ADVERTISEMENT

ಹಿಜಾಬ್: ಮಿದುಳಿನ ಕೊರೊನಾಕ್ಕೆ ಮದ್ದುಂಟು, ಇಲ್ಲುಂಟು– ನಾಗೇಶ ಹೆಗಡೆ ಲೇಖನ

ಮಿದುಳನ್ನು ಹೊಕ್ಕ ಧಾರ್ಮಿಕ ವೈರಸ್‌ ಬೆಳಕನ್ನೂ ನೀಡಬಹುದು, ಬೆಂಕಿಯನ್ನೂ ಉಗುಳಬಹುದು

ನಾಗೇಶ ಹೆಗಡೆ
Published 9 ಫೆಬ್ರುವರಿ 2022, 20:45 IST
Last Updated 9 ಫೆಬ್ರುವರಿ 2022, 20:45 IST
   

ಹಿಂದಿನ ಬಾರಿ ಶಾಲೆ ಕಾಲೇಜುಗಳನ್ನು ಮುಚ್ಚಿಸಲು ಕೊರೊನಾ ವೈರಸ್‌ ಕಾರಣವಾಗಿತ್ತು. ಅದು ನಿಸರ್ಗದ ಯಾವುದೋ ಪೊಟರೆಯಲ್ಲಿ ತನ್ನ ಪಾಡಿಗೆ ತಾನಿದ್ದಾಗ ಏನೂ ತೊಂದರೆ ಇರಲಿಲ್ಲ; ಮನುಕುಲಕ್ಕೆ ನಿರಾತಂಕವಿತ್ತು. ವೂಹಾನ್‌ನ ಒಂದು ಪ್ರಯೋಗಶಾಲೆಗೆ ಅದನ್ನು ತಂದು ಅದಕ್ಕೆ ಅದೇನೋ ಮಾಡಲು ಹೋಗಿ, ಈ ವೈರಸ್‌ ಹೆಡೆಯೆತ್ತಿ ಹೆಮ್ಮಾರಿಯಾಗಿ ಫೂತ್ಕರಿಸಿತು. ಈಗ ಮತ್ತೆ ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದೆ. ಮಿದುಳಿನಲ್ಲಿ ತನ್ನ ಪಾಡಿಗೆ ತಾನಿದ್ದ ಒಂದು ಮನೋವೈರಸ್ಸನ್ನು ಯಾವುದೋ ಲ್ಯಾಬಿನಲ್ಲಿ ಕೆಣಕಿದ್ದರಿಂದ ಅದು ಫೂತ್ಕರಿಸಿದೆ.

