ADVERTISEMENT

ದಸರಾ ಮಹೋತ್ಸವಕ್ಕೆ ಪೊಲೀಸರ ಗೌರವ ರಕ್ಷೆ

ವರದರಾಜಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ; ಮೆರವಣಿಗೆಗೆ ಮೆರುಗು ತಂದ ಜನಪದ ಕಲಾತಂಡಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:41 IST
Last Updated 19 ಅಕ್ಟೋಬರ್ 2018, 19:41 IST
ಎಚ್‌.ಡಿ.ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಗೌರವ ರಕ್ಷೆ ಸಲ್ಲಿಸಿದರು (ಎಡಚಿತ್ರ). ದಸರಾ ಮೆರವಣಿಗೆಯಲ್ಲಿ ಚಂಡೆಮೇಳ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು
ಎಚ್‌.ಡಿ.ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಗೌರವ ರಕ್ಷೆ ಸಲ್ಲಿಸಿದರು (ಎಡಚಿತ್ರ). ದಸರಾ ಮೆರವಣಿಗೆಯಲ್ಲಿ ಚಂಡೆಮೇಳ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು   

ಎಚ್.ಡಿ.ಕೋಟೆ: ಪಟ್ಟಣದಲ್ಲಿ ವಿಜಯದಶಮಿ ದಿನವಾದ ಶುಕ್ರವಾರ ಕೋಟೆ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಪೊಲೀಸ್‌ ಪೂಜೆ ಹೆಸರಿನಲ್ಲಿ ನಡೆಯುವ ಈ ಉತ್ಸವದಲ್ಲಿ ಪೊಲೀಸರು ಗೌರವ ರಕ್ಷೆ ಸಲ್ಲಿಸಿದರು.

ಮೈಸೂರು ದಸರಾ ಆರಂಭ ವಾಗುತ್ತಿದ್ದಂತೆ ಪಟ್ಟಣದ ವರದರಾಜಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ನಡೆಸಲಾಗುತ್ತದೆ. ಪ್ರತಿದಿನವೂ ವಿಶೇಷ ಪೂಜೆಗಳು ನಡೆಯುತ್ತವೆ. ಇದರ ಜತೆಗೆ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ವಿಜಯದಶಮಿ ದಿನ ಸಬ್‌ ಇನ್‌ಸ್ಪೆಕ್ಟರ್‌ ವಿ.ಸಿ. ಅಶೋಕ್ ಮತ್ತು ಸಿಬ್ಬಂದಿ ಗೌರವ ರಕ್ಷೆ ಸಲ್ಲಿಸಿದರು. ಅವರು ತಂದಿದ್ದ ಬಂದೂಕುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ನಂತರ, ಶಾಸಕ ಸಿ.ಅನಿಲ್ ಕುಮಾರ್, ದೇವಸ್ಥಾನದ ಧರ್ಮದರ್ಶಿ ಬಿ.ಎಸ್.ರಂಗಯ್ಯಂಗಾರ್, ತಹಶೀಲ್ದಾರ್ ಆರ್.ಮಂಜುನಾಥ್ ಸೇರಿದಂತೆ ಪಟ್ಟಣದ ಎಲ್ಲ ಸಮುದಾಯಗಳ ಯಜಮಾನರು ವರದರಾಜಸ್ವಾಮಿಯ ಅಶ್ವ ವಾಹನಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ, ಬನ್ನಿ ಪೂಜೆಗೆ ಚಾಲನೆ ನೀಡಿದರು.

ADVERTISEMENT

ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ, ಮಳೆ ಬಂದರೂ ಅದನ್ನು ಲೆಕ್ಕಿಸದೆ ಕುಣಿದು ಸಂಭ್ರಮಿಸಿದರು.

ದೇವರ ಮೆರವಣಿಗೆ ವೇಳೆ ಭಕ್ತರು ಪೂಜೆ ಸಲ್ಲಿಸಿದರು. ಕೆಲವರು ಈಡುಗಾಯಿ ಹೊಡೆದರು. ಯುವಕರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮದಲ್ಲಿ ವರದರಾಜ ಸ್ವಾಮಿ ದೇವಸ್ಥಾನ ಸಮಿತಿಯ ಎಚ್.ವಿ. ತಿರುಮಲಾಚಾರ್, ವೆಂಕಟೇಶ್‍ ಪ್ರಸಾದ್, ದೇವರಾಜು, ಗೀತಾ ರಾಮಕೃಷ್ಣ, ಅರ್ಚಕ ಶ್ರೀಧರ್, ಆರ್.ನಟರಾಜು, ಎಚ್.ಸಿ.ನರಸಿಂಹ ಮೂರ್ತಿ, ಮಧುಕುಮಾರ್, ಪುಟ್ಟ ಬಸವನಾಯ್ಕ, ದಿನೇಶ್, ನಾಗರಾಜು, ಚಿಕ್ಕವೀರನಾಯಕ, ಪ್ರಕಾಶ್, ಸಿದ್ದರಾಮು, ಕೃಷ್ಣನಾಯ್ಕ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.