ADVERTISEMENT

ಮೈಸೂರು ದಸರಾ ವಿಶೇಷ: ಪ್ರವಾಸಿ ತಾಣಗಳತ್ತ ಪಕ್ಷಿನೋಟಕ್ಕೆ ‘ಹೆಲಿರೈಡ್’ ಆರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 13:19 IST
Last Updated 13 ಅಕ್ಟೋಬರ್ 2018, 13:19 IST
ಹೆಲಿರೈಡಿನಲ್ಲಿ ಕಾಣುವ ಮೈಸೂರು ಅರಮನೆಯ ದೃಶ್ಯ (ಸಾಂದರ್ಭಿಕ ಚಿತ್ರ)
ಹೆಲಿರೈಡಿನಲ್ಲಿ ಕಾಣುವ ಮೈಸೂರು ಅರಮನೆಯ ದೃಶ್ಯ (ಸಾಂದರ್ಭಿಕ ಚಿತ್ರ)   

ಮೈಸೂರು: ನಾಡಹಬ್ಬ ದಸರೆಯ ವಿಶೇಷವಾಗಿ ನಗರದಲ್ಲಿ ‘ಹೆಲಿರೈಡ್‌’ ಸೇವೆ ಶನಿವಾರ ಆರಂಭಗೊಂಡಿತು.

ನಗರದ ಪ್ರಮುಖ ಪ್ರವಾಸಿ ತಾಣಗಳತ್ತ ಪಕ್ಷಿನೋಟ ಬೀರಲು ಹೆಲಿಕಾಪ್ಟರ್‌ ಹತ್ತಿ ಸಾಗುವ ಅವಕಾಶ ನಾಗರಿಕರಿಗೆ ಸಿಕ್ಕಿದೆ. 10 ನಿಮಿಷದ ಈ ವಾಯುವಿಹಾರದಲ್ಲಿ ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಲಲಿತಮಹಲ್‌ ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.

ಪ್ರಯಾಣಿಕರು ಇದಕ್ಕಾಗಿ ₹ 2,399 ಪಾವತಿಸಬೇಕಾಗುತ್ತದೆ. ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಇದಕ್ಕಾಗಿ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಟೇಕಾಫ್‌ ಆಗಿ ಮೈಸೂರನ್ನು ಒಂದು ಸುತ್ತು ಹೊಡೆಸಿ ಮರಳಿ ಕರೆತಂದು ಬಿಡುತ್ತವೆ.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ‘ನಾಗರಿಕರಿಗೆ ಇದು ಒಳ್ಳೆಯ ಅನುಭವ. ಹೆಲಿಕಾಪ್ಟರ್‌ನಲ್ಲಿ ಪಯಣಿಸಬೇಕು ಎಂಬ ಕನಸು ಅನೇಕರಿಗೆ ಇರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಬೆಂಗಳೂರು– ಮೈಸೂರು ನಡುವೆ ‘ಆಕಾಶ ಅಂಬಾರಿ’ ವಿಮಾನಯಾನವನ್ನು ₹ 999ಕ್ಕೆ ನೀಡಿದ್ದು ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಅಂತೆಯೇ, ‘ಹೆಲಿರೈಡ್’ ದಸರೆಯಲ್ಲಿ ಅತ್ಯುತ್ತಮ ಆಕರ್ಷಣೆಯಾಗಲಿದೆ’ ಎಂದು ಹೇಳಿದರು.

ಅ. 19ರವರೆಗೂ ಈ ಕಾರ್ಯಕ್ರಮ ನಡೆಯಲಿದೆ. ಪ್ರವಾಸಿಗರ ಬೇಡಿಕೆಯನ್ನು ನೋಡಿಕೊಂಡು ಎರಡು ದಿನ ವಿಸ್ತರಿಸುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.