ನಮ್ಮೆಲ್ಲರ ಶರೀರದಲ್ಲಿ ಜೀನ್‌ಗಳು ಇರುವ ಹಾಗೇ ಮಿದುಳಿನಲ್ಲಿ ಮೀಮ್‌ ಎಂಬ ಎಂಥವೊ ಇರುತ್ತವೆಂದು ಬ್ರಿಟಿಷ್‌ ವಿಜ್ಞಾನಿ ರಿಚರ್ಡ್‌ ಡಾವ್ಕಿನ್ಸ್‌ ನಾಲ್ಕು ದಶಕಗಳ ಹಿಂದೆಯೇ ವಾದಿಸಿದ್ದ. ಜೀನ್‌ಗಳು ತಮ್ಮ ಗುಣಗಳೇ ಶ್ರೇಷ್ಠವೆಂದು, ತಮ್ಮನ್ನೇ ಎಲ್ಲೆಡೆ ಪಸರಿಸಲು ಏನೆಲ್ಲ ಸರ್ಕಸ್‌ ಮಾಡುತ್ತವೆ; ಈ ಸ್ವಾರ್ಥವೇ ಇಡೀ ಜೀವಲೋಕದ ಜೀವಾಳವಾಗಿದೆ ಎಂಬುದನ್ನು ಆತ ‘ಸೆಲ್ಫಿಶ್‌ ಜೀನ್‌’ ಎಂಬ ಗ್ರಂಥದಲ್ಲಿ ವಾದಿಸಿದ. ಅದರ ಕೊನೆಯ ಅಧ್ಯಾಯವಾಗಿ ಮಿದುಳಿನಲ್ಲೂ ಇಂಥದ್ದೇ ರೂಪರಹಿತ ಜೀನ್‌ ಇರುತ್ತದೆಂದು ಹೇಳಿ ಅದಕ್ಕೆ ‘ಮೀಮ್‌’ ಎಂದು ಹೆಸರು ಕೊಟ್ಟ. ಜೀನ್‌ಗಳು ವೀರ್ಯಾಣು, ಅಂಡಾಣುಗಳ ಮೂಲಕ ದೇಹದಿಂದ ದೇಹಕ್ಕೆ, ಪೀಳಿಗೆಯಿಂದ ಪೀಳಿಗೆಗೆ ಪಸರಿಸುವ ಹಾಗೆ ಮೀಮ್‌ ಎಂಬ ಐಡಿಯಾಗಳು ಮಿದುಳಿನಿಂದ ಮಿದುಳಿಗೆ, ಪೀಳಿಗೆಯಿಂದ ಪೀಳಿಗೆಗೆ ದಾಟುತ್ತವೆ ಎಂದು ವಾದಿಸಿದ. ಜೀನ್‌ಗಳು ಆಗಾಗ ತುಸು ರೂಪಾಂತರಗೊಳ್ಳುತ್ತ ಜೀವಲೋಕದಲ್ಲಿ ವೈವಿಧ್ಯವನ್ನು ಸೃಷ್ಟಿಸಿದ ಹಾಗೆ ಮೀಮ್‌ಗಳೂ ವೈವಿಧ್ಯಮಯ ಸಾಂಸ್ಕೃತಿಕ ಲೋಕವನ್ನು ನಿರ್ಮಿಸಿವೆ ಎಂದು ವಾದಿಸಿದ. ಈ ‘ಡಾವ್ಕಿನ್ಸ್‌ ವಾದ’ ಕೂಡ ತಾನೇ ಒಂದು ಮೀಮ್‌ ಆಗಿ ಅದರ ಕುರಿತು ನಾನಾ ಬಗೆಯ ಸಂಶೋಧನೆಗಳು ನಡೆಯುತ್ತಿವೆ.

ಮೀಮ್‌ ಎಂದರೆ ‘ಸಾಮಾಜಿಕ ಸೋಂಕು’ ಎಂದುಕೊಂಡರೆ ಅದಕ್ಕೆ ಎಷ್ಟೊಂದು ಉದಾಹರಣೆಗಳು ಎಲ್ಲೆಡೆ ಎಲ್ಲ ಕಾಲದಲ್ಲೂ ಸಿಗುತ್ತವೆ. ಅವುಗಳಲ್ಲೂ ಯಶಸ್ವೀ ಮೀಮ್‌ (‘ದೇವರು’), ವಿಫಲ ಮೀಮ್‌ (ಕಮ್ಯುನಿಸಂ), ತಾತ್ಕಾಲಿಕ ಮೀಮ್‌ (ರೂಬಿಕ್‌ ಕ್ಯೂಬ್‌), ತೀವ್ರ ಸೋಂಕಿನ ಮೀಮ್‌ (ಫ್ಯಾಶನ್‌), ನಿಧಾನ ಪಸರಿಸುವ, ಆದರೆ ದೀರ್ಘ ಕಾಲ ಉಳಿಯುವ ಮೀಮ್‌ (‘ಸ್ವಾತಂತ್ರ್ಯ ಹೋರಾಟ’) ಹೀಗೆ. ಕೆಲವು ಮೀಮ್‌ಗಳು (ಐಪಿಎಲ್‌) ವರ್ಷದ ಕೆಲವು ಕಾಲ ಮಾತ್ರಪ್ರಜ್ವಲಿಸಬಹುದು.

ADVERTISEMENT

ಮೀಮ್‌ಗಳು ವೈರಸ್‌ನ ಹಾಗೇನೆ. ಜಗತ್ತಿನಲ್ಲಿ ಒಳ್ಳೇ ವೈರಸ್‌ ಮತ್ತು ಕೆಟ್ಟ ವೈರಸ್‌ ಇರುವ ಹಾಗೆ ಈ ಮಾನಸಿಕ ಜಗತ್ತಿನಲ್ಲೂ ಒಳ್ಳೆಯ ಮತ್ತು ಕೆಟ್ಟ ಮೀಮ್‌ಗಳು ವಿಕಾಸವಾಗಬಹುದು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಕೆಟ್ಟ ವೈರಸ್‌ಗಳು ಸುಲಭಕ್ಕೆ ಪ್ರವೇಶ ಮಾಡಲಾರವು. ಹಾಗೆಯೇ ಮಿದುಳಿನಲ್ಲೂ ಕೆಟ್ಟ ಮೀಮ್‌ಗಳು (ನಾತ್ಸೀವಾದ) ಆಗೀಗ ಭುಗ್ಗೆಂದು ಸಾಂಕ್ರಾಮಿಕವಾಗಿ ಪ್ರಸಾರವಾದರೂ ಅವೂ ದೀರ್ಘಕಾಲ ಉಳಿಯದಂತೆ ಮಾನವ ಮಿದುಳಿನ ಇತರ ಮೀಮ್‌ಗಳು ತಡೆಯುತ್ತವೆ. ಅಂಥವನ್ನು ಬೇಕಿದ್ದರೆ ಕಂಪ್ಯೂಟರ್‌ ವೈರಸ್ಸಿನ ಹಾಗೆ ಅಂದುಕೊಳ್ಳಿ. ನಿಮ್ಮ ಕಂಪ್ಯೂಟರಿನಲ್ಲಿ ಪ್ರಬಲ ವೈರಸ್‌ ನಿರೋಧಕ ತಂತ್ರಾಂಶ ಇದ್ದರೆ ಕುತಂತ್ರಾಂಶಗಳು ಅಲ್ಲಿ ಪ್ರವೇಶ ಮಾಡಲಾರವು.

