
ಬರದ ಬೇಗೆ ಮತ್ತು ಪ್ರೊಫೆಸರ್ ಕಲಬುರ್ಗಿಯವರ ಕೊಲೆಯಂಥ ವಿಷಣ್ಣ ವಿದ್ಯಮಾನಗಳ ನಡುವೆ ಧಾರವಾಡ ಭಾಗದ ಜನರಿಗೆ ಸಂಭ್ರಮಿಸಲು ಹೊಸ ಸುದ್ದಿ ಸಿಕ್ಕಿದೆ. ಐಐಟಿ ಧಾರವಾಡದಲ್ಲೇ ಸ್ಥಾಪಿತವಾಗಲಿದೆ ಎಂದು ಅಲ್ಲಿನ ಕೆಲವರು ಪೇಢಾ ಹಂಚುತ್ತಿರುವಾಗ ಇತ್ತ ಹಾಸನ, ರಾಯಚೂರು, ಮೈಸೂರಿನ ಕೆಲವರಿಗೆ ಅದು ಕಹಿ ಯೆನಿಸಬಹುದು. ನಾಳೆ ಅದೆಲ್ಲ ಮರೆತು ಹೋಗುತ್ತದೆ. ಆದರೆ ಕರ್ನಾಟಕದ ಯಾವುದೇ ನಗರದಲ್ಲಿ ಹೊಸ ಐಐಟಿಯನ್ನು ಆರಂಭಿಸಿದರೂ ವಿಷಣ್ಣರಾಗುವ ವ್ಯಕ್ತಿಯೊಬ್ಬರು ನಮ್ಮಲ್ಲಿದ್ದಾರೆ.
ಅವರು ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್. ಅವರ ಸಾತ್ವಿಕ ಸಿಟ್ಟು ಈಗಿನದಲ್ಲ. ಐವರು ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಸಮಿತಿಗಳ ಮುಖ್ಯಸ್ಥರಾಗಿದ್ದ ಅವರಿಗೆ 2008ರಲ್ಲೇ ಸಿಟ್ಟು ಬಂದಿತ್ತು. ಹೊಸ ಐಐಟಿಗಳನ್ನು ದೇಶದ ಎಂಟು ಕಡೆ ಏಕಕಾಲಕ್ಕೆ ಆರಂಭಿಸುವ ಘೋಷಣೆಯಾಗಿ, ನೋಡನೋಡುತ್ತ ಬಿಹಾರ, ರಾಜಸ್ತಾನ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅವು ಆರಂಭವಾದಾಗ ‘ಐಐಟಿ ಎಂದರೆ ಅದೇನು ಪ್ರೈಮರಿ ಸ್ಕೂಲಾ?’ ಎಂದು ಅವರು ಗುಡುಗಿದ್ದರು. ಏಕಕಾಲಕ್ಕೆ ಅಷ್ಟೊಂದು ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಾದರೂ ಸೂಕ್ತ ಸಿದ್ಧತೆ ಬೇಕು. ‘ನಮ್ಮಲ್ಲೇನಿದೆ ಸಿದ್ಧತೆ?’ ಎಂದು ಕೇಳಿದ್ದರು.
ಸಿದ್ಧತೆ ಎಂದರೆ ನೂರಾರು ಎಕರೆ ಜಾಗ ಇದೆ, ನೀರಿದೆ, ವಿಮಾನ ನಿಲ್ದಾಣ ಸಮೀಪದಲ್ಲೇ ಇದೆ ಎಂಬಿವೇ ಮುಂತಾದ ಕಾರಣಗಳನ್ನು ನೀಡಿದರೆ ಸಾಲದು. ಐಐಟಿ ಎಂದರೆ ಫ್ಯಾಕ್ಟರಿ ಅಲ್ಲವಲ್ಲ. ಉತ್ತಮ ಗುಣಮಟ್ಟದ ಶಿಕ್ಷಕರು ಬೇಕು, ಅಷ್ಟೇ ಮಟ್ಟದ ವಿದ್ಯಾರ್ಥಿಗಳೂ ಬೇಕು. ಅವೆರಡಕ್ಕೂ ಈಗ ತೀವ್ರ ತುಟಾಗ್ರತೆ ಉಂಟಾಗುತ್ತಿದೆ.
ಹಿಂದೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ದೇಶವನ್ನು ಹೊಸದಾಗಿ, ಶೀಘ್ರವಾಗಿ ಕಟ್ಟಬೇಕಿತ್ತು. ಉತ್ತಮ ಗುಣಮಟ್ಟದ ಎಂಜಿನಿಯರ್‌ಗಳನ್ನು ರೂಪಿಸಲೆಂದೇ ಆಗ ವಿವಿಧ ರಾಷ್ಟ್ರಗಳ ನೆರವಿನಿಂದ ಹಂತಹಂತವಾಗಿ ಐದು ಐಐಟಿಗಳನ್ನು ಸ್ಥಾಪಿಸಲಾಯಿತು. ವಿಶ್ವಸಂಸ್ಥೆಯ ನೆರವಿನಿಂದ ಕೋಲ್ಕತ್ತದ ಬಳಿ ಖರಗ್‌ಪುರ ಎಂಬಲ್ಲಿ 1950ರಲ್ಲಿ ಮೊದಲ ಐಐಟಿ ಆರಂಭವಾಯಿತು.
ನಂತರ ಅಮೆರಿಕದ ನೆರವಿನಿಂದ ಕಾನಪುರದಲ್ಲಿ, ಸೋವಿಯತ್ ಸಂಘದ ನೆರವಿನಿಂದ ದಿಲ್ಲಿಯಲ್ಲಿ, ನಂತರ ಐರೋಪ್ಯ ದೇಶಗಳ ನೆರವಿನಿಂದ ಮದ್ರಾಸ್, ಮುಂಬೈಯಲ್ಲಿ ಐಐಟಿಗಳು ಆರಂಭಗೊಂಡವು. ವಿದೇಶೀ ಹಣಕಾಸಿನ ಮತ್ತು ಸಲಕರಣೆಗಳ ಸಹಾಯವೂ ಸಿಕ್ಕಿದ್ದರಿಂದ ಸಹಜವಾಗಿ ಉತ್ಕೃಷ್ಟ ಗುಣಮಟ್ಟದ ಎಂಜಿನಿಯರ್‌ಗಳೂ ಹೊರಬರತೊಡಗಿದರು.
ಆದರೇನು, ಹಾಗೆ ಪದವಿ ಪಡೆದವರ ನೆರವು ವಿದೇಶಗಳಿಗೇ ಜಾಸ್ತಿ ಸಿಗತೊಡಗಿತು. ಐಐಟಿ ಪದವಿ ಸಿಕ್ಕರೆ ‘ವಿದೇಶಕ್ಕೆ ಹಾರಲು ವೀಸಾ ಸಿಕ್ಕಂತೆ’ ಎಂಬ ಮಾತು 1970ರಲ್ಲೇ ಪ್ರಚಲಿತವಾಗಿತ್ತು. ಕಾರು, ಹಡಗು, ವಿಮಾನ, ರಾಕೆಟ್, ಯಂತ್ರೋಪಕರಣ ತಯಾರಿಸುವ ಖ್ಯಾತ ವಿದೇಶೀ ಕಂಪನಿಗಳಲ್ಲೆಲ್ಲ ನಮ್ಮವರೇ ಸೇರಿಕೊಂಡರೂ ನಮಗೆ ಮಾತ್ರ ಅದರಿಂದ ಪ್ರಯೋಜನವಿಲ್ಲ ಎಂಬಂತಾಯಿತು.
ಭಾರತದ ಸಂಪನ್ಮೂಲವನ್ನು, ಭಾರತದ್ದೇ ತಾಂತ್ರಿಕ ಶಿಕ್ಷಕರನ್ನು ಬಳಸಿಕೊಂಡು, ಭಾರತದ ಪ್ರತಿಭಾವಂತ ಎಂಜಿನಿಯರ್‌ಗಳನ್ನು ವಿದೇಶೀ ಸೇವೆಗೆ ಕಳಿಸಬೇಕೆ? ಮೀಸಲಾತಿ ಇಲ್ಲದ, ಮೇಲ್ವರ್ಗದ ಮಕ್ಕಳನ್ನೇ ಆಯ್ಕೆ ಮಾಡಿ, ಸಮಾಜದ ಉನ್ನತ ಸ್ತರಗಳಲ್ಲಿದ್ದವರ ಸೇವೆ- ಸರಕುಗಳಿಗಾಗಿಯೇ ಎಂಜಿನಿಯರುಗಳನ್ನು ರೂಪಿಸುವ ಇಂಥ ಸಂಸ್ಥೆಗಳು ಯಾಕಿರಬೇಕು? ಅಲ್ಲಿಂದ ಹೊರಬಿದ್ದವರು ಡಾಲರ್ ಗಳಿಕೆಗೆ ಹೋಗುತ್ತಾರೆ ವಿನಾ ದೇಶದ ಕೃಷಿ ಆಧರಿತ ವಾಣಿಜ್ಯದ ಅಭಿವೃದ್ಧಿಗೆ ಏನಾದರೂ ಕೊಡುಗೆ ಅವರಿಂದ ಉಂಟೆ?
ಈ ಚರ್ಚೆ ನಡೆಯುತ್ತಿದ್ದಾಗಲೇ ಜಾಗತೀಕರಣದ ಹೆಬ್ಬಾಗಿಲು ತೆರೆದುಕೊಂಡು, ಎಂಜಿನಿಯರ್‌ಗಳಿಗೆ ಹಠಾತ್ ಬೇಡಿಕೆ ಹೆಚ್ಚಿದ್ದರಿಂದ ಅದೇ ಮಾದರಿಯ ಇನ್ನಷ್ಟು ಐಐಟಿಗಳನ್ನು ಆರಂಭಿಸುವ ಅಭಿಯಾನವೂ ಆರಂಭವಾಯಿತು. ಐಐಟಿ, ಐಐಎಮ್‌ಗಳಂಥ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇ 27ರಷ್ಟು ಮೀಸಲಾತಿ ಇರಬೇಕೆಂದು ಸಂವಿಧಾನದ ತಿದ್ದುಪಡಿ ತರಲಾಯಿತು. ಈ ನಡುವೆ ಐಐಟಿಗಳು ತಮಗೆ ಬೇಕಿದ್ದ ಹಣವನ್ನು ತಾವೇ ಗಳಿಸಬೇಕೆಂಬ ಒತ್ತಡ ಬಂದಮೇಲೆ, ಅಲ್ಲಿ ನಡೆಯುವ ಸಂಶೋಧನೆಗಳ ಬಹುಪಾಲು ಲಾಭವೆಲ್ಲ ಅಧಿಕೃತವಾಗಿ ಬಹುರಾಷ್ಟ್ರೀಯ ಕಂಪನಿಗಳ ಬಕ್ಕಣಕ್ಕೇ ಸೇರುವಂತಾಯಿತು.
ಮೊದಲ ಐವತ್ತು ವರ್ಷಗಳ ಕಾಲ ಕೇವಲ ಐದು ಐಐಟಿಗಳೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಝಗಮಗಿಸುತ್ತಿದ್ದವು. ಈಗ ಅವುಗಳ ಸಂಖ್ಯೆ 19 ದಾಟಿ 23ಕ್ಕೆ ಏರಲಿದೆ. ಪ್ರತಿ ವರ್ಷ ಅಜಮಾಸು ಎಂಟು ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಐಐಟಿ-ಜೆಇಇ ಪ್ರವೇಶ ಪರೀಕ್ಷೆ ಸಾಕಷ್ಟು ಕಠಿಣವಾಗಿದ್ದು, ಖಾಸಗಿ ಕೋಚಿಂಗ್ ಪಡೆದರೆ ಮಾತ್ರ ಪಾಸಾಗಲು ಸಾಧ್ಯವೆಂಬ ಪ್ರತೀತಿ ಇದೆ. ಪ್ರವೇಶ ಪಡೆದ ಶೇ 95 ವಿದ್ಯಾರ್ಥಿಗಳು ಕೋಚಿಂಗ್ ಕ್ಲಾಸುಗಳಿಗೆ ಹೋಗಿದ್ದವರೇ ಆಗಿರುತ್ತಾರೆ. ‘ನನ್ನನ್ನು ಪಾಲಕರು ಕೋಚಿಂಗ್‌ಗೆ ಕಳಿಸಿರಲಿಲ್ಲ; ಹಾಗಾಗಿ ನನಗೆ ಐಐಟಿಯಲ್ಲಿ ಪ್ರವೇಶ ಸಿಕ್ಕಿರಲಿಲ್ಲ’ ಎಂದು ರಸಾಯನ ವಿಜ್ಞಾನದಲ್ಲಿ ನೊಬೆಲ್ ಪಡೆದ ವಿ.ರಾಮಕೃಷ್ಣನ್ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಹೇಳಿದ್ದರು.
ಐಐಟಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಗತಿ ಏನು? ಜಗತ್ತಿನ 200 ಅತ್ಯುತ್ತಮ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಒಂದೇ ಒಂದು ಐಐಟಿಯ ಹೆಸರೂ ಈಚೆಗೆ (ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್‍್ಯಾಂಕಿಂಗ್‌ನಲ್ಲಿ) ಬರಲಿಲ್ಲ. ಈ ವರ್ಷ ರೂರ್ಕಿಯ ಐಐಟಿಯಿಂದ 120 ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಲಾಗಿದೆ- ನಿರೀಕ್ಷೆಗೆ ತಕ್ಕಂತೆ ಅವರ ಗುಣಮಟ್ಟ ಏರುತ್ತಿಲ್ಲ ಎಂಬ ಕಾರಣದಿಂದಾಗಿ.
ಹೊಸದಾಗಿ ಆರಂಭಿಸಿದ ಎಂಟು ಐಐಟಿಗಳಲ್ಲಿ ಶಿಕ್ಷಕರ ತೀವ್ರ ಕೊರತೆಯಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ಸ್ಥಾಯಿ ಸಮಿತಿ 2012ರಲ್ಲೇ ವರದಿಯನ್ನು ನೀಡಿತ್ತು. ಕೆಲವು ಐಐಟಿಗಳಲ್ಲಿ ಶಿಕ್ಷಕರ ಕೊರತೆ ಶೇ60ರಷ್ಟು ಇದೆಯೆಂದು ಹೇಳಿತ್ತು. ಪ್ರತಿಯೊಂದು ಐಐಟಿಗೂ 90 ಶಿಕ್ಷಕರ ನೇಮಕಾತಿ ಆಗಬೇಕಿತ್ತಾದರೂ ಯಾವುದಕ್ಕೂ ಅಷ್ಟು ಮಂದಿ ಸಿಕ್ಕಿಲ್ಲ. ಆರಂಭವಾಗಿ ಆರು ವರ್ಷಗಳೇ ಕಳೆದರೂ ಒಂದಲ್ಲ ಒಂದು ಕಾರಣದಿಂದಾಗಿ ಹೊಸ ಕ್ಯಾಂಪಸ್‌ಗಳು ಪೂರ್ತಿ ಸಜ್ಜಾಗಿಲ್ಲ. ಕೆಲವೆಡೆ ಅದೇ ತಾನೆ ಪದವಿ ಪಡೆದವರನ್ನು, ಇನ್ನು ಕೆಲವೆಡೆ ನಿವೃತ್ತ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
‘ಅದೇನು ಪ್ರೈಮರಿ ಸ್ಕೂಲಾ?’ ಎಂದು ಪ್ರೊ. ಸಿ.ಎನ್.ಆರ್. ರಾವ್ ಹೇಳಿದ್ದನ್ನು ಆರು ವರ್ಷಗಳ ನಂತರ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ಅವರು ಸ್ವತಃ ಎರಡು ಐಐಟಿಗಳಲ್ಲಿ ಅಧ್ಯಾಪಕರಾಗಿದ್ದವರು. ಆಮೇಲೆ ಐಐಟಿಗಿಂತ ಹೆಚ್ಚಿನ ಪ್ರತಿಷ್ಠೆ ಪಡೆದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ಎರಡು ಅವಧಿಯ ನಿರ್ದೇಶಕರಾಗಿದ್ದವರು. ಈಗಲೂ ಭಾರತದ ಅನೇಕ ಐಐಟಿಗಳಿಗೆ ಸಲಹಾಕಾರರಾಗಿ, ಅಲ್ಲಿನ ಪ್ರೊಫೆಸರ್‌ಗಳ ಹಾಗೂ ನಿರ್ದೇಶಕರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಅವರಿಗೆ ಐಐಟಿಗಳೆಂದರೆ ಭಾರತದ ಬಾವುಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೇರಿಸುವ ಸಂಸ್ಥೆಗಳಾಗಿರಬೇಕೆಂಬ ಕನಸಿದೆ. ಆದರೆ ಐಐಟಿಗಳ ಸಂಖ್ಯೆ ಹೆಚ್ಚುತ್ತಿರುವ ಹಾಗೆ, ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಅವರಿಗೆ ವಿಷಾದವಿದೆ.
ಧಾರವಾಡದಲ್ಲಿ ಐಐಟಿ ಆರಂಭವಾದಾಗ ನಿಜಕ್ಕೂ ಕನ್ನಡಿಗರಿಗೆ ಪ್ರಯೋಜನ ಸಿಗಬೇಕೆಂದರೆ ತುಂಬಾ ವರ್ಷಗಳೇ ಬೇಕಾಗಬಹುದು. ಮೊದಲ ನಾಲ್ಕಾರು ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಕೂಲಿಕಾರರಿಗೆ, ತಾತ್ಕಾಲಿಕ ಶೆಡ್‌ಗಳಲ್ಲಿ ಕ್ಯಾಂಟೀನು ನಡೆಸುವವರಿಗೆ ಕೆಲಸ ಸಿಗುತ್ತದೆ. ಮುಮ್ಮಿಗಟ್ಟಿಯ ಕೆಲವು ಬಾಡಿಗೆ ಮನೆಗಳಿಗೆ ವರಮಾನ ಸಿಕ್ಕೀತು. ಆಮೇಲೆ, ಕ್ಯಾಂಪಸ್ ರೂಪುಗೊಂಡ ನಂತರ ಅಂಥ ಅವಕಾಶಗಳೆಲ್ಲ ಮುಚ್ಚಿ ಹೋಗುತ್ತವೆ. ಐಐಟಿಯ ಬೇರೆಯದೇ ಪ್ರಪಂಚ ತೆರೆದುಕೊಳ್ಳುತ್ತದೆ. ಅಲ್ಲಿ ಕನ್ನಡಿಗರೂ ವಿದ್ಯಾರ್ಥಿಗಳಾಗಬೇಕೆಂದರೆ ನಾವು ಈಗಿನಿಂದಲೇ ಸಿದ್ಧತೆ ನಡೆಸಬೇಕಾಗುತ್ತದೆ.
ಈಗಿನ ವ್ಯವಸ್ಥೆಯಲ್ಲಿ ಐಐಟಿಗಳಿಗೆ ಪ್ರವೇಶ ಪಡೆಯುವವರಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದೆ (2015ರಲ್ಲಿ ಪರೀಕ್ಷೆ ಕಟ್ಟಿದವರ ಅಂಕಿಸಂಖ್ಯೆ ಹೀಗಿದೆ: ಮಹಾರಾಷ್ಟ್ರದ ವಿದ್ಯಾರ್ಥಿಗಳು ಎರಡು ಲಕ್ಷ; ಉತ್ತರ ಪ್ರದೇಶ 1.2 ಲಕ್ಷ, ಬಿಹಾರದ ವಿದ್ಯಾರ್ಥಿಗಳು 73 ಸಾವಿರ, ಗುಜರಾತ್ 72, ಕೇರಳ 41, ಮತ್ತು ಕರ್ನಾಟಕ 27 ಸಾವಿರ). ಪಾಸಾಗುವವರಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.
ಏಕೆಂದರೆ ಅಲ್ಲಿ ಪ್ರತಿ ಊರೂರಲ್ಲಿ ಐಐಟಿ -ಜೆಇಇ ಕೋಚಿಂಗ್ ಕ್ಲಾಸುಗಳಿವೆ. ಪ್ರವೇಶ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಯುವುದರಿಂದ ಅಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳೂ ಕೋಚಿಂಗ್ ಪಡೆಯುತ್ತಾರೆ. ಇತರ ಭಾರತೀಯ ಭಾಷೆಗಳಲ್ಲೂ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಅನೇಕ ರಾಜ್ಯಗಳ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಲಾಗಿತ್ತು.
ಅಂಥ ನ್ಯಾಯತೀರ್ಮಾನ ಸಾಧ್ಯವಿಲ್ಲವೆಂದು ಮೊನ್ನೆ ಮಾರ್ಚ್ 8ರಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಯಾವ ಭಾಷೆಯಲ್ಲಿ ಪರೀಕ್ಷೆ ನಡೆಸಬೇಕೆಂದು ಆಯಾ ಸಂಸ್ಥೆಗಳೇ ನಿರ್ಧರಿಸಬೇಕು ಎಂತಲೂ ಹೇಳಿದೆ. ನಾಳೆ ಧಾರವಾಡದಲ್ಲಿ ಐಐಟಿ ಆರಂಭವಾದ ನಂತರ ಅದರಲ್ಲಿ ಪ್ರವೇಶ ಪಡೆಯುವ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಸಂಸ್ಥೆಯ ಪ್ರಯೋಜನ ಪಡೆಯಬೇಕೆಂದರೆ ಆಸುಪಾಸಿನ ಅಂಗಡಿಕಾರರೂ ಹಿಂದಿ ಅಥವಾ ತೆಲುಗು ಕಲಿಯಬೇಕಾಗುತ್ತದೆ.
ಬೆಂಗಳೂರಿನ ಐಐಎಸ್‌ಸಿ ತನ್ನ ಗುಣಮಟ್ಟದಿಂದಾಗಿ ವಿಶ್ವಖ್ಯಾತಿ ಗಳಿಸಿದೆಯಾದರೂ ಕನ್ನಡಿಗರನ್ನು ಅಲ್ಲಿ ಕಂದೀಲು ಹಚ್ಚಿ ಹುಡುಕುವಂಥ ಪರಿಸ್ಥಿತಿ ಇದೆ. ‘ನನ್ನ ಜೊತೆ ಕೆಲಸ ಮಾಡುತ್ತಿರುವ ಈ ಇಪ್ಪತ್ತು ಸಂಶೋಧಕ ವಿದ್ಯಾರ್ಥಿಗಳಲ್ಲಿ ಒಬ್ಬ ಮಾತ್ರ ಕನ್ನಡದ ಹುಡುಗ; ಅವನೂ ಕರ್ನಾಟಕದವನಲ್ಲ; ಕಾಸರಗೋಡಿನವನು’ ಎಂದು ಪ್ರೊ. ರಾವ್ ಹಿಂದೊಮ್ಮೆ ಈ ಅಂಕಣಕಾರನೊಡನೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಕರ್ನಾಟಕದ ಸಮಸ್ಯೆ ಏನೆಂದರೆ ಇಲ್ಲಿನ ಹೈಸ್ಕೂಲ್, ಪಿಯುಸಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿಸಿ ಹೇಳಬಲ್ಲ ಶಿಕ್ಷಕರ ಸಂಖ್ಯೆ ಅಷ್ಟಾಗಿ ಇಲ್ಲ. ಹಾಗಾಗಿ ಕೋಚಿಂಗ್ ಕೇಂದ್ರಗಳೂ ಇಲ್ಲ. ವಿಜ್ಞಾನ ತಂತ್ರಜ್ಞಾನ ರಂಗಗಳಲ್ಲಿ ಏನೆಲ್ಲ ಭವಿಷ್ಯವಿದೆ ಎಂಬುದನ್ನು ವಿವರಿಸಿ, ಮಕ್ಕಳ ಆಸಕ್ತಿಗಳನ್ನು ರೂಪಿಸಬಲ್ಲವರು ತೀರಾ ಕಡಿಮೆ. ಈ ಸಂಗತಿಗಳನ್ನು ಹೈಸ್ಕೂಲ್ ಪಾಠವಾಗಿ ಸೇರ್ಪಡೆ ಮಾಡಬಹುದೆ ಎಂಬುದನ್ನು ಪಠ್ಯಪುಸ್ತಕ ರೂಪಿಸುವವರು ಯೋಚಿಸಿದಂತಿಲ್ಲ.
ವಿಜ್ಞಾನರಂಗಕ್ಕೆ ಯುವ ಪೀಳಿಗೆಯನ್ನು ಆಕರ್ಷಿಸಲೆಂದೇ ‘ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ’ ಇದೆ. ಆದರೆ ಹೊಸ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಸೆಳೆಯುವ ಯಾವ ಕಾರ್ಯಕ್ರಮವೂ ಅದರ ಬಳಿ ಇಲ್ಲ. ವಿಜ್ಞಾನ ತಂತ್ರಜ್ಞಾನ ರಂಗದಲ್ಲಿ ಏನೇನು ಹೊಸ ಮಾರ್ಗಗಳಿವೆ, ಅವಕಾಶಗಳಿವೆ, ನಾವೇಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತರ ಭಾಷಿಕರಿಗಿಂತ ಹಿಂದಿದ್ದೇವೆ ಎಂಬುದನ್ನು ಆಕರ್ಷಕವಾಗಿ ನಿರೂಪಿಸಬಲ್ಲ ಒಂದು ಕಿರುಪುಸ್ತಕವನ್ನು ಎಲ್ಲ ಹೈಸ್ಕೂಲ್‌ಗಳಿಗೆ ವಿತರಿಸಬಾರದೆ ಎಂದು ಅಕಾಡೆಮಿಯ ಅಧ್ಯಕ್ಷ ಪ್ರೊ.ಯು.ಆರ್. ರಾವ್ ಅವರನ್ನು ಹಿಂದೊಮ್ಮೆ ಕೇಳಲಾಗಿತ್ತು. ಅವರೇನೊ ವಿಶಾಲ ಹೃದಯದವರು. ‘ಸೈನ್ಸ್‌ನಲ್ಲಿ ಭಾಷಾಂಧತೆಯನ್ನು ತರಬಾರದು’ ಎಂದು ಹೇಳಿ ಚರ್ಚೆಯನ್ನು ಮೊಟಕುಗೊಳಿಸಿದ್ದರು.
ಐಐಟಿ ನಮ್ಮ ರಾಜ್ಯಕ್ಕೆ ಬರುತ್ತದೆ. ಅಲ್ಲಿಗೆ ಸದ್ಯಕ್ಕೆ ಉತ್ತಮ ಶಿಕ್ಷಕರೂ ಬೇರೆಲ್ಲಿಂದಲೋ ಬರುತ್ತಾರೆ. ವಿದ್ಯಾರ್ಥಿಗಳೂ ಬೇರೆಲ್ಲಿಂದಲೋ ಬರುತ್ತಾರೆ. ಇನ್ನು 25 ವರ್ಷಗಳ ನಂತರವಾದರೂ ಅದು ಕರ್ನಾಟಕದ ಐಐಟಿ ಎನ್ನಿಸಬೇಕೆಂದರೆ, ಅದನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಬೇಕೆಂದಿದ್ದರೆ, ಗ್ರಾಮೀಣ ಭಾಗದ, ತಳವರ್ಗದ ಪ್ರತಿಭಾವಂತರಿಗೂ ಅಲ್ಲಿ ಸ್ಥಾನ ಸಿಗಬೇಕೆಂದಿದ್ದರೆ ಉತ್ತಮ ಗುಣಮಟ್ಟದ ಶಿಕ್ಷಕರನ್ನು ನಮ್ಮ ಪ್ರೈಮರಿ ಸ್ಕೂಲ್‌ಗಳಲ್ಲಿ, ಹೈಸ್ಕೂಲ್‌ಗಳಲ್ಲಿ ರೂಪಿಸಲು ನಾವು ಈಗಿನಿಂದಲೇ ಸಜ್ಜಾಗಬೇಕು. ಪ್ರತಿಭಾವಂತ ಮಕ್ಕಳ ಶೋಧ ಮತ್ತು ವಿಶೇಷ ತರಬೇತಿಗೆ ಅವಕಾಶ ಸಿಗಬೇಕು. ಐಐಟಿ ಎಂದರೆ ಪ್ರೈಮರಿ ಸ್ಕೂಲ್ ಅಲ್ಲ ನಿಜ; ಆದರೆ ಐಐಟಿಗೆ ಪ್ರವೇಶ ಪಡೆಯಲು ಪ್ರೈಮರಿ ಸ್ಕೂಲ್‌ನಿಂದಲೇ ಸಿದ್ಧತೆ ನಡೆಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.