ಮಹಾಭಾರತದ ರಚಯಿತರಾದ ವ್ಯಾಸರನ್ನು ಈತ ‘ಚಿರಂಜೀವಿ’ ಎಂದು ಸಂಪ್ರದಾಯ ಭಾವುಕವಾಗಿ ನಂಬುತ್ತದೆ. ಮಹಾಭಾರತವೆಂಬ ಇತಿಹಾಸವಂತೂ ಚಿರಂಜೀವಿ ಎಂದು ಭಾವುಕವಾಗದೆಯೂ ಹೇಳಬಹುದು. ಈ ಚಿರಂಜೀವಿತೆಯು ಸಾಧಿತವಾಗುವ ರೀತಿಗಳು ಮಾತ್ರ ವಿಶಿಷ್ಟವಾಗಿವೆ. ಇಲ್ಲಿ ಭೀಷ್ಮನಂಥ ಪಾತ್ರವಿದೆ.
‘ಇಚ್ಛಾಮರಣ’ದಂಥ ಪರಿಕಲ್ಪನೆ ಇದೆ. ಇಚ್ಛಾಮರಣವೆಂದರೆ ತಾನು ಬಯಸಿದಂತೆ, ಬಯಸಿದಾಗ ಸಾವನ್ನು ಪಡೆಯುವುದು. ಸಾವು ಅನಿವಾರ್ಯವಾಗಿದೆ. ಆದರೆ ಈ ಅನಿವಾರ್ಯ ಘಟನೆಯು ಕೂಡ ಒಂದು ರೀತಿಯಲ್ಲಿ ತನ್ನ ಅಳವಿನಲ್ಲಿಯೇ ಇದೆ – ಎಂದಂತೆ. ಇಲ್ಲಿ ಸಾವಿನಂಥ ಸಾವು ಕೂಡ ವ್ಯಕ್ತಿಯ ಸಂಕಲ್ಪಕ್ಕೆ ತನ್ನನ್ನು ಒಗ್ಗಿಸಿಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ. ಮರಣವು ನೈಸರ್ಗಿಕವಾದರೆ ಇಚ್ಛಾಮರಣವು ಚರಿತ್ರೆಯಾಗಿದೆ! ಇತಿಹಾಸವಾಗಿದೆ! ಇದು ಒಂದು ರೀತಿಯಲ್ಲಿ ಸಾವನ್ನು ಗೆದ್ದಂತೆ. ಈ ಅರ್ಥದಲ್ಲಿ ಇತಿಹಾಸವು ಚಿರಂಜೀವಿಯಾಗಲು ತುಡಿಯುತ್ತಿದೆ ಎನ್ನಬಹುದು. ಹೌದು; ಇಚ್ಛಾಮರಣವು ಭೀಷ್ಮನಿಗೆ ತಂದೆಯಾದ ಶಂತನು ನೀಡಿದ ವರವಲ್ಲವೆ? ಭೀಷ್ಮನು ದೊಡ್ಡ ತ್ಯಾಗವನ್ನು ಮಾಡಿರುವುದೇನೋ ಹೌದು; ಆದರೆ ಇಚ್ಛಾಮರಣವನ್ನು ಸಿದ್ಧಿಸಿಕೊಂಡಿರುವುದರಲ್ಲಿ ಭೀಷ್ಮನ ನೇರವಾದ ಪಾತ್ರವಿಲ್ಲವಲ್ಲ ಎನ್ನಬಹುದು. ಆದರೆ ನೇರವಲ್ಲದಿರುವುದರಲ್ಲೇ ನಿಜವಾದ ಸೊಗಸಿರುವುದು. ತಾನು ನಿಜವಾಗಿ ಬಯಸದೆ, ಆದರೆ ತಾನು ಮಾಡಿದ ಯಾವುದೋ ದೊಡ್ಡ ಕೆಲಸದ ಸಹಜ ಉಪಫಲವೆಂಬಂತೆ ಸಿದ್ಧಿಯೊಂದು ಒದಗಿಬರುವುದು – ಬದುಕು ತೆರೆದುಕೊಳ್ಳುವ ರೀತಿಯೇ ಇರಬಹುದು. ದೊಡ್ಡದೊಂದು ಬದುಕು, ಸಾವನ್ನು ತನ್ನದೇ ಸಾವಯವ ಭಾಗವೆಂಬಂತೆ, ತನ್ನ ಇಷ್ಟದಂತೆ ನಡೆಯುವ ಸೋದರನೆಂಬಂತೆ ನೋಡಬಯಸುವ ಚಿತ್ರವಿದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.