ADVERTISEMENT

ಯುವಕರ ಮತ್ತೇರಿಸಿದ ಸ್ಥಳೀಯ ಹುಡುಗ

‘ಎಣ್ಣೆ ನಮ್ದು ಊಟ ನಿಮ್ದು’ ಹಾಡಿಗೆ ಪ್ರೇಕ್ಷಕರ ಕೋರಸ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 20:08 IST
Last Updated 16 ಅಕ್ಟೋಬರ್ 2018, 20:08 IST
ಮೈಸೂರಿನ ಹುಡುಗ ನವೀನ್‌ ಸಜ್ಜು ಗಾಯನದ ವೈಖರಿ
ಮೈಸೂರಿನ ಹುಡುಗ ನವೀನ್‌ ಸಜ್ಜು ಗಾಯನದ ವೈಖರಿ   

ಮೈಸೂರು: ‘ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ, ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ, ಎಲ್ಲಿ ಮಾಡುಮ ಎಲ್ಲಿ ಮಾಡುಮ...‌’ ಎಂದು ವೇದಿಕೆಯಲ್ಲಿ ನವೀನ್‌ ಸಜ್ಜು ಹಾಡುತ್ತಿದ್ದರೆ ಇತ್ತ ಸಭಾಂಗಣದಲ್ಲಿ ಯುವಕ–ಯುವತಿಯರು ಕುರ್ಚಿಗಳಿಂದ ಮೇಲೆದ್ದು ಕುಣಿಯಲಾರಂಭಿಸಿದರು.

‘ಹುಬ್ಬಳ್ಳಿಯಲ್ಲಿ ಮಾಡುಮ’ ಎಂದು ಸಜ್ಜು ಹೇಳಿದರೆ ಪ್ರೇಕ್ಷಕರು ‘ಬ್ಯಾಡ ಬ್ಯಾಡ...’ ಎಂಬ ಕೋರಸ್‌ ಹಾಡತೊಡಗಿದರು. ಕೊನೆಯಲ್ಲಿ ‘ಮೈಸೂರು ಬೆಟ್ಟದಲ್ಲಿ, ಸೀರಿಯಲ್‌ ಸೆಟ್ಟು ಬೆಳಕಲ್ಲಿ’ ಎಂದಾಗ ‘ಅಹಹಹಾ ಸೂಪರ್‌ ಕಣ್ಲ...ಆದರೆ, ಎಣ್ಣೆ ನಮ್ದು ಊಟ ನಿಮ್ದು, ಇಲ್ಲ ಊಟ ನಮ್ದು ಎಣ್ಣೆ ನಿಮ್ದು... ಎಂದು ಕುಣಿದು ಕುಪ್ಪಳಿಸಿದರು.

ಕೆ.ಜಿ.ಕೊಪ್ಪಲಿನ ಹುಡುಗ, ಹೆಸರಾಂತ ಗಾಯಕ ನವೀನ್ ಮಂಗಳವಾರ ರಾತ್ರಿಯ ಯುವ ದಸರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸ್ಥಳೀಯ ಸ್ಪರ್ಶ ನೀಡಿದರು.

ADVERTISEMENT

‘ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ ರೋಶಾಗ್ನಿ ಜ್ವಾಲೆ ಉರಿದುರಿದು...’ ಎಂದು ಹಾಡುತ್ತಲೇ ವೇದಿಕೆ ಪ್ರವೇಶಿಸಿದರು. ‘ನಾನು ಕೂಡ ನಿಮ್ಮ ಹಾಗೇ ಸಭಾಂಗಣದಲ್ಲಿ ಕುಣಿದು ಕುಪ್ಪಳಿಸುತ್ತಿದ್ದೆ. ವೇದಿಕೆ ಮೇಲೇರುವ ಕನಸು ಕಂಡಿದ್ದೆ. ಈಗ ನಿಮ್ಮ ಮುಂದೆ ಬಂದಿದ್ದೇನೆ’ ಎಂದು ಸ್ಫೂರ್ತಿ ತುಂಬಿದರು. ಅವರು ಹಾಡಲು ಆರಂಭಿಸುತ್ತಿದ್ದಂತೆ ಮಳೆ ಶುರುವಾಯಿತು. ವೇದಿಕೆ ಹೊರಗೆ ನಿಂತಿದ್ದ ಪ್ರೇಕ್ಷಕರು ಮಳೆಯಲ್ಲಿ ತೊಯ್ಯುತ್ತಲೇ ಕುಣಿದರು.

ಕವಿ ದ.ರಾ.ಬೇಂದ್ರೆ ಅವರ ‘ಶ್ರಾವಣ ಬಂತು ಕಾಡಿಗೆ, ನಾಡಿಗೆ, ಬೀಡಿಗೆ... ಬಂತು ಶ್ರಾವಣ’ ಗೀತೆಗೆ ದನಿಯಾದರು. ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ’ ಹಾಡನ್ನು ಸೊಗಸಾಗಿ ಹಾಡಿದಾಗ ಪ್ರೇಕ್ಷಕರು ಮೊಬೈಲ್ ಟಾರ್ಚ್ ಹಿಡಿದು ಮೆರುಗು ತುಂಬಿದರು.‌

ಕೋಕ್‌ ಸ್ಟುಡಿಯೊದ ಶೆರ್ಲಿ ಸೇಟಿ ಗಾಯನ ಮಳೆಯಲ್ಲೂ ಮನಸ್ಸಿಗೆ ಮುದ ನೀಡಿತು. ಎಂಜೆ–5 ತಂಡ ಮೈಕೆಲ್ ಜಾಕ್ಸನ್ ಶೈಲಿಯಲ್ಲಿ ಮಾಡಿದ ನೃತ್ಯ ಮೆಚ್ಚುಗೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.