ಧಾರ್ಮಿಕ ಭಾವನೆಗಳ ಮೀಮ್‌ ತೀರ ನಾಜೂಕಿನದು. ಬದುಕಿಗೆ ಬೆಳಕಾಗಬಹುದಾದ ಅದು ಹಠಾತ್‌ ಜ್ವಾಲೆಯೂ ಆಗಬಹುದು. ಅದು ಬಾಲ್ಯದಿಂದಲೇ ನಮ್ಮ ಮಿದುಳಿನಲ್ಲಿ ಪ್ರವೇಶ ಪಡೆಯುತ್ತದೆ. ಮಗು ಹುಟ್ಟುತ್ತಲೇ ತಾಯಿ-ತಂದೆಯ ಮೂಲಕ ಈ ಧಾರ್ಮಿಕ ಮೀಮ್‌ ಬಿತ್ತನೆಗೊಳ್ಳುತ್ತದೆ. ಇಲ್ಲೂ ನಾವು ಜೈವಿಕ ವ್ಯವಸ್ಥೆಯ ಉದಾಹರಣೆಯನ್ನೇಕೊಡಬಹುದು. ಅದೇ ತಾನೆ ಜನಿಸಿದ ಆನೆ ಮರಿಗೆ ತಾಯಿ ತನ್ನ ಒಂದು ಚೂರು ಮಲವನ್ನು ತಿನ್ನಿಸುತ್ತದೆ. ಏಕೆಂದರೆ ಹುಲ್ಲನ್ನು ಜೀರ್ಣಿಸಿಕೊಳ್ಳಲು ಬೇಕಾದ ಏಕಾಣು ಜೀವಿಗಳು ಎಳೇ ಕರುಳಿನಲ್ಲಿ ಇಲ್ಲವಾದ್ದರಿಂದ ತಾಯಿಯೇ ಅದನ್ನು ಮರಿಯ ಶರೀರಕ್ಕೆ ಸೇರಿಸಬೇಕಾಗುತ್ತದೆ. ಮನುಷ್ಯರಲ್ಲೂ ಎಳೇ ಶಿಶುವಿಗೆ ಮೊಲೆಯೂಡಿಸ
ಬೇಕೆಂಬ ತವಕ ತಾಯಿಯಲ್ಲಿ ಹುಟ್ಟಲಿಕ್ಕೂ ಅಂಥದ್ದೇ ಕಾರಣವಿರುತ್ತದೆ. ಮಗು ಹಸಿದಿದೆ ಎಂದಲ್ಲ; ಮೊಲೆಹಾಲಿ
ನಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಸಂಯುಕ್ತಗಳು ಆದಷ್ಟು ಬೇಗ ಮಗುವಿನ ಜೊಲ್ಲಿಗೆ ಸೇರಲೆಂದು ತಾಯಿಯ ಒಳಮನಸ್ಸು ಬಯಸುತ್ತಿರುತ್ತದೆ. ಧಾರ್ಮಿಕ ಮೀಮ್‌ ಕೂಡ ಹೀಗೆ ಸದುದ್ದೇಶದಿಂದಲೇ ಬಿತ್ತನೆಯಾಗುತ್ತದೆ. ಕುಟುಂಬದ ಹಿರಿಯರಿಂದ, ನೆರೆಹೊರೆಯಿಂದ, ಶೈಕ್ಷಣಿಕ ಪರಿಸರದಿಂದ ಪೋಷಣೆಗೊಳ್ಳುತ್ತ ಅದು ಮಗುವಿನ ಮಿದುಳಿನಲ್ಲಿ ಗಾಢವಾಗಿ ನೆಲೆಯೂರುತ್ತದೆ. ಬೆಳೆದ ಪರಿಸರಕ್ಕೆ ತಕ್ಕಂತೆ ಕೆಲವರಲ್ಲಿ (ಭಕ್ತಿಪಂಥದ ಹಾಗೆ) ಅದು ಪ್ರಖರವಾಗುತ್ತ ಹೋಗಬಹುದು ಇಲ್ಲವೆ ಮಿದುಳಿನ ಇತರ ಮೀಮ್‌ಗಳ ಪ್ರಭಾವದಿಂದಾಗಿ ಇದು ಮಂಕಾಗಬಹುದು. ಅಥವಾ ಕೆಲವರಲ್ಲಿ ಅದು ಹೊಸಕಿ ಹೋಗಬಹುದು. ಮಂಕಾಗಿದ್ದರೂ ಆಗಾಗ ಹೊರಗಿನಿಂದ ಬೀಸಿ ಬರುವ ಇತರ ಮೀಮ್‌ಗಳ ಸೋಂಕಿನಿಂದ ಇದು ಪ್ರಜ್ವಲಿಸಬಹುದು. ಮಿದುಳಿನ ಒಳಗೆ ಸ್ಥಾಪಿತವಾಗಿದ್ದ ವಿವೇಕ, ಸಾಮಾಜಿಕ ಪ್ರಜ್ಞೆ, ಸಹಜೀವನ ತತ್ವ, ಮೈತ್ರಿಭಾವ ಇವೇ ಮುಂತಾದ ಉತ್ತಮ ಮೀಮ್‌ಗಳನ್ನೆಲ್ಲ ಬದಿಗೊತ್ತಿ ಕೇಡಿಮೀಮ್‌ ಗೆಲ್ಲಬಹುದು. ಅದರಲ್ಲೂ ಧರ್ಮಾಂಧತೆ, ಪರಧರ್ಮ ಅಸಹಿಷ್ಣುತೆ, ಪೂರ್ವಗ್ರಹವೇ ಮುಂತಾದ ಕಾಯಿಲೆಗಳು (ಕೋಮಾರ್ಬಿಡಿಟಿ) ಮಿದುಳಿನಲ್ಲಿ ಮೊದಲೇ ಇದ್ದರಂತೂ ಈ ಮೀಮ್‌ ಪ್ರವೇಶ ಸುಲಭವಾಗುತ್ತದೆ.

ಕೊರೊನಾ ಸೋಂಕಿನಲ್ಲೂ ಇಂಥವೇ ಲಕ್ಷಣಗಳನ್ನು ನಾವು ನೋಡಿದ್ದೇವೆ. ದೇಹದೊಳಗೆ ಇತರ ಕಾಯಿಲೆಗಳಿದ್ದರಂತೂ ಆಗಲೇ ದುರ್ಬಲವಾಗಿರುವ ನಿರೋಧಕ ಶಕ್ತಿಯನ್ನೆಲ್ಲ ಬಗ್ಗುಬಡಿದು ಈ ಮೀಮ್‌ ಶ್ವಾಸಕೋಶದ ಆಳಕ್ಕೆ ಇಳಿದು ಕೋಟಿಗಟ್ಟಲೆ ಸಂಖ್ಯೆಯಲ್ಲಿ ವೃದ್ಧಿ
ಯಾಗುತ್ತದೆ. ಈ ವೈರಿಯನ್ನು ಬಡಿದು ಹಾಕುವ ಕೊನೇ ಯತ್ನವಾಗಿ ರಕ್ತದಲ್ಲಿನ ಬಿಳಿಕಣಗಳೆಲ್ಲ ಏಕಾಏಕಿ ಬಿರುಗಾಳಿಯಂತೆ ದಾಳಿ ಮಾಡುತ್ತವೆ. ವೈದ್ಯಭಾಷೆಯಲ್ಲಿ ಅದಕ್ಕೆ ‘ಸೈಟೊಕೈನ್‌ ಸ್ಟಾರ್ಮ್‌’ ಎನ್ನುತ್ತಾರೆ. ಆಗಿನ ಆ ಕುರುಕ್ಷೇತ್ರದಲ್ಲಿ ಹೆಣಗಳ ಅಕ್ಷೋಹಿಣಿ ರಾಶಿ ಬಿದ್ದು ಶ್ವಾಸಕೋಶದಲ್ಲಿ ನೀರಂತೆ ತುಂಬಿಕೊಳ್ಳುತ್ತದೆ. ಹೊಸ ಉಸಿರು ಒಳಕ್ಕೆ ಬರಲಾಗದೇ ರೋಗಿಗೆ ವೆಂಟಿಲೇಟರ್‌ ಹಾಕಿ ಕೃತಕ ಉಸಿರಾಟ ಮಾಡಿಸ ಬೇಕಾಗುತ್ತದೆ. ಆ ಹೋರಾಟದಲ್ಲಿ ರೋಗಿ ಸೋತರೂ ಗೆದ್ದರೂ ಕುಟುಂಬಕ್ಕೆ ಅಪಾರ ನಷ್ಟವಾಗಿರುತ್ತದೆ.

ಸಂಪರ್ಕ ಸಾಧನಗಳ ಸಾಂದ್ರತೆ ಹೆಚ್ಚಿದಷ್ಟೂ ಈ ಎರಡೂ ಬಗೆಯ ವೈರಸ್‌ಗಳು ತೀವ್ರವಾಗಿ ಹಬ್ಬುತ್ತವೆ. ವಿಮಾನ, ರೈಲು, ಹಡಗಿನ ಮೂಲಕ ಕೊರೊನಾ ಹರಡಿದ್ದೂ ಅಲ್ಲದೆ, ತಾನೇ ಒಂದು ಮೀಮ್‌ ಆಗಿ, ಟಿ.ವಿ. ಚಾನೆಲ್‌ಗಳಲ್ಲಿ ಸುದ್ದಿ ಸಾಂಕ್ರಾಮಿಕವಾಗಿ ಸಮಾಜದ ಸ್ವಾಸ್ಥ್ಯವನ್ನೇ ಬುಡಮೇಲು ಮಾಡಿತ್ತು. ಅದರ ಉಪಶಮನಕ್ಕೂ ದೀಪ, ಜಾಗಟೆಯಂಥ ನಾನಾ ಬಗೆಯ ಅಪ್ರಯೋಜಕ ಮೀಮ್‌ಗಳು, ನಕಲಿ ಮೀಮ್‌ಗಳು ಚಾಲ್ತಿಗೆ ಬಂದವು. ಜೊತೆಗೆ ದಿವ್ಯಾಸ್ತ್ರಗಳ ಹೆಸರಿನಲ್ಲಿ ರೆಮ್ಡೆಸಿವಿಯರ್‌, ಕೊರೊನಿಲ್‌, ಪ್ಲಾಸ್ಮಾ ಥೆರಪಿಗಳಂಥ ಹುಸಿಬಾಣಗಳು ಹಾರಾಡಿದವು, ಲಾಕ್‌ಡೌನ್‌ ಘೋಷಿಸಿದ್ದರಿಂದ ತಳವಾಸಿಗಳ ದ್ರವ್ಯಾರ್ಜನೆ, ವಿದ್ಯಾರ್ಜನೆಗೆ ಧಕ್ಕೆ ಬಂತು.

ಈಗಿನ ಈ ಧಾರ್ಮಿಕ ಮೀಮ್‌ ದಾಳಿಗೆ ವೆಂಟಿಲೇಟರ್‌ ಇದೆಯೆ? ಎಲ್ಲರ ಗಮನವೂ ನ್ಯಾಯಾಂಗದ ಕಡೆಗಿದೆ. ಅದು ಸಾಂಕ್ರಾಮಿಕತೆಯನ್ನು ತಗ್ಗಿಸೀತೆ ಶಿವಾಯ್‌ ಈಗಾಗಲೇ ಎಂಡೆಮಿಕ್‌ ಆಗಿರುವ ವೈರಾಣುವನ್ನು ಹೊಸಕಿ ಹಾಕಲಾರದು. ಹಿಂದೆ ಇದು ಸಾಂಕ್ರಾಮಿಕ ಆದಾಗಲೆಲ್ಲ ಸಶಸ್ತ್ರ ಪಡೆಗಳ ನೆರವು ಕೋರಲಾಗಿತ್ತು. ಅವಕ್ಕೆ ಸೋಂಕು ತಗುಲಿರಲಿಲ್ಲ ಸದ್ಯ! ಅದೆಷ್ಟೊ ಬಾರಿ ನಮ್ಮ ಸಮಾಜದ ಸ್ವಸ್ಥ ಮೀಮ್‌ಗಳೇ ಸೂಕ್ತ ಮನೆಮದ್ದು, ವಿಶ್ರಾಂತಿಯ ಮೂಲಕ ಉಪಶಮನ ಮಾಡಿದ್ದೂ ಇದೆ.

ಸದ್ಯಕ್ಕಂತೂ ಎಲ್ಲಕ್ಕಿಂತ ಉತ್ತಮ ಉಪಾಯ ಏನು ಗೊತ್ತೆ? ಕೊರೊನಾಕ್ಕೆ ಬಳಸಿದ ಅಸ್ತ್ರವನ್ನೇ ಇಲ್ಲೂ ಬಳಸಬೇಕು: ಬಾಯಿ ಮುಚ್ಚಿ. ದೈಹಿಕ ಅಂತರ ಕಾಯ್ದುಕೊಂಡು, ಮನದೊಳಗಿನ ಕೊಳೆಯನ್ನು ಉಜ್ಜಿ ಉಜ್ಜಿ ತೊಳೆಯುವುದು. ಈ ಧಾರ್ಮಿಕ ಮೀಮ್‌ನಲ್ಲೇ ಇರುವ ಸಹಿಷ್ಣುತೆ, ಸದ್ಭಾವನೆ, ಸಹಜೀವನದ ಜೀನ್‌ಗಳಿಗೆ ಹೊಳಪು ಕೊಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.