿನ ನೀರು ಹೆಪ್ಪುಗಟ್ಟಿ ಬಂಡೆಯಂತಾಗಿದೆ. ನೆರವಿಗೆ ಧಾವಿ­ಸಿದ ಹಡಗುಗಳೂ ಸಮೀಪಕ್ಕೆ ಹೋಗಲಾ­ಗದೆ ಹಿಂದಿರುಗಿವೆ. ಹೆಲಿಕಾಪ್ಟರ್ ಕೂಡ ನೆರವಿಗೆ ಬಾರದಂಥ ದುರ್ಭರ ಸ್ಥಿತಿ ಉಂಟಾಗಿದೆ.

ನಿರ್ಜನ ಅಂಟಾರ್ಕ್ಟಿಕಾ ಖಂಡಕ್ಕೆ ವಿವಿಧ ದೇಶ­ಗಳ ವಿಜ್ಞಾನಿಗಳು ಹೋಗುತ್ತಲೇ ಇರುತ್ತಾರೆ. ನೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಸಾಹಸಿ ಡಗ್ಲಾಸ್ ಮಾವ್ಸನ್ ಎಂಬಾತ ಕೈಗೊಂಡಿದ್ದ ಅಂಟಾರ್ಕ್ಟಿಕಾ ಶೋಧಯಾತ್ರೆಯ ನೆನಪಿಗಾಗಿ ಈ ಬಾರಿ ಆಸ್ಟ್ರೇಲಿಯಾ ವಿಶೇಷ ವಿಜ್ಞಾನ­ಯಾತ್ರೆಯನ್ನು ಕೈಗೊಂಡಿತ್ತು.

  ರಷ್ಯದ ‘ಅಕಾಡೆಮಿಕ್ ಶೋಕಾಲ್‌ಸ್ಕಿಯ್’ ಎಂಬ ಹೆಸರಿನ ಹಡಗನ್ನು ಆಸ್ಟ್ರೇಲಿಯಾ ಸರ್ಕಾರ ಬಾಡಿಗೆಗೆ ಪಡೆದು ಅಂಟಾರ್ಕ್ಟಿಕಾದ ಪೂರ್ವ­ಭಾಗಕ್ಕೆ ಡಿಸೆಂಬರ್ ೮ರಂದು ಯಾತ್ರೆ ಹೊರ­ಡಿಸಿತ್ತು. ವಿಜ್ಞಾನಿಗಳು ದಕ್ಷಿಣ ಧ್ರುವದ ಕಡಲಂಚಿ­ನಲ್ಲೇ ಅಲ್ಲಲ್ಲಿನ ಜಲಚರ, ಶಿಲಾಸ್ವರೂಪ, ಪ್ರಾಣಿಪಕ್ಷಿಗಳ ಗಣತಿ ಮಾಡುತ್ತ, ನೂರು ವರ್ಷ­ಗಳ ಹಿಂದಿನ ಸಾಹಸಿಗಳ ಟಿಪ್ಪಣಿಗಳೊಂದಿಗೆ ತಾಳೆ ನೋಡುತ್ತ ಸಾಗುತ್ತಿದ್ದರು. ಡಿಸೆಂಬರ್ ೨೪ರಂದು ದಿನವಿಡೀ ಹಿಮಗಾಳಿ ಜೋರಾಗಿ ಬೀಸು­ತ್ತಿತ್ತು.

ಹಡಗು ನಿಧಾನಕ್ಕೆ ಚಲಿಸುತ್ತ ಸಂಜೆ­ಯಾದಾಗ ಲಂಗರು ಹಾಕಿ, ಪ್ರಯಾಣಿಕರೆಲ್ಲ ಕ್ರಿಸ್ತನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡ­ಗಿ­ದ್ದಾಗ ಸುತ್ತಲಿನ ಸಮುದ್ರವೆಲ್ಲ ಹೆಪ್ಪು­ಗಟ್ಟಿತು. ಬಿರುಸಿನ ಚಳಿಗಾಳಿ ಜೆಸಿಬಿಯಂತೆ ಕೆಲಸ ಮಾಡುತ್ತ ಹಡಗಿನ ಸುತ್ತ ಬರ್ಫದ ರಾಶಿಯನ್ನು ಪೇರಿ­ಸಿತು. ಬೆಳಿಗ್ಗೆ ನೋಡಿದರೆ ಹಡಗು ಒಂದಿಂಚೂ ಸಾಗದಂತಾಗಿತ್ತು. ಸುತ್ತ ಯಾವ ದಿಕ್ಕಿಗೆ ನೋಡಿದರೂ ಮರಗಟ್ಟಿದ ತೆರೆಗಳೇ ಬಿಳಿಬಂಡೆ­ಗಳಾಗಿ ತಟಸ್ಥ ನಿಂತಿವೆ ವಿನಾ ನೀಲ­ನೀರಿನ ಲವಲೇಶವೂ ಕಾಣುತ್ತಿಲ್ಲ.

ಕಪ್ತಾನ ಐಗರ್ ಕಿಸೆಲೆವ್ ತನ್ನ ಹಡಗಿನ ಸುತ್ತ­ಲಿನ ಬರ್ಫದ ಆಳವನ್ನು ಅಳೆದು ನೋಡಿ ತುಸು ಗಾಬರಿ­ಗೊಂಡಿದ್ದಾನೆ. ತೀವ್ರ ಚಳಿಯಲ್ಲಿ ಕಡಲಂಚಿನ ಸಮುದ್ರವೂ ಹೆಪ್ಪುಗಟ್ಟುವುದು ಹೊಸ­ದೇನಲ್ಲ. ಇಷ್ಟಕ್ಕೂ ೨೦-೩೦ ಸೆಂಟಿಮೀಟರ್ ದಪ್ಪದ ಹಿಮಪೊರೆಯಿದ್ದರೆ ಈ ಹಡಗು ಮೆಲ್ಲಗೆ ಅದನ್ನು ತಳ್ಳುತ್ತ ಸಾಗುತ್ತದೆ. ಆದರೆ ಇಲ್ಲಿ ಮೂರು ಮೀಟರ್ ದಪ್ಪನ್ನ ಬರ್ಫದ ಗೋಡೆಯೇ ನಿರ್ಮಾಣವಾಗಿದೆ. ಆತ ತುರ್ತಾಗಿ ಸಂಕಟ ಸಂದೇಶವನ್ನು ಸುತ್ತೆಲ್ಲ ಕಳಿಸಿ ನೆರವು ಕೋರಿದ್ದಾನೆ.

ವಿಜ್ಞಾನಿಗಳು ಇದೇ ಸುಸಂದರ್ಭ ಎಂದುಕೊಂಡು ತಮ್ಮೆಲ್ಲ ಶೋಧ ಸಾಮಗ್ರಿ­ಗಳನ್ನು ಹೊತ್ತು ಹೊರಕ್ಕೆ ಇಳಿದು ಘನ­ಶರಧಿಯ ಮೇಲೆ ಓಡಾಡುತ್ತ ಪೆಂಗ್ವಿನ್‌ಗಳನ್ನು ಮಾತಾ­ಡಿಸುತ್ತ, ಅಲ್ಲಲ್ಲಿ ರಂಧ್ರ ಕೊರೆಯುತ್ತ ಉಷ್ಣಾಂಶ, ಲವಣಾಂಶ ಅಳೆಯುತ್ತ, ಆಳದಲ್ಲಿ ಹೊಮ್ಮುವ ಧ್ವನಿತರಂಗಗಳನ್ನು ದಾಖಲಿಸುತ್ತ, ಅಲ್ಲಿ ಈಜುತ್ತಿರಬಹುದಾದ ಲೆಪರ್ಡ್ ಸೀಲ್‌­ಗಳಿಗಾಗಿ ಗಾಳ ಹಾಕುತ್ತಿದ್ದಾರೆ. ಹಡಗಿನ ಇತರರ ಜೊತೆಗೆ ಹೋಗಿದ್ದ ಬಿಬಿಸಿ ಮತ್ತಿತರ ಮಾಧ್ಯಮ­ಗಳ ನಾಲ್ವರು ವಾರ್ತಾ ಪ್ರತಿನಿಧಿಗಳು ವಿಡಿಯೊ ದೃಶ್ಯಗಳನ್ನು ಕಳಿಸುತ್ತಿದ್ದಾರೆ.

ಸಂಕಟ ಸಂದೇಶ ಸಿಕ್ಕ ತಕ್ಷಣವೇ ಹಿಂದೂ ಮಹಾ­ಸಾಗರದಲ್ಲಿ ಚಲಿಸುತ್ತಿದ್ದ ಫ್ರೆಂಚ್ ಹಡಗು ‘ಲಾ ಆಸ್ಟ್ರೋಲೆಬೆಲ್’ ತುರ್ತಾಗಿ ಧಾವಿಸಿ ಎರಡೇ ದಿನಗಳಲ್ಲಿ ಸಮೀಪಕ್ಕೆ ತಲು­ಪಿದೆ. ಆದರೆ ಹಿಮದ ಪದರಗಳು ಹಠಾತ್ತಾಗಿ ಹೆಚ್ಚಿರುವುದರಿಂದ ಮುಂದೆ ಸಾಗಲಾರದೆ ಅದು ಮರಳಿ ಹೋಗಿದೆ. ಆಸ್ಟ್ರೇಲಿಯಾ ಸರ್ಕಾರ ಹಿಮದ ಹಾಸನ್ನು ಕತ್ತರಿಸುತ್ತ ಚಲಿಸಬಲ್ಲ ‘ಅರೊರಾ ಆಸ್ಟ್ರಾಲಿಸ್’ ಹೆಸರಿನ ವಿಶೇಷ ಹಡಗನ್ನು ರಕ್ಷಣೆಗಾಗಿ ಡಿಸೆಂಬರ್ ೨೮ರಂದು ಕಳುಹಿಸಿದೆ.

ಅದು ತನ್ನ ದಂತಬಲದ ಗರಿಷ್ಠ ಶಕ್ತಿ­ಯನ್ನು ಬಳಸಿ ಹೆಚ್ಚೆಂದರೆ ೧.೬ ಮೀಟರ್ ದಪ್ಪದ ಹಾಸನ್ನು ನೇಗಿಲಿನಂತೆ ಸೀಳುತ್ತ ಸಾಗು­ತ್ತದೆ. ಹೆಪ್ಪುಗಟ್ಟಿದ ನೀರಿನಲ್ಲಿ ಅದರ ವೇಗವೂ ನಿಧಾನ­ವಾಗಿದೆ. ಇನ್ನೇನು ಮೂವತ್ತು  ಕಿಲೊಮೀಟರ್ ಸಾಗಿದರೆ ಶೋಕಾಲ್‌ಸ್ಕಿಯನ್ನು ತಲುಪ­ಬೇಕು. ಆದರೆ ಇಲ್ಲ, ಒಂದು ಮೀಟರ್ ಕೂಡ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಹಿಮದ ಹಾಸಿನ ದಪ್ಪ ಹೆಚ್ಚುತ್ತಿದೆ. ಮಂಜಿನ ಮುಸುಕಿನಿಂದಾಗಿ ಯಾವ ದಿಕ್ಕೂ ಕಾಣಿಸುತ್ತಿಲ್ಲ. ತನ್ನಿಂದ ಸಾಧ್ಯವಿಲ್ಲವೆಂದು ಹೇಳಿ ಅದೂ ಮರಳಿ ತೆಳುನೀರಿನ ಸಾಗರಕ್ಕೆ ಹೋಗಿ ನಿಂತಿದೆ.

ಅದೇ ದಿನ ಚೀನಾದ ‘ಸ್ನೋ ಡ್ರ್ಯಾಗನ್’ ಹೆಸರಿನ ಹಡಗು ಕೂಡಾ ನೆರವಿಗೆ ಧಾವಿಸಿ ಬಂದಿದೆ. ಹೆಲಿಕಾಪ್ಟರನ್ನು ಹೊತ್ತ ಈ ಹಡಗು ಕಷ್ಟಪಟ್ಟು ಹನ್ನೊಂದು ಕಿ.ಮೀ. ಸಮೀಪ ಬಂದರೂ ಮುಂದಿನ ಪಯಣಕ್ಕೆ ದಾರಿ ಕಾಣದೆಂದು ಹೇಳಿ ಅದೂ ತೆರೆದ ಸಮುದ್ರಕ್ಕೆ ಹಿಂದಿರುಗಿದೆ. ಅಲ್ಲಿಂದ ಹೆಲಿಕಾಪ್ಟರ್ ಹಾರಿಸಿ ಶೋಕಾಲ್‌ಸ್ಕಿಯ ಪ್ರಯಾಣಿಕರನ್ನು ತಂಡ ತಂಡ­ವಾಗಿ ಈಚೆ ತರುವ ಯತ್ನವೂ ತೀವ್ರ ಮಂಜು­ಗಾಳಿ­ಯಿಂದಾಗಿ ವಿಫಲವಾಗಿದೆ. ದಟ್ಟ ಹಬೆ­ಯಂತಿರುವ ಮಂಜಿನ ಕಣಗಳು ಗಂಟೆಗೆ ಎಪ್ಪತ್ತು ಕಿಲೊಮೀಟರ್ ವೇಗದಿಂದ ಧಾವಿಸುವಾಗ ಹೆಲಿಕಾಪ್ಟರ್ ಹಾರಿಸುವುದೂ ಅಪಾಯಕಾರಿ ಆಗಿರುತ್ತದೆ. ಇತ್ತ ನೆರವಿಗಾಗಿ ಕಾಯುತ್ತಿರುವ ವಿಜ್ಞಾನಿಗಳು ಧೃತಿಗೆಟ್ಟಿಲ್ಲ.

ಇಂದಲ್ಲ ನಾಳೆ ಹೆಲಿಕಾಪ್ಟರ್ ಬಂದೇ ಬರುತ್ತದೆಂದು ಆಶಿಸಿ, ಅದು ನೆಲಕ್ಕಿಳಿಯುವಂತೆ ಮಾಡಲೆಂದು ಇತರ ಪ್ರಯಾಣಿಕರ ನೆರವಿನಿಂದ ಸಮುದ್ರದ ಹೆಪ್ಪು­ತೆರೆಗಳನ್ನು ಸಪಾಟು ಮಾಡುತ್ತಿದ್ದಾರೆ. ಸದ್ಯ ಅವರಿರುವ ಹಡಗಿನಲ್ಲಿ ಅನ್ನಾಹಾರ ಸಾಕಷ್ಟಿರುವುದರಿಂದ ಚಿಂತೆಯಿಲ್ಲ.
ಈ ಮಧ್ಯೆ ಚೀನಾದ ‘ಸ್ನೋ ಡ್ರ್ಯಾಗನ್’ ಹಡಗು ತಾನೇ ಮಂಜುಗಡ್ಡೆಯ ನಡುವೆ ಸಿಲು­ಕಿದೆ. ಮೊನ್ನೆ ಹೊಸ ವರ್ಷದ ತುಸು ಮುಂಚಿನ ಬಿಬಿಸಿ ವರದಿಯ ಪ್ರಕಾರ ಈ ಹಡಗಿನ ಸುತ್ತಲೂ ನೀರು ಹೆಪ್ಪುಗಟ್ಟುತ್ತಿದ್ದು ಅದನ್ನು ಎಳೆಯಲೆಂದು ‘ಅರೊರಾ’ ಹಡಗಿನ ನೆರವನ್ನು ಕೋರಲಾ­ಗು­ತ್ತಿದೆ.

ಇದೀಗ ಅಮೆರಿಕದ ಅತ್ಯಂತ ಬಲಾಢ್ಯ ಐಸ್‌ಬ್ರೆಕರ್ ಹಡಗು ‘ಪೋಲಾರ್ ಸ್ಟಾರ್’ಗೆ ಸಂಕಟ­ಸಂದೇಶ ಹೋಗಿದ್ದು ಹತ್ತು ದಿನ­ಗಳೊ­ಳಗಾಗಿ ಅದು ಶೋಕಾಲ್‌ಸ್ಕಿಯನ್ನು ತಲುಪಲಿದೆ. ಜಗತ್ತೆಲ್ಲ ಹೊಸ ವರ್ಷದ ಸೂರ್ಯೋದಯಕ್ಕೆ ಜಯಘೋಷ ಹಾಕಲೆಂದು ಕಾಯುತ್ತಿರುವಾಗ, ಉದಯಾಸ್ತವೇ ಇಲ್ಲದ ತಾಣದಲ್ಲಿ ೭೪ ಜನರು ನೆರವಿಗಾಗಿ ಕ್ಷಣಗಣನೆ ಮಾಡುತ್ತಿದ್ದಾರೆ. 

ಕ್ಷಮಯಾ ಧರಿತ್ರಿ ಎಂದು ನಾವು ಹಾಡಿ ಹೊಗಳುವ ಭೂಮಿ ಕೆಲವು ಸಂದರ್ಭಗಳಲ್ಲಿ ತೀರ ನಿರ್ದಯಿ ಆಗುತ್ತದೆ. ನೂರು ವರ್ಷಗಳ ಹಿಂದೆ ನಾರ್ವೆಯ ಅಮುನ್ಸೆನ್ ತಂಡ ದಕ್ಷಿಣ ಧ್ರುವದ ಶೋಧಕ್ಕೆ ಹೊರಟಾಗಲೇ ಆಸ್ಟ್ರೇಲಿಯಾದ ಭೂವಿಜ್ಞಾನಿ ಡಗ್ಲಾಸ್ ಮಾವ್ಸನ್ ಎಂಬಾತ ಕೂಡ ಅದೇ ಅಂಟಾರ್ಕ್ಟಿಕಾ ಖಂಡದ ಶೋಧಕ್ಕೆಂದು ತಂಡ ಕಟ್ಟಿಕೊಂಡು ಹೋಗಿದ್ದ. ಈತ ಅನುಸರಿಸಿದ ಮಾರ್ಗದಲ್ಲಿ ನಾನಾ ತೊಂದರೆಗಳು ಎದುರಾದವು. ಒಬ್ಬ ಸಂಗಡಿಗ ಹಾಗೂ ಆರು ನಾಯಿಗಳು ಆಹಾರದ ಮೂಟೆಯ ಸಮೇತ ಅನಿರೀಕ್ಷಿತ ಬಿರುಕಿನ ಪ್ರಪಾತಕ್ಕೆ ಸೇರಿ ಕಣ್ಮರೆಯಾದರು. ಇನ್ನಿಬ್ಬರು ಹಸಿವೆ­ಯಿಂದ ಕಂಗೆಟ್ಟರು.

ಸಸ್ಯಾಹಾರಿಯಾಗಿದ್ದ ಮರ್ಸ್ ಎಂಬಾತ ತನ್ನ ಪ್ರೀತಿಯ ನಾಯಿಗಳನ್ನೇ ಕೊಂದು ಒಲ್ಲದ ಮನಸ್ಸಿನಿಂದ ಅವುಗಳ ಯಕೃತ್ತನ್ನಷ್ಟೇ ತಿಂದು ‘ಎ’ ಜೀವಸತ್ವದ ಅತಿ ಸೇವನೆಯಿಂದ ಅರಳುಮರಳಾಗಿ ಸಾವಪ್ಪಿದ. ಮಾವ್ಸನ್ ಒಬ್ಬನೇ ಪಯಣ ಮುಂದುವರೆಸಿ, ನೂರೈವತ್ತು ಕಿ.ಮೀ. ದೂರದ ದಕ್ಷಿಣದ ಅಯಸ್ಕಾಂತೀಯ ಧ್ರುವವನ್ನು (ಆಗ ಅದು ನೆಲದ ಮೇಲಿತ್ತು,  ಈಗ ನೀರಲ್ಲಿದೆ) ತಲುಪಿ, ಹಾಗೂ ಹೀಗೂ ಹಡಗಿನ ನೆಲೆಗೆ ಬಂದು ತಲುಪಿದ.

ಆದರೆ ಹಡಗು ಕೆಲವು ಗಂಟೆಗಳ ಹಿಂದಷ್ಟೇ ಆಸ್ಟ್ರೇಲಿಯಾಕ್ಕೆ ಹೊರಟು ಹೋಗಿತ್ತು. ತುರ್ತು ನಿಸ್ತಂತು ಸಂದೇಶ ಕೊಟ್ಟ ಮೇಲೆ ಹಡಗು ಹಿಂದಕ್ಕೆ ಬಂತಾದರೂ ನೆಲದ­ವರೆಗೆ ಬರಲಾರದೆ ಹಿಮದಲ್ಲಿ ಸಿಕ್ಕು ಹಾಗೂ ಒದ್ದಾಡಿ ಮರಳಿ ಹೋಯಿತು. ಮಾವ್ಸನ್ ಮತ್ತೆ ಬೇಸಿಗೆ­ವರೆಗೂ ಕಾದು ಕೊನೆಗೂ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ತನ್ನ ರಾಷ್ಟ್ರದ ಹೀರೊ ಎನಿಸಿದ.

ಆತನ ಸಾಹಸದ ಶತಮಾನೋತ್ಸವ ಸಂದರ್ಭ­ದಲ್ಲಿ ಮತ್ತೆ ಅದೇ ಮಾರ್ಗದಲ್ಲಿ ಹೊರಟ ಹಡಗು ಕೂಡ ಇಂದು ಆತಂಕದಲ್ಲಿ ಸಿಲುಕಿದೆ. ಈ ನೂರು ವರ್ಷಗಳಲ್ಲಿ ತಂತ್ರಜ್ಞಾನ­ದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ಹಡಗುಗಳ ಸುರಕ್ಷತೆ ಮತ್ತು ಸವಲತ್ತು ಎರಡೂ ಹೆಚ್ಚಾಗಿದೆ. ಪ್ರಯಾಣ ಕೈಗೊಂಡ ಒಬ್ಬೊಬ್ಬ ವ್ಯಕ್ತಿಯ ಓಡಾಟ­ವನ್ನೂ ನಾವೆಲ್ಲ ಮನೆಯಲ್ಲಿ ಕೂತೇ ನೋಡ­ಬಹುದಾಗಿದೆ. ಹಾಗೆಯೇ ಅಂಟಾರ್ಕ್ಟಿಕಾ­ದಲ್ಲಿ ಕೂಡ ಏನೇನೆಲ್ಲ ಬದಲಾವಣೆಗಳು ಆಗಿವೆ. ಭೂಮಿ ಬಿಸಿಯಾಗುತ್ತ ಅಲ್ಲಿನ ವಿಶಾಲ ಭೂಭಾಗಗಳೇ ನಾಪತ್ತೆಯಾಗುತ್ತಿವೆ. ನಿನ್ನೆ ಇಲ್ಲಿ ಕಂಡ ದಿಬ್ಬಗಳು ಮತ್ತು ಗುಡ್ಡಗಳು ನಾಳೆ ಬೇರೆಲ್ಲಿಗೊ ಚಲಿಸಿರುತ್ತವೆ.

ಇಡೀ ಭೂಮಿಗೆ ರಕ್ಷಾ­ಕವಚದಂತಿದ್ದ ಓಝೋನ್ ಪದರ ಕೂಡ ಅಂಟಾರ್ಕ್ಟಿಕಾ ಆಕಾಶದಲ್ಲಿ ಕೆಲವೆಡೆ ತೆಳು­ವಾಗಿದೆ, ಕೆಲವೆಡೆ ಚಿಂದಿಯಾಗಿದೆ. ಧ್ರುವಗಾಮಿ ಉಪಗ್ರಹಗಳು ಪ್ರತಿ ಮೀಟರ್ ನೆಲದ ಹಾಗೂ ನೆಲ­ದಿಂದ ಎರಡು ಮೀಟರ್ ಎತ್ತರದ ವಾಯು­ವಿನ ಉಷ್ಣತೆಯನ್ನು ಬೇಕೆಂದಾಗ ತಿಳಿಸುತ್ತವೆ. ಆದರೂ ಮುಂದಿನ ಅರ್ಧ ದಿನದಲ್ಲಿ ಏನಾಗಲಿದೆ ಎಂಬುದನ್ನು ಯಾರೂ ಮುಂಚಿತ­ವಾಗಿ ಹೇಳಲು ಸಾಧ್ಯವಾಗದಷ್ಟು ಅನಿಶ್ಚಿತತೆ ಅಲ್ಲಿ ಆವರಿಸಿದೆ. ಅಮೆರಿಕದ ಹಡಗು ಸುರಕ್ಷಿತ­ವಾಗಿ ಅಲ್ಲಿಗೆ ತಲುಪಿದರೆ ಅಥವಾ ಮಂಜಿನ ಗಾಳಿಯ ವೇಗ ತಗ್ಗಿ ಹೆಲಿಕಾಪ್ಟರ್ ಹಾರಾಟ ಸುಗಮ­ವಾದರೆ, ಅದು ಶೋಕಾಲ್‌ಸ್ಕಿಯ ಶೋಕಯಾತ್ರೆ ಎನ್ನಿಸದೆ ಎಲ್ಲರೂ ಸುರಕ್ಷಿತ ಪಾರಾಗಿ ಬರಬಹುದು.

ದಕ್ಷಿಣ ಧ್ರುವದ ಈ ನೆಲದ ಮೇಲೆ ಉತ್ತರ ಧ್ರುವದ ಬಳಿಯ ನಾರ್ವೆ ದೇಶ ಮೊದಲ ಧ್ವಜ­ವನ್ನು ಊರಿತ್ತು. ಕ್ರಮೇಣ ಇತರ ದೇಶಗಳೂ ಪೈಪೋಟಿಯ ಮೇಲೆ ಅಲ್ಲಿಗೆ ಧಾವಿಸಿದವು. ಐವತ್ತು ವರ್ಷಗಳ ಹಿಂದೆ ೧೨ ದೇಶಗಳ ಯಜಮಾನಿಕೆ ಅಲ್ಲಿತ್ತು. ಈಗ ೪೯ ದೇಶಗಳು ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡಿವೆ. ಅಲ್ಲಿ ಪರಮಾಣು ಸ್ಫೋಟ ಪರೀಕ್ಷೆ ನಡೆಸಕೂಡದು, ತ್ಯಾಜ್ಯ­ಗಳನ್ನು ಸುರಿಯಕೂಡದು ಎಂದೆಲ್ಲ ಶಾಂತಿ ಒಪ್ಪಂದ ಮಾಡಿಕೊಂಡು ವೈಜ್ಞಾನಿಕ ಸಂಶೋಧನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹವಾಮಾನ ಚೆನ್ನಾಗಿದ್ದಾಗ ವಿವಿಧ ದೇಶಗಳ ನಾಲ್ಕು ಸಾವಿರ ವಿಜ್ಞಾನಿಗಳು ಏಕಕಾಲಕ್ಕೆ ಅಲ್ಲಿ ಬೀಡು ಬಿಟ್ಟಿರುತ್ತಾರೆ. ಈಗ ಹವಾಮಾನ ಕೈಕೊಟ್ಟಾಗ ಎಷ್ಟೊಂದು ರಾಷ್ಟ್ರಗಳ ತಾಂತ್ರಿಕ ತಜ್ಞರು ಅಲ್ಲಿ ಸಿಲುಕಿರುವ ವಿಜ್ಞಾನಿಗಳ ನೆರವಿಗೆ ಧಾವಿಸಿದ್ದಾರೆ. ಹೊಸವರ್ಷ ಆ ಎಲ್ಲರಿಗೂ ಶುಭ ತರಲೆಂದು ಹಾರೈಸೋಣ